ಆನಂದರಾಯರು ಮನೆಯ ಮಕ್ಕಳನ್ನು ಕರೆದು ತಾವು ತಂದಿದ್ದ ಮೂರು ಗೊಂಬೆಗಳನ್ನು ತೋರಿಸಿದರು. ಅವು ನೋಡಲು ಒಂದೇ ತರಹ ಇದ್ದವು. ಆದರೆ ಅವುಗಳ ಮುಖದಲ್ಲಿ ತೂತುಗಳು ಇದ್ದವು. ಮೊದಲ ಗೊಂಬೆಯ ಎರಡೂ ಕಿವಿಗಳಲ್ಲಿ ತೂತುಗಳು ಇದ್ದವು. ಎರಡನೆಯ ಗೊಂಬೆಯ ಒಂದು ಕಿವಿ ಮತ್ತು ಬಾಯಿಯಲ್ಲಿ ತೂತುಗಳಿದ್ದರೆ, ಮೂರನೆಯ ಗೊಂಬೆಯ ಬಲಗಿವಿಯಲ್ಲಿ ಮಾತ್ರ ತೂತು ಇತ್ತು.
ಅನಂತರ, ಆನಂದರಾಯರು ಸೂಜಿ-ನೂಲು ತಂದರು. ಮೊದಲ ಗೊಂಬೆಯ ಬಲಗಿವಿಯಲ್ಲಿ ತೂರಿಸಿದ ನೂಲು ಅದರ ಎಡಗಿವಿಯಲ್ಲಿ ಹೊರಗೆ ಬಂತು. “ನೋಡಿ ಮಕ್ಕಳೇ, ಈ ಗೊಂಬೆ ಏನನ್ನು ಪ್ರತಿನಿಧಿಸುತ್ತದೆ? ಕೆಲವು ಜನರಿರುತ್ತಾರೆ. ನೀವು ಹೇಳಿದ್ದನ್ನು ಗಮನವಿಟ್ಟು ಕೇಳುವಂತೆ ನಟನೆ ಮಾಡುತ್ತಾರೆ. ಆದರೆ ಅವರು ನಿಮ್ಮ ಮಾತಿ ಬೆಲೆ ಕೊಡುವುದೇ ಇಲ್ಲ; ಈ ಕಿವಿಯಲ್ಲಿ ಕೇಳಿದ್ದನ್ನು ಆ ಕಿವಿಯಿಂದ ಹೊರಗೆ ಬಿಡುತ್ತಾರೆ, ತಿಳಿಯಿತಾ? ಎಂದು ಕೇಳಿದರು.
ಬಳಿಕ, ಎರಡನೆಯ ಗೊಂಬೆಯ ಕಿವಿಯಿಂದ ನೂಲನ್ನು ತೂರಿಸಿದಾಗ ನೂಲು ಅದರೆ ಬಾಯಿಯಿಂದ ಹೊರಗೆ ಬಂತು. “ಇದು ಇನ್ನೊಂದು ತರದ ಜನರನ್ನು ಪ್ರತಿನಿಧಿಸುತ್ತದೆ. ಇವರು ನಿಮ್ಮ ಮಾತನ್ನೆಲ್ಲ ಕೇಳಿ, ನಂತರ ಅದನ್ನು ನಿಮ್ಮ ವಿರುದ್ಧವೇ ಬಳಸುತ್ತಾರೆ - ಚಾಡಿ ಹೇಳಲಿಕ್ಕೆ, ನಿಮ್ಮ ಬಗ್ಗೆ ವದಂತಿ ಹರಡಲಿಕ್ಕೆ” ಎಂದು ಆನಂದರಾಯರು ವಿವರಿಸಿದರು.
ತದನಂತರ, ಮೂರನೆಯ ಗೊಂಬೆಯ ಮುಖದ ತೂತಿನಲ್ಲಿ ಅವರು ನೂಲು ತೂರಿಸಿದಾಗ, ಅದು ಹೊರಗೆ ಬರಲೇ ಇಲ್ಲ. ಆನಂದರಾಯರು ಅದನ್ನು ಹೀಗೆ ವಿವರಿಸಿದರು: ‘ಇದನ್ನು ಗಮನಿಸಿ. ಇದು ಮೂರನೆಯ ತರದ ಜನರನ್ನು ಪ್ರತಿನಿಧಿಸುತ್ತದೆ. ಇವರ ಬಳಿ ನೀವು ಏನು ಹೇಳಿದರೂ ಅವರು ಅದನ್ನು ಬೇರೆ ಯಾರಿಗೂ ತಿಳಿಸುವುದಿಲ್ಲ. ಆದ್ದರಿಂದ, ಇಂತಹ ಜನರು ವಿಶ್ವಾಸಾರ್ಹರು; ನೀವು ಅವರನ್ನು ನಂಬಬಹುದು.”