17. ಚಿನ್ಮಯಿಯ ಸಹಪಾಠಿಗಳು

ಚಿನ್ಮಯಿಗೆ ಕಿವಿ ಕೇಳಿಸುತ್ತಿರಲಿಲ್ಲ. ಅವಳ ಸಹಪಾಠಿಗಳಿಗೆ ಅವಳೆಂದರೆ ಅಚ್ಚುಮೆಚ್ಚು. ಆದರೆ ಅವಳೊಂದಿಗೆ ಯಾರೂ ಆಟವಾಡುತ್ತಿರಲ್ಲ. ಅವರಿಗೆಲ್ಲರಿಗೂ ಆತಂಕ - ಆಟವಾಡುವಾಗ ಅವಳಿಗೆ ಏಟಾದರೆ ಎಂದು. ಹಿರಿಯರೂ ತಮ್ಮ ಮಾತುಗಳು ಅವಳಿಗೆ ಅರ್ಥವಾಗುವುದಿಲ್ಲವೆಂದು ಅವಳನ್ನು ದೂರವಿಟ್ಟಿದ್ದರು. ಅಂತೂ ಚಿನ್ಮಯಿಯೊಂದಿಗೆ ಆಟವಾಡುವವರೂ ಇಲ್ಲ, ಮಾತನಾಡುವವರೂ ಇಲ್ಲ. ಇದರಿಂದಾಗಿ ಅವಳನ್ನು ಒಬ್ಬಂಟಿತನ ಕಾಡುತ್ತಿತ್ತು; ಅವಳಿಗೆ ದುಃಖವಾಗುತ್ತಿತ್ತು. ಅದೊಂದು ದಿನ ಚಿನ್ಮಯಿಯ ಗೆಳತಿ ಪಾವನಿ ಹಿರಿಯರೊಂದಿಗೆ ಮಾತನಾಡಿದಳು; ಭಾನುವಾರವನ್ನು “ಕಿವುಡು ದಿನ”ವಾಗಿ ಆಚರಿಸಬೇಕೆಂದು ಆಗ್ರಹಿಸಿದಳು. ಎಲ್ಲರೂ ಒಪ್ಪಿದರು.

ಹಾಗಾಗಿ, ಮುಂದಿನ ಭಾನುವಾರ ಎಲ್ಲರೂ ಇಯರ್-ಪ್ಲಗ್ ಹಾಕಿಕೊಂಡು ಬಂದರು. ಶುರುವಿಗೆ ಅವರೆಲ್ಲರಿಗೂ ಇದು ಮಜವೆಂದು ಅನಿಸಿತು. ಆದರೆ ಕ್ರಮೇಣ ಅವರಿಗ ಅರ್ಥವಾಯಿತು - ಇಯರ್-ಪ್ಲಗ್ ಹಾಕಿಕೊಂಡರೆ ಇತರರ ಮಾತು ಕೇಳಲು ಎಷ್ಟು ಕಷ್ಟವಾಗುತ್ತದೆ ಎಂದು. ಜೊತೆಗೆ, ಚಿನ್ಮಯಿಗೆ ಇತರರೊಂದಿಗೆ ಸಂವಹನ ನಡೆಸಲು ಎಷ್ಟು ಕಷ್ಟವಾಗುತ್ತಿರಬಹುದು ಎಂಬುದೂ ಅವರಿಗೆ ಅರ್ಥವಾಯಿತು. ಆದರೂ, "ಕೈಸನ್ನೆ ಭಾಷೆ” ಮತ್ತು ಹಾವಭಾವಗಳ ಮೂಲಕ ಚಿನ್ಮಯಿ ಸಮರ್ಥವಾಗಿ ಸಂವಹನ ಮಾಡುತ್ತಿದ್ದಳು. ಈಗ ಅವರೆಲ್ಲರೂ ಚಿನ್ಮಯಿ ಜೊತೆ ಮಾತನಾಡಲು ಪ್ರಯತ್ನಿಸಿದರು ಮತ್ತು ತಮ್ಮ ಆಟಗಳಲ್ಲಿ ಚಿನ್ಮಯಿಯನ್ನೂ ಸೇರಿಸಿಕೊಂಡರು. ಅವರಲ್ಲಿ ಹಲವರು ಕೈಸನ್ನೆ ಭಾಷೆ ಕಲಿತರು. ಅನಂತರ ಚಿನ್ಮಯಿಗೆ ತಾನು ಒಬ್ಬಂಟಿ ಅನಿಸಲೇ ಇಲ್ಲ. ಯಾಕೆಂದರೆ, ಈಗ ಅವಳೊಂದಿಗೆ ಆಟವಾಡಲು ಮತ್ತು ಮಾತನಾಡಲು ಗೆಳೆಯರ ತಂಡವೇ ಜೊತೆಗಿರುತ್ತಿತ್ತು.