ಹೆಲೆನ್ ಕೆಲ್ಲರ್ ಹುಟ್ಟಿದಾಗ (1880) ಆಕೆಯ ಹೆತ್ತವರಿಗೆ ಸಂಭ್ರಮ. ದುರದೃಷ್ಟದಿಂದ ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯಾಕೆಂದರೆ ಆಕೆ ಸ್ಕಾರ್ಲೆಟ್ ಜ್ವರ ಪೀಡಿತಳಾದಳು. ಅವಳ ಅಮ್ಮ ಆಹೋರಾತ್ರಿ ಅವಳ ಆರೈಕೆ ಮಾಡಿ, ಅವಳ ಜೀವ ಉಳಿಸಿದರು. ಆದರೆ ಆ ಜ್ವರದಿಂದಾಗಿ ಹೆಲೆನ್ ಕೆಲ್ಲರ್ ದೃಷ್ಟಿ ಮತ್ತು ಶ್ರವಣ ಶಕ್ತಿ ಕಳೆದುಕೊಂಡಳು. ಆಕೆ ದುಃಖದಿಂದ ದಿನಗಳೆಯುತ್ತಿದ್ದಳು.
ಹೆಲೆನ್ ಕೆಲ್ಲರಿಗೆ ಏಳು ವರುಷ ವಯಸ್ಸಾದಾಗ, ಅನ್ನಿ ಸುಲ್ಲಿವಾನ್ ಎಂಬ ದೃಷ್ಟಿಹೀನ ಯುವತಿಯ ಪರಿಚಯವಾಯಿತು. “ಈ ಜಾಣ ಹುಡುಗಿಗೆ ನಾನು ವಿದ್ಯೆ ಕಲಿಸುತ್ತೇನೆ” ಎಂದು ಹೆಲೆನ್ ಕೆಲ್ಲರಳ ಹೆತ್ತವರಿಗೆ ಸುಲ್ಲಿವಾನ್ ಭರವಸೆ ನೀಡಿದಳು. ಇತರ ಕಿವುಡ ಮಕ್ಕಳಂತೆ ಹೆಲೆನ್ ಕೆಲ್ಲರಳಿಗೆ ತನ್ನ ಧ್ವನಿಯೇ ಕೇಳುತ್ತಿರಲಿಲ್ಲ ಮತ್ತು ಅವಳಿಗೆ ಮಾತನಾಡಲಿಕ್ಕೂ ಆಗುತ್ತಿರಲಿಲ್ಲ. ಸುಲ್ಲಿವಾನಳ ತರಬೇತಿಯಿಂದಾಗಿ ಹೆಲೆನ್ ಕೆಲ್ಲರ್ ಬೇಗನೇ ಇಂಗ್ಲಿಷ್ ಮಾತನಾಡಲು ಕಲಿತಳು; ಅನಂತರ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಮಾತನಾಡಲಿಕ್ಕೂ ಕಲಿತಳು! ಅವಳು ಉಬ್ಬಿದ ಅಕ್ಷರಗಳನ್ನು ತನ್ನ ಬೆರಳು ತುದಿಗಳಿಂದ ಸ್ಪರ್ಶಿಸಿ ಓದಲಿಕ್ಕೂ ಕಲಿತಳು. ಕ್ರಮೇಣ “ಬಿಂದುಗಳ ಲಿಪಿ ಬ್ರೇಲ್”ನಲ್ಲಿಯೂ ಓದಲು ಕಲಿತಳು. ಬೋಸ್ಟನಿನ ರಾಡ್ಕ್ಲಿಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, 1904ರಲ್ಲಿ ಉತ್ತಮ ಶ್ರೇಣಿಯಲ್ಲಿ ಪದವೀಧರಳಾದಳು. ಮುಂದೆ ಹೆಲೆನ್ ಕೆಲ್ಲರ್ ಹಲವಾರು ದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿ, ದೃಷ್ಟಿಹೀನ ಮತ್ತು ಕಿವುಡ ಮಕ್ಕಳ ಪೋಷಣೆಗಾಗಿ ಲಕ್ಷಗಟ್ಟಲೆ ರೂಪಾಯಿ ದೇಣಿಗೆ ಸಂಗ್ರಹಿಸಿದಳು. ಈ ರೀತಿಯಲ್ಲಿ ಜಗತ್ತಿನ ಎಲ್ಲ ವಿಕಲಚೇತನ ವ್ಯಕ್ತಿಗಳಿಗೆ ಹೆಲನ್ ಕೆಲ್ಲರಳ ಬದುಕು ದೊಡ್ಡ ಪ್ರೇರಣೆ.