ನಿಹಾರಿಕಾ ತನ್ನ ಅಮ್ಮನೊಂದಿಗೆ ಸೆಕೆಂಡ್-ಹ್ಯಾಂಡ್ ಪೀಠೋಪಕರಣಗಳ ಮಳಿಗೆಗೆ ಹೋದಳು - ಓದಲಿಕ್ಕಾಗಿ ಮೇಜೊಂದನ್ನು ಖರೀದಿಸಬೇಕೆಂದು. ಅಲ್ಲಿ ಹಳೆಯ ಮೇಜಿನ ಡ್ರಾವರ್ ಎಳೆದಾಗ ಅದರಲ್ಲೊಂದು ಕವರ್ ಕಾಣಿಸಿತು. ಕುತೂಹಲದಿಂದ ಅದನ್ನು ತೆರೆದಾಗ ಅವಳಿಗೆ ಅದರಲ್ಲಿ ಹತ್ತು ಸಾವಿರ ರೂಪಾಯಿ ಹಣ ಸಿಕ್ಕಿತು.
ಅವಳು ಅದೇ ಮೇಜನ್ನು ಖರೀದಿಸಿ ಮನೆಗೆ ತಂದಳು. ಹಾದಿಯಲ್ಲಿ ಅವಳು ಯೋಚಿಸುತ್ತಿದ್ದಳು: ನನಗೆ ಸಿಕ್ಕಿದ ಆ ಹಣದಿಂದ ನಾನು ಸೈಕಲ್, ಹೊಸಹೊಸ ಉಡುಪು ಇತ್ಯಾದಿ ಖರೀದಿಸಬಹುದು. ಬಹಳ ಒಳ್ಳೆಯದಾಯಿತು. ಮನೆಯಲ್ಲಿ ಅವಳು ಆ ಕವರನ್ನು ಪುನಃ ತೆರೆದಾಗ, ಅದರೊಳಗೆ ಹಣದ ಜೊತೆಗೆ ಒಂದು ಕೈಬರಹದ ಹಾಳೆ ನಿಹಾರಿಕಾಳಿಗೆ ಕಾಣಿಸಿತು. ಅದರಲ್ಲಿ ಬರೆದದ್ದನ್ನು ಓದಿದಾಗ ಅವಳಿಗೆ ತಿಳಿಯಿತು: ಅದು ಯಾರೋ ವೃದ್ಧೆ ತನ್ನ ಕುಟುಂಬಕ್ಕಾಗಿ ಕಷ್ಟದಿಂದ ಉಳಿಸಿದ್ದ ಹಣ.
ಈಗ ನಿಹಾರಿಕಾಳಿಗೆ ಪಶ್ಚಾತ್ತಾಪವಾಯಿತು. “ಈ ಹಣ ನನ್ನದಲ್ಲ. ಇದು ಆ ವೃದ್ಧೆ ತನ್ನ ಕುಟುಂಬದವರಿಗಾಗಿ ಉಳಿಸಿದ ಹಣ. ಅವಳು ತೀರಿಕೊಂಡಿರಬೇಕು. ಅನಂತರ ಅವಳ ಕುಟುಂಬದವರು ಈ ಮೇಜನ್ನು ಆ ಮಳಿಗೆಗೆ ಮಾರಾಟ ಮಾಡಿರಬೇಕು. ಇದನ್ನು ಆ ಕುಟುಂಬದವರಿಗೆ ಹಿಂತಿರುಗಿಸಬೇಕು" ಎಂದು ಅವಳು ನಿರ್ಧರಿಸಿದಳು.
ತನ್ನ ನಿರ್ಧಾರವನ್ನು ನಿಹಾರಿಕಾ ಅಮ್ಮನಿಗೆ ತಿಳಿಸಿದಾಗ, ಮಗಳ ಪ್ರಾಮಾಣಿಕತೆಯನ್ನು ಅಮ್ಮ ಮನಸಾರೆ ಮೆಚ್ಚಿದಳು.