25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್

ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ ತನ್ನ ತಂದೆಯ ಟೊಮೆಟೊ ಹೊಲದಲ್ಲಿ ಕೆಲಸ ಮಾಡುತ್ತಾ ಬೆಳೆದ. ಕೊನೆಗೆ ಆ ಕೃಷಿಯಿಂದ ನಷ್ಟವಾಯಿತು. ಆಗ ಅವನ ತಂದೆ, ದುಡಿದು ಬದುಕಲಿಕ್ಕಾಗಿ ಸಿಡ್ನಿ ಪೊಯಿಟರನನ್ನು ಯು.ಎಸ್.ಎ. ದೇಶಕ್ಕೆ ಕಳಿಸಿದ.

ಹೀಗೆ ಅಮೇರಿಕಕ್ಕೆ ಬಂದಿಳಿದ ಯುವಕ ಸಿಡ್ನಿ ಪೊಯಿಟರ್ ಮಹಾನಗರ ನ್ಯೂಯಾರ್ಕಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡತೊಡಗಿದ. ಒಮ್ಮೆ, “ನಟರು ಬೇಕಾಗಿದ್ದಾರೆ" ಎಂಬ ಜಾಹೀರಾತನ್ನು ಅವನು ವಾರ್ತಾಪತ್ರಿಕೆಯಲ್ಲಿ ನೋಡಿದ. ಹೆಚ್ಚು ಶಿಕ್ಷಣ ಪಡೆಯದಿದ್ದ ಸಿಡ್ನಿ ಪೊಯಿಟರ್ ಚಲನಚಿತ್ರ ಸಂಭಾಷಣೆಗಳ ಬರಹ (ಸ್ಕ್ರಿಪ್ಟ್) ಓದಲು ತಡಬಡಾಯಿಸಿದ. ಈತನನ್ನು ಅಲ್ಲಿಂದ ಹೊರಕ್ಕೆ ತಳ್ಳಿದ ಆ ಚಲನಚಿತ್ರದ ನಿರ್ಮಾಪಕ ಈತನಿಗೆ ಹೇಳಿದ್ದು ಹೀಗೆ: “ಹೋಗು, ಇಲ್ಲಿಂದ ಹೋಗು. ಎಲ್ಲಾದರೂ  ಪಾತ್ರೆ ತೊಳೆಯುವಂತಹ ಕೆಲಸವಿದ್ದರೆ ಹುಡುಕು.”

ಆ ಕ್ಷಣದಲ್ಲಿ ಸಿಡ್ನಿ ಪೊಯಿಟರ್ ಮನಸ್ಸಿನಲ್ಲಿ ಮೂಡಿದ ಯೋಚನೆ: "ನಾನು ಪಾತ್ರೆ ತೊಳೆಯುವ ಕೆಲಸದವನಂತೆ ಕಾಣಿಸುತ್ತೇನೆಯೇ?” ಆದರೆ, ಆ ಕ್ಷಣದಿಂದ ಅವನ ಜೀವನವೇ ಬದಲಾಯಿತು. ಅವನು ಚೆನ್ನಾಗಿ ಕಾಣಲಿಕ್ಕಾಗಿ ಒಳ್ಳೆಯ ಉಡುಪು ಧರಿಸ ತೊಡಗಿದ ಮತ್ತು ನಟನೆಯೇ ತನ್ನ ಜೀವನದ ಗುರಿಯೆಂದು ನಿರ್ಧರಿಸಿ ಅದನ್ನು ಸಾಧಿಸಲಿಕ್ಕಾಗಿ ಪರಿಶ್ರಮ ಪಡತೊಡಗಿದ. ಕೊನೆಗೂ ಅವನು ಜಗತ್ತಿನ ಶ್ರೇಷ್ಠ ಚಲನಚಿತ್ರ ನಟರಲ್ಲಿ ಒಬ್ಬನೆಂದು ಪ್ರಖ್ಯಾತನಾದ. ಕರಿಯ ಜನಾಂಗದವರಲ್ಲಿ ಮೊತ್ತಮೊದಲ ಅಕಾಡೆಮಿ ಪುರಸ್ಕಾರ (1963ರಲ್ಲಿ) ಪಡೆದ ನಟನೆಂದು ಅವನು ಹೆಸರಾದ.