ನಮ್ಮ ಹೆಮ್ಮೆಯ ಭಾರತ (1)

Bhagavatgeetha Upadesham - Shilpa at Kurukshetra

೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ನಿಟ್ಟಿನಲ್ಲಿ ನಮ್ಮ ಮಾತೃಭೂಮಿಯ ಬಗ್ಗೆ ೧೦೦ ಕುತೂಹಲಕರ ಸಂಗತಿಗಳನ್ನು ತಿಳಿಯೋಣ.

ಚರಿತ್ರೆ ಮತ್ತು ಸಂಸ್ಕೃತಿ
೧.ಜಗತ್ತಿನ ಅತಿ ದೊಡ್ಡ ಮಹಾಕಾವ್ಯ “ಮಹಾಭಾರತ"
ಮಹಾಭಾರತದ ಕತೆ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ. ಇದನ್ನು ಸಾವಿರಾರು ವರುಷಗಳಿಂದ ಮತ್ತೆಮತ್ತೆ ಹೇಳಲಾಗಿದೆ. ಜೊತೆಗೆ ಮತ್ತೆಮತ್ತೆ ಬರೆಯಲಾಗಿದೆ. ಇದನ್ನು ಆಧರಿಸಿ ಭಾರತದ ವಿವಿಧ ಭಾಷೆಗಳಲ್ಲಿ  ಅಸಂಖ್ಯ ಕತೆ, ಕವನ, ನಾಟಕಗಳನ್ನು ರಚಿಸಲಾಗಿದೆ. “ಮಹಾಭಾರತ"ದ ಟಿವಿ ಧಾರವಾಹಿ ದೂರದರ್ಶನದಿಂದ ಮೊದಲ ಬಾರಿ ಪ್ರಸಾರವಾದಾಗ ಜನರೆಲ್ಲ ಮನೆಗಳಲ್ಲಿ ಟಿವಿಯೆದುರು ಕೂತು ನೋಡುತ್ತಿದ್ದ ಕಾರಣ ರಸ್ತೆಗಳೆಲ್ಲ ಖಾಲಿ ಹೊಡೆಯುತ್ತಿದ್ದವು. ೨೦೨೦ರಲ್ಲಿ ಕೋವಿಡ್ ವೈರಸ್ ಲಾಕ್-ಡೌನಿನಿಂದಾಗಿ ಇದರ ಮರುಪ್ರಸಾರ ಆರಂಭವಾದಾಗ ಇದು ಜಗತ್ತಿನಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಟಿವಿ ಕಾರ್ಯಕ್ರಮವಾಗಿ ದಾಖಲಾಯಿತು.

ಮಹಾಭಾರತವನ್ನು ಬರೆದವರು ಮಹರ್ಷಿ ವ್ಯಾಸರು. ಇದು ಸೋದರರಾದ ಧೃತರಾಷ್ಟ್ರ ಮತ್ತು ಪಾಂಡುವಿನ ಮಕ್ಕಳ ಮಹಾಕತೆ. ಬಾಲ್ಯದಿಂದಲೇ ಬೆಳೆದ ಅವರ ನಡುವಿನ ಅಸೂಯೆ ಹಾಗೂ ದ್ವೇಷಗಳ ಕಥನ ಕುರುಕ್ಷೇತ್ರದ ಮಹಾಯುದ್ಧದಲ್ಲಿ ಮುಗಿಯುತ್ತದೆ. ದಾಯಾದಿಗಳ ಬದುಕಿನಲ್ಲಿ ಅಧರ್ಮದ ವಿರುದ್ಧ ಧರ್ಮದ ಜಯದಲ್ಲಿ ಭಗವಾನ್ ಶ್ರೀಕೃಷ್ಣನ ಪಾತ್ರ ಪ್ರಧಾನ.

ಸಂಸ್ಕೃತ ಭಾಷೆಯ ಮಹಾನ್ ಕಾವ್ಯ ಮಹಾಭಾರತ. ಇದರ ೭೪,೦೦೦ ಶ್ಲೋಕಗಳಲ್ಲಿ ೧೮ ಲಕ್ಷ ಪದಗಳಿವೆ. ಮನುಷ್ಯನ ದಿನನಿತ್ಯದ ಬದುಕಿನ ಸಂಗತಿಗಳಿಂದ ತೊಡಗಿ ಸಂಕೀರ್ಣ ಅಧ್ಯಾತ್ಮದ ವರೆಗೆ ಮಹಾಭಾರತದಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ವಿಪುಲ. ಇದರ ಅಗಾಧತೆಯನ್ನು ಆರಂಭದ ಶ್ಲೋಕವೊಂದರಲ್ಲಿ ಹೀಗೆಂದು ದಾಖಲಿಸಲಾಗಿದೆ: “ ಇದರಲ್ಲಿರುವ ಸಂಗತಿ ನಿಮಗೆ ಬೇರೆಯದರಲ್ಲಿಯೂ ಸಿಗಬಹುದು; ಆದರೆ ಇಲ್ಲಿ ಸಿಗದಿರುವ ಸಂಗತಿ ನಿಮಗೆ ಬೇರೆಲ್ಲಿಯೂ ಸಿಗಲಾರದು.”