೭೪.ಕ್ರಿಕೆಟ್ ಆಟದ ದಂತಕತೆ ಭಾರತದ ಸಚಿನ್ ತೆಂಡುಲ್ಕರ್
ಭಾರತದ ಸಚಿನ್ ತೆಂಡುಲ್ಕರ್ ತನ್ನ ೧೧ನೆಯ ವಯಸ್ಸಿನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು, ೧೬ನೆಯ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದರು. ಅನಂತರ, ಕ್ರಿಕೆಟ್ ಆಟದಲ್ಲಿ ದಾಖಲೆಗಳ ಸರದಾರ ಎನಿಸಿದರು. ೨೦೦೫ರಲ್ಲಿ, ಕ್ರಿಕೆಟ್ ಟೆಸ್ಟ್ ಪಂದ್ಯಗಳಲ್ಲಿ ೩೫ ಸೆಂಚುರಿ ಬಾರಿಸಿದ ಪ್ರಪ್ರಥಮ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆ ಮತ್ತು ೨೦೦೭ರಲ್ಲಿ, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ೧೫,೦೦೦ ರನ್ ಗಳಿಸಿದ ದಾಖಲೆ ಅವರದಾಯಿತು.
೨೪ ವರುಷಗಳ ತನ್ನ ಕ್ರಿಕೆಟ್ ಸಾಧನೆಯ ವರುಷಗಳಲ್ಲಿ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡರು. ಅವರು ಆಡಿದ ೬೬೪ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ಗಳಿಸಿದ ರನ್ ೩೪,೩೫೭. ೧೬ ನವಂಬರ್ ೨೦೧೩ರಂದು, ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ತನ್ನ ೨೦೦ನೇ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನು ವೆಸ್ಟ್-ಇಂಡೀಸ್ ತಂಡದ ವಿರುದ್ಧ ಆಡಿ ನಿವೃತ್ತರಾದರು. ಅವರ ಸಾಧನೆಗಾಗಿ ಅವರಿಗೆ “ಭಾರತ ರತ್ನ" ಪುರಸ್ಕಾರ ನೀಡಲಾಗಿದೆ.
ಫೋಟೋ: ಸಚಿನ್ ತೆಂಡುಲ್ಕರ್
೭೩.ಚದುರಂಗ ಆಟದ ತವರೂರು - ಭಾರತ
ಚದುರಂಗದ ತವರೂರು ನಮ್ಮ ಭಾರತ. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಚದುರಂಗ ಪ್ರಚಲಿತವಾಗಿತ್ತು ಎಂದು ನಂಬಲಾಗಿದೆ. ಅನಂತರ, ಚದುರಂಗ ಭಾರತದಿಂದ ಪರ್ಷಿಯಾ ದೇಶದಲ್ಲಿ ಪ್ರಚಲಿತವಾಗಿ, ರಾಜವಂಶಸ್ಥರ ಶಿಕ್ಷಣದ ಭಾಗವಾಯಿತು. ತದನಂತರ, ಪಶ್ಚಿಮ ಯುರೋಪ್ ದೇಶಗಳಿಗೂ ರಷ್ಯಾ ದೇಶಕ್ಕೂ ಚದುರಂಗ ಕಾಲಿಟ್ಟಿತು.
ಯುರೋಪಿನಲ್ಲಿ ಈ ಜನಪ್ರಿಯ ಆಟದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಯಿತು. ಈಗಂತೂ, ಭಾರತದ ವಿಶ್ವನಾಥನ್ ಆನಂದ್ ಜಾಗತಿಕ ಚದುರಂಗದಲ್ಲಿ ಭಾರತದ ಪಾರಮ್ಯದ ಪ್ರತೀಕವಾಗಿದ್ದಾರೆ. ಮಹಿಳಾ ಚದುರಂಗದಲ್ಲಿ ಭಾರತದ ಕೊನೆರು ಹಂಪಿ ಜಗತ್ತಿನಲ್ಲೇ ಎರಡನೇ ಸ್ಠಾನ ಗಳಿಸಿದ್ದಾರೆ.
೭೨.ಹಾಕಿ - ಭಾರತದ ಹೆಮ್ಮೆಯ ಆಟ
ಭಾರತದ ಹಾಕಿ ಆಟ ಜಗತ್ತಿನ ಪ್ರಾಚೀನ ಆಟಗಳಲ್ಲೊಂದು. ಭಾರತದ ಹಾಕಿ ತಂಡ ಜಗತ್ತಿನ ಮುಂಚೂಣಿ ಹಾಕಿ ತಂಡಗಳಲ್ಲಿ ಒಂದಾಗಿದೆ. ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಅತ್ಯಂತ ಜಾಸ್ತಿ ಗೋಲುಗಳ ಅಂತರದಿಂದ ಜಯ ಸಾಧಿಸಿದ ದಾಖಲೆ ಇಂದಿಗೂ ಭಾರತದ ಹಾಕಿ ತಂಡದ ಹೆಸರಿನಲ್ಲಿದೆ - ೧೯೩೨ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ, ಭಾರತದ ಹಾಕಿ ತಂಡವು ಯುಎಸ್ಎ ಹಾಕಿ ತಂಡವನ್ನು ೨೪ - ೧ ಗೋಲುಗಳ ಅಂತರದಿಂದ ಸೋಲಿಸಿತ್ತು.
ಭಾರತದ ಹಾಕಿ ತಂಡ, ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ಗಳಿಸಿದೆ. ೨೬ ಮೇ ೧೯೨೮ರಲ್ಲಿ ನೆದರ್-ಲ್ಯಾಂಡ್ ಹಾಕಿ ತಂಡವನ್ನು ಸೋಲಿಸುವ ಮೂಲಕ ಭಾರತದ ಹಾಕಿ ತಂಡ ಮೊದಲ ಒಲಿಂಪಿಕ್ ಚಿನ್ನದ ಪದಕ ಗಳಿಸಿತು. ಅನಂತರ ೧೯೬೦ರ ವರೆಗೆ ಭಾರತದ ಹಾಕಿ ತಂಡ ಜಗತ್ತಿನ ಹಾಕಿ ಸಾಮ್ರಾಟನಾಗಿ ಮೆರೆಯಿತು. ತದನಂತರ ಹಾಕಿ ಆಟದಲ್ಲಿ ವೇಗಕ್ಕೆ ಪ್ರಾಧಾನ್ಯತೆ ದೊರೆತ ಕಾರಣ ತನ್ನ ಪಾರಮ್ಯವನ್ನು ಕಾಯ್ದುಕೊಳ್ಳುವಲ್ಲಿ ಭಾರತದ ಹಾಕಿ ತಂಡ ಸಫಲವಾಗಿಲ್ಲ.
ಆಗಸ್ಟ್ ೨೦೨೧ರ ಟೋಕಿಯೋ ಒಲಿಂಪಿಕ್ಸಿನಲ್ಲಿ, ೪೧ ವರುಷಗಳ ನಂತರ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗಳಿಸಿ, ದೇಶವಾಸಿಗಳಲ್ಲಿ ಹಾಕಿ ಆಟದ ಬಗೆಗಿನ ಆಸಕ್ತಿಗೆ ಜೀವತುಂಬಿದೆ.
ಫೋಟೋ: ಭಾರತ ಹಾಕಿ ಲಾಂಛನ; ಕೃಪೆ: ವಿಕಿಪೀಡಿಯಾ
ಆಟೋಟ, ಮನರಂಜನೆ, ಸಾರಿಗೆ ಮತ್ತು ದೇಶದ ರಕ್ಷಣಾ ವ್ಯವಸ್ಥೆ
೭೧.ಜಗತ್ತಿನ ಅತ್ಯಂತ ಎತ್ತರದ ಜಾಗದ ಕ್ರಿಕೆಟ್ ಕ್ರೀಡಾಂಗಣ ಭಾರತದಲ್ಲಿದೆ.
ಅದು ಹಿಮಾಚಲ ಪ್ರದೇಶದ ಚಾಯಿಲ್ನಲ್ಲಿದೆ. ಇದನ್ನು ೧೮೯೩ರಲ್ಲಿ ಕಟ್ಟಿಸಿದವರು ಕ್ರಿಕೆಟ್-ಪ್ರಿಯರಾದ ಪಾಟಿಯಾಲಾದ ಮಹಾರಾಜ ಭುಪಿಂದರ್ ಸಿಂಗ್. ಇದಕ್ಕಾಗಿ ಅವರು ಸಮುದ್ರಮಟ್ಟದಿಂದ ೨೪೪೪ ಮೀ. ಎತ್ತರದ ಗುಡ್ಡವನ್ನು ಸಮತಟ್ಟುಗೊಳಿಸ ಬೇಕಾಯಿತು.ದಟ್ಟ ಕಾಡಿನಿಂದ ಸುತ್ತುವರಿದಿರುವ ಈ ಕ್ರಿಕೆಟ್ ಕ್ರೀಡಾಂಗಣವನ್ನು ಚಾಯಿಲ್ ಮಿಲಿಟರಿ ಶಾಲೆ ಆಟದ ಮೈದಾನವಾಗಿ ಬಳಸುತ್ತಿದೆ.
ಫೋಟೋ: ಹಿಮಾಚಲ ಪ್ರದೇಶದ ಚಾಯಿಲ್ನ ಕ್ರಿಕೆಟ್ ಕ್ರೀಡಾಂಗಣದ ವಿಹಂಗಮ ನೋಟ
೭೦.ಮಂಗಳ ಪರಿಭ್ರಮಕ ಮಿಷನ್ ಭಾರತದ ಬಾಹ್ಯಾಕಾಶ ಸಾಧನೆಯ ಮೈಲಿಗಲ್ಲು
ಮಂಗಳ ಗ್ರಹಕ್ಕೆ ಭಾರತದ ಪ್ರಥಮ ಅಭಿಯಾನ ಮಂಗಳಯಾನವು ೫ ನವಂಬರ್ ೨೦೧೩ರಂದು ಉಡಾಯಿಸಲ್ಪಟ್ಟಿತು. ಆಕಾಶಕ್ಕೆ ಜಿಗಿದ ೩೫೦ ಟನ್ ತೂಕದ ಇಸ್ರೋದ ರಾಕೆಟ್ ಮಾನವರಹಿತ ಘಟಕವನ್ನು ಮಂಗಳ ಗ್ರಹಕ್ಕೆ ಹೊತ್ತೊಯ್ದಿತು.
ವಿವಿಧ ಗ್ರಹಗಳತ್ತ ಭಾರತದ ಅಭಿಯಾನದ ವಿನ್ಯಾಸ, ಯೋಜನೆ, ಕಾರ್ಯಾಚರಣೆ ಮತ್ತು ಮೇಲುಸ್ತುವಾರಿಗೆ ಅಗತ್ಯವಾದ ತಂತ್ರಜ್ನಾನಗಳನ್ನು ಅಭಿವೃದ್ಧಿ ಪಡಿಸುವುದು ಪ್ರಥಮ ಮಂಗಳಯಾನದ ಪ್ರಧಾನ ಉದ್ದೇಶವಾಗಿತ್ತು.
ಅದೇ ವರುಷ ಯುಎಸ್ಎ ದೇಶದ “ನಾಸಾ" ಸಂಸ್ಥೆ ಹಾರಿಸಿದ ಇಂತಹದೇ ವಾಹಕ ಯೋಜನೆಯ ವೆಚ್ಚಕ್ಕೆ ಹೋಲಿಸಿದಾಗ, ಇಸ್ರೋದ ಮಂಗಳಯಾನ ಯೋಜನೆಯ ವೆಚ್ಚ ಅದಕ್ಕಿಂತ ೯ ಪಟ್ಟು ಕಡಿಮೆ ಅಂದರೆ ೭೪ ಮಿಲಿಯ ಡಾಲರ್.
೬೯.ಭಾರತದ ಪ್ರಥಮ ಚಂದ್ರಯಾನ ದೇಶದ ಅಭಿಮಾನದ ಪ್ರತೀಕ
ಚಂದ್ರಯಾನ-೧, ಭಾರತದ ಪ್ರಥಮ ಮಾನವರಹಿತ ಚಂದ್ರಲೋಕದ ಅಭಿಯಾನ. ಈ ಯಾನವನ್ನು ೨೨ ಅಕ್ಟೋಬರ್ ೨೦೦೮ರಂದು, ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಹಾರಿಸಿತು. ೧೪ ನವಂಬರ್ ೨೦೦೮ರಂದು, ಚಂದ್ರನ ಪರೀಕ್ಷಾ ಘಟಕವು ಚಂದ್ರಯಾನ ಪರಿಭ್ರಮಕದಿಂದ ಪ್ರತ್ಯೇಕಗೊಂಡು, ಚಂದ್ರನಲ್ಲಿ ಇಳಿಯಿತು. ಅದು ಭೂಮಿಯಿಂದ ೩,೮೬,೦೦೦ ಕಿಮೀ ದೂರ ಪ್ರಯಾಣ ಮಾಡಿತ್ತು.
ಈ ರೀತಿಯಲ್ಲಿ ಭಾರತವು ಚಂದ್ರನಲ್ಲಿ ಪರೀಕ್ಷಾ ಘಟಕವನ್ನು ಇಳಿಸಿದ ನಾಲ್ಕನೆಯ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆ ಚಂದ್ರಯಾನವು ಚಂದ್ರನ ಪರ್ವತಗಳು ಮತ್ತು ಕಂದಕಗಳ ೭೦,೦೦೦ಕ್ಕಿಂತ ಅಧಿಕ ಫೋಟೊಗಳನ್ನು ಇಸ್ರೋಗೆ ಕಳಿಸಿಕೊಟ್ಟಿತು. ಅದಲ್ಲದೆ, ಚಂದ್ರನ ಮಣ್ಣಿನ ರಾಸಾಯನಿಕ ಮತ್ತು ಖನಿಜಾಂಶಗಳ ಬಗ್ಗೆ ಮಾಹಿತಿಯನ್ನೂ ರವಾನಿಸಿತು.
೬೮.ಭಾರತದ ಬಾಹ್ಯಾಕಾಶ ಸಾಧನೆಗಳ ಹೆಮ್ಮೆಯ ಸಂಸ್ಥೆ “ಇಸ್ರೋ”
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದಾದ ಮೇಲೊಂದರಂತೆ ಸಾಧನೆಗಳನ್ನು ಮಾಡುತ್ತಾ, ಬಾಹ್ಯಾಕಾಶದಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಎಪ್ರಿಲ್ ೨೦೦೮ರಲ್ಲಿ, ಇಸ್ರೋದ ಪೋಲಾರ್ ರಾಕೆಟ್ (ಪಿಎಸ್ಎಲ್ವಿ - ಸಿ೯) ಒಂದೇ ಜಿಗಿತದಲ್ಲಿ ಹತ್ತು ಉಪಗ್ರಹಗಳನ್ನು ಬಾಹ್ಯಾಕಾಶದ ಕಕ್ಷೆಗೆ ಏರಿಸಿದ್ದು ಅಭೂತಪೂರ್ವ ಜಾಗತಿಕ ದಾಖಲೆ. ೨೦೧೭ರ ಇಸ್ರೋದ ಸಾಧನೆಯಂತೂ ಜಗತ್ತನ್ನೇ ನಿಬ್ಬೆರಗಾಗಿಸಿತು; ರಾಕೆಟಿನ ಒಂದೇ ಜಿಗಿತದಲ್ಲಿ, ಕೇವಲ ೧೮ ನಿಮಿಷಗಳಲ್ಲಿ ೧೦೪ ಕೃತಕ ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಏರಿಸಿತು!
