೨೮.ಅದ್ಭುತ ಪ್ರಾಣಿ ರಾಯಲ್ ಬೆಂಗಾಲ್ ಹುಲಿ
ದೊಡ್ಡ ಬೆಕ್ಕುಗಳಲ್ಲಿ ಭಾರೀ ಗಾತ್ರದ ಪ್ರಾಣಿ ರಾಯಲ್ ಬೆಂಗಾಲ್ ಹುಲಿ. ಕಿತ್ತಳೆ ಬಣ್ಣದಲ್ಲಿ ಕಪ್ಪು ಪಟ್ಟಿಗಳಿರುವ ಇದರ ಚರ್ಮ ಮನಮೋಹಕ. ಇದರ ಹೊಟ್ಟೆಯ ಕೆಳಭಾಗದ ಬಣ್ಣ ಬಿಳಿ; ಉದ್ದ ಬಾಲ; ಶಕ್ತಿಯುತ ಪಂಜಗಳು; ಹರಿತ ಹಲ್ಲುಗಳಿಂದಾಗಿ ಭಯಾನಕ ಪ್ರಾಣಿಯಾಗಿ ಕಾಣಿಸುತ್ತದೆ. ಬುದ್ಧಿವಂತಿಕೆ ಮತ್ತು ವೇಗದ ಧಾಳಿಗಳಿಂದಾಗಿ ಇವು ಚತುರ ಬೇಟೆಗಾರರೆಂದು ಹೆಸರಾಗಿವೆ. ಹುಲಿಗಳ ತೀಕ್ಷ್ಣ ದೃಷ್ಟಿ ಮತ್ತು ಸೂಕ್ಷ್ಮ ಶ್ರವಣಶಕ್ತಿ ಇವುಗಳಿಗೆ ತಮ್ಮ ಮಿಕಗಳನ್ನು ಬೇಟೆಯಾಡಲು ಸಹಕರಿಸುತ್ತದೆ. ಹಲವು ಶತಮಾನಗಳಿಂದ ಹುಲಿಗಳು ಭಾರತೀಯ ಜನಪದದ ಭಾಗವಾಗಿವೆ.
ಎರಡು ಶತಮಾನಗಳ ಮುಂಚೆ ಭಾರತದಲ್ಲಿ ಸಾವಿರಾರು ಹುಲಿಗಳಿದ್ದವು. ಬ್ರಿಟಿಷರ ಕಾಲದಲ್ಲಿ ಇವನ್ನು ಬೇಟಿಯಾಡುವುದೇ ಒಂದು ಕ್ರೀಡೆಯಾಯಿತು. ಅದಲ್ಲದೆ, ಹುಲಿಗಳ ಚರ್ಮ, ಉಗುರು ಮತ್ತು ಎಲುಬುಗಳಿಗಾಗಿ ಇವನ್ನು ಗೊತ್ತುಗುರಿಯಿಲ್ಲದೆ ಕೊಲ್ಲಲಾಯಿತು. ಈಗಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಚರ್ಮ ಮತ್ತು ಉಗುರುಗಳಿಗೆ ಲಕ್ಷಗಟ್ಟಲೆ ರೂಪಾಯಿ ಬೆಲೆಯಿದೆ. ಈ ಕಾರಣಗಳಿಂದಾಗಿ ಇವುಗಳ ಸಂಖ್ಯೆ ಕಡಿಮೆಯಾಗುತ್ತಾ ಹುಲಿಗಳು ಅಳಿವಿನಂಚಿಗೆ ತಲಪಿದವು. ಆಗ ಭಾರತ ಸರಕಾರ ಎಚ್ಚೆತ್ತುಕೊಂಡು ಹುಲಿ ಸಂರಕ್ಷಣಾ ವಲಯಗಳನ್ನು ಮತ್ತು ಯೋಜನೆಗಳನ್ನು ಘೋಷಿಸಿತು. ಸಂಘಟಿತ ಪ್ರಯತ್ನಗಳಿಂದಾಗಿ, ಇತ್ತೀಚೆಗಿನ ವರುಷಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಫೋಟೋ ಕೃಪೆ: ವಿಕಿಪೀಡಿಯಾ