೭.ಜಗತ್ತಿನ ಅಪ್ರತಿಮ ಧಾರ್ಮಿಕ ಸಮಾವೇಶ ಭಾರತದ ಕುಂಭಮೇಳ
ಕುಂಭಮೇಳ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶ ಎಂದು ದಾಖಲಾಗಿದೆ. ಇದರಲ್ಲಿ ಲಕ್ಷಗಟ್ಟಲೆ ಹಿಂದೂಗಳೂ ಪ್ರವಾಸಿಗಳೂ ಭಾಗವಹಿಸುತ್ತಾರೆ.
ಹಿಂದೂ ಧಾರ್ಮಿಕ ಪ್ರತೀತಿಯ ಪ್ರಕಾರ, ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧವಾದಾಗ, ಅಮರತ್ವದ ಪಾನೀಯ ಅಮೃತದ ಕೆಲವು ಬಿಂದುಗಳು ನಾಲ್ಕು ಸ್ಥಳಗಳಿಗೆ ಬಿದ್ದವು: ಪ್ರಯಾಗ ಅಥವಾ ಅಲ್ಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ. ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಪರ್ಯಾಯವಾಗಿ ಕುಂಭಮೇಳ ಜರಗುತ್ತದೆ.
ಗೋದಾವರಿ ನದಿ ದಡದಲ್ಲಿ ನಾಸಿಕ್, ಶಿಪ್ರಾ ನದಿ ದಡದಲ್ಲಿ ಉಜ್ಜಯಿನಿ, ಗಂಗಾ ನದಿ ದಡದಲ್ಲಿ ಹರಿದ್ವಾರ ಮತ್ತು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮದಲ್ಲಿ ಪ್ರಯಾಗ ಇವೆ. ಈ ನದಿಗಳ ದಡದಲ್ಲಿ ಜರಗುವ ಲಕ್ಷಗಟ್ಟಲೆ ಜನರ ಸಮಾವೇಶವೇ ಕುಂಭಮೇಳ. ಈ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲ ಪರಿಹಾರ ಎಂಬುದು ಹಿಂದೂಗಳ ನಂಬಿಕೆ.
ಪ್ರಯಾಗದಲ್ಲಿ ೨೦೧೩ರಲ್ಲಿ ಜರಗಿದ ಮಹಾಕುಂಭಮೇಳದಲ್ಲಿ ೧,೨೦,೦೦,೦೦೦ ಜನರು ಭಾಗವಹಿಸಿದರೆಂದು ಅಂದಾಜು. ಗಮನಿಸಿ: ಒಮ್ಮೆ ಕುಂಭಮೇಳ ಜರಗಿ, ಪುನಃ ಅದೇ ಸ್ಥಳದಲ್ಲಿ ಜರಗುವ ಸರದಿ ಬರುವುದು ೧೨ನೆಯ ವರುಷದಲ್ಲಿ.
ಫೋಟೋ: ಸಂಗಮದ ೨೦೧೯ರ ಕುಂಭಮೇಳದಲ್ಲಿ ಜನಸಾಗರ; ಕೃಪೆ: ಇಂಡಿಯಾ ಟಿವಿ ನ್ಯೂಸ್