ಇಬ್ಬರು ಪುಟ್ಟ ಸೋದರಿಯರು ಯಾವಾಗಲೂ ತಮ್ಮ ಆಟಿಕೆಗಳನ್ನು ಹಂಚಿಕೊಂಡು ಆಟವಾಡುತ್ತಿದ್ದರು. ಅದೊಂದು ದಿನ ಅವರಿಬ್ಬರಲ್ಲಿ ಹೊಸ ಆಟಿಕೆಯೊಂದಕ್ಕಾಗಿ ಜಗಳವಾಯಿತು. ಅದರಿಂದಾಗಿ ಅವರು ತಮ್ಮ ಆಟಿಕೆಗಳನ್ನು ಎರಡು ಪಾಲು ಮಾಡಿಕೊಂಡರು. ಅನಂತರ, ತಮ್ಮತಮ್ಮ ಆಟಿಕೆಗಳೊಂದಿಗೆ ಮಾತ್ರ ಅವರು ಆಟವಾಡುತ್ತಿದ್ದರು; ಜೊತೆಯಾಗಿ ಆಟವಾಡುತ್ತಿರಲಿಲ್ಲ. ಆಟವಾಡಿದ ನಂತರ ತಮ್ಮತಮ್ಮ ಆಟಿಕೆಗಳನ್ನು ಪ್ರತ್ಯೇಕವಾಗಿ ಇಡುತ್ತಿದ್ದರು.
ಕೆಲವು ವರುಷಗಳು ದಾಟಿದವು. ಅವರು ದೊಡ್ಡವರಾದರು. ಆದರೆ ಅವರು ಯಾವತ್ತೂ ಜೊತೆಯಾಗಿ ಆಟವಾಡಲಿಲ್ಲ. ಒಬ್ಬರನ್ನೊಬ್ಬರು ನೋಡಿದಾಗ ಮುಗುಳ್ನಗುತ್ತಲೂ ಇರಲಿಲ್ಲ. ಒಮ್ಮೆ ಅವರು ಅತ್ತೆಯ ಮನೆಗೆ ಹೋದರು. ಅಲ್ಲಿ ಪಕ್ಕದ ಉದ್ಯಾನದಲ್ಲಿ ಇಬ್ಬರು ಪುಟ್ಟ ಬಾಲಕಿಯರು ನಗುನಗುತ್ತಾ ಆಟಿಕೆಗಳೊಂದಿಗೆ ಆಟವಾಡುತ್ತಿದ್ದುದನ್ನು ಇವರು ಕಂಡರು. ಇವರಿಬ್ಬರು ಸೋದರಿಯರಿಗೆ ತಾವೂ ಬಾಲ್ಯದಲ್ಲಿ ಹಾಗೆಯೇ ಆಟವಾಡುತ್ತಿದ್ದದ್ದು ನೆನಪಾಯಿತು. ತಾವು ಎಂತಹ ತಪ್ಪು ಮಾಡಿದೆವೆಂದು ಇವರಿಗೆ ಈಗ ಅರ್ಥವಾಯಿತು. ತಾವಿಬ್ಬರೂ ಆ ಪುಟ್ಟ ಮಕ್ಕಳಂತೆಯೇ ಹಲವಾರು ವರುಷ ಖುಷಿಯಿಂದ ಆಟವಾಡುತ್ತ ಇರಬಹುದಾಗಿತ್ತು; ಅದನ್ನು ತಾವು ಕಳೆದುಕೊಂಡೆವು ಎಂದು ಪಶ್ಚಾತ್ತಾಪ ಪಟ್ಟರು. ಅನಂತರ ಇವರಿಬ್ಬರೂ ಪರಸ್ಪರರೊಂದಿಗೆ ಪ್ರೀತಿವಿಶ್ವಾಸದಿಂದ ದಿನಗಳೆಯ ತೊಡಗಿದರು.