Aranmula Mirror, Kerala, India

೮೭.ಕೇರಳದ ಅಚ್ಚರಿ: ಆರಣ್ಮೂಲ ಕನ್ನಡಿ
ಜಗತ್ತಿನಲ್ಲೇ ಅದ್ಭುತವಾದ ಲೋಹಕನ್ನಡಿ ತಯಾರಾಗುವುದು ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ. ಅದುವೇ ಪಟ್ಟನಾಮ್‌ತಿಟ್ಟ ಜಿಲ್ಲೆಯ ಚೆಂಗನ್ನೂರು ಹತ್ತಿರದ ಆರಣ್ಮೂಲ.

ಬೆಳ್ಳಿ ಲೇಪದ ಸಾಮಾನ್ಯ ಕನ್ನಡಿಗಳಲ್ಲಿ ಗಾಜಿನ ಹಿಂಭಾಗದಿಂದ ಬೆಳಕಿನ ಪ್ರತಿಫಲನ ಮೂಡುತ್ತದೆ. ಇದರಿಂದಾಗಿ ಪ್ರತಿಬಿಂಬದಲ್ಲಿ ಲೋಪ ಗುರುತಿಸಬಹುದು. ಆದರೆ, ಮಿಶ್ರಲೋಹದಿಂದ ಮಾಡುವ ಆರಣ್ಮೂಲ ಹೊಳಪುಕನ್ನಡಿಯಲ್ಲಿ, ಕನ್ನಡಿಯ ಮೇಲ್ಭಾಗದಿಂದಲೇ ಬೆಳಕು ಪ್ರತಿಫಲಿಸುತ್ತದೆ. ಹಾಗಾಗಿ ಪರಿಪೂರ್ಣ ಪ್ರತಿಬಿಂಬ ಮೂಡುವುದೇ ಇದರ ವಿಶೇಷ.

ಸಿಂಧೂ ಕಣಿವೆ, ಈಜಿಪ್ಟ್, ಸುಮೇರಿಯಾದ ಪ್ರಾಚೀನ ನಾಗರಿಕತೆಗಳ ಜನಾಂಗಗಳಿಗೆ ಲೋಹಗನ್ನಡಿ ತಯಾರಿಸುವ ತಂತ್ರಜ್ನಾನ ತಿಳಿದಿತ್ತು. ಆದರೆ, ಶತಮಾನಗಳ ನಂತರ ಆ ತಂತ್ರಜ್ನಾನ ಕಳೆದುಹೋಯಿತು.

ಇದೀಗ, ಈ ತಂತ್ರಜ್ನಾನ ಆರಣ್ಮೂಲದ ಕೇವಲ ನಾಲ್ಕು ಕುಟುಂಬಗಳಿಗೆ ತಿಳಿದಿರುವ ರಹಸ್ಯ. ಹಿತ್ತಾಳೆ ಮತ್ತು ಸತುವಿನ ಮಿಶ್ರಣದಿಂದ ಈ ಕನ್ನಡಿಗಳನ್ನು ತಯಾರಿಸುತ್ತಾರೆ ಎಂಬುದು ಲೋಹಶಾಸ್ತ್ರಜ್ನರ ಅಭಿಪ್ರಾಯ. ಆದರೆ, ಈ ಲೋಹಗಳನ್ನು ಬೆರೆಸುವ ಪ್ರಮಾಣ ಅಥವಾ ಬೇರೆ ಯಾವುದನ್ನಾದರೂ ಬೆರೆಸಲಾಗುತ್ತದೆಯೇ ಎಂಬುದು ಇಂದಿಗೂ ನಿಗೂಢ. ಲೋಹಮಿಶ್ರಣ ತಯಾರಿ, ಅದನ್ನು ಹದ ಮತ್ತು ಪಾಲಿಷ್ ಮಾಡುವ ವಿಧಾನ ಈಗಲೂ ಗುಟ್ಟು.

Tea Estate in Darjiiling, India

೮೬.ಜಗದ್ವಿಖ್ಯಾತ ಡಾರ್ಜಿಲಿಂಗ್ ಚಹಾ
ಡಾರ್ಜಿಲಿಂಗ್ ಚಹಾ ಜಗತ್ತಿನಲ್ಲೆಲ್ಲ ಹೆಸರುವಾಸಿ. ಚಹಾ ಗಿಡಗಳ ಮೂಲ ಭಾರತವಲ್ಲ; ಚೀನಾ. ಶತಮಾನಗಳಿಂದ ಚೀನಾದಲ್ಲಿ ಬೆಳೆಯುತ್ತಿದ್ದ ಚಹಾ ಬೀಜಗಳನ್ನು “ಕದ್ದು" ಭಾರತಕ್ಕೆ ಸುಮಾರು ೧೬೦ ವರುಷ ಮುಂಚೆ ಬ್ರಿಟಿಷರು ತಂದದ್ದು ರೋಚಕ ಕತೆ.

ಡಾಕ್ಟರ್ ಕ್ಯಾಂಪ್‌ಬೆಲ್ ಎಂಬ ಸರಕಾರಿ ಸರ್ಜನ್ ವರ್ಗಾವಣೆಯಾಗಿ ೧೮೪೧ರಲ್ಲಿ ಕಾಠ್ಮಂಡುವಿನಿಂದ ಡಾರ್ಜಿಲಿಂಗಿಗೆ ಬಂದಾಗ, ಕಳ್ಳಸಾಗಣೆ ಮೂಲಕ ಚೀನಾದಿಂದ ಚಹಾ ಬೀಜಗಳನ್ನು ತರಿಸುವುದರಲ್ಲಿ ಯಶಸ್ವಿಯಾದ. ಅವನ್ನು ಡಾರ್ಜಿಲಿಂಗಿನ ಬೆಟ್ಟಗಳಲ್ಲಿ ಬೆಳೆಸಿದ. ಚಹಾ ಉತ್ಪಾದನೆಯಲ್ಲಿ ಚೀನಾದ ಏಕಸ್ವಾಮಿತ್ವವನ್ನು ತೊಡೆದು ಹಾಕಲಿಕ್ಕಾಗಿ ಬ್ರಿಟಿಷರು ಹೂಡಿದ ತಂತ್ರ ಕೊನೆಗೂ ಯಶಸ್ವಿಯಾಯಿತು. ಅನಂತರ ಅಸ್ಸಾಮಿನ ಬೆಟ್ಟಗಳಲ್ಲಿ ಚಹಾ ತೋಟಗಳನ್ನು ಬೆಳೆಸಿದ್ದು ಚರಿತ್ರೆ.

ನಮ್ಮ ದೇಶದ ಜನಸಾಮಾನ್ಯರು ಚಹಾ ಆಸ್ವಾದಿಸಲು ಸಾಧ್ಯವಾದದ್ದು ೧೯೫೦ರ ನಂತರ. ಅಲ್ಲಿಯ ವರೆಗೆ ಅದು ಬ್ರಿಟಿಷರು ಮತ್ತು ಕೆಲವೇ ಗಣ್ಯರಿಗೆ ಮಾತ್ರ ಲಭ್ಯವಿತ್ತು.

Siachen Glacier

೮೪.ಸಿಯಾಚಿನ್ ಗ್ಲೇಸಿಯರ್ - ಜಗತ್ತಿನ ಅತಿ ದುರ್ಗಮ ಪ್ರದೇಶ
ಸಿಯಾಚಿನ್ ಗ್ಲೇಸಿಯರ್ - ಇದು ಜಗತ್ತಿನ ಅತಿ ಉದ್ದದ ಪರ್ವತ ಗ್ಲೇಸಿಯರ್. ಭಾರತ - ಪಾಕಿಸ್ಥಾನ ಗಡಿಯಲ್ಲಿ ಕಾರಕೋರಮ್ ಪ್ರದೇಶದಲ್ಲಿದೆ. ಇದರ ಉದ್ದ ೭೮ ಕಿಮೀ. ಇಲ್ಲಿ ಹಲವಾರು ತೊರೆಗಳಿವೆ. ನುಬ್ರಾ ನದಿ ಇಲ್ಲೇ ಉಗಮವಾಗುತ್ತದೆ. ಇದು ವಿಪರೀತ ಚಳಿ ಪ್ರದೇಶ - ಚಳಿಗಾಲದಲ್ಲಿ ಇಲ್ಲಿನ ಉಷ್ಣತೆ -೫೦ (ಮೈನಸ್ ಐವತ್ತು) ಡಿಗ್ರಿ ಸೆಲ್ಸಿಯಸ್ಸಿಗೆ ಕುಸಿಯಬಹುದು!

೧೯೮೪ರಿಂದ ಭಾರತ ಮತ್ತು ಪಾಕಿಸ್ಥಾನ ಈ ಪ್ರದೇಶದ ನಿಯಂತ್ರಣಕ್ಕಾಗಿ ಯುದ್ಧ ನಡೆಸುತ್ತಲೇ ಇವೆ. ಸಮುದ್ರಮಟ್ಟದಿಂದ ೬,೩೦೦ ಮೀ. ಎತ್ತರದಲ್ಲಿರುವ ಸಿಯಾಚಿನ್, ಜಗತ್ತಿನ ಅತ್ಯಂತ ಎತ್ತರದ ರಣರಂಗವಾಗಿದೆ.
ಫೋಟೋ: ಸಿಯಾಚಿನ್ ಗ್ಲೇಸಿಯರಿನ ರುದ್ರರಮಣೀಯ ನೋಟ

೮೫.ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಭಾರತದಲ್ಲಿದೆ.
ಪ್ರತಿಯೊಬ್ಬ ವ್ಯಕ್ತಿಯನ್ನು ಆತನ/ ಆಕೆಯ ಕೈಬೆರಳಚ್ಚು ಮೂಲಕ ಖಡಾಖಂಡಿತವಾಗಿ ಗುರುತಿಸಬಹುದು. ಆದ್ದರಿಂದ, ಅಪರಾಧ ಪತ್ತೆಯಲ್ಲಿ ಕೈಬೆರಳಚ್ಚುಗಳಿಗೆ ಪ್ರಾಮುಖ್ಯತೆ. ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಸ್ಥಾಪನೆಯಾದದ್ದು - ೧೨ ಜೂನ್ ೧೮೯೭ರಂದು, ಕೊಲ್ಕತಾದ ರೈಟರ್ಸ್ ಬಿಲ್ಡಿಂಗಿನಲ್ಲಿ ಎಂಬುದು ನಮ್ಮ ದೇಶದ ಹೆಗ್ಗಳಿಕೆ.

CRPF - Armed Force of Union of India

೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ.
ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳಿಗೆ ಸಹಾಯ ಮಾಡುವುದು ಮತ್ತು ಹಿಂಸಾಚಾರ ಭುಗಿಲೆದ್ದಾಗ ಅದನ್ನು ನಿಯಂತ್ರಿಸಲು ಸಹಕರಿಸುವುದು.

ಭಾರತದಲ್ಲಿ ಚುನಾವಣೆಗಳು ಶಾಂತಿಯುತವಾಗಿ ಜರಗಲು ಈ ಪಡೆ ಸಹಕರಿಸುತ್ತದೆ. ಶಾಂತಿ ಕಾಪಾಡುವ ವಿಶ್ವಸಂಸ್ಥೆಯ ಕಾರ್ಯಾಚರಣೆಗಳಿಗಾಗಿ ಈ ಪಡೆಯನ್ನು ವಿದೇಶಗಳಿಗೆ ಕಳಿಸಲಾಗುತ್ತದೆ. ಇದು ಭಾರತ ಸರಕಾರದ ಆಡಳಿತಕ್ಕೆ ಒಳಪಟ್ಟಿದೆ. ೨೨೦ ಬೆಟಾಲಿಯನುಗಳನ್ನು ಹೊಂದಿರುವ ಸಿ.ಆರ್.ಪಿ.ಎಫ್. ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ.


ಫೋಟೋ: ನವದೆಹಲಿಯಲ್ಲಿ ಸಿ.ಆರ್.ಪಿ.ಎಫ್. ತುಕಡಿಯ ಪಥಸಂಚಲನ; ಕೃಪೆ: ವಿಕಿಪಿಡೀಯಾ

Indian Railways - Train

೮೨.ಭಾರತೀಯ ರೈಲ್ವೇ - ಜಗತ್ತಿನ ವಿಸ್ಮಯ
ಭಾರತೀಯ ರೈಲ್ವೇ ಏಷ್ಯಾ ಖಂಡದ ಅತಿ ದೊಡ್ಡ ರೈಲ್ವೇ ಜಾಲ. ಜಗತ್ತಿನಲ್ಲಿ ಇದಕ್ಕೆ ಐದನೇ ಸ್ಥಾನ - ಯುಎಸ್‌ಎ, ರಷ್ಯಾ, ಚೀನಾ ಮತ್ತು ಕೆನಡಾ ದೇಶಗಳ ರೈಲ್ವೇ ಜಾಲದ ನಂತರ. ಇದರ ಉದ್ಯೋಗಿಗಳ ಸಂಖ್ಯೆಯೂ ಅಗಾಧ: ೧೦ ಲಕ್ಷ (ಮಾರ್ಚ್ ೨೦೨೦ರಲ್ಲಿ) ಇದು ಜಗತ್ತಿನ ಎಂಟನೆಯ ಅತಿ ದೊಡ್ಡ ಉದ್ಯೋಗದಾತ. ಭಾರತದ ಮೊತ್ತಮೊದಲ ರೈಲು ರೆಡ್ ಹಿಲ್ ರೈಲು. ಇದು ೧೮೩೭ರಲ್ಲಿ ಆಗಿನ ಮದ್ರಾಸ್ ಪ್ರಾಂತ್ಯದ ರೆಡ್ ಹಿಲ್ ಎಂಬಲ್ಲಿಂದ ಚಿಂತಾದ್ರಿಪೇಟ್ ಸೇತುವೆಗೆ ಪ್ರಯಾಣಿಸಿತು.

ಭಾರತೀಯ ರೈಲ್ವೇ ೬೭,೯೫೬ ಕಿಮೀ ಉದ್ದದ ರೂಟಿನಲ್ಲಿ (೨೦ ಮಾರ್ಚ್ ೨೦೨೦ರಂದು) ಸುಮಾರು ೧,೧೫,೦೦೦ ಕಿಮೀ ಉದ್ದದ ರೈಲ್ವೇ ಹಳಿಗಳನ್ನು ಹೊಂದಿದೆ. ಆರ್ಥಿಕ ವರುಷ ೨೦೧೯-೨೦ರಲ್ಲಿ ಇದು ೮೦೮ ಕೋಟಿ ಪ್ರಯಾಣಿಕರನ್ನೂ ೧೨೧ ಕೋಟಿ ಟನ್ ವಸ್ತುಗಳನ್ನೂ ಸಾಗಿಸಿದೆ! ಪ್ರತಿ ದಿನವೂ ಸುಮಾರು ೨೫ ದಶಲಕ್ಷ ಪ್ರಯಾಣಿಕರನ್ನು ೭,೫೦೦ ವಿವಿಧ ರೈಲ್ವೇ ನಿಲ್ದಾಣಗಳಿಗೆ ತಲಪಿಸುವ ಮತ್ತು ದಿನದಿನವೂ ೧೪,೩೦೦ ರೈಲುಗಳನ್ನು ಓಡಿಸುವ ದೈತ್ಯ ವ್ಯವಸ್ಥೆ ಭಾರತೀಯ ರೈಲ್ವೇ. ಈ ರೈಲುಗಳು ಕ್ರಮಿಸುವ ದೂರ ಭೂಮಿಯಿಂದ ಚಂದ್ರನಿಗಿರುವ ದೂರದ ಮೂರೂವರೆ ಪಟ್ಟು!


ಫೋಟೋ: ಭಾರತದ ಜನಜೀವನದ ಜೀವನಾಡಿ ರೈಲುಗಾಡಿ

 

Mumbai Railway Station - Loco Pilots

೮೦.ಜಗತ್ತಿನ ಅತ್ಯಧಿಕ “ಪ್ರಯಾಣಿಕರ ಸಾಂದ್ರತೆ” ನಗರ ಭಾರತದಲ್ಲಿದೆ.
ಮುಂಬೈ ನಗರದ ಬಹುಪಾಲು ವಾಸಿಗಳು ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ - ಮುಖ್ಯವಾಗಿ ನಗರ ರೈಲು-ಜಾಲದ ರೈಲುಗಳನ್ನು. ಅಲ್ಲಿನ ನಗರ ರೈಲು ಜಾಲದ ಉದ್ದ ೩೧೯ ಕಿಮೀ. ಇದರಲ್ಲಿ ಪ್ರತಿ ದಿನ ೬.೩ ದಶಲಕ್ಷ ಜನರು ೨,೩೪೨ ರೈಲುಗಳಲ್ಲಿ ಪ್ರಯಾಣಿಸುವ ಕಾರಣ, ಮುಂಬೈಯ “ಪ್ರಯಾಣಿಕರ ಸಾಂದ್ರತೆ" ಜಗತ್ತಿನಲ್ಲೇ ಅತ್ಯಧಿಕ.
ಫೋಟೋ: ಪ್ರಯಾಣಿಕರು ಕಿಕ್ಕಿರಿದಿರುವ ಮುಂಬೈ ರೈಲ್ವೇ ನಿಲ್ದಾಣ

೮೧.ಜಗತ್ತಿನ ಅತಿ ದೊಡ್ಡ ಬಸ್ ಸಾರಿಗೆ ಸೇವೆ ಪೂರೈಕೆದಾರ ಸಂಸ್ಥೆ ಭಾರತದಲ್ಲಿದೆ.
ಈ ಸಂಸ್ಥೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್. ೧೯೩೨ರಲ್ಲಿ ಸ್ಥಾಪನೆಯಾದಾಗ ಇದರಲ್ಲಿ ಕೇವಲ ೨೭ ಬಸ್ಸುಗಳಿದ್ದವು. ಈಗ ಇದರ ಬಸ್ಸುಗಳ ಸಂಖ್ಯೆ ೨೨,೫೦೦ಕ್ಕಿಂತ ಅಧಿಕ. ಪ್ರಧಾನ ಕಚೇರಿ ವಿಜಯವಾಡದಲ್ಲಿದೆ.

೨೧೧ ಬಸ್ ಡಿಪೋಗಳನ್ನು ಹೊಂದಿರುವ ಎ.ಪಿ.ಎಸ್.‌ಆರ್.ಟಿ.ಸಿ. ರಾಜ್ಯದ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ಸಾರಿಗೆ ಸೇವೆ ಒದಗಿಸುತ್ತಿದೆ. ದಿನದಿನವೂ ೧೪ ದಶಲಕ್ಷ ಪ್ರಯಾಣಿಕರನ್ನು ಒಯ್ಯುತ್ತಿದೆ. ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ಎ.ಪಿ.ಎಸ್.ಆರ್.ಟಿ.ಸಿ.ಯನ್ನು ಜಗತ್ತಿನ ಅತಿ ದೊಡ್ಡ ಬಸ್ ಸಾರಿಗೆ ಸೇವೆ ಪೂರೈಕೆದಾರ ಸಂಸ್ಥೆ ಎಂದು ದಾಖಲಿಸಿದೆ.

PVR Cinemas - Bangalore, India

೭೮.ಜಗತ್ತಿನ ಮುಂಚೂಣಿ ಉದ್ಯಮ - ಭಾರತೀಯ ಚಲನಚಿತ್ರ ಉದ್ಯಮ
ಭಾರತೀಯ ಚಲನಚಿತ್ರ ಉದ್ಯಮ ಒಂದು ಶತಮಾನ ದಾಟಿ ಮುನ್ನಡಿಯಿಡುತ್ತಿದೆ - ಅಮೇರಿಕಾದ ಹಾಲಿವುಡ್ ಮತ್ತು ಚೀನಾದ ಚಲನಚಿತ್ರ ಉದ್ಯಮಕ್ಕೆ ಸರಿಸಾಟಿಯಾಗಿ.

ಬಾಲಿವುಡ್ - ಇದು ಮುಂಬೈಯ ಚಲನಚಿತ್ರ ಉದ್ಯಮದ ಜನಪ್ರಿಯ ಹೆಸರು - ಇವತ್ತು ರೂ.೧೧೫ ಬಿಲಿಯನ್ ಮೌಲ್ಯದ ಉದ್ಯಮ. ಪ್ರತಿ ವರುಷ ಸುಮಾರು ೧,೦೦೦ ಹೊಸ ಚಲನಚಿತ್ರಗಳು ಭಾರತದಲ್ಲಿ ತಯಾರಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತದ ಚಲನಚಿತ್ರ ಉದ್ಯಮ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಹಾಡುಗಳು, ನೃತ್ಯಗಳು ತುಂಬಿರುವ ಬಾಲಿವುಡ್ ಹಾಗೂ ಇತರ ಭಾಷಾ ಚಲನಚಿತ್ರಗಳು ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಒಯ್ಯುತ್ತವೆ.

ಬಹುಭಾಷಾ ಭಾರತೀಯ ಚಲನಚಿತ್ರ ಉದ್ಯಮ ಟಿಕೆಟುಗಳ ಮಾರಾಟ ಸಂಖ್ಯೆಯಲ್ಲಿಯೂ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ಜನಸಾಮಾನ್ಯರ ಬೆಂಬಲದಿಂದಾಗಿಯೇ ಇದು ಬೃಹತ್ ಉದ್ಯಮವಾಗಿ ಬೆಳೆದಿದೆ. ಭಾರತೀಯ ಚಲನಚಿತ್ರಗಳು ವಿದೇಶಗಳಲ್ಲಿಯೂ ಜನಪ್ರಿಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ.
ಫೋಟೋ: ಚಲನಚಿತ್ರ ಮಂದಿರದ ನೋಟ

Ramoji Film City -Hyderabad, India

೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿ
ಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕೇಂದ್ರ.

ಫಿಲ್ಮ್ ಪ್ರೊಡ್ಯೂಸರ್ ಹಾಗೂ ರಾಮೋಜಿ ಗ್ರೂಫ್ ಕಂಪೆನಿಗಳ ಮುಖ್ಯಸ್ಥ ರಾಮೋಜಿ ರಾವ್ ಇದನ್ನು ೧೯೯೬ರಲ್ಲಿ ಸ್ಥಾಪಿಸಿದರು. ಪ್ರತಿವರುಷ ಸುಮಾರು ಹತ್ತು ಲಕ್ಷ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಚಲನಚಿತ್ರಗಳ ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳು ಒಂದೇ ಜಾಗದಲ್ಲಿ ಲಭ್ಯವಿರುವಿದು ಇಲ್ಲಿನ ವಿಶೇಷತೆ.

ಹವಾಮಹಲಿನ ಪ್ರತಿಕೃತಿ, ಗೊಲ್ಕೊಂಡಾ ಕೋಟೆಯ ಪ್ರತಿಕೃತಿ ಇತ್ಯಾದಿ ಹಲವಾರು ಪ್ರತಿಕೃತಿಗಳು ಇಲ್ಲಿವೆ. ಇಲ್ಲಿಗೆ ಪ್ರವೇಶಿಸಿದಾಗ, ಮೌರ್ಯರ ಕಾಲದ ಮತ್ತು ಮೊಘಲರ ಕಾಲದ ಪ್ರಾಚೀನ ರಸ್ತೆಗಳಿಂದ ತೊಡಗಿ ಅಮೇರಿಕಾದ ಆಧುನಿಕ   ರಸ್ತೆಗಳ ವರೆಗೆ ವಿವಿಧ ಕಾಲಮಾನದ ರಸ್ತೆಗಳಲ್ಲಿ ಪ್ರವಾಸಿಗಳು ಸಂಚರಿಸಬಹುದು! ಅಂತೂ ಇಲ್ಲಿರುವ "ಸಿನಿಮಾ ಸೆಟ್”ಗಳು ಪ್ರವಾಸಿಗಳನ್ನು ಬೆಕ್ಕಸ ಬೆರಗಾಗಿಸುವ ಚಲನಚಿತ್ರ ಪ್ರಪಂಚದ ಕಲ್ಪನಾಲೋಕಕ್ಕೆ ಕರೆದೊಯ್ಯುತ್ತವೆ.

Vishwanathan Anand - Great Chess Player

೭೬.ವಿಶ್ವನಾಥನ್ ಆನಂದ್ - ಭಾರತೀಯ ಚದುರಂಗದ ದಂತಕತೆ
ಜಗತ್ತಿನ ಶ್ರೇಷ್ಠ ಚದುರಂಗ ಆಟಗಾರರಲ್ಲಿ ಒಬ್ಬರಾದ ಭಾರತದ ವಿಶ್ವನಾಥನ ಆನಂದ್ ಅವರನ್ನು "ಮಿಂಚಿನ ಚದುರಂಗ ಪಟು" ಎಂದು ಕರೆಯುತ್ತಾರೆ - ಅವರ ಚದುರಂಗದಾಟದ ವೇಗಕ್ಕಾಗಿ.

ತನ್ನ ತಾಯಿಯಿಂದ ಚದುರಂಗ ಕಲಿತ ವಿಶ್ವನಾಥನ್ ಆನಂದ್ ಕೇವಲ ೧೬ನೇ ವಯಸ್ಸಿನಲ್ಲಿ ರಾಷ್ಟ್ರೀಯ ಚದುರಂಗ ಚಾಂಪಿಯನ್ ಆದರು. ತನ್ನ ೧೮ನೇ ವಯಸ್ಸಿನಲ್ಲಿ, ಭಾರತದ ಪ್ರಪ್ರಥಮ ಚೆಸ್ ಗ್ರಾಂಡ್ ಮಾಸ್ಟರ್ ಆದರು. ೧೯೮೭ರಲ್ಲಿ, ಜಾಗತಿಕ ಜ್ಯೂನಿಯರ್ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಮೊತ್ತಮೊದಲ ಏಷ್ಯಾದ ಚದುರಂಗ ಪಟು ಎನಿಸಿದರು.

ವರುಷ ೨೦೦೦ದಲ್ಲಿ ಚದುರಂಗ ಸ್ಪರ್ಧೆಯಲ್ಲಿ ವಿಶ್ವನಾಥನ್ ಆನಂದ್ ಜಾಗತಿಕ ಉತ್ತುಂಗಕ್ಕೆ ಏರಿದರು - ಜಾಗತಿಕ ಚೆಸ್ ಚಾಂಪಿಯನ್ ಆಗುವ ಮೂಲಕ. ಚದುರಂಗದಲ್ಲಿ ತನ್ನ ಅದ್ಭುತ ಸಾಧನೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಭಾರತದಲ್ಲಿ ಯುವಜನತೆಯಲ್ಲಿ ಚದುರಂಗವನ್ನು ಜನಪ್ರಿಯಗೊಳಿಸಲಿಕ್ಕಾಗಿ ಹಲವಾರು ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ ವಿಶ್ವನಾಥನ್ ಆನಂದ್.
ಫೋಟೋ: ಚದುರಂಗದ ಆಟದಲ್ಲಿ ತಲ್ಲೀನರಾದ ವಿಶ್ವನಾಥನ್ ಆನಂದ್

Dhyan Chand

೭೫.ಧ್ಯಾನ್ ಚಂದ್ - ಜಗತ್ತಿನ ಶ್ರೇಷ್ಠ ಹಾಕಿ ಆಟಗಾರ
ಧ್ಯಾನ್ ಚಂದ್ "ಹಾಕಿ ಮಾಂತ್ರಿಕ" ಎಂದೇ ಪ್ರಸಿದ್ಧರು. ತನ್ನ ೧೬ನೆಯ ವಯಸ್ಸಿನಲ್ಲಿ ಭಾರತೀಯ ಸೈನ್ಯ ಸೇರಿಕೊಂಡಾಗ ಅವರು ಹಾಕಿ ಆಟವಾಡಲು ಕಲಿತರು. ಅನಂತರ ಅವರು ಹಾಕಿ ಆಟದ ದಂತಕತೆಯಾದರು.

ಭಾರತದ ಹಾಕಿ ತಂಡವು, ನಿರಂತರ ಮೂರು ಒಲಿಂಪಿಕ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಲು ಧ್ಯಾನ್ ಚಂದ್ ತಮ್ಮ ಹಾಕಿ ಪ್ರೌಡಿಮೆಯಿಂದ ಸಹಕರಿಸಿದರು. ೧೯೩೬ರ ಬರ್ಲಿನ್ ಒಲಿಂಪಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ನಾಯಕ ಧ್ಯಾನ್ ಚಂದ್. ತನ್ನ ಹಾಕಿ ಸ್ಪರ್ಧಾ ಜೀವನದಲ್ಲಿ ಅವರು ಗಳಿಸಿದ ಗೋಲುಗಳು ೧,೦೦೦ಕ್ಕಿಂತ ಅಧಿಕ.

ಹಾಕಿ ಕ್ರೀಡೆಯಲ್ಲಿ ಅವರ ಸಾಧನೆಗಾಗಿ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದೆ. ೩ ಡಿಸೆಂಬರ್ ೧೯೭೯ರಂದು ಅವರು ವಿಧಿವಶರಾದರು.

ಚಿತ್ರ: ಧ್ಯಾನ್ ಚಂದ್; ಕೃಪೆ: ಭಾರತೀಯ ಹಾಕಿ

Pages