೮೨.ಭಾರತೀಯ ರೈಲ್ವೇ - ಜಗತ್ತಿನ ವಿಸ್ಮಯ
ಭಾರತೀಯ ರೈಲ್ವೇ ಏಷ್ಯಾ ಖಂಡದ ಅತಿ ದೊಡ್ಡ ರೈಲ್ವೇ ಜಾಲ. ಜಗತ್ತಿನಲ್ಲಿ ಇದಕ್ಕೆ ಐದನೇ ಸ್ಥಾನ - ಯುಎಸ್‌ಎ, ರಷ್ಯಾ, ಚೀನಾ ಮತ್ತು ಕೆನಡಾ ದೇಶಗಳ ರೈಲ್ವೇ ಜಾಲದ ನಂತರ. ಇದರ ಉದ್ಯೋಗಿಗಳ ಸಂಖ್ಯೆಯೂ ಅಗಾಧ: ೧೦ ಲಕ್ಷ (ಮಾರ್ಚ್ ೨೦೨೦ರಲ್ಲಿ) ಇದು ಜಗತ್ತಿನ ಎಂಟನೆಯ ಅತಿ ದೊಡ್ಡ ಉದ್ಯೋಗದಾತ. ಭಾರತದ ಮೊತ್ತಮೊದಲ ರೈಲು ರೆಡ್ ಹಿಲ್ ರೈಲು. ಇದು ೧೮೩೭ರಲ್ಲಿ ಆಗಿನ ಮದ್ರಾಸ್ ಪ್ರಾಂತ್ಯದ ರೆಡ್ ಹಿಲ್ ಎಂಬಲ್ಲಿಂದ ಚಿಂತಾದ್ರಿಪೇಟ್ ಸೇತುವೆಗೆ ಪ್ರಯಾಣಿಸಿತು.
ಭಾರತೀಯ ರೈಲ್ವೇ ೬೭,೯೫೬ ಕಿಮೀ ಉದ್ದದ ರೂಟಿನಲ್ಲಿ (೨೦ ಮಾರ್ಚ್ ೨೦೨೦ರಂದು) ಸುಮಾರು ೧,೧೫,೦೦೦ ಕಿಮೀ ಉದ್ದದ ರೈಲ್ವೇ ಹಳಿಗಳನ್ನು ಹೊಂದಿದೆ. ಆರ್ಥಿಕ ವರುಷ ೨೦೧೯-೨೦ರಲ್ಲಿ ಇದು ೮೦೮ ಕೋಟಿ ಪ್ರಯಾಣಿಕರನ್ನೂ ೧೨೧ ಕೋಟಿ ಟನ್ ವಸ್ತುಗಳನ್ನೂ ಸಾಗಿಸಿದೆ! ಪ್ರತಿ ದಿನವೂ ಸುಮಾರು ೨೫ ದಶಲಕ್ಷ ಪ್ರಯಾಣಿಕರನ್ನು ೭,೫೦೦ ವಿವಿಧ ರೈಲ್ವೇ ನಿಲ್ದಾಣಗಳಿಗೆ ತಲಪಿಸುವ ಮತ್ತು ದಿನದಿನವೂ ೧೪,೩೦೦ ರೈಲುಗಳನ್ನು ಓಡಿಸುವ ದೈತ್ಯ ವ್ಯವಸ್ಥೆ ಭಾರತೀಯ ರೈಲ್ವೇ. ಈ ರೈಲುಗಳು ಕ್ರಮಿಸುವ ದೂರ ಭೂಮಿಯಿಂದ ಚಂದ್ರನಿಗಿರುವ ದೂರದ ಮೂರೂವರೆ ಪಟ್ಟು!
ಫೋಟೋ: ಭಾರತದ ಜನಜೀವನದ ಜೀವನಾಡಿ ರೈಲುಗಾಡಿ