27. ನಿಮ್ಮ ಕಾಯಕವನ್ನು ಪ್ರೀತಿಸಿ

ದನಗಾಹಿಯೊಬ್ಬ ಮರದಡಿಯಲ್ಲಿ ಕುಳಿತು ವಿರಮಿಸುತ್ತಿದ್ದ. ಅಲ್ಲೇ ನಡೆದು ಹೋಗುತ್ತಿದ್ದ ವೃದ್ಧನೊಬ್ಬ ಆತನನ್ನು ನೋಡಿ, ಕೇಳಿದ, “ನೀನಿಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದಿ?” ದನಗಾಹಿ ಉತ್ತರಿಸಿದ, “ಏನೂ ಇಲ್ಲ, ನಾನು ವಿರಮಿಸುತ್ತಿದ್ದೇನೆ.” “ಏನೂ ಮಾಡುತ್ತಿಲ್ಲ ಅಂದರೆ ನೀನು ನಿನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಿ” ಎಂದ ವೃದ್ಧ. ಆತ ತನ್ನ ಮಾತು ಮುಂದುವರಿಸಿ, “ಇದರ ಬದಲಾಗಿ ನೀನು ಅಮೂಲ್ಯ ಸಮಯವನ್ನು ನಿನಗೆ ಇಷ್ಟವಾದ ಕೆಲಸ ಮಾಡಲು ಅಥವಾ ದೊಡ್ಡ ಗುರಿ ಸಾಧನೆಗೆ ಉಪಯೋಗಿಸಬೇಕು” ಎಂದ.

"ಹಾಗೆ ಮಾಡಿದರೆ ಮುಂದೆ ಏನಾಗುತ್ತದೆ?" ಎಂದು ದನಗಾಹಿ ವೃದ್ಧನನ್ನು ಪ್ರಶ್ನಿಸಿದ. ವೃದ್ಧ ಉತ್ತರಿಸಿದ, “ನೀನು ಹಣ ಸಂಪಾದಿಸಬಹುದು, ದೊಡ್ಡ ಬಂಗಲೆ ಕಟ್ಟಬಹುದು ಮತ್ತು ನೀನು ಆಶೆ ಪಡುವ ಯಾವುದೇ ವಸ್ತುವನ್ನು ಖರೀದಿಸಬಹುದು.” “ಅನಂತರ ಏನಾಗುತ್ತದೆ?" ಎಂದು ದನಗಾಹಿ ಪುನಃ ಕೇಳಿದ. ವೃದ್ಧ ಹೀಗೆಂದು ಉತ್ತರಿಸಿದ: “ಅನಂತರ ನೀನು ಸಂತೋಷದಿಂದ ಬದುಕಬಹುದು ಮತ್ತು ವಿರಮಿಸಬಹುದು.”

ದನಗಾಹಿ ಮುಗುಳ್ನಕ್ಕು ವೃದ್ಧನಿಗೆ ಹೇಳಿದ, “ಅಜ್ಜಾ, ನಾನು ಈಗಲೇ ಸಂತೋಷದಿಂದ ಇದ್ದೇನೆ ಮತ್ತು ವಿರಮಿಸುತ್ತಿದ್ದೇನೆ. ಹಾಗಿರುವಾಗ, ಅದನ್ನೆಲ್ಲಾ ಯಾಕೆ ಮಾಡಬೇಕು?” ಈ ಪ್ರಶ್ನೆಗೆ ಉತ್ತರ ಕೊಡಲು ವೃದ್ಧನಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ದನಗಾಹಿ ತನ್ನ ಮಾತನ್ನು ಮುಂದುವರಿಸಿದ, “ಅಜ್ಜಾ, ಬೇರೆಬೇರೆ ವ್ಯಕ್ತಿಗಳಿಗೆ ಬೇರೆಬೇರೆ ಸಂಗತಿಗಳು ಸಂತೋಷ ಕೊಡುತ್ತವೆ. ಕೆಲವರಿಗೆ ಹಣ, ಆಭರಣ, ಬಂಗಲೆ ಸಂತೊಷ ಕೊಟ್ಟರೆ, ಇನ್ನು ಕೆಲವರಿಗೆ ಪ್ರಚಾರ, ಕೀರ್ತಿ, ಯಶಸ್ಸು ಸಂತೋಷ ಕೊಡುತ್ತವೆ. ಇನ್ನೂ ಕೆಲವರು ನನ್ನ ಹಾಗೆ ತಮ್ಮ ಕಾಯಕವನ್ನೇ ಪ್ರೀತಿಸುತ್ತಾರೆ ಅಥವಾ ತಾವು ಪ್ರೀತಿಸುವ ಕಾಯಕವನ್ನೇ ಮಾಡುತ್ತಾರೆ."