ಅಲೆಕ್ಸಾಂಡರ್ ಗ್ರಹಾಮ್ ಬೆಲ್ಗೆ ಬಾಲ್ಯದಿಂದಲೂ ಶಬ್ದದ ಬಗ್ಗೆ ಕುತೂಹಲ. ಅವನ ಅಮ್ಮ ಬಹುಪಾಲು ಕಿವುಡಿ. ಅವನ ಅಪ್ಪ ಕಿವುಡರಿಗೆ ಮಾತು ಕಲಿಯಲು ಸಹಾಯ ಮಾಡುತ್ತಿದ್ದ. ಅಲೆಕ್ಸಾಂಡರ್ ತನ್ನ ಅಮ್ಮನ ಖುಷಿಗಾಗಿ ಪಿಯಾನೋ ನುಡಿಸುತ್ತಿದ್ದ ಮತ್ತು ಅವಳ ಕೈಯಲ್ಲಿ ಸಂಕೇತಗಳನ್ನು ತಟ್ಟಿ, ಅವಳು ಇತರರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತಿದ್ದ.
ವಿದ್ಯಾಭ್ಯಾಸ ಮುಗಿಸಿದ ನಂತರ ಅಲೆಕ್ಸಾಂಡರ್ ಪ್ರೊಫೆಸರ್ ಆದ. ಸಂಜೆಯ ಸಮಯದಲ್ಲಿ ಅವನು ಮನುಷ್ಯನ ಧ್ವನಿಯನ್ನು ಇಲೆಕ್ಟ್ರಾನಿಕ್ ವಿಧಾನದಿಂದ ದೂರಕ್ಕೆ ಕಳಿಸುವ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಹಲವಾರು ವರುಷ ಸಂಶೋಧನೆ ಮಾಡಿದ ನಂತರ ಆ ಯೋಜನೆಯನ್ನು ಮುಂದುವರಿಸಲಿಕ್ಕಾಗಿ ದಿನವಿಡೀ ಕೆಲಸ ಮಾಡಲು ಅವನಿಗೆ ಧನ ಸಹಾಯ ಲಭ್ಯವಾಯಿತು. ಅಷ್ಟರಲ್ಲಿ, ಉಸಿರಾಟದ ಸಮಸ್ಯೆಯಿಂದಾಗಿ ಅವನ ಶಿಶುವೊಂದು ಅಸು ನೀಗಿತು. ಅಂತಹ ಸಮಸ್ಯೆ ಇರುವ ಮಕ್ಕಳಿಗೆ ಸಹಾಯ ಮಾಡಬೇಕೆಂಬ ದೃಢ ನಿರ್ಧಾರದಿಂದ ಸಂಶೋಧನೆ ನಡೆಸಿದ ಅಲೆಕ್ಸಾಂಡರ್ ಕಬ್ಬಿಣದ ಶ್ವಾಸಕೋಶ ರೂಪಿಸಿ ಸಾವಿರಾರು ಮಕ್ಕಳ ಜೀವ ಉಳಿಸಿದ. ವಾಟ್ಸನ್ ಎಂಬ ವ್ಯಕ್ತಿಯ ಸಹಾಯದಿಂದ ಮನುಷ್ಯನ ಧ್ವನಿಯನ್ನು ರವಾನಿಸಬಲ್ಲ ಉಪಕರಣವೊಂದನ್ನು ಅಲೆಕ್ಸಾಂಡರ್ ಕೊನೆಗೂ ನಿರ್ಮಿಸಿದ. ಹೀಗೆ ಟೆಲಿಫೋನ್ ರೂಪಿಸುವ ಆತನ ಕನಸು ನನಸಾಯಿತು. ತನ್ನ ಕನಸುಗಳನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸಿದ ಅಲೆಕ್ಸಾಂಡರನಿಗೆ ಕೊನೆಗೂ ಯಶಸ್ಸು ಸಿಕ್ಕಿತು.