69. ಹೆತ್ತವರಿಗೆ ಪಾಠ ಕಲಿಸಿದ ಪುಟ್ಟ ಮಗ

ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿಂದ ಅನ್ನದ ಅಗುಳು ಇತ್ಯಾದಿ ಆಹಾರದ ತುಣುಕು ನೆಲಕ್ಕೆ ಬೀಳುತ್ತಿತ್ತು. ಈ ಕಾರಣಕ್ಕಾಗಿ ಮಗನಿಗೂ ಸೊಸೆಗೂ ಅಸಮಾಧಾನ.

ಒಂದು ದಿನ ಅಪ್ಪನನ್ನು ಉದ್ದೇಶಿಸಿ ಮಗ ಹೀಗೆಂದ: "ಊಟ ಮಾಡುವಾಗ ನೀವು ಮಾಡುವ ರಂಪ ನೋಡಿ ನಮಗೆ ಸಾಕಾಗಿ ಹೋಗಿದೆ. ಹಲವಾರು ಪಿಂಗಾಣಿ ಪಾತ್ರೆಗಳನ್ನು ನೀವು ಒಡೆದು ಹಾಕಿದ್ದೀರಿ. ನೀವಿನ್ನು ಬೇರೆಯೇ ಜಾಗದಲ್ಲಿ ಊಟ ಮಾಡಿ.” ಆ ದಿನವೇ ಅವರು ಕೋಣೆಯ ಮೂಲೆಯಲ್ಲಿ ಒಂದು ಸಣ್ಣ ಮೇಜನ್ನು ತಂದಿಟ್ಟರು. ಅವತ್ತಿನಿಂದ, ಆ ವೃದ್ಧರು ಮೂಲೆಯಲ್ಲಿ ಒಬ್ಬರೇ ಕುಳಿತು, ಮರದ ತಟ್ಟೆಯಲ್ಲಿ ಊಟ ಮಾಡಬೇಕಾಯಿತು. ಮೊಮ್ಮಗ ಇದನ್ನೆಲ್ಲ ನೋಡುತ್ತಿದ್ದ.

ಮುಂದೊಂದು ದಿನ ಸಂಜೆ ಪುಟ್ಟ ಮಗ ಕೆಲವು ಮರದ ತುಂಡುಗಳನ್ನು ತಂದಿಟ್ಟು ಜೋಡಿಸುತ್ತಿದ್ದುದನ್ನು ಅಪ್ಪ ನೋಡಿದ. “ಮರದ ತುಂಡುಗಳಲ್ಲಿ ಅದೇನು ಮಾಡುತ್ತಿದ್ದಿ?” ಎಂದು ಪುಟ್ಟ ಮಗನನ್ನು ಅಪ್ಪ ಕೇಳಿದ. ತಟಕ್ಕನೆ ಪುಟ್ಟ ಮಗ “ಅಪ್ಪಾ, ನಾನು ದೊಡ್ಡವನಾದಾಗ ನೀವು ಮತ್ತು ಅಮ್ಮ ಊಟ ಮಾಡಲಿಕ್ಕೆ ಮರದ ತಟ್ಟೆಗಳು ಬೇಕಲ್ಲಾ … ಅದಕ್ಕಾಗಿ ಈಗಲೇ ಮರದ ತಟ್ಟೆ ಮಾಡುತ್ತಿದ್ದೇನೆ” ಎಂದು ಉತ್ತರಿಸಿದ. ಇದನ್ನು ಕೇಳಿ ಅವನ ಅಪ್ಪ ಮತ್ತು ಅಮ್ಮ ಅವಾಕ್ಕಾದರು. ಅನಂತರ, ಆ ವೃದ್ಧರು ಪುನಃ ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಜೊತೆಯಾಗಿ ಊಟ ಮಾಡುವಂತಾಯಿತು.