ನಮಗೆ ನಾವೇ ಕೇಳಿಕೊಳ್ಳಲೇ ಬೇಕಾದ ಪ್ರಶ್ನೆ: “ನಾನು ಯಾಕೆ ಉಳಿದಿದ್ದೇನೆ?” ಬದುಕಿನಲ್ಲಿ ಈ ಪ್ರಶ್ನೆಯನ್ನು ಎಷ್ಟು ಬೇಗನೇ ಕೇಳಿಕೊಳ್ಳುತ್ತೇವೆಯೋ ಅಷ್ಟು ಬೇಗನೇ ನಮ್ಮ ಬದುಕಿನ ಗುರಿ ನಮಗೆ ಸ್ಪಷ್ಟವಾಗುತ್ತದೆ, ಅಲ್ಲವೇ?
ನಮ್ಮ ಓರಗೆಯವರು ಎಷ್ಟೋ ಜನರು ತಮ್ಮ ಬದುಕು ಮುಗಿಸಿದ್ದಾರೆ. ನಮ್ಮಿಂದ ಕಿರಿಯರು ಎಷ್ಟೋ ಜನರು ನಮ್ಮನ್ನು ಅಗಲಿದ್ದಾರೆ. ಹಾಗಾದರೆ, ನನ್ನನ್ನು ವಿಶ್ವಚೇತನ ಯಾಕೆ ಉಳಿಸಿದೆ? ನನ್ನಿಂದ ಈ ಜಗತ್ತಿಗೆ ಏನಾಗ ಬೇಕಾಗಿದೆ? ಇದನ್ನು ಚಿಂತಿಸುತ್ತ ಹೋದಂತೆ, ಉತ್ತರ ಸಿಗುತ್ತದೆ. ನಾವು ಸಾಗಬೇಕಾದ ದಾರಿ ನಿಚ್ಚಳವಾಗುತ್ತದೆ.
ಧರೆಯ ಬದುಕೇನದರ ಗುರಿಯೇನು ಫಲವೇನು?
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ
ನರನು ಸಾಧಿಪುದೇನು? – ಮಂಕುತಿಮ್ಮ
ಈ ಭೂಮಿಯಲ್ಲಿ ನನ್ನ ಬದುಕಿನ ಗುರಿ ಏನು? ಅದರ ಪ್ರಯೋಜನಗಳೇನು? ಇದು ನಿಷ್ಪಲವಾದ ಓಡಾಟ, ಬಡಿದಾಟ ಮತ್ತು ತೊಳಲಾಟ ಮಾತ್ರವೇ? ಪ್ರಾಣಿಗಳು, ಪಕ್ಷಿಗಳು ತಿರುತಿರುಗಿ ಹೊಟ್ಟೆ ತುಂಬಿಸಿಕೊಂಡು ಬದುಕು ಮುಗಿಸುತ್ತವೆ. ಅದೇ ರೀತಿಯಲ್ಲಿ ಮನುಷ್ಯನೂ ಬದುಕಿದರೆ ಸಾಕೇ? ಅದಕ್ಕಿಂತ ಹೆಚ್ಚಿನದು ಏನನ್ನಾದರೂ ಮನುಷ್ಯನು ಸಾಧಿಸುತ್ತಾನೆಯೇ? ಎಂಬ ಮಾರ್ಮಿಕ ಪ್ರಶ್ನೆಗಳ ಮೂಲಕ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ನಮ್ಮನ್ನು ಬೆಚ್ಚಿ ಬೀಳಿಸುತ್ತಾರೆ.
ಪ್ರಾಣಿಪಕ್ಷಿಗಳಿಗೆ ತಮ್ಮ ಜೀವನದಲ್ಲಿ ಒಂದೇ ಒಂದು ಗುರಿ: ತಮ್ಮ ಸಂತಾನವನ್ನು ಮುಂದುವರಿಸಬೇಕು ಎಂಬುದು. ಅದಕ್ಕಿಂತ ಹೆಚ್ಚಿನದನ್ನು ಸಾಧಿಸದಿದ್ದರೆ, ಮನುಷ್ಯನಿಗೂ ಪ್ರಾಣಿಪಕ್ಷಿಗಳಿಗೂ ವ್ಯತ್ಯಾಸವೇನಿದೆ, ಅಲ್ಲವೇ?
ಆದ್ದರಿಂದ, ಈಗಲಾದರೂ ಕೇಳಿಕೊಳ್ಳೋಣ: “ನಾನು ಬದುಕಿನಲ್ಲಿ ಏನನ್ನು ಸಾಧಿಸಬೇಕಾಗಿದೆ? ನನ್ನಿಂದ ಈ ಭೂಮಿಗೆ ಯಾವ ಕೊಡುಗೆ ಸಲ್ಲಬೇಕಾಗಿದೆ?” ನಮ್ಮ ದೌರ್ಬಲ್ಯಗಳನ್ನು ಬದಿಗಿಡೋಣ. ನಮ್ಮ ತಾಕತ್ತುಗಳನ್ನು ಬಳಸೋಣ – ನಮ್ಮ ಬದುಕಿನ ಗುರಿಸಾಧನೆಗಾಗಿ.
ಮತ್ತೆಮತ್ತೆ ಆ ಪ್ರಶ್ನೆಯನ್ನು ಕೇಳಿಕೊಂಡರೂ, ಸ್ಪಷ್ಟ ಉತ್ತರ ಸಿಗದಿದ್ದರೆ, ಉತ್ತರದ ಹುಡುಕಾಟಕ್ಕೆ ಸುಲಭದ ದಾರಿಯೊಂದಿದೆ. ಹತ್ತು ಆತ್ಮಕತೆಗಳು ಅಥವಾ ಜೀವನಕತೆಗಳನ್ನು ತಂದಿಟ್ಟುಕೊಳ್ಳೋಣ. ಅವನ್ನು ತಿಂಗಳಿಗೆ ಒಂದರಂತೆ ಓದುತ್ತಾ ಬರೋಣ. ಉದಾಹರಣೆಗೆ, ಮಹಾತ್ಮ ಗಾಂಧಿಯವರ “ನನ್ನ ಸತ್ಯಶೋಧನೆಯ ಕಥೆ”, ಎ.ಪಿ.ಜೆ. ಅಬ್ದುಲ್ ಕಲಾಂ ಅವರ “ಅಗ್ನಿಯ ರೆಕ್ಕೆಗಳು”, ಬೀಚಿ ಅವರ “ಭಯಾಗ್ರಫಿ”, ಡಾ. ಸಲೀಂ ಅಲಿ ಅವರ “ನೆಲ ಕಚ್ಚಿದ ಗುಬ್ಬಚ್ಚಿ”, ಶಿವರಾಮ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು”, ನವರತ್ನ ರಾಮರಾವ್ ಅವರ “ಕೆಲವು ನೆನಪುಗಳು”, “ಭುವನದ ಭಾಗ್ಯ ಎಂ.ಎಸ್.ಸುಬ್ಬುಲಕ್ಷ್ಮಿ”, “ಗಂಗಾವತರಣ”(ಗಂಗೂಬಾಯಿ ಹಾನಗಲ್ ಜೀವನಚರಿತ್ರೆ), ಪಾರ್ವತಿ ಮೆನನ್ ಬರೆದ “ಅಡ್ಡಗೋಡೆಗಳನ್ನೊಡೆದು” (ಮುನ್ನಡೆದ ಹನ್ನೆರಡು ಮಹಿಳೆಯರ ಕಥೆಗಳು). ಬೇರೊಬ್ಬರ ಜೀವನಕತೆ ಓದುತ್ತಿದ್ದಂತೆ, ನಮ್ಮ ಬದುಕಿನ ಗುರಿಯ ಬಗ್ಗೆ ಹೊಳಹುಗಳು ಸಿಗುತ್ತವೆ.
ಒಮ್ಮೆ ನಮ್ಮ ಜೀವನದ ಗುರಿ ಸ್ಪಷ್ಟವಾದರೆ, ಮತ್ತೆ ಅದನ್ನು ಹಂತಹಂತವಾಗಿ ಸಾಧಿಸಲು ಸುಲಭ. ಆ ಗುರಿಯನ್ನು 25 ವರುಷಗಳಲ್ಲಿ ಸಾಧಿಸಬೇಕೆಂದು ಯೋಜಿಸಿ. ಅದಕ್ಕಾಗಿ, ಮುಂದಿನ 15 ವರುಷಗಳಲ್ಲಿ ಹಾಗೂ 10 ವರುಷಗಳಲ್ಲಿ ಮಾಡಬೇಕಾದ್ದೇನು ಎಂದು ಗುರುತಿಸಿ. ಹಾಗೆಯೇ, ಇಂದಿನಿಂದ 10 ವರುಷಗಳಲ್ಲಿ ತಲಪಬೇಕಾದಲ್ಲಿಗೆ ಮುಂದೊತ್ತಲು ಇನ್ನು ಐದು ವರುಷಗಳಲ್ಲಿ ಮಾಡಬೇಕಾದ್ದೇನೆಂದು ಕಾರ್ಯಸೂಚಿ ರೂಪಿಸಿ. ಆ ಗುರಿ ಮುಟ್ಟಲು, ಇಂದಿನಿಂದ ಪ್ರತಿ ವರುಷವೂ ಸಾಧಿಸಬೇಕಾದ್ದನ್ನು ಖಚಿತ ಪಡಿಸಿಕೊಳ್ಳಿ. ಇಷ್ಟಾದ ನಂತರ, ಪ್ರತಿ ದಿನ ಬೆಳಗ್ಗೆ “ಇಂದು ಸಾಧಿಸಬೇಕಾದ್ದೇನು” ಎಂದು ಯೋಚಿಸಿ, ರಾತ್ರಿ ಮಲಗುವ ಮುಂಚೆ “ಇಂದು ನಾನು ಸಾಧಿಸಿದ್ದೇನು” ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಪರಿಪಾಠ ಬೆಳೆಸಿಕೊಂಡರಾಯಿತು – ಮುಂದಿನ 25 ವರುಷಗಳಲ್ಲಿ (ಅಥವಾ ಅದಕ್ಕಿಂತ ಮುಂಚೆ) ನಮ್ಮ ಬದುಕಿನ ಗುರಿ ಖಂಡಿತವಾಗಿ ಸಾಧಿಸಬಹುದು.
ನೆನಪಿರಲಿ, ಪ್ರತಿಯೊಬ್ಬ ವ್ಯಕ್ತಿಯೂ ತಾಕತ್ತುಗಳ ಖಜಾನೆ. ಅವನ್ನು ನಮ್ಮೊಳಗಿನಿಂದ ಚಿಮ್ಮಿಸಲು ಬೇಕಾಗಿರೋದು ಒಂದು ಚಿಮ್ಮುಹಲಗೆ. ಅದಕ್ಕಾಗಿ, ಕೊನೆಯ ವರೆಗೆ ಕಾದು ಕೂರಬೇಡಿ. ನಿಮಗೆ ನೀವೇ ಚಿಮ್ಮುಹಲಗೆಯಾಗಿ.
ಈ ದಂತಕತೆ ಗಮನಿಸಿ. ಒಬ್ಬಾತ ಗಿಡುಗನ ಮರಿಯನ್ನು ಅದರ ಗೂಡಿನಿಂದ ಎತ್ತಿ ತಂದ. ಅದರ ಕಾಲಿಗೆ ಹಗ್ಗ ಬಿಗಿದು, ನೆಲದ ಗೂಟವೊಂದಕ್ಕೆ ಕಟ್ಟಿದ. ದಿನದಿನವೂ ತಿನ್ನಲು ಕೊಟ್ಟು, ನೀರು ಕುಡಿಸಿ, ಅದನ್ನು ಬೆಳೆಸಿದ. ಆ ಗಿಡುಗನ ಮರಿ ಒಂದು ದಿನವೂ ರೆಕ್ಕೆ ಬಿಚ್ಚಿ ಹಾರಲಿಲ್ಲ. ಹಗ್ಗದ ಬಂಧನವೇ ತನ್ನ ಬದುಕೆಂದು ಭಾವಿಸಿ ಬೆಳೆಯುತ್ತಿತ್ತು. ಅದೊಂದು ದಿನ ನೀಲಾಕಾಶದಲ್ಲಿ ದೊಡ್ಡ ಗಿಡುಗವೊಂದು ಕಾಣಿಸಿತು – ಚಿಕ್ಕ ಚುಕ್ಕಿಯಂತೆ. ಅನಂತರ ಪ್ರತಿ ದಿನವೂ ಆ ದೊಡ್ಡ ಗಿಡುಗದ ದರ್ಶನ. