29. ರೈಟ್ ಸೋದರರು - ತಾಳ್ಮೆಯೇ ಯಶಸ್ಸಿನ ರಹದಾರಿ

ಸೋದರರಾದ ಓರ್-ವಿಲ್ಲೆ ಮತ್ತು ವಿಲ್ಬುರ್ ರೈಟ್ ತಮ್ಮ ಸೈಕಲುಗಳನ್ನು ಏರಿ ಹಳ್ಳಿಯ ಪರಿಸರದಲ್ಲಿ ಓಡಾಡುತ್ತಿದ್ದರು. ಆಗ ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ಕಂಡು ಆನಂದಿಸುತ್ತಿದ್ದರು. “ನಮಗೂ ಆಕಾಶದಲ್ಲಿ ಆ ಹಕ್ಕಿಗಳಂತೆ ಹಾರಲು ಸಾಧ್ಯವಾದರೆ ಎಷ್ಟು ಖುಷಿ, ಅಲ್ಲವೇ?” ಎಂದು ಅವರು ಮಾತಾಡಿಕೊಳುತ್ತಿದ್ದರು.

ಅವರು ತಾಯಿಯಿಂದ ಹಲವಾರು ವಸ್ತುಗಳನ್ನು ರಿಪೇರಿ ಮಾಡಲು ಕಲಿತರು. ಅನಂತರ ಅವರು ಹಲವು ಮಕ್ಕಳ ಆಟಿಕೆಗಳನ್ನು ಮನೆಯಲ್ಲೇ ತಯಾರಿಸಿ ಹಣ ಗಳಿಸತೊಡಗಿದರು. ಮುಂದೆ, ಜಾಗತಿಕ ಆರ್ಥಿಕ ಹಿನ್ನಡೆ ಮತ್ತು ಅನಾರೋಗ್ಯಗಳಿಂದಾಗಿ ಅವರ ಕುಟುಂಬ ಸಂಕಷ್ಟ ಎದುರಿಸಿತು. ಅವರು ಎಲ್ಲ ಸವಾಲುಗಳನ್ನು ಎದುರಿಸಿ, ಒಂದು ಸೈಕಲ್ ಷಾಪ್ ಆರಂಭಿಸಿದರು.

ತದನಂತರ ಅವರು ಆಕಾಶದಲ್ಲಿ ಹಾರುವ ಯಂತ್ರವೊಂದನ್ನು ನಿರ್ಮಿಸಲಿಕ್ಕಾಗಿ ತಮ್ಮ ಪ್ರಯೋಗಗಳನ್ನು ಶುರು ಮಾಡದರು. ಅದೇ ರೀತಿಯ ಪ್ರಯೋಗಗಳನ್ನು ನಡೆಸುತ್ತಿದ್ದ ಇತರ ಅನ್ವೇಷಕರನ್ನು ಸಂಪರ್ಕಿಸಿದರು. ತಮ್ಮ ಷಾಪಿನಲ್ಲಿ "ಗಾಳಿ ಸುರಂಗ”ವನ್ನು ನಿರ್ಮಿಸಿ, ವಿವಿಧ ವಿನ್ಯಾಸದ ರೆಕ್ಕೆಗಳನ್ನು ಪರೀಕ್ಷಿಸಿದರು. ಅನೇಕ ಪ್ರಯೋಗಗಳು, ಹಲವು ವರುಷಗಳ ಪರಿಶ್ರಮ ಮತ್ತು ನೂರಾರು ನಿಷ್ಪಲ ಪ್ರಯತ್ನಗಳ ನಂತರ, ರೈಟ್ ಸೋದರರಿಗೆ ಆಕಾಶದಲ್ಲಿ ಹಾರುವ ವಿಮಾನವೊಂದನ್ನು ರೂಪಿಸಲು ಸಾಧ್ಯವಾಯಿತು. ತಮ್ಮ ಸೈಕಲ್ ಷಾಪ್‌ನಲ್ಲೇ ನಿರ್ಮಿಸಿದ ಅದಕ್ಕೆ “ರೈಟ್ ಫ್ಲೈಯರ್" ಎಂದು ಹೆಸರಿಟ್ಟರು. ಕ್ರಮೇಣ ಅವರ ಯಶೋಗಾಥೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು.