೩೨.ಭಾರತ ಮತ್ತು ನೇಪಾಳದಲ್ಲಿ ಮಾತ್ರ ಇರುವ ಭಾರತೀಯ ಖಡ್ಗಮೃಗ
ಭಾರತೀಯ ಖಡ್ಗಮೃಗ ಒಂದು ಕೊಂಬಿನ ಪ್ರಾಣಿ (ಈ ಕೊಂಬು ಮೂತಿಯ ತುದಿಯಲ್ಲಿದೆ.) ಗಂಡು ಮತ್ತು ಹೆಣ್ಣು ಎರಡಕ್ಕೂ ಕೊಂಬು ಇರುತ್ತದೆ. ಇದು ಉತ್ತರ ಭಾರತ ಮತ್ತು ನೇಪಾಳದಲ್ಲಿ ಮಾತ್ರ ಕಂಡು ಬರುತ್ತದೆ.
ಇವುಗಳ ಚರ್ಮ ಬಹಳ ದಪ್ಪ; ದೇಹದ ರಕ್ಷಣೆಗೆ ಸೂಕ್ತ. ದೈತ್ಯ ಗಾತ್ರದ ಪ್ರಾಣಿಯಾದರೂ ಸುಲಭವಾಗಿ ಜಿಗಿಯಬಲ್ಲದು ಮತ್ತು ಓಡುವ ದಿಕ್ಕನ್ನು ಫಕ್ಕನೆ ಬದಲಿಸಬಲ್ಲದು. ಇವು ನೀರಿನಲ್ಲಿ ಸಲೀಸಾಗಿ ಈಜಬಲ್ಲವು.
ಇವುಗಳ ಕೊಂಬಿಗಾಗಿ ಇವನ್ನು ಈಗಲೂ ದುಷ್ಕರ್ಮಿಗಳು ಕೊಲ್ಲುತ್ತಲೇ ಇದ್ದಾರೆ; ಯಾಕೆಂದರೆ ಈ ಕೊಂಬಿಗೆ ಔಷಧೀಯ ಗುಣವಿದೆ ಎಂಬ ಮೂಢ ನಂಬಿಕೆಯಿಂದಾಗಿ ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ! ಇದರಿಂದಾಗಿ ಈಗ ಕೇವಲ ೨,೦೦೦ ಖಡ್ಗಮೃಗಗಳು ಉಳಿದಿವೆ.
ಫೋಟೋ ಕೃಪೆ: ವಿಕಿಪೀಡಿಯಾ
೩೧.ಸಿಂಹಬಾಲದ ಕೋತಿ
ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿದೆ. ಸಿಂಹದ ಬಾಲದಂತಹ ಬಾಲವಿರುವ ಕಾರಣ ಇವುಗಳಿಗೆ ಈ ಹೆಸರು.
ಮಳೆಕಾಡಿನ ಮರಗಳಲ್ಲಿ ಇವುಗಳ ವಾಸ. ಹಣ್ಣುಗಳು ಮತ್ತು ಎಲೆಗಳು ಪ್ರಧಾನ ಆಹಾರ. ಅವಲ್ಲದೆ, ಬೀಜಗಳು, ಚಿಗುರುಗಳು, ಬೇರುಗಳು ಮತ್ತು ಮರಗಳ ತೊಗಟೆಯನ್ನೂ ತಿನ್ನುತ್ತವೆ. ಹಲ್ಲಿಗಳು, ಕಪ್ಪೆಗಳು, ಕೀಟಗಳು ಮತ್ತು ಮೊಟ್ಟೆಗಳನ್ನೂ ತಿನ್ನುತ್ತವೆ.
ಮನೆಯಲ್ಲಿ ಸಾಕುಪ್ರಾಣಿಯಾಗಿ ಸಾಕಲಿಕ್ಕಾಗಿ, ಪ್ರಾಣಿ ಸಂಗ್ರಹಾಲಯಗಳಿಗಾಗಿ ಮತ್ತು ಸಂಶೋಧನಾಲಯಗಳಲ್ಲಿ ಸಂಶೋಧನೆಗಳಿಗಾಗಿ ಇವನ್ನು ಸಾವಿರಸಾವಿರ ಸಂಖ್ಯೆಯಲ್ಲಿ ಹಿಡಿಯಲಾಯಿತು. ಹಾಗಾಗಿ ಇವುಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಾ ಬಂದು, ಈಗ ಇವುಗಳ ಹೆಸರು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿದೆ.
ಫೋಟೋ ಕೃಪೆ: ದ ಹಿಂದೂ.ಕೋಮ್
೩೦.ಭಾರತದ ಜಗದ್ವಿಖ್ಯಾತ ಗಿರ್ ಅರಣ್ಯ - ಏಷ್ಯಾ ಸಿಂಹಗಳ ಏಕೈಕ ವಾಸಸ್ಥಾನ
ಭಾರತದ ಗಿರ್ ಅರಣ್ಯ ಜಗದ್ವಿಖ್ಯಾತ ಯಾಕೆಂದರೆ ಅದು ಏಷ್ಯಾದ ಸಿಂಹಗಳ ಏಕೈಕ ಆಶ್ರಯ ತಾಣ. ಈ ಸಿಂಹಗಳು ಅಳಿವಿನ ಅಂಚಿನಲ್ಲಿವೆ ಎಂಬುದು ಆತಂಕದ ಸಂಗತಿ.
ಇವು ಗಾತ್ರದಲ್ಲಿ ಆಫ್ರಿಕಾದ ಸಿಂಹಗಳಿಗಿಂತ ಸಣ್ಣವು. ಇವು ಆಫ್ರಿಕಾದ ಸಿಂಹಗಳಿಗಿಂತ ಸಣ್ಣ ಗುಂಪುಗಳಲ್ಲಿ ವಾಸ ಮಾಡುತ್ತವೆ. ಮುಖ್ಯವಾಗಿ ಜಿಂಕೆ ಮತ್ತು ಕಾಡುಹಂದಿಗಳನ್ನು ಬೇಟೆಯಾಡಿ ತಿನ್ನುತ್ತವೆ.
ಗಿರ್ ಸ್ಯಾಂಕ್ಚುವರಿ, ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಪನಿಯಾ ಸ್ಯಾಂಕ್ಚುವರಿ ರಕ್ಷಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇವೆಲ್ಲವೂ ಒಟ್ಟಾಗಿ ಏಷ್ಯಾದ ಸಿಂಹಗಳ ವಾಸಪ್ರದೇಶ.
ಗಿರ್ ಅರಣ್ಯಗಳು ಇತರ ಹಲವು ವನ್ಯಜೀವಿಗಳಿಗೂ ಆವಾಸಸ್ಥಾನ. ಸಸ್ತನಿಗಳ ೩೮ ಸ್ಪಿಷೀಸ್, ಹಕ್ಕಿಗಳ ೩೦೦ ಸ್ಪಿಷೀಸ್ ಮತ್ತು ಕೀಟಗಳ ೨,೦೦೦ ಸ್ಪಿಷೀಸ್ ಇಲ್ಲಿ ವಾಸಿಸುತ್ತವೆ. ಜೊತೆಗೆ ಮಾಲ್ಧಾರಿ ಸಮುದಾಯದವರೂ ಗಿರ್ ಅರಣ್ಯದ ಅಂಚಿನಲ್ಲಿ ವಾಸ ಮಾಡುತ್ತಾರೆ.
ಫೋಟೋ ಕೃಪೆ: ವಿಕಿಪಿಡೀಯಾ
೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ
ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ ವಸ್ತುಗಳನ್ನೂ ಎತ್ತಿಕೊಳ್ಳಬಲ್ಲವು. ಏಷ್ಯಾದ ಗಂಡಾನೆಗಳಿಗೆ ಮಾತ್ರ ಎರಡೆರಡು ದಂತಗಳಿವೆ.