ಫೋಟೋ: ಇಸ್ರೋದಿಂದ ಉಪಗ್ರಹಗಳ ಉಡಾವಣೆ - ೧೦೦ನೇ ಮಿಷನ್
೬೭.ಜಗದ್ವಿಖ್ಯಾತ ವ್ಯಕ್ತಿ ಎನ್.ಆರ್. ನಾರಾಯಣ ಮೂರ್ತಿ; ಜಗದ್ವಿಖ್ಯಾತ ಐಟಿ ಕಂಪೆನಿ ಇನ್ಫೋಸಿಸ್
ಜಗದ್ವಿಖ್ಯಾತ ಐಟಿ ಕಂಪೆನಿ ಇನ್ಫೋಸಿಸ್ ಇದರ ಸ್ಥಾಪಕರಲ್ಲಿ ಒಬ್ಬರಾದ ಸರಳ, ಸಜ್ಜನ, ಧೀಮಂತ ವ್ಯಕ್ತಿ ಎನ್.ಆರ್. ನಾರಾಯಣ ಮೂರ್ತಿ ಅವರೂ ಜಗದ್ವಿಖ್ಯಾತರು. ಮಾಹಿತಿ ತಂತ್ರಜ್ನಾನ ಕ್ಷೇತ್ರದಲ್ಲಿ ಜಗತ್ತೇ ಗುರುತಿಸುವಂತಹ ಪ್ರಗತಿಯನ್ನು ಭಾರತ ಸಾಧಿಸಿದೆ; ಇದರಲ್ಲಿ ಇನ್ಫೋಸಿಸ್ ಕಂಪೆನಿಯ ಪಾತ್ರ ಪ್ರಮುಖವಾದುದು.
೧೯೮೧ರಲ್ಲಿ ಸ್ಥಾಪಿಸಲಾದ ಇನ್ಫೋಸಿಸ್ ಕಂಪೆನಿ, ಮಾಹಿತಿ ತಂತ್ರಜ್ನಾನ ಸೇವೆಯಲ್ಲಿ ಕೆಲವು ಪ್ರಧಾನ ಬದಲಾವಣೆಗಳನ್ನು ತಂದಿತು. ಇದರಿಂದಾಗೆ ಸಾಫ್ಟ್-ವೇರ್ ಸೇವೆಗಾಗಿ ಇಡೀ ಜಗತ್ತೇ ಭಾರತದತ್ತ ನೋಡುವಂತಾಯಿತು. “ಗ್ಲೋಬಲ್ ಡೆಲಿವರಿ ಮಾಡೆಲ್” ಮೂಲಕ ಮಾಹಿತಿ ತಂತ್ರಜ್ನಾನದ ಕ್ಷೇತ್ರದಲ್ಲಿ ದಾಪುಗಾಲು ಹಾಕಿದ ಇನ್ಫೋಸಿಸ್ ಕಂಪೆನಿ, “ನಾಸ್ಡಾಕ್"ನಲ್ಲಿ ಹೆಸರಿಸಲಾದ ಪ್ರಪ್ರಥಮ ಭಾರತೀಯ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದರಲ್ಲಿ ಅಚ್ಚರಿಯೇನಿಲ್ಲ.
ಇವತ್ತು ಭಾರತ, ಯುಎಸ್ಎ, ಚೀನಾ, ಆಸ್ಟ್ರೇಲಿಯಾ, ಜಪಾನ್, ಯುನೈಟೆಡ್ ಕಿಂಗ್ಡಮ್, ಜರ್ಮನಿ ಮುಂತಾದ ದೇಶಗಳಲ್ಲಿ ೬೮ ಕಚೇರಿಗಳನ್ನು ಮತ್ತು ೭೦ ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ ಇನ್ಫೋಸಿಸ್. “ಅತ್ಯುತ್ತಮ ಕಾರ್ಪೊರೇಟ್ ಗವರ್ನ್-ನೆನ್ಸಿ”ಗೆ ಇನ್ಫೋಸಿಸ್ ಕಂಪೆನಿ ಜಗತ್ತಿನಲ್ಲೇ ಶ್ರೇಷ್ಠ ಮಾದರಿಯಾಗಿದೆ.
೬೬.ಭಾರತದ ಮುಂಚೂಣಿ ಉದ್ಯಮ ಮಾಹಿತಿ ತಂತ್ರಜ್ನಾನ (ಐಟಿ)
ಮಾಹಿತಿ ತಂತ್ರಜ್ನಾನವು ಭಾರತದ ಉದ್ಯಮರಂಗದ ಚಿತ್ರಣವನ್ನೇ ಬದಲಾಯಿಸಿತು; ಮಾಹಿತಿ ತಂತ್ರಜ್ನಾನದಿಂದಾಗಿ ಭಾರತವು ಅನುಶೋಧಕ ಉದ್ಯಮಶೀಲರ ದೇಶವೆಂದು ಗುರುತಿಸಲ್ಪಟ್ಟಿತು.
ಭಾರತದ ಮಾಹಿತಿ ತಂತ್ರಜ್ನಾನ ಉದ್ಯಮವು ಸುಮಾರು ೨೫ ಲಕ್ಷ ಜನರಿಗೆ ನೇರ ಉದ್ಯೋಗ ಒದಗಿಸಿದೆ. ಆಧುನಿಕ ಜಗತ್ತಿನಲ್ಲಿ ಮಾಹಿತಿ ತಂತ್ರಜ್ನಾನದ ಮುಂಚೂಣಿ ದೇಶಗಳಲ್ಲಿ ಭಾರತ ಒಂದಾಗಿದೆ. ಅದಲ್ಲದೆ, ಜಗತ್ತಿನ ಬೃಹತ್ ಐಟಿ ಕಂಪೆನಿಗಳು ಭಾರತದಲ್ಲಿವೆ. ಭಾರತದ ಐಟಿ ಉದ್ಯಮವು ಜಗತ್ತಿನಲ್ಲೇ ಶ್ರೇಷ್ಠವಾದ ಮಾಹಿತಿ ತಂತ್ರಜ್ನಾನ ಪರಿಹಾರಗಳನ್ನೂ ವಾಣಿಜ್ಯ ಸೇವೆಗಳನ್ನೂ ಒದಗಿಸುತ್ತಿದೆ.
೧೯೯೧-೯೨ರ ಆರ್ಥಿಕ ಸುಧಾರಣೆಗಳ ನಂತರ, ಭಾರತ ಸರಕಾರ ಒದಗಿಸಿದ ಪ್ರೋತ್ಸಾಹ (ಕಡಿಮೆ ದರದಲ್ಲಿ ಕಚೇರಿ ನಿರ್ಮಾಣಕ್ಕಾಗಿ ಜಮೀನು ಒದಗಣೆ, ತೆರಿಗೆ ರಿಯಾಯ್ತಿ ಇತ್ಯಾದಿ) ಈ ಅಭೂತಪೂರ್ವ ಬೆಳವಣಿಗೆಗೆ ಕಾರಣ. ಭಾರತದ ಹಲವಾರು ಐಟಿ ಕಂಪೆನಿಗಳ ಸೇವೆ ಜಗತ್ತಿನ ಯಾವುದೇ ಮುಂಚೂಣಿ ಐಟಿ ಕಂಪೆನಿಯ ಸೇವೆಗೆ ಸರಿಸಾಟಿಯಾಗಿದೆ.
ಫೋಟೋ: ಜಗದ್ವಿಖ್ಯಾತ ಇನ್ಫೋಸಿಸ್ ಕಂಪೆನಿಯ ಬೆಂಗಳೂರು ಕಚೇರಿ
೬೫.ಭಾರತದ ಟೆಲಿಕಾಮ್ ಕ್ರಾಂತಿಗೆ ಜಗತ್ತಿನಲ್ಲೇ ಸಾಟಿಯಿಲ್ಲ
ಭಾರತದ ಟೆಲಿಕಮ್ಯುನಿಕೇಷನ್ ಜಾಲವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ - ನಮ್ಮ ಟೆಲಿಫೋನ್ ಬಳಕೆದಾರರ ಸಂಖ್ಯೆ (ಮೊಬೈಲ್ ಮತ್ತು ಲಾಂಡ್-ಲೈನ್ ಬಳಕೆದಾರರ ಸಹಿತ) ಜನವರಿ ೨೦೨೦ರಲ್ಲಿ ೧೦೨ ಕೋಟಿ ದಾಟಿತ್ತು!
ಈ ಶತಮಾನದ ಆರಂಭದಲ್ಲಿ ಟೆಲಿಕಾಮ್ ಕ್ಷೇತ್ರದಲ್ಲಿ ಖಾಸಗಿ ಕಂಪೆನಿಗಳಿಗೆ ಸೇವೆ ಒದಗಿಸಲು ಅವಕಾಶ ನೀಡಿದ್ದು ಈ ಕ್ರಾಂತಿಗೆ ನಾಂದಿ. ಈಗ ಜಗತ್ತಿನಲ್ಲೇ ಅತ್ಯಂತ ಕಡಿಮೆ ದರಗಳಲ್ಲಿ ಟೆಲಿಕಾಮ್ ಸೇವೆ ಭಾರತದಲ್ಲಿ ಲಭ್ಯ. ಸರಕಾರಿ ಮಾಲೀಕತ್ವದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕೂಡ ಈ ಕ್ಷೇತ್ರದಲ್ಲಿ ಸಕ್ರಿಯವಾಗಿವೆ. ಏರ್-ಟೆಲ್, ರಿಲಯನ್ಸ್, ವೊಡಫೋನ್-ಐಡಿಯಾ ಇತ್ಯಾದಿ ಖಾಸಗಿ ಕಂಪೆನಿಗಳು ವರುಷದಿಂದ ವರುಷಕ್ಕೆ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿವೆ.
ಮೊಬೈಲ್ ಫೋನಿನಲ್ಲಿ ಇಂಟರ್-ನೆಟ್ ಸೇವೆಗಳು, ಹಣಪಾವತಿ ಮತ್ತು ಹಣವರ್ಗಾವಣೆ ಸೇವೆಗಳು, ಹಾಡುಗಳು, ಚಲನಚಿತ್ರಗಳು, ಕ್ಷಣಕ್ಷಣದ ವಾರ್ತೆಗಳು, ಹವಾಮಾನ ವರದಿಗಳು, ಮಾರುಕಟ್ಟೆ ಧಾರಣೆಗಳು, ಡಿಜಿಟಲ್ ಆಟಗಳು ಇತ್ಯಾದಿ ಸೇವೆಗಳು ಅಂಗೈಯಲ್ಲೇ ಲಭ್ಯವಿರುವುದು ಈ ನಂಬಲಸಾಧ್ಯವಾದ ಭಾರತದ ಟೆಲಿಕಾಮ್ ಕ್ರಾಂತಿಗೆ ಪ್ರಧಾನ ಕಾರಣ.
ಫೋಟೋ: ಟೆಲಿಕಾಮ್ ಪ್ರಸಾರ ಟವರ್; ಕೃಪೆ: ಡ್ರೀಮ್ಸ್ ಟೈಮ್.ಕೋಮ್