67. ಕ್ಯಾರೆಟ್ ಮತ್ತು ಕಾಫಿ ಬೀಜಗಳನ್ನು ಬೇಯಿಸಿದಾಗ…

ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದ ಅನ್ನಪೂರ್ಣ ಅಮ್ಮನ ಬಳಿ ಅಳುತ್ತಾ ಹೇಳಿದಳು, “ಅಮ್ಮಾ, ನನಗೆ ಸಾಕಾಗಿ ಹೋಗಿದೆ. ನನ್ನ ಸಮಸ್ಯೆಗಳು ಮುಗಿಯೋದೇ ಇಲ್ಲ. ನಾನು ಮನೆ ಬಿಟ್ಟು ಎಲ್ಲಿಗಾದರೂ ಓಡಿ ಹೋಗುತ್ತೇನೆ.”

ಮಗಳ ಆತಂಕ ಕಂಡು ಅವಳ ಅಮ್ಮನಿಗೆ ಚಿಂತೆಯಾಯಿತು. ಮಗಳಿಗೆ ಮರೆಯಲಾಗದ ಪಾಠ ಕಲಿಸಲು ಅಮ್ಮ ನಿರ್ಧರಿಸಿದಳು. ಅವಳು ಎರಡು ಪಾತ್ರೆಗಳಿಗೆ ನೀರು ಹಾಕಿ, ಅವನ್ನು ಕುದಿಯಲು ಇಟ್ಟಳು. ಒಂದು ಪಾತ್ರೆಯಲ್ಲಿ ಕ್ಯಾರೆಟ್‌ಗಳನ್ನು ಮತ್ತು ಇನ್ನೊಂದು ಪಾತ್ರೆಯಲ್ಲಿ ಕೆಲವು ಕಾಫಿ ಬೀಜಗಳನ್ನು ಹಾಕಿದಳು. ಇಪ್ಪತ್ತು ನಿಮಿಷಗಳ ನಂತರ ಆ ಪಾತ್ರೆಗಳನ್ನು ಒಲೆಯಿಂದ ಇಳಿಸಿ, ಮೇಜಿನಲ್ಲಿಟ್ಟಳು.

ಅನ್ನಪೂರ್ಣಳನ್ನು ಕರೆದು, ಆ ಪಾತ್ರೆಗಳಿಗೆ ಹಾಕಿದ್ದ ಕ್ಯಾರೆಟ್ ಮತ್ತು ಕಾಫಿ ಬೀಜಗಳು ಏನಾಗಿವೆ ಎಂಬುದನ್ನು ನೋಡಲು ಅಮ್ಮ ಹೇಳಿದಳು. ಕ್ಯಾರೆಟ್‌ಗಳು ಬೆಂದು ಮೆತ್ತಗಾಗಿದ್ದವು ಮತ್ತು ಕಾಫಿ ಬೀಜಗಳು ಬೆಂದು, ನೀರಿನ ಬಣ್ಣವನ್ನೇ ಕಂದು ಬಣ್ಣವಾಗಿ ಬದಲಾಯಿಸಿ, ಕಾಫಿಯ ಘಮವನ್ನು ಹೊರಸೂಸುತ್ತಿದ್ದವು. ಅವನ್ನು ನೋಡಿದ ಅನ್ನಪೂರ್ಣಳಿಗೆ ಏನೂ ಅರ್ಥವಾಗಲಿಲ್ಲ.

ಆಗ ಅಮ್ಮ ವಿವರಿಸಿದಳು, “ಇಲ್ಲಿ ನೋಡು. ನಿನ್ನ ಸಮಸ್ಯೆಗಳು ಈ ಪಾತ್ರೆಗಳ ನೀರಿನಂತೆ. ನೀನು ಕ್ಯಾರೆಟಿನಂತೆ ಸ್ವಲ್ಪವೂ ಬಾಗದೆ ಗಟ್ಟಿಯಾಗಿದ್ದರೆ, ನಿನ್ನ ಅವಸ್ಥೆ ಕ್ಯಾರೆಟಿನಂತೆಯೇ ಆಗುತ್ತದೆ; ಅಂದರೆ, ನಿನ್ನ ಸಮಸ್ಯೆಗಳು ನಿನ್ನನ್ನು ಹೈರಾಣಾಗಿಸುತ್ತವೆ. ಬದಲಾಗಿ, ನೀನು ಕಾಫಿ ಬೀಜಗಳ ಹಾಗಿದ್ದರೆ, ನೀನು ಪರಿಸ್ಥಿತಿಗೆ ಹೊಂದಿಕೊಂಡು, ನಿನ್ನ ಸಮಸ್ಯೆಗಳನ್ನು ನಿಭಾಯಿಸುತ್ತಿ. ನೀನು ಕಾಫಿ ಬೀಜಗಳ ಹಾಗೆ ಸಮಸ್ಯೆಗಳನ್ನೇ ನಿನ್ನ ಪರವಾಗಿ ಬದಲಾಯಿಸುತ್ತೀಯೋ ಅಥವಾ ಕ್ಯಾರೆಟಿನಂತೆ ಸಮಸ್ಯೆಗಳಿಂದಾಗಿ ಹೈರಾಣಾಗುತ್ತೀಯೋ ಎಂಬ ಆಯ್ಕೆ ನಿನ್ನದೇ.” ಅನ್ನಪೂರ್ಣಳಿಗೆ ಅಮ್ಮನ ಪಾಠ ಚೆನ್ನಾಗಿ ಅರ್ಥವಾಯಿತು; ಅವಳು ತನ್ನ ಸಮಸ್ಯೆಗಳ ಬಗ್ಗೆ ಅಳುವುದರ ಬದಲಾಗಿ, ಅವನ್ನು ಎದುರಿಸಿ ಪರಿಹರಿಸಿಕೊಳ್ಳಲು ನಿರ್ಧರಿಸಿದಳು.