ಈ ಆನೆಗಳು ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುತ್ತವೆ. ಇವು ಸಣ್ಣ ಮರಗಳನ್ನೂ ದೊಡ್ಡ ಮರಗಳ ಕೊಂಬೆಗಳನ್ನೂ ನೆಲಕ್ಕೆಳೆದು ಎಲೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಇವು ಸಾಗಿದ ದಾರಿ ಇತರ ಪ್ರಾಣಿಗಳಿಗೂ ದಾರಿಯಾಗುತ್ತದೆ. "ಆನೆ ಸಾಗಿದ ದಾರಿ" ಎಂಬ ನಾಣ್ಣುಡಿಯೇ ಬಳಕೆಯಲ್ಲಿದೆ.
ಆನೆಗಳನ್ನು ಖೆಡ್ಡಾಕ್ಕೆ ಬೀಳಿಸಿ, ಹಿಡಿದು, ಪಳಗಿಸುತ್ತಾರೆ. ಪಳಗಿಸಿದ ಆನೆಗಳನ್ನು ಕಾಡುಗಳಿಂದ ಮರದ ದಿಮ್ಮಿಗಳನ್ನು ಸಾಗಿಸಲು ಉಪಯೋಗಿಸುತ್ತಾರೆ. ದಕ್ಷಿಣ ಭಾರತದ ಹಲವು ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುತ್ತಾರೆ. ಇವು ಆಯಾ ದೇವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುತ್ತವೆ. ಆನೆಗಳನ್ನು ಸಾಕುವುದು ಸುಲಭವಲ್ಲ. ಯಾಕೆಂದರೆ ಅವಕ್ಕೆ ದಿನದಿನವೂ ದೊಡ್ಡ ಪ್ರಮಾಣದಲ್ಲಿ ಆಹಾರ ಒದಗಿಸಬೇಕು.
೨೮.ಅದ್ಭುತ ಪ್ರಾಣಿ ರಾಯಲ್ ಬೆಂಗಾಲ್ ಹುಲಿ
ದೊಡ್ಡ ಬೆಕ್ಕುಗಳಲ್ಲಿ ಭಾರೀ ಗಾತ್ರದ ಪ್ರಾಣಿ ರಾಯಲ್ ಬೆಂಗಾಲ್ ಹುಲಿ. ಕಿತ್ತಳೆ ಬಣ್ಣದಲ್ಲಿ ಕಪ್ಪು ಪಟ್ಟಿಗಳಿರುವ ಇದರ ಚರ್ಮ ಮನಮೋಹಕ. ಇದರ ಹೊಟ್ಟೆಯ ಕೆಳಭಾಗದ ಬಣ್ಣ ಬಿಳಿ; ಉದ್ದ ಬಾಲ; ಶಕ್ತಿಯುತ ಪಂಜಗಳು; ಹರಿತ ಹಲ್ಲುಗಳಿಂದಾಗಿ ಭಯಾನಕ ಪ್ರಾಣಿಯಾಗಿ ಕಾಣಿಸುತ್ತದೆ. ಬುದ್ಧಿವಂತಿಕೆ ಮತ್ತು ವೇಗದ ಧಾಳಿಗಳಿಂದಾಗಿ ಇವು ಚತುರ ಬೇಟೆಗಾರರೆಂದು ಹೆಸರಾಗಿವೆ. ಹುಲಿಗಳ ತೀಕ್ಷ್ಣ ದೃಷ್ಟಿ ಮತ್ತು ಸೂಕ್ಷ್ಮ ಶ್ರವಣಶಕ್ತಿ ಇವುಗಳಿಗೆ ತಮ್ಮ ಮಿಕಗಳನ್ನು ಬೇಟೆಯಾಡಲು ಸಹಕರಿಸುತ್ತದೆ. ಹಲವು ಶತಮಾನಗಳಿಂದ ಹುಲಿಗಳು ಭಾರತೀಯ ಜನಪದದ ಭಾಗವಾಗಿವೆ.
೨೬.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಸುರಿಯುವ ಪ್ರದೇಶ
ಮೇಘಾಲಯದ ಮಾಸಿನ್‌ರಾಮ್ ಹಳ್ಳಿ ಜಗತ್ತಿನಲ್ಲೇ ಅತ್ಯಂತ ಜಾಸ್ತಿ ಮಳೆ ಸುರಿಯುವ ಪ್ರದೇಶ. ಮಳೆಯ ಅಬ್ಬರ ಮತ್ತು ಚಂದ ನೋಡಲು ಅತ್ಯಂತ ಸೂಕ್ತ ಜಾಗವಾದ ಮಾಸಿನ್‌ರಾಮ್ ಪ್ರಕೃತಿಪ್ರಿಯರ ಕನಸಿನ ತಾಣ.
ಅಂದೊಮ್ಮೆ ಅತ್ಯಂತ ಜಾಸ್ತಿ ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಚಿರಾಪುಂಜಿಯಲ್ಲಿ ವಾರ್ಷಿಕ ಮಳೆ ೧೧,೭೭೭ ಮಿಮೀ. ಮಾಸಿನ್‌ರಾಮ್ ಹಳ್ಳಿಯಲ್ಲಿ ಇದು ೧೧,೮೭೨ ಮಿಮೀ. ಇದು ಕರ್ನಾಟಕದ ಕರಾವಳಿಯಲ್ಲಿ ಸುರಿಯುವ ೪,೦೦೦ ಮಿಮೀ ಮಳೆಗಿಂತ ಸುಮಾರು ನಾಲ್ಕು ಪಟ್ಟು ಅಧಿಕ!
ಮೇಘಾಲಯದಲ್ಲಿ ೧,೪೦೦ ಮೀಟರ್ ಎತ್ತರದಲ್ಲಿದೆ ಮಾಸಿನ್‌ರಾಮ್. ಇಲ್ಲಿ ಮಳೆಯ ಹೊಡೆತ ಎಷ್ಟು ಜೋರಾಗಿದೆ ಎಂದರೆ, ಮನೆಗಳ ಚಾವಣಿಗೆ ಅಪ್ಪಳಿಸುವ ಮಳೆಹನಿಗಳ ಕಿವಿಗಡಚಿಕ್ಕುವ ಸಪ್ಪಳವನ್ನು ಕಡಿಮೆ ಮಾಡಲಿಕ್ಕಾಗಿ ಅದರ ಮೇಲೆ ಹುಲ್ಲು ಹೊದೆಸುತ್ತಾರೆ. ಮಾಸಿನ್‌ರಾಮ್ ಪದದಲ್ಲಿರುವ "ಮಾ" ಎಂದರೆ ಖಾಸಿ ಭಾಷೆಯಲ್ಲಿ "ಶಿಲೆ" ಎಂದರ್ಥ. ಇದು ಖಾಸಿ ಗುಡ್ಡ ಪ್ರದೇಶದಲ್ಲಿರುವ ಬೃಹತ್ ಶಿಲೆಗಳನ್ನು ಸೂಚಿಸುತ್ತದೆ.
೨೫.ಜಗತ್ತಿನ ಅತಿ ದೊಡ್ಡ ನದಿದ್ವೀಪ ಮಾಜುಲಿ
ಬ್ರಹ್ಮಪುತ್ರ ನದಿಯಲ್ಲಿರುವ ಮಾಜುಲಿ ಜಗತ್ತಿನ ಅತಿ ದೊಡ್ಡ ನದಿದ್ವೀಪ. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಪರಿಸರ ಮಾಲಿನ್ಯವಿಲ್ಲದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.
ಈ ತಿಳಿನೀರಿನ ದ್ವೀಪದ ಭೂಪ್ರದೇಶವು ಬ್ರಹ್ಮಪುತ್ರ ನದಿಯ ಕೊರೆತದಿಂದಾಗಿ ೧೨೫೦ ಚದರ ಕಿ.ಮೀ. ಇದ್ದದ್ದು ಈಗ ೫೭೭ ಚದರ ಕಿ.ಮೀ.ಗೆ ಇಳಿದಿದೆ. ಇಲ್ಲಿನ ಬಹುಪಾಲು ಪ್ರದೇಶದಲ್ಲಿರುವ ಕೆರೆಕುಂಟೆಗಳು ಹೇರಳ ಸಂಖ್ಯೆಯ ಪಕ್ಷಿಗಳನ್ನು ಆಕರ್ಷಿಸುತ್ತವೆ. ಈ ಕೆರೆಕುಂಟೆಗಳು ವಿಶಿಷ್ಠವಾದ ಸಸ್ಯಸಂಕುಲ ಮತ್ತು ಪ್ರಾಣಿಸಂಕುಲಕ್ಕೆ ಆಸರೆಯಾಗಿವೆ.
ಇಲ್ಲಿನ ಜನರಲ್ಲಿ ಬಹುಪಾಲು ಬುಡಕಟ್ಟು ಜನಾಂಗದವರು. ಹೊರಜಗತ್ತಿನೊಂದಿಗೆ ಸಂಪರ್ಕಕ್ಕೆ ಅವರು ದೋಣಿಗಳನ್ನೇ ಅವಲಂಬಿಸಿದ್ದಾರೆ. ಇದು ವೈಷ್ಣವ ಪಂಥದ ಪ್ರಧಾನ ಸಾಂಸ್ಕೃತಿಕ ನೆಲೆ; ಇದರ ಸತ್ರಗಳು (ಮಠಗಳು) ಇಲ್ಲಿನ ಪಾರಂಪರಿಕ ಸಂಪತ್ತಿನ ಪ್ರಮುಖ ಭಾಗ.
ಫೋಟೋ: ಮಾಜುಲಿ ನದಿದ್ವೀಪ; ಕೃಪೆ: ಎಡ್ ರಿಸ್ಟಿ.ಇನ್
೨೪.ಜಗತ್ತಿನ ಅತೀ ದೊಡ್ಡ ನದಿಮುಖ ಸುಂದರಬನ
ಜಗತ್ತಿನ ಅತೀ ದೊಡ್ಡ ನದಿಮುಖ ಸುಂದರಬನ ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ. ಇದು ಮ್ಯಾಂಗ್ರೂವ್ ಕಾಡುಗಳು ಬೆಳೆದಿರುವ ೫೪ ಸಣ್ಣಸಣ್ಣ ದ್ವೀಪಗಳ ಸಮೂಹ. ಇವುಗಳ ನಡುವೆ ಹರಿಯುತ್ತಿವೆ ಗಂಗಾನದಿಯ ಹಲವಾರು ಕವಲುಗಳು.
ಇಲ್ಲಿ ಬೆಳೆದಿರುವ “ಸುಂದರಿ" ಎಂಬ ಮರಗಳಿಂದಾಗಿಯೇ ಈ ಪ್ರದೇಶಕ್ಕೆ ಸುಂದರಬನವೆಂಬ ಹೆಸರು ಬಂದಿದೆ. ಈ ಮರಗಳೇ ಕೆಸರಿನಿಂದ ನಿರ್ಮಿತವಾಗಿರುವ ದ್ವೀಪಗಳನ್ನು ಹಿಡಿದಿಟ್ಟಿವೆ. ಮ್ಯಾಂಗ್ರೂವ್ ಕಾಡುಗಳು ಇಲ್ಲಿ ಆಗಾಗ ಅಪ್ಪಳಿಸುವ ಬಿರುಗಾಳಿಗಳ ಬಿರುಸನ್ನು ಕಡಿಮೆ ಮಾಡುತ್ತವೆ. ಜೊತೆಗೆ, ನೀರಿನಲೆಗಳ ರಭಸದಿಂದ ಆಗುವ ಮಣ್ಣಿನ ಸವಕಳಿಯನ್ನೂ ತಡೆಯುತ್ತವೆ.
ಸುಂದರಬನಗಳ ದೊಡ್ಡ ಭಾಗವನ್ನು “ಹುಲಿ ರಕ್ಷಿತಾರಣ್ಯ”ವಾಗಿ ಸರಕಾರ ಘೋಷಿಸಿದೆ. ಜಗತ್ತಿನ ಅತ್ಯಂತ ಜಾಸ್ತಿ ಸಂಖ್ಯೆಯ ಹುಲಿಗಳು ಇಲ್ಲಿವೆ. ಸುಂದರಬನ ರಾಷ್ಟ್ರೀಯ ಉದ್ಯಾನವನ್ನು ೧೯೮೭ರಲ್ಲಿ “ಜಾಗತಿಕ ಪಾರಂಪರಿಕ ತಾಣ” ಎಂದು ಯುನೆಸ್ಕೋ ಘೋಷಿಸಿದೆ.
ಫೋಟೋ: ಸುಂದರಬನ; ಕೃಪೆ: ಪಿಕ್ಸಬೇ.ಕೋಮ್
೨೩.ಪ್ರವಾಸಿಗಳ ಆಕರ್ಷಣೆಯ ತಾಣ ಭಾರತ
ವಿಶಾಲ ಭಾರತದ ಮನಮೋಹಕ ಪ್ರಾಕೃತಿಕ ತಾಣಗಳು ಮತ್ತು ವೈವಿಧ್ಯಮಯ ಪಾರಂಪರಿಕ ತಾಣಗಳು ವಿವಿಧ ದೇಶಗಳ ಲಕ್ಷಗಟ್ಟಲೆ ಪ್ರವಾಸಿಗಳನ್ನು ಪ್ರತಿ ವರುಷವೂ ಆಕರ್ಷಿಸುತ್ತವೆ.
ಹಿಮ ಆವರಿಸಿದ ಪರ್ವತಗಳು, ದೀರ್ಘ ಸಮುದ್ರ ತೀರಗಳು, ಹಿನ್ನೀರಿನ ಪ್ರದೇಶಗಳು, ಹಚ್ಚಹಸುರಿನ ಕಾಡುಗಳು, ನದಿದಡಗಳು, ಸರೋವರಗಳು - ಇವೆಲ್ಲ ಪ್ರಾಕೃತಿಕ ತಾಣಗಳು ಪ್ರವಾಸಿಗಳನ್ನು ದಂಗುಬಡಿಸುತ್ತವೆ. ವನ್ಯಜೀವಿ ರಕ್ಷಣಾ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಚಾರಿತ್ರಿಕ ಸ್ಥಳಗಳು, ಯುನೆಸ್ಕೋ ಪಾರಂಪರಿಕ ತಾಣಗಳು - ಇವೆಲ್ಲವೂ ಭಾರತದ ಆಕರ್ಷಣೆಯನ್ನು ಹಲವು ಪಟ್ಟು ಹೆಚ್ಚಿಸಿವೆ.
ಅಧ್ಯಾತ್ಮ ಸಾಧನೆಗಾಗಿಯೂ ಸಾವಿರಾರು ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಯೋಗ ಮತ್ತು ಧ್ಯಾನ ಕಲಿಯಲಿಕ್ಕಾಗಿ ಬರುವ ಪ್ರವಾಸಿಗಳಲ್ಲಿ ಕೆಲವರು ಆಶ್ರಮಗಳಲ್ಲಿ ವರುಷಗಟ್ಟಲೆ ಉಳಿದು ನೆಮ್ಮದಿಯ ಬದುಕಿನ ಹುಡುಕಾಟದಲ್ಲಿ ತೊಡಗುತ್ತಾರೆ.
೨೨.ಜಗತ್ತಿನ ಅತ್ಯಂತ ಉದ್ದದ ಪರ್ವತಶ್ರೇಣಿ ಹಿಮಾಲಯ
ಹಿಮಾಲಯ ಪರ್ವತಶ್ರೇಣಿ ಜಗತ್ತಿನ ಅತ್ಯಂತ ಉದ್ದದ ಹಿಮಾಚ್ಛಾದಿತ ಪರ್ವತಸಾಲು. ಭಾರತದ ಉತ್ತರ ಗಡಿಯ ಉದ್ದಕ್ಕೂ ಹಬ್ಬಿರುವ ಇದರ ಉದ್ದ ಸುಮಾರು ೨,೩೦೦ ಕಿ.ಮೀ. ಇದರ ಸರಾಸರಿ ಎತ್ತರ ಸಮುದ್ರಮಟ್ಟದಿಂದ ೬,೧೦೦ ಮೀ. ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರಗಳಾದ ಮೌಂಟ್ ಎವರೆಸ್ಟ್, ನಂಗಾ ಪರ್ವತ, ಕಾಂಚನಜಂಗಾ ಮತ್ತು ಅನ್ನಪೂರ್ಣ ಇಲ್ಲಿವೆ.
ಹಿಮಾಲಯ ಪರ್ವತ ವಲಯದಲ್ಲಿ ೧೯ ಪ್ರಮುಖ ನದಿಗಳು ಹುಟ್ಟಿ ಹರಿಯುತ್ತವೆ. ಚಳಿಗಾಲದಲ್ಲಿ ಉತ್ತರದಿಂದ ಬೀಸಿ ಬರುವ ಚಳಿಗಾಳಿಗಳು ಭಾರತಕ್ಕೆ ನುಗ್ಗುವುದನ್ನು ಹಿಮಾಲಯ ಕುಂಠಿತಗೊಳಿಸುತ್ತದೆ ಮತ್ತು ಮಳೆಗಾಲದಲ್ಲಿ ನೈಋತ್ಯ ಮಾರುತಗಳನ್ನು ತಡೆದು, ಅವು ಹೊತ್ತು ತರುವ ತೇವಾಂಶದ ಬಹುಪಾಲು ಈ ಪರ್ವತಶ್ರೇಣಿಯನ್ನು ದಾಟುವ ಮೊದಲೇ ಮಳೆಯಾಗಿ ಸುರಿಯುವಂತೆ ಮಾಡುತ್ತದೆ. ಹಿಮಾಲಯದ ತಪ್ಪಲಿನಲ್ಲಿ ಭಾರೀ ಬೆಲೆಬಾಳುವ ಮರಗಳಿರುವ ಕಾಡುಗಳಿವೆ.
ಅಲ್ಲಿನ ಭಯಂಕರ ಚಳಿಯಲ್ಲಿ ದೇಶದ ಗಡಿಗಳನ್ನು ಕಾಯುತ್ತಿರುವ ಭಾರತೀಯ ಭೂಸೈನ್ಯದ ಸೈನಿಕರಿಗೆ ಮತ್ತು ಗಡಿ ರಕ್ಷಣಾ ಪಡೆಯ ಯೋಧರಿಗೆ ನಾವು ಸಲಾಮ್ ಹೇಳಲೇ ಬೇಕು. ಮನುಷ್ಯರು ಜೀವಿಸುವುದೇ ಕಷ್ಟ ಎಂಬಂತಹ ಸನ್ನಿವೇಶದಲ್ಲಿ ಅವರು ವರುಷಗಟ್ಟಲೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದೇ ವಿಸ್ಮಯ.
ಫೋಟೋ: ಹಿಮಾಲಯದ ವಿಹಂಗಮ ನೋಟ