೭೮.ಜಗತ್ತಿನ ಮುಂಚೂಣಿ ಉದ್ಯಮ - ಭಾರತೀಯ ಚಲನಚಿತ್ರ ಉದ್ಯಮ
ಭಾರತೀಯ ಚಲನಚಿತ್ರ ಉದ್ಯಮ ಒಂದು ಶತಮಾನ ದಾಟಿ ಮುನ್ನಡಿಯಿಡುತ್ತಿದೆ - ಅಮೇರಿಕಾದ ಹಾಲಿವುಡ್ ಮತ್ತು ಚೀನಾದ ಚಲನಚಿತ್ರ ಉದ್ಯಮಕ್ಕೆ ಸರಿಸಾಟಿಯಾಗಿ.
ಬಾಲಿವುಡ್ - ಇದು ಮುಂಬೈಯ ಚಲನಚಿತ್ರ ಉದ್ಯಮದ ಜನಪ್ರಿಯ ಹೆಸರು - ಇವತ್ತು ರೂ.೧೧೫ ಬಿಲಿಯನ್ ಮೌಲ್ಯದ ಉದ್ಯಮ. ಪ್ರತಿ ವರುಷ ಸುಮಾರು ೧,೦೦೦ ಹೊಸ ಚಲನಚಿತ್ರಗಳು ಭಾರತದಲ್ಲಿ ತಯಾರಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತದ ಚಲನಚಿತ್ರ ಉದ್ಯಮ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಹಾಡುಗಳು, ನೃತ್ಯಗಳು ತುಂಬಿರುವ ಬಾಲಿವುಡ್ ಹಾಗೂ ಇತರ ಭಾಷಾ ಚಲನಚಿತ್ರಗಳು ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಒಯ್ಯುತ್ತವೆ.
ಬಹುಭಾಷಾ ಭಾರತೀಯ ಚಲನಚಿತ್ರ ಉದ್ಯಮ ಟಿಕೆಟುಗಳ ಮಾರಾಟ ಸಂಖ್ಯೆಯಲ್ಲಿಯೂ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ಜನಸಾಮಾನ್ಯರ ಬೆಂಬಲದಿಂದಾಗಿಯೇ ಇದು ಬೃಹತ್ ಉದ್ಯಮವಾಗಿ ಬೆಳೆದಿದೆ. ಭಾರತೀಯ ಚಲನಚಿತ್ರಗಳು ವಿದೇಶಗಳಲ್ಲಿಯೂ ಜನಪ್ರಿಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ.
ಫೋಟೋ: ಚಲನಚಿತ್ರ ಮಂದಿರದ ನೋಟ
೭೯.ಜಗತ್ತಿನಲ್ಲಿ ಸ್ಟುಡಿಯೋದಲ್ಲಿ ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಆಶಾ ಭೋಸ್ಲೆ ಅವರದು
ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡಿನಲ್ಲಿ ಈ ದಾಖಲೆ ಆಶಾ ಭೋಸ್ಲೆ ಅವರ ಹೆಸರಿನಲ್ಲಿ ದಾಖಲಾಗಿದೆ. ೧೯೪೭ರಿಂದ ೨೦೧೧ರ ವರೆಗೆ ವಿವಿಧ ಭಾರತೀಯ ಭಾಷೆಗಳಲ್ಲಿ ೧೧,೦೦೦ ಹಾಡುಗಳನ್ನು ಅವರು ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದ್ದರು.