ರೈತನೊಬ್ಬ ಹುಲ್ಲಿನ ಮೆದೆಯಲ್ಲಿ ತನ್ನ ವಾಚನ್ನು ಕಳೆದುಕೊಂಡ. ಅದು ಅವನ ಅಜ್ಜ ಕೊಟ್ಟಿದ್ದ ಕೊಡುಗೆ. ಆದ್ದರಿಂದ ಅವನ ಅಚ್ಚುಮೆಚ್ಚಿನ ವಾಚ್ ಅದಾಗಿತ್ತು. ಅವನು ಎರಡು ಗಂಟೆ ಹುಲ್ಲಿನ ಮೆದೆಯಲ್ಲಿ ಹುಡುಕಿದರೂ ಅವನಿಗೆ ವಾಚ್ ಸಿಗಲಿಲ್ಲ. ಆತ ಕೈಚೆಲ್ಲಿ, ಅಲ್ಲೇ ಆಟವಾಡುತ್ತಿದ್ದ ಮಕ್ಕಳಿಗೆ ತನ್ನ ವಾಚ್ ಹುಡುಕಿಕೊಡಬೇಕೆಂದು ಹೇಳಿದ. ತನ್ನ ವಾಚನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುತ್ತೇನೆಂದೂ ಘೋಷಿಸಿದ. ಆ ಮಕ್ಕಳೆಲ್ಲರೂ ಹುಲ್ಲಿನ ಮೆದೆಯ ಮೂಲೆಮೂಲೆಯಲ್ಲಿ ಹುಡುಕಿದರೂ ಅವರಿಗೆ ವಾಚ್ ಸಿಗಲಿಲ್ಲ.
ಆ ರೈತ ನಿರಾಶನಾದ. ಆಗ ಪುಟ್ಟ ಹುಡುಗಿಯೊಬ್ಬಳು “ನನಗೆ ದಯವಿಟ್ಟು ಇನ್ನೊಮ್ಮೆ ಹುಡುಕಲು ಬಿಡಿ” ಎಂದು ರೈತನನ್ನು ವಿನಂತಿಸಿದಳು. ಅವಳ ವಿನಂತಿಗೆ ಒಪ್ಪಿದ ರೈತ ಅವಳನ್ನು ಪುನಃ ಹುಲ್ಲಿನ ಮೆದೆಯ ಬಳಿಗೆ ಕಳಿಸಿದ. ಸ್ವಲ್ಪ ಹೊತ್ತಿನ ನಂತರ ಪುಟ್ಟ ಹುಡುಗಿ ರೈತನ ಬಳಿಗೆ ಬಂದಳು; ಅವಳ ಕೈಯಲ್ಲಿ ಅವನ ವಾಚ್ ಇತ್ತು! ರೈತನಿಗೆ ಸಂತೋಷ ಹಾಗೂ ಅಚ್ಚರಿ. ಅವನು ಕೇಳಿದ, “ಬೇರೆ ಯಾರಿಗೂ ಸಿಗದ ವಾಚ್ ನಿನಗೆ ಹೇಗೆ ಸಿಕ್ಕಿತು?” ಪುಟ್ಟ ಹುಡುಗಿ ಉತ್ತರಿಸಿದಳು, "ನಾನು ಅಲ್ಲಿ ನೆಲದಲ್ಲಿ ಕುಳಿತು ಗಮನವಿಟ್ಟು ಕೇಳಿದೆ. ಅಲ್ಲಿನ ಮೌನದಲ್ಲಿ ನನಗೆ ವಾಚಿನ ಟಿಕ್‌ಟಿಕ್ ಶಬ್ಚ ಕೇಳಿಸಿತು. ತಕ್ಷಣವೇ ಆ ಶಬ್ದ ಬರುತ್ತಿದ್ದಲ್ಲಿಗೆ ಹೋಗಿ ಹುಡುಕಿದೆ.”