Agriculture and Rural Development
"ನಿನ್ನದು ಕೆರೆ ಹತ್ತಿರದ ಜಮೀನು. ಬೋರ್‍ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಾಸಾದದ್ದು ೧೯೮೮ರಲ್ಲಿ. ಸಂಬಳದ ಕೆಲಸಕ್ಕೆ ಹೋಗಬೇಕೆಂದು ಅವರಿಗೆ ಅನಿಸಲಿಲ್ಲ. ’ತಂದೆ ಲಕ್ಷ್ಮಣ ಶೆಟ್ಟಿಯವರ ಪಾಲಿಗೆ ಬಂದ ೧೨ ಎಕ್ರೆ ಜಮೀನಿದೆ. ಅಲ್ಲೇ ಕೆಲಸ ಮಾಡಿದರಾಯಿತು’ ಎಂಬ ಯೋಚನೆಯಿಂದ ತನ್ನ ಹಳ್ಳಿ ಎಸ್. ಬಿದರೆಗೆ ಮರಳಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಹಳ್ಳಿ ಎಸ್. ಬಿದರೆ. ಅಲ್ಲಿಗೆ ತಲಪಲು ಚಿಕ್ಕಮಗಳೂರಿನಿಂದ ಹೊರಟು, ಮಾಗಡಿ ಮತ್ತು ಕಳಸಾಪುರ ದಾಟಿ ೩೬ ಕಿಮೀ ದೂರ ಸಾಗಬೇಕು. ಹಳ್ಳಿಗೆ ಮರಳಿದ ಶೋಬನಬಾಬುವಿಗೆ ಹಲವರು ಅದೇ ರೀತಿ ಉಪದೇಶ ಮಾಡುತ್ತಿದ್ದಾಗ ಅವರು ಕೈಗೊಂಡ ನಿರ್ಧಾರವನ್ನು ಅವರ ಮಾತಿನಲ್ಲೇ ಕೇಳಿ, "ಇನ್ನೊಂದು ಬೋರ್‍ವೆಲ್ ಕೊರೆಸಬಾರದು; ಮಳೆನೀರಿನಿಂದ ಮತ್ತು ಈಗಿರುವ ಬೋರ್‍ವೆಲ್‍ನ ನೀರಿನಿಂದಲೇ ಬೇಸಾಯ ಮಾಡಬೇಕೆಂದು ನಿರ್ಧರಿಸಿದೆ."
ಈ ಯುವಕ ತನ್ನ ನಿರ್ಧಾರಕ್ಕೆ ಅನುಗುಣವಾಗಿ ಬೇಸಾಯ ಮಾಡಿಕೊಂಡಿದ್ದಾಗ ಬರಸಿಡಿಲಿನಂತೆ ಬಂದೆರಗಿತು ಬರಗಾಲ. ಒಂದಲ್ಲ, ಎರಡಲ್ಲ, ಸತತ ಮೂರು ವರುಷಗಳ ಬರಗಾಲ. ೨೦೦೧ರಿಂದ ೨೦೦೪ರ ವರೆಗೆ ಎಸ್. ಬಿದರೆ ಹಳ್ಳಿಗೂ ಶೋಬನಬಾಬುವಿಗೂ ಅಗ್ನಿಪರೀಕ್ಷೆಯ ಕಾಲ. ಒಂದೆಡೆ ಬರಗಾಲದ ಹೊಡೆತ, ಇನ್ನೊಂದೆಡೆ ತೆಂಗಿನಮರಗಳಿಗೆ ನುಸಿರೋಗದ ಪೀಡೆ. ಇವರ ಒಂದೂವರೆ ಎಕ್ರೆ ತೋಟದ ೩೦ ವರುಷ ಹಳೆಯ ತೆಂಗಿನಮರಗಳೆಲ್ಲ ನುಸಿರೋಗದಿಂದ ಸೊರಗಿದವು. "ನಮ್ಮ ತೋಟದ ತೆಂಗಿನಮರಗಳಿಂದ ಐದು ಟನ್ ಕೊಬ್ಬರಿ ಸಿಗುತ್ತಿತ್ತು. ೨೦೦೩ರಲಿ ಸಿಕ್ಕಿದ್ದು ಒಂದು ಟನ್ ಮಾತ್ರ" ಎಂದು ನನ್ನೊಡನೆ ಮಾತಾಡುತ್ತಾ ತನಗಾದ ನಷ್ಟದ ಚಿತ್ರಣ ನೀಡಿದರು ಶೋಬನಬಾಬು.
ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ ಹಾದು ಹಾರೋಗೇರಿ ತಲಪಿದ್ದೆವು. ಕಳೆದೆರಡು ವಾರಗಳಲ್ಲಿ ಬಿದ್ದ ಮಳೆಯ ನೀರು ಬಾಂದಾರದಲ್ಲಿ ಸಂಗ್ರಹವಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸುರು ಚಿಗುರು ನಗುತ್ತಿತ್ತು.
ಕರ್ನಾಟಕದಲ್ಲಿ ಇಂತಹ ಹಲವು ಬಾಂದಾರಗಳಿವೆ. ಇದರದ್ದೇನು ವಿಶೇಷ? ಇದು ಹಳ್ಳಿಗರು ೩ ತಿಂಗಳ ಶ್ರಮದಾನದಿಂದ ಕಟ್ಟಿದ ಬಾಂದಾರ. ಸರ್ವೋದಯ ಮಹಾಸಂಘದ ಅಧ್ಯಕ್ಷರಾದ ಬಸವಣ್ಣಿಪ್ಪ ಅಂಗಡಿ ಶ್ರಮದಾನದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಹೇಳಿದರು,"ಇದನ್ನ ನಾವು ಕಟ್ಟಿದ್ದು ೧೯೯೯ರಲ್ಲಿ. ಇಪ್ಪತ್ತೆರಡು ಹಳ್ಳಿಗಳಿಂದ ಜನ ಬರ್ತಿದ್ರು ನೋಡ್ರೀ, ಬುತ್ತಿ ಕಟ್‍ಕೊಂಡ್ ಬರ್ತಿದ್ರು. ಐನೂರು ಆಜೂಬಾಜು ಜನ ಸೇರ್ತಿದ್ರು. ಇಲ್ಲಿ ಜಾತ್ರೆ ಇದ್ದಂಗಿರ್ತಿತ್ತು. ಎಲ್ರೂ ಒಟ್ಟಾಗಿ ಕೆಲ್ಸ ಮಾಡೋರು, ಒಟ್ಟಾಗಿ ಉಣ್ಣೋರು. ಬಾಂದಾರ ಕಟ್ಟಿ ಮುಗಿಸೋದಕ್ಕೆ ೩ ತಿಂಗಳು ಬೇಕಾಯ್ತು, ನೋಡ್ರೀ."
ಹಳ್ಳಿಗರು ಒಟ್ಟು ಸೇರಿದರೆ ಜಲಸಂರಕ್ಷಣೆ ಹೇಗೆ ಮಾಡಬಹುದೆಂಬುದಕ್ಕೆ ಹಾರೋಗೇರಿ ಬಾಂದಾರ ಒಂದು ಮಾದರಿ. ಅದರ ಉದ್ದ ೧೪೦ ಅಡಿ, ಎತ್ತರ ೧೨ ಅಡಿ. ಅದರಲ್ಲಿ ೨೦ ಲಕ್ಷ ಲೀಟರ್ ನೀರು ಸಂಗ್ರಹಿಸಲು ಸಾಧ್ಯ. ಮೊದಲು ಒಂದು ಇಂಚು ದಪ್ಪದ ಫೆರ್ರೋ ಸಿಮೆಂಟ್ ತಡೆಗೋಡೆ ನಿರ್ಮಿಸಿ, ಅನಂತರ ಅದರ ಎರಡೂ ಬದಿಗಳಲ್ಲಿ ಕಲ್ಲುಮಣ್ಣು ಹೇರಿ ಬಾಂದಾರ ರಚಿಸಲಾಗಿದೆ. ಅದಕ್ಕೆ ತಗಲಿದ ಒಟ್ಟು ವೆಚ್ಚ ರೂಪಾಯಿ ೬೦,೦೦೦.
ಆ ಬಾಂದಾರದ ನೀರಿನಿಂದ ಸುತ್ತಲಿನ ೧೫ ರೈತರಿಗೆ ಕೃಷಿಗೆ ಪ್ರಯೋಜನವಾಗಿದೆ. ಅಲ್ಲಿನ ಬೋರ್‍ವೆಲ್‍ಗಳ ನೀರಿನ ಉತ್ಪತ್ತಿ ಹೆಚ್ಚಿದೆ. ಸರಾಸರಿ ೯೩೯ ಮಿಮೀ ವಾರ್ಷಿಕ ಮಳೆಯ ಆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ.
"ಮುಂಚೆ ನಾವೆಲ್ಲ ಹೊಲದಲ್ಲಿ ಅಲ್ಲಲ್ಲಿ ಬದುಗಳನ್ನ ಮಾಡ್ತಿದ್ವಿ. ಒಂದೆಕ್ರೆಗೆ ನಾಲ್ಕು ಬದು ಆದ್ರೂ ಇರೋದು. ಈವಾಗ ನಾವೆಲ್ಲ ಸೋಮಾರಿಗಳಾಗಿದ್ದೀವಿ. ನಮ್ ಹೊಲ ಉಳುಮೆಗೆ ಎತ್ತುಗಳೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಉಳುಮೆ ಮಾಡ್ಬೇಕಲ್ಲ? ಅದಕ್ಕೆ ಟ್ರಾಕ್ಟರ್ ತರಿಸ್ತೀವಿ. ಟ್ರಾಕ್ಟರ್‍ನೋನು ಉಳುಮೆ ಮಾಡ್ಬೇಕಾರೆ ಈ ಬದುಗಳು ಅಡ್ಡ ಬರ್ತವೆ. ಅದಕ್ಕೆ ಬದುಗಳ್‍ನೆಲ್ಲ ಕಿತ್ ಹಾಕ್ತೀವಿ. ಹಿಂಗಾಗಿ ಈಗ ಒಂದೆಕ್ರೆಯೊಳ್ಗೆ ಒಂದ್ ಬದೂನೂ ಇರಲ್ಲ. ಅಡ್ಡ ಮಳೆ ಬಂದ್ರೆ ನೀರು ಹಂಗೇ ಕೊಚ್‍ಕೊಂಡು ಹೋಗ್‍ತೈತೆ. ಹಿಂಗಾದ್ರೆ ನಮ್ ಹೊಲದಾಗೆ ನೀರಿಂಗೋದು ಹೆಂಗೆ?" ಎಂದು ಲಕ್ಯದ ಹಿರಿಯರಾದ ಮರಿಗೌಡರು ಪ್ರಶ್ನಿಸಿದಾಗ ಅಲ್ಲಿ ಮೌನ ನೆಲೆಸಿತ್ತು.
ಆ ಪ್ರಶ್ನೆಗೆ ಉತ್ತರವೆಂಬಂತೆ ಅವರು ಹೇಳಿದ ಮಾತು,"ಮುಂಚೆ ಹಿಂಗಾರಿನಲ್ಲಿ ಉಳುಮೆ ಮಾಡಿ, ಮಾಗಿಯಲ್ಲಿ ಅಡ್ಡ ಮಳೆ ಬಂದ್ರೆ ನೀರೆಲ್ಲ ಮಣ್ಣು ಕುಡಿಯೋ ಹಂಗೆ ಮಾಡ್ತಿದ್ವಿ." ಅದನ್ನು ಕೇಳುತ್ತಿದ್ದಂತೆ ದಶಕಗಳ ಹಿಂದೆ ಬಯಲು ಸೀಮೆಯಲ್ಲಿ ಮಳೆ ನೀರಿಂಗಿಸುತ್ತಿದ್ದ ಪರಿ ನಮ್ಮ ಕಣ್ಣಿಗೆ ಕಟ್ಟಿತು. ಅವರ ಮುಂದಿನ ಮಾತು ನಮ್ಮನ್ನು ಬಡಿದೆಬ್ಬಿಸಿತು,"ನಮ್ ಹಳೆ ಪದ್ಧತಿಗಳನ್ನ ಉಳಿಸ್ಕೋಬೇಕಾಗಿದೆ. ಇಲ್ಲಾಂದ್ರೆ ನಮ್ ಮಕ್ಳಿಗೆ ಕುಡಿಯೋಕ್ಕು ನೀರಿಲ್ಲ, ನಮ್ ಹೊಲಕ್ಕೂ ನೀರಿಲ್ಲ ಅಂತಾಗ್ತದೆ"
ಚಿಕ್ಕಮಗಳೂರಿನಿಂದ ೧೦ ಕಿಮೀ ದೂರದ ಲಕ್ಯದಲ್ಲಿ ಅಂದು ಸುಮಾರು ಇನ್ನೂರು ಹಳ್ಳಿಗರು ಶಿಸ್ತಿನಿಂದ ಕುಳಿತ್ತಿದ್ದರು - ಅರುಣೋದಯ ರೈತ ಮತ್ತು ಬ್ಯಾಂಕ್ ಮಿತ್ರಕೂಟವು (ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ಪ್ರಾಯೋಜಿತ) ಏರ್ಪಡಿಸಿದ "ಮಳೆನೀರ ಕೊಯ್ಲು ಮತ್ತು ಕೊಳವೆಬಾವಿ ಜಲ ಮರುಪೂರಣ" ವಿಚಾರಸಂಕಿರಣದಲ್ಲಿ. ಅವರಲ್ಲಿ ಅರೆಪಾಲು ಮಹಿಳೆಯರು.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ. ಹಾಗಂತ ರೈತರಿಗೆ ನೀರಾವರಿ ಶುಲ್ಕ ವಿನಾಯ್ತಿ ಮಾಡಿದರೇ? ಅದನ್ನೂ ಮಾಡಲಿಲ್ಲ.
ತುಂಗಾ ಏತ ನೀರಾವರಿ ಯೋಜನೆ ಕಾರ್ಯಗತವಾದದ್ದು ೧೯೭೨ರಲ್ಲಿ. ಕೆ. ಕಣಬೂರು ಗ್ರಾಮದ ೧೦೧೮ ಎಕ್ರೆ ಜಮೀನಿಗೆ ನೀರು ಒದಗಿಸಲಿಕ್ಕಾಗಿ. ಅಲ್ಲಿಂದ ೫ ಕಿ.ಮೀ. ದೂರದ ಕೊರಲುಕೊಪ್ಪದ ಜಮೀನಿಗೂ ಆಗ ನೀರು ಹರಿಸುವ ಯೋಜನೆ ಮಾಡಲಾಗಿತ್ತು. ಆದರೆ ಗದ್ದೆಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸಲಿಲ್ಲ. ಇದರಿಂದಾಗಿ ಇಲ್ಲಿನ ತೋಟಗಳು ಒಣಗಿ ಹೋದವು ಎಂಬುದು ಗ್ರಾಮದ ಹಿರಿಯರ ದೂರು.
ರೈತರ ಜಮೀನಿಗೆ ನೀರು ಒದಗಿಸದಿದ್ದರೂ ನೀರಾವರಿ ಇಲಾಖೆ ಪ್ರತಿ ವರುಷ ನೀರಾವರಿ ಶುಲ್ಕ ವಿಧಿಸುತ್ತಾ ಬಂತು. "ಇದು ಅನ್ಯಾಯ" ಎಂದು ರೈತರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರು. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲೇ ಇಲ್ಲ. ಕ್ರಮೇಣ ಹಲವು ವರುಷಗಳ "ಶುಲ್ಕ ಬಾಕಿ" ಸಾವಿರಾರು ರೂಪಾಯಿಗಳಿಗೆ ಬೆಳೆಯಿತು. ಕೊನೆಗೆ ತಹಶೀಲ್ದಾರರಿಂದ ರೈತರಿಗೆ ಬಂದ ನೋಟೀಸ್‍ನಲ್ಲಿ "ಶುಲ್ಕ ಬಾಕಿ ಕಟ್ಟದಿದ್ದರೆ ಜಮೀನು ಹರಾಜು ಹಾಕಲಾಗುವುದು" ಎಂಬ ಬೆದರಿಕೆ!
"ನೀರಾವರಿ ಇಲಾಖೆ ಪ್ರಕಾರ ಕೊರಲುಕೊಪ್ಪಕ್ಕೆ ನೀರು ಸರಬರಾಜಾಗುತ್ತಿದ್ದು ಅದನ್ನು ಬಳಸಿ ರೈತರು ಬೆಳೆ ಬೆಳೆದಿದ್ದಾರೆ. ಅವರಿಗೆ ವರುಷಕ್ಕೆ ಒಂದು ಎಕ್ರೆಗೆ ೭೫ ರೂಪಾಯಿಗಳಂತೆ ನೀರಾವರಿ ಶುಲ್ಕ ಮತ್ತು ೪ ರೂಪಾಯಿ ನಿರ್ವಹಣಾ ವೆಚ್ಚ ವಿಧಿಸಲಾಗುತ್ತಿತ್ತು. ಆದರೆ ಶುಲ್ಕ ಪಾವತಿಸದ ರೈತರ ನಿರ್ಲಕ್ಷ್ಯದಿಂದಾಗಿ ಬಾಕಿ ಮಾಡಿದ ತೆರಿಗೆ ದೊಡ್ಡ ಮೊತ್ತವಾಗಿ ಬೆಳೆದಿದೆ" ಎಂಬುದು ತಹಶೀಲ್ದಾರರ ಅಂಬೋಣ.
ಅಂದು ಪ್ರಸನ್ನರ ಮಾಗಡಿ ಮನೆಯಿಂದ ತೋಟಕ್ಕೆ ನಡೆದು ಹೊರಟಾಗ ಕತ್ತಲಾಗಲು ಇನ್ನೂ ಒಂದು ತಾಸಿತ್ತು. ಆಗಷ್ಟೇ ಕುಡಿದಿದ್ದ ಕಾಫಿಯ ಘಮದ ಗುಂಗಿನಲ್ಲಿ ಅವರ ಕಾಫಿ ತೋಟದತ್ತ ಹೆಜ್ಜೆ ಹಾಕಿದೆವು. ಮನೆಯೆದುರಿನ ಗೇಟು ದಾಟಿ, ಬೇಲೂರು ರಸ್ತೆಗೆ ಬಂದಾಗ ಪಕ್ಕದಲ್ಲಿರುವ ಹಲಸುಲಿಗೆ ಬಸ್‍ಸ್ಟಾಪ್ ತೋರಿಸುತ್ತಾ ಪ್ರಸನ್ನ ಹೇಳಿದರು, "ಇಲ್ಲಿಂದ ಸಕಲೇಶಪುರ ಬಹಳ ಹತ್ತಿರ, ಐದೇ ಕಿಲೋಮೀಟರ್". ಬೇಲೂರು ರಸ್ತೆ ಹಾದು, ಅದರಾಚೆಗಿನ ಪ್ರಸನ್ನರ ಐದೆಕ್ರೆ ರೊಬಸ್ಟ ಕಾಫಿ ತೋಟ ತಲಪಿದೆವು.
ಅಲ್ಲಿ ಇಳಿಜಾರಿಗೆ ಅಡ್ಡವಾಗಿ ಸಾಲುಸಾಲಾಗಿ ೧೦ ಅಡಿಗಳ ಅಂತರದಲ್ಲಿ ತೋಡಿದ್ದ ಇಂಗುಗುಂಡಿಗಳನ್ನು ತೋರಿಸಿದರು ಪ್ರಸನ್ನ. ಹೊಸದಾಗಿ ತೋಟ ಮಾಡಿದ ಆರಂಭದ ವರುಷಗಳಲ್ಲಿ ಮಳೆ ಬಂದಾಗ ಅವರ ತೋಟದಿಂದ ಮಳೆನೀರು ರಭಸದಿಂದ ತೊರೆಯಾಗಿ ಹೊರಕ್ಕೆ ಹರಿಯುತ್ತಿತ್ತು. ಈಗ ಮಳೆ ಬಂದರೆ ಒಂದು ಹನಿ ನೀರೂ ಹೊರಕ್ಕೆ ಹರಿದು ಹೋಗುತ್ತಿಲ್ಲ. "ಇದು ಇಂಗುಗುಂಡಿಗಳ ಇಂದ್ರಜಾಲ" ಎನ್ನುತ್ತಲೇ ಪ್ರಸನ್ನ ಅದರ ಗುಟ್ಟು ರಟ್ಟು ಮಾಡಿದರು. ಜೂನ್‍ನಲ್ಲಿ ಮಳೆ ಶುರು ಆಗುವಾಗ, ಇಂಗುಗುಂಡಿಗಳ ಕಸಕಡ್ಡಿ ತೆಗೆದು, ಅವನ್ನು ನೀರಿಂಗಿಸಲು ತಯಾರು ಮಾಡಬೇಕು. ನವಂಬರ್‍ನಲ್ಲಿ ಇಂಗುಗುಂಡಿಗಳಿಗೆ ಪುನಹ ಕಸಕಡ್ಡಿ ತುಂಬಿ ಅವುಗಳಿಂದ ನೀರು ಆವಿಯಾಗದಂತೆ ಮಾಡಬೇಕು. ಇದರ ಪೇಟೆಂಟ್ ತಮ್ಮ ಹಳೆಯ ತಲೆಮಾರುಗಳ ಹಿರಿಯರದ್ದು ಎನ್ನಲು ಮರೆಯಲಿಲ್ಲ ಪ್ರಸನ್ನ.
ರೊಬಸ್ಟ ಕಾಪಿ ತೋಟದ ಗುಡ್ಡವಿಳಿದಾಗ ಕಂಡದ್ದು ವಿಸ್ತಾರವಾದ ಹತ್ತೆಕ್ರೆ ಸಮತಟ್ಟು ಪ್ರದೇಶ. ಪ್ರಸನ್ನ ಅದನ್ನು ಖರೀದಿಸುವಾಗ ಅದು ಭತ್ತದ ಗದ್ದೆಯಾಗಿತ್ತು. ಈಗ ಅಲ್ಲಿ ಅಡಿಕೆ ಗಿಡಗಳು.
ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ ಮಳೆನೀರು ಸಂಗ್ರಹಿಸಿ, ಕೃಷಿಗಾಗಿ ಬಳಸಿ.
ಆದರೆ ಈ ಬಗ್ಗೆ ನಾವೆಲ್ಲರೂ ಕೇಳಲೇ ಬೇಕಾದ ಪ್ರಶ್ನೆಗಳಿವೆ: ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಜಲಾಶಯಗಳಿಂದ ಆಗಿರುವ ಪ್ರಯೋಜನಗಳೇನು? ಅವುಗಳ ನಿರ್ಮಾಣದ ಮುಂಚೆ ಆಶ್ವಾಸನೆ ನೀಡಿದ್ದ ಪ್ರಯೋಜನಗಳು ಸಿಕ್ಕಿವೆಯೇ?
ಭಾರತದಲ್ಲಿರುವ ಬೃಹತ್ ಜಲಾಶಯಗಳ ಸಂಖ್ಯೆ ೪,೦೦೦ಕ್ಕಿಂತ ಅಧಿಕ. ಇವುಗಳಲ್ಲಿ ಕೇವಲ ೭೬ ಜಲಾಶಯಗಳ ಬಗ್ಗೆ ಕೇಂದ್ರ ಜಲಮಂಡಲಿ ಮಾಹಿತಿ ಸಂಗ್ರಹಿಸುತ್ತಿದೆ. ಮಂಡಲಿಯ ವಾರ್ತಾಪತ್ರವು ಈ ಜಲಾಶಯಗಳ ಪ್ರಯೋಜನದ ಬಗ್ಗೆ ಬೆಳಕು ಚೆಲ್ಲುತ್ತದೆ. ಹನ್ನೆರಡು ವರುಷಗಳ (೧೯೯೪ರಿಂದ ೨೦೦೫) ಮಾಹಿತಿಯ ಪರೀಕ್ಷೆಯಿಂದ ತಿಳಿದು ಬರುವ ಸತ್ಯಾಂಶಗಳು ಹೀಗಿವೆ:
* ಪ್ರತಿ ವರುಷ, ಸರಾಸರಿ ಲೆಕ್ಕದಲ್ಲಿ ೩೬.೨೫ ಬಿಲಿಯನ್ ಘನ ಮೀಟರ್ (ಬಿಘಮೀ) ಸಂಗ್ರಹ ಸಾಮರ್ಥ್ಯದಲ್ಲಿ ಮಳೆನೀರು ತುಂಬುವುದೇ ಇಲ್ಲ. ಕೇಂದ್ರ ಜಲಮಂಡಲಿ ಮಾಹಿತಿ ಪಡೆಯುತ್ತಿರುವುದು ಕೇವಲ ೧೩೩ ಬಿಘಮೀ ಸಂಗ್ರಹ ಸಾಮರ್ಥ್ಯದ ಬಗ್ಗೆ. ಅದರಲ್ಲೇ ಹೀಗಾಗುತ್ತಿದೆ.
* ಇದರರ್ಥ ಏನು? ಪ್ರತಿ ವರುಷ, ಸರಾಸರಿ ಲೆಕ್ಕದಲ್ಲಿ ರೂಪಾಯಿ ೩೭,೭೯೩ ಕೋಟಿ ವೆಚ್ಚದ ಸಂಗ್ರಹ ಸಾಮರ್ಥ್ಯ ಉಪಯೋಗ ಆಗುತ್ತಿಲ್ಲ.
* ಆ ೧೨ ವರುಷಗಳ ಅವಧಿಯಲ್ಲಿ, ಏಳು ವರುಷಗಳಲ್ಲಿ ಮಳೆ ಚೆನ್ನಾಗಿತ್ತು. ಅಂದರೆ ಸರಾಸರಿಗೆ ಸಮವಾಗಿತ್ತು ಅಥವಾ ಸರಾಸರಿಗಿಂತ ಜಾಸ್ತಿಯಾಗಿತ್ತು. ಆದರೂ ಹೀಗಾಗಿದೆ.
ಅಗಾಧವಾದ ಬಂಡವಾಳ ಹೂಡಿಕೆಯಿಂದ ಸಿಗಬೇಕಾದ ಪ್ರಯೋಜನ ಯಾಕೆ ಸಿಗುತ್ತಿಲ್ಲ? ನಮ್ಮ ದೇಶದ ಎರಡು ಬೃಹತ್ ಜಲಾಶಯಗಳ ಮಾಹಿತಿ ಪರಿಶೀಲಿಸೋಣ:
ಭಾಕ್ರಾ ಅಣೆಕಟ್ಟು: ೧೯೮೯ರಿಂದ ೨೦೦೫ರ ವರೆಗೆ ೫೧೪ ಮೀಟರ್ ಎತ್ತರದ ಈ ಜಲಾಶಯ ಯಾವುದೇ ವರುಷ ಭರ್ತಿಯಾಗಿಲ್ಲ.
ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ ಕಂಡಿದ್ದೆ.
ಹೋದೊಡನೆ ನಮ್ಮನ್ನೆಲ್ಲ ಆ ಹಳ್ಳಿಯವರು ಕರೆದೊಯ್ದದ್ದು ನಾಗೇಶ ಹೆಗಡೆಯವರ ಕುಟುಂಬದ ಮನೆಗೆ. ಅಲ್ಲಿ ನಮ್ಮನ್ನು ಕೂರಿಸಿ, ಹೊಟ್ಟೆತುಂಬ ಉಪಾಹಾರ ಬಡಿಸಿದ ರೀತಿಯಲ್ಲೇ ಆ ಹಳ್ಳಿಯವರ ಪರಸ್ಪರ ಸಹಕಾರದ ಬಾಳುವೆಯ ಚಿತ್ರಣ ನಮಗೆ ಸಿಕ್ಕಿತ್ತು.
ಅನಂತರ ನಮ್ಮನ್ನೆಲ್ಲ ಕುಳ್ಳಿರಿಸಿ, ಸಚ್ಚಿದಾನಂದ ತಮ್ಮ ಊರಿನ ಮಳೆನೀರಿನ ಕತೆ ಹೇಳಿದರು, "ವರುಷದಿಂದ ವರುಷಕ್ಕೆ ನಮ್ಮ ಊರಿನ ಬಾವಿಗಳಲ್ಲಿ ನೀರಿನ ಮಟ್ಟ ಇಳೀತಿತ್ತು. ನಮ್ಮ ಅಡಿಕೆ ತೋಟ ಉಳಿಸಿಕೊಳ್ಳೋದು ಹ್ಯಾಗಂತ ಚಿಂತೆ ಹತ್ತಿತ್ತು. ಎರಡು ವರುಷದ ಮುಂಚೆ ಒಂದಿನ ನಮ್ಮ ಹಾಲಿನ ಡೈರಿಯಲ್ಲಿ ಮಾತಾಡ್ತಿರಬೇಕಾದ್ರೆ ಶ್ರೀಪಡ್ರೆಯವರ ’ನೆಲ ಜಲ ಉಳಿಸಿ’ ಪುಸ್ತಕದ ಮಾತು ಬಂತು. ಅದೇ ನಮಗೆ ಸ್ಫೂರ್ತಿ. ಅನಂತರದ ಭಾನುವಾರದಿಂದಲೇ ನಮ್ಮ ಸೊಪ್ಪಿನ ಬೆಟ್ಟದಲ್ಲಿ ಕೆಲಸ ಶುರು ಮಾಡಿದ್ವಿ.ಒಂದೆರಡು ತಿಂಗಳು ಹೆಚ್ಚು ಜನ ಬರಲಿಲ್ಲ. ಆ ಮೇಲೆ ಭಾನುವಾರ ಬಂತಂದ್ರೆ ನಮ್ಮ ಊರಿನ ಜನ ಹಾರೆ ತಗೊಂಡು ಸೊಪ್ಪಿನ ಬೆಟ್ಟಕ್ಕೆ ಹೋಗ್ಲಿಕ್ಕೆ ಶುರು ಮಾಡಿದ್ರು. ಈಗ ಪ್ರತಿ ಭಾನುವಾರಾನೂ ಅಲ್ಲಿ ಅನ ಸೇರ್ತೀವಿ. ಇಂಗುಗುಂಡಿ ಮಾಡ್ತೀವಿ. ಅರ್ಧ ತಾಸಿನಲ್ಲಿ ಎರಡು ಸೆಂಟಿಮೀಟರ್ ಮಳೆ ಬಿದ್ದರೂ ನಮ್ಮ ಸೊಪ್ಪಿನ ಬೆಟ್ಟದಿಂದ ನೀರು ಹರಿದು ಹೋಗಬಾರದು. ಅಲ್ಲೇ ಇಂಗಬೇಕು ಅನ್ನೋದು ನಮ್ಮ ಗುರಿ. ಒಂದೇ ವರುಷದಲ್ಲಿ ಅದನ್ನ ಸಾಧಿಸಿದ್ದೇವೆ."
ಕಡೂರಿನಿಂದ ಚಿಕ್ಕಮಗಳೂರಿನ ಹಾದಿಯಲ್ಲಿ ೧೧ ಕಿಮೀ. ಸಾಗಿದಾಗ ಎಡಬದಿಯಲ್ಲಿ ಕಾಣಿಸಿತು ’ರಾಮನಹಳ್ಳಿ’ ಫಲಕ. ಅಲ್ಲಿ ಎಡಕ್ಕೆ ತಿರುಗಿ ೨ ಕಿಮೀ. ಮುಂದೆ ಹೋಗಿ ನಿಂತದ್ದು ಪ್ರವೀಣರ ಹೊಲದಲ್ಲಿ. ಅಂದು, ಮೇ ೧೯, ೨೦೦೪ರಂದು, ಅಲ್ಲಿ ನಾನು ಬೈಕಿನಿಂದಿಳಿದಾಗ ಕಾಣಿಸಿದ್ದು ಅಗಲವಾದ ತೋಡಿಗೆ ಅಡ್ಡವಾಗಿ ಕಟ್ಟಿದ್ದ ೨೦ ಅಡಿಗಳುದ್ದದ ಕಲ್ಲು-ಸಿಮೆಂಟಿನ ತಡೆಗಟ್ಟ.
ಆ ವಾರ ಸುರಿದ ಮಳೆ ನೀರನ್ನೆಲ್ಲ ತಡೆಗಟ್ಟ ೨೦ ಅಡಿಗಳ ಆಳಕ್ಕೆ ತಡೆದು ನಿಲ್ಲಿಸಿತ್ತು. ಅದನ್ನ್ಜು ತೋರಿಸುತ್ತಾ "ಇಲ್ಲಿರೋ ನೀರು ನೋಡಿ ಧೈರ್ಯ ಬಂದಿದೆ. ಇಷ್ಟು ನೀರಿಂಗಿದರೆ ನನ್ನ ಬೋರ್‍ವೆಲ್‍ನಲ್ಲಿ ನೀರು ಸಿಗ್ತದೆ. ಇಲ್ಲದಿದ್ರೆ ನನ್ನ ಎರಡು ವರ್ಷಗಳ ಅಡಿಕೆ ಸಸಿಗಳನ್ನು ಉಳಿಸಿಕೊಳ್ಳೋದೇ ಕಷ್ಟ ಆಗ್ತಿತ್ತು" ಎಂದರು ಕಡೂರಿನ ವಿ.ಎಸ್. ಪ್ರವೀಣ್.
ಅವರ ಜಮೀನಿನಿಂದ ೩ ಕಿಮೀ. ದೂರದಲ್ಲಿ ಬೆಟ್ಟ. ಮಳೆ ಬಂದಾಗ ಅಲ್ಲಿಂದ ಪ್ರವೀಣರ ಜಮೀನಿನತ್ತ ರಭಸದಲ್ಲಿ ಹರಿದುಬರುತ್ತದೆ ಮಳೆನೀರು. "ಆ ಬೆಟ್ಟದ ಇಳಿಜಾರಿನಲ್ಲೂ ಹೀಗೆ ತಡೆಗಟ್ಟ ಕಟ್ಟಿದ್ದಾರಾ?" ಕೇಳಿದೆ. "ನಾಲ್ಕು ಕಡೆ ಕಟ್ಟಿದ್ರು ಸಾರ್, ಆದರೆ ಈಗ ಒಂದೂ ಉಳಿದಿಲ್ಲ" ಎಂದರು.
"ಏನಾಯಿತು? ಮಳೆಗೆ ಕೊಚ್ಚಿ ಹೋಯಿತೇ?" ಎಂಬ ನನ್ನ ಪ್ರಶ್ನೆಗೆ ಪ್ರವೀಣ್ ದೀರ್ಘ ಉಸಿರೆಳೆದುಕೊಂಡು ಉತ್ತರಿಸಿದರು, "ಅದೊಂದು ದೊಡ್ಡ ಕತೆ. ಜಲಾನಯನ ಅಭಿವೃದ್ಧಿ ಇಲಾಖೆಯವರು ತಡೆಗಟ್ಟ ಕಟ್ಟಿಸಿದ್ದು ನಿಜ. ಆದರೆ ಆಶ್ರಯ ಯೋಜನೆಯಲ್ಲಿ ಸ್ವಂತ ಮನೆ ಕಟ್ಟಬೇಕೆಂದಿದ್ದ ಹಳ್ಳಿ ಜನಕ್ಕೆ ಆ ತಡೆಗಟ್ಟದ ಕಲ್ಲುಗಳ ಮೇಲೆ ಕಣ್ಣು ಬಿತ್ತು. ಅವರು ಮನೆಯ ತಳಪಾಯ ಕಟ್ಟಿದ್ರೆ ಅವ್ರಿಗೆ ಹತ್ತು ಸಾವಿರ ರೂಪಾಯಿ ಗ್ರಾಮ ಪಂಚಾಯತಿನಿಂದ ಮಂಜೂರಾಗ್ತದೆ. ಆದರೆ ಮನೆಯ ತಳಪಾಯಕ್ಕೆ ಕಲ್ಲು ಬೇಕಲ್ಲ? ಈ ತಡೆಗಟ್ಟಗಳ ಕಲ್ಲುಗಳನ್ನೇ ಕಿತ್ತು ಒಯ್ತಾರೆ ಜನ. ನನ್ನ ಜಮೀನಿನಲ್ಲಿ ಕಟ್ಟಿಸಿದ ತಡೆಗಟ್ಟವೂ ಆ ಇಲಾಖೆಯ ಕಾರ್ಯಕ್ರಮದ್ದು. ಇದರ ಕಲ್ಲುಗಳನ್ನೂ ಕಿತ್ತು ಒಯ್ಯಲು ಎತ್ತಿನಗಾಡಿ ಕಟ್ಟಿಕೊಂಡು ಬಂದಿದ್ರು ಜನ. ನಾಲ್ಕು ಸಲ ಬಂದಿದ್ರು ಸಾರ್. ನನ್ನ ಜಮೀನು ನೋಡ್ಕೋತಾನಲ್ಲ ಹರೀಶ, ಅವನಿಲ್ಲೇ ಇರ್ತಾನೆ. ಹಾಗಾಗಿ ನನ್ನ ತಡೆಗಟ್ಟ ಇನ್ನೂ ಇದೆ."
ಇಂದಿನ, ಮೇ ೩೧, ೨೦೦೯ರ ದಿನಪತ್ರಿಕೆಗಳಲ್ಲಿ ಕರ್ನಾಟಕದ ಈಗಿನ ಸರಕಾರಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಜಾಹೀರಾತುಗಳ ಸರಮಾಲೆ. ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ ಜಾಹೀರಾತಿನ ಪ್ರಚಾರ: ೨೦೦೮-೦೯ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಇಲಾಖೆ ಒದಗಿಸಿದ್ದ ಒಟ್ಟು ಅನುದಾನ ರೂಪಾಯಿ ೪೮೩ ಕೋಟಿಗಳಲ್ಲಿ ರೂಪಾಯಿ ೩೯೯ ಕೋಟಿ ವೆಚ್ಚ ಮಾಡಲಾಗಿದೆ.
ಸರಕಾರದ ಇಂತಹ ಯೋಜನೆಗಳಿಂದ ನಿಜವಾಗಿ ಲಾಭ ಯಾರಿಗೆ? ಕೇಂದ್ರ ಸರಕಾರದ ಯೋಜನೆಯೊಂದನ್ನು ಪರಿಶೀಲಿಸೋಣ. ಈ ಯೋಜನೆಯ ಪ್ರಕಾರ, ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲಿಕ್ಕಾಗಿ ತೋಡುವ ಕೃಷಿಹೊಂಡಗಳಿಗೆ ಶೇಕಡಾ ೧೦೦ ಸಬ್ಸಿಡಿ. ಮಳೆನೀರು ಸಂಗ್ರಹಿಸುವ ಈ ಕೃಷಿಹೊಂಡಗಳ ತಳ ಹಾಗೂ ಬದಿಗಳಿಂದ ಮಣ್ಣಿನಾಳಕ್ಕೆ ನೀರು ಇಂಗಿ ಹೋಗದಂತೆ ಪ್ಲಾಸ್ಟಿಕ್ ಹಾಳೆ ಹಾಸುವ ತಂತ್ರದ ಬಳಕೆ.
ಆರಂಭದಲ್ಲಿ ಅಲ್ಲಿನ ಕೃಷಿಕರು ಈ ಯೋಜನೆಯನ್ನು ಸ್ವಾಗತಿಸಲಿಲ್ಲ. ಕ್ರಮೇಣ ಯೋಜನೆಗೆ ಅರ್ಜಿ ಹಾಕಿ, ಕೃಷಿಹೊಂಡಗಳನ್ನು ಅಗೆಯಲು ಶುರುಮಾಡಿದರು. ಫಲಾನುಭವಿಗಳು ಪ್ರತಿಯೊಬ್ಬರೂ ೦.೬ ಹೆಕ್ಟೇರ್ ಕೃಷಿಭೂಮಿಯಲ್ಲಿ ಹೊಂಡ ತೋಡಬೇಕಾಯಿತು. ಈ ಹೊಂಡಗಳು ತಯಾರಾಗುತ್ತಿದ್ದಂತೆಯೇ, ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಒದಗಿಸಲು ಆಯ್ಕೆಯಾದ ಕಂಪೆನಿಗಳ ಮಾರಾಟ ತಂತ್ರ ಬಯಲಾಯಿತು! ಆ ಕಂಪೆನಿಗಳು ೫೦೦ ಮೈಕ್ರೋನ್ ದಪ್ಪದ ಪ್ಲಾಸ್ಟಿಕ್ ಹಾಳೆಗಳ ಬೆಲೆಯನ್ನು ಚದರ ಮೀಟರಿಗೆ ರೂ.೧೬ರಿಂದ ರೂ.೧೮ ಏರಿಸಿದವು. ಇದರಿಂದಾಗಿ ಪ್ರತಿಯೊಂದು ಕೃಷಿಹೊಂಡಕ್ಕೆ ಪ್ಲಾಸ್ಟಿಕ್ ಹಾಳೆ ಹಾಸುವ ವೆಚ್ಚ ರೂ.೫೦,೦೦೦ದಿಂದ ರೂ.೬೦,೦೦೦ ಹೆಚ್ಚಾಯಿತು.
ಉತ್ತರಕನ್ನಡದ ಯಲ್ಲಾಪುರದ ಹತ್ತಿರದ ಕವಡಿಕೆರೆ ಹಳ್ಳಿಯಲ್ಲಿ ಅಂದು ಮುಸ್ಸಂಜೆಯ ಹೊತ್ತು. ಆಗಷ್ಟೇ ಆ ಮನೆ ಹೊಕ್ಕಿದ್ದೆವು. ಆಗಂತುಕರಾದ ನಮ್ಮನ್ನು ’ಏನು ಈ ಕಡೆ ಬಂದದ್ದು’ ಎಂದು ವಿಚಾರಿಸಿದವರು ಗಣಪತಿ ನಾರಾಯಣ ಭಟ್ಟರು. "ಇಡಗುಂದಿಯ ಸ್ನೇಹಸಾಗರ ಶಾಲೆಗೆ ತರಬೇತಿಗಾಗಿ ಬಂದೋರು ನಾವು. ನಿಮ್ ಹಳ್ಳಿಗೆ ಬಂದು ನಿಮ್ಮನ್ನೆಲ್ಲ ಕಾಣ್‍ಬೇಕಂತ ಬಂದಿದೀವಿ" ಎಂದು ಪರಿಚಯಿಸಿಕೊಂಡೆವು ನಾವು ನಾಲ್ವರು. "ನಮ್ ಹಳ್ಳೀಲಿ ಅಂತಾ ವಿಶೇಷವೇನಿಲ್ಲ ಬಿಡಿ’ ಎನ್ನುತ್ತಾ ನಮ್ಮನ್ನು ಬೆಂಚಿನಲ್ಲಿ ಕೂರಿಸಿ, ಅವರು ನಿಂತುಕೊಂಡೇ ನಮ್ಮೊಂದಿಗೆ ಮಾತಿಗಿಳಿದರು.
ಅದು ಹಳೆಯ ಮನೆ. ಹೆಂಚಿನ ಚಾವಣಿ. ಮಣ್ಣು ತೇದು ಮಾಡಿದ ನೆಲ. ಮನೆಯೆದುರಿನ ಅಡಿಕೆ ತೋಟದಲ್ಲಿ ಎತ್ತರಕ್ಕೆ ಬೆಳೆದು ನಿಂತ ಅಡಿಕೆ ಗಿಡಗಳು. ಸಹಜವಾಗಿಯೇ ಅಡಿಕೆ ಕೃಷಿಯ ಸ್ಥಿತಿಗತಿ ಬಗ್ಗೆ ಕೇಳಿದೆವು. "ನಿಮಗೆ ಗೊತ್ತಲ್ಲ. ಅಡಿಕೆ ದರ ಕ್ವಿಂಟಾಲಿಗೆ ೧೨,೦೦೦ ರೂಪಾಯಿ ಇದ್ದದ್ದು ೬,೦೦೦ ರೂಪಾಯಿಗೆ ಇಳಿದಿದೆ. ಮುಂಚೆ ಅಡಿಕೆ ಜೊತೆ ಬಾಳೆ, ಏಲಕ್ಕಿ, ಕಾಳುಮೆಣಸು ಬೆಳೀತಿದ್ದೆವು. ಅದೆಲ್ಲದ್ರಿಂದ ಬರೋ ಆದಾಯ ನಮ್ ಮನೆ ಖರ್ಚಿಗೆ ಸಾಕಾಗ್ತಿತ್ತು. ಈಗ ಹಾಗಿಲ್ಲ. ಹತ್ತು ವರ್ಷಂದೀಚೆಗೆ ಎಲ್ಲರ ತೋಟದಲ್ಲಿ ಪಣಿಯೂರು ಕಾಳುಮೆಣಸಿನ ಬಳ್ಳಿ ಕಟ್ಟೆ ರೋಗಕ್ಕೆ ಬಲಿಯಾಗಿದೆ. ಹೊಸ ಗಿಡ ಹಚ್ಚಿದ್ರೆ ಐದಾರು ಅಡಿ ಬೆಳೀತದೆ. ಮತ್ತೆ ಸಾಯ್ತದೆ. ಇದಕ್ಕೆ ಬಾಳೆ ಕೃಷಿ ಕಾರಣವೇ ಗೊತ್ತಿಲ್ಲ. ಬಳ್ಳಿ ಉಳಿಸಲು ಸುಣ್ಣ ಹಾಕಿ ನೋಡಿ ಆಯ್ತು. ಆದರೆ ಕಾಳುಮೆಣಸು ಬಳ್ಳಿ ಉಳಿಯೋದಿಲ್ಲ. ಏಲಕ್ಕಿ ಗಿಡಗಳೂ ಸತ್ ಹೋಗಿವೆ" ಎಂದು ಬದಲಾದ ಸ್ಠಿತಿಯ ಚಿತ್ರಣ ನೀಡಿದರು.
ಅಡಿಕೆ ಗಿಡಗಳಿಗೆ ಇವರ ಪೋಷಣೆ ವರುಷಕ್ಕೆ ಗಿಡಕ್ಕೆ ಒಂದು ಬುಟ್ಟಿ ಗೊಬ್ಬರ ಮತ್ತು ನೀರು, ಇಷ್ಟೇ. ಅದೇ ರೀತಿ, ಕೊಳೆ ರೋಗ ಹತೋಟಿಗೆ ಬೋರ್ಡೋ ಸಿಂಪರಣೆ ಮಾತ್ರ; ಜುಲೈ ಮತ್ತು ಒಕ್ಟೋಬರ್ ಆರಂಭದಲ್ಲಿ, ವರುಷಕ್ಕೆ ಎರಡು ಸಲ. ತನ್ನ ಸಣ್ಣ ತೋಟದಿಂದ ಇವರು ವರುಷಕ್ಕೆ ಎರಡರಿಂದ ಎರಡೂವರೆ ಕ್ವಿಂಟಾಲ್ ಒಣ ಅಡಿಕೆ ಪಡೆಯುತ್ತಾರೆ, ಅಷ್ಟೇ.






