ನಮ್ಮ ಹೆಮ್ಮೆಯ ಭಾರತ (ಭಾಗ 26 - 27)

Mawsynram - Highest Rainfall Place in the World

೨೬.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಸುರಿಯುವ ಪ್ರದೇಶ
ಮೇಘಾಲಯದ ಮಾಸಿನ್‌ರಾಮ್ ಹಳ್ಳಿ ಜಗತ್ತಿನಲ್ಲೇ ಅತ್ಯಂತ ಜಾಸ್ತಿ ಮಳೆ ಸುರಿಯುವ ಪ್ರದೇಶ. ಮಳೆಯ ಅಬ್ಬರ ಮತ್ತು ಚಂದ ನೋಡಲು ಅತ್ಯಂತ ಸೂಕ್ತ ಜಾಗವಾದ ಮಾಸಿನ್‌ರಾಮ್ ಪ್ರಕೃತಿಪ್ರಿಯರ ಕನಸಿನ ತಾಣ.

ಅಂದೊಮ್ಮೆ ಅತ್ಯಂತ ಜಾಸ್ತಿ ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಚಿರಾಪುಂಜಿಯಲ್ಲಿ ವಾರ್ಷಿಕ ಮಳೆ ೧೧,೭೭೭ ಮಿಮೀ. ಮಾಸಿನ್‌ರಾಮ್ ಹಳ್ಳಿಯಲ್ಲಿ ಇದು ೧೧,೮೭೨  ಮಿಮೀ. ಇದು ಕರ್ನಾಟಕದ ಕರಾವಳಿಯಲ್ಲಿ ಸುರಿಯುವ ೪,೦೦೦ ಮಿಮೀ ಮಳೆಗಿಂತ ಸುಮಾರು ನಾಲ್ಕು ಪಟ್ಟು ಅಧಿಕ!

ಮೇಘಾಲಯದಲ್ಲಿ ೧,೪೦೦ ಮೀಟರ್ ಎತ್ತರದಲ್ಲಿದೆ ಮಾಸಿನ್‌ರಾಮ್. ಇಲ್ಲಿ ಮಳೆಯ ಹೊಡೆತ ಎಷ್ಟು ಜೋರಾಗಿದೆ ಎಂದರೆ, ಮನೆಗಳ ಚಾವಣಿಗೆ ಅಪ್ಪಳಿಸುವ ಮಳೆಹನಿಗಳ ಕಿವಿಗಡಚಿಕ್ಕುವ ಸಪ್ಪಳವನ್ನು ಕಡಿಮೆ ಮಾಡಲಿಕ್ಕಾಗಿ ಅದರ ಮೇಲೆ ಹುಲ್ಲು ಹೊದೆಸುತ್ತಾರೆ. ಮಾಸಿನ್‌ರಾಮ್ ಪದದಲ್ಲಿರುವ "ಮಾ" ಎಂದರೆ ಖಾಸಿ ಭಾಷೆಯಲ್ಲಿ "ಶಿಲೆ" ಎಂದರ್ಥ. ಇದು ಖಾಸಿ ಗುಡ್ಡ ಪ್ರದೇಶದಲ್ಲಿರುವ ಬೃಹತ್ ಶಿಲೆಗಳನ್ನು ಸೂಚಿಸುತ್ತದೆ.

ಫೋಟೋ: ಮಾಸಿನ್‌ರಾಮ್ ಊರಿನ ಫಲಕ

೨೭.ಜಗತ್ತಿನ ಅತಿ ವಿಸ್ತಾರವಾದ ನದಿಬಯಲು
ಸಿಂಧೂ - ಗಂಗಾ - ಬ್ರಹ್ಮಪುತ್ರ ನದಿಬಯಲು ಜಗತ್ತಿನ ಅತಿ ವಿಸ್ತಾರವಾದ ನದಿಬಯಲು. ಇದರ ಉದ್ದ ೩,೨೦೦ ಕಿಮೀ. ಇದರ ಒಂದು ಭಾಗ ಭಾರತದಲ್ಲಿದ್ದರೆ, ಇನ್ನೊಂದು ಭಾಗ ಪಾಕಿಸ್ಥಾನದಲ್ಲಿದೆ. ಭಾರತದಲ್ಲಿರುವ ಭಾಗದ ಉದ್ದ ೨,೪೦೦ ಕಿಮೀ. ಮತ್ತು ಸರಾಸರಿ ಅಗಲ ೧೫೦ರಿಂದ ೩೦೦ ಕಿಮೀ. ಇದು ವ್ಯಾಪಿಸಿರುವ ಪ್ರದೇಶ ೭.೮ ಲಕ್ಷ ಚದರ ಕಿಮೀ.

ಈ ನದಿಬಯಲು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಹಾಗೂ ಅವುಗಳ ಉಪನದಿಗಳ ಬಯಲುಗಳನ್ನು ಒಳಗೊಂಡಿದೆ. ಇದು ಜಗತ್ತಿನಲ್ಲೇ ಜನಸಾಂದ್ರತೆ ಅತ್ಯಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ಹಾಗೂ ಇದು ಬಹಳ ಫಲವತ್ತಾದ ನದಿಬಯಲು. ಯಾಕೆಂದರೆ ಈ ನದಿಗಳೂ ಉಪನದಿಗಳೂ ಹೊತ್ತು ತರುವ ಮೆಕ್ಕಲು ಮಣ್ಣು ಇಲ್ಲಿ ತುಂಬಿಕೊಂಡಿದೆ.

ಜೊತೆಗೆ ಹಲವು ರಾಜ್ಯಗಳೂ ನಾಗರಿಕತೆಗಳೂ ಈ ನದಿಬಯಲಿನಲ್ಲಿ ಪ್ರಗತಿ ಹೊಂದಿದವು. ಯಾಕೆಂದರೆ, ಈ ನದಿಗಳೇ ವಾಣಿಜ್ಯ ಮತ್ತು ಸಾಗಾಟದ ಪಥಗಳಾಗಿದ್ದವು.