ಇಬ್ಬರು ಅಣ್ಣತಮ್ಮಂದಿರು ಒಂದು ಸಣ್ಣ ವಿಷಯಕ್ಕಾಗಿ ಜಗಳ ಮಾಡಿಕೊಂಡು ಮಾತು ಬಿಟ್ಟರು. ಒಂದು ದಿನ ಹಿರಿಯರೊಬ್ಬರು ಅಣ್ಣನ ಬಳಿ ಬಂದರು; ನಿಮಗೆ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಲೇ? ಎಂದು ಕೇಳಿದರು. ಅಣ್ಣ ಹೇಳಿದ, “ಖಂಡಿತವಾಗಿ ಸಹಾಯ ಮಾಡಿ. ನನ್ನ ತಮ್ಮ ಜೆಸಿಬಿ ತಂದು ನನ್ನ ಮತ್ತು ಅವನ ಹೊಲಗಳ ನಡುವೆ ಅಗಲವಾದ ಕಾಲುವೆ ತೋಡಿದ್ದಾನೆ. ಈಗ ನೀವು ನನ್ನ ಹೊಲದ ಗಡಿಯಲ್ಲಿ ಎತ್ತರದ ಗೋಡೆ ಕಟ್ಟಿಸಿ. ನನಗೆ ಅವರ ಮುಖ ಕಾಣಿಸಬಾರದು.”
ಆ ದಿನ ಹೊಲದ ಬಳಿ ಅಣ್ಣ ಬಂದಾಗ ಅವನಿಗೆ ಆಘಾತವಾಯಿತು. ಆ ಹಿರಿಯ ವ್ಯಕ್ತಿ ಅಲ್ಲಿ ಗೋಡೆ ಕಟ್ಟುವ ಬದಲು ಅಣ್ಣನ ಹೊಲದಿಂದ ತಮ್ಮನ ಹೊಲಕ್ಕೆ ಕಾಲುವೆ ದಾಟಿ ಹೋಗಲಿಕ್ಕಾಗಿ ಸೇತುವೆ ಕಟ್ಟಿಸಿದ್ದರು!
ಆಗ ಅವನ ತಮ್ಮ ಅಲ್ಲಿಗೆ ಓಡೋಡಿ ಬಂದ. “ಅಣ್ಣಾ, ನಾನು ನಿನಗೆ ಬಯ್ದು ನೋಯಿಸಿದ್ದೆ. ಆದರೂ ನೀನು ಇಲ್ಲಿ ಸೇತುವೆ ಕಟ್ಟಿಸಿದ್ದಿ. ನನ್ನನ್ನು ಕ್ಷಮಿಸು" ಎನ್ನುತ್ತಾ ಅಣ್ಣನನ್ನು ಅಪ್ಪಿಕೊಂಡ. ಆಗ ಅಣ್ಣನ ಉದ್ಗಾರ, "ನಮ್ಮೊಳಗೆ ಏನೆಲ್ಲ ಆಯಿತೋ ಅದಕ್ಕಾಗಿ ನನ್ನನ್ನೂ ಕ್ಷಮಿಸು." ತಮ್ಮೊಳಗಿನ ಮನಸ್ತಾಪವನ್ನು ಸೇತುವೆ ಕಟ್ಟುವ ಮೂಲಕ ನಿವಾರಿಸಿದ್ದಕ್ಕಾಗಿ ಅಣ್ಣತಮ್ಮ ಇಬ್ಬರೂ ಹಿರಿಯ ವ್ಯಕ್ತಿಗೆ ಧನ್ಯವಾದ ಅರ್ಪಿಸಿದರು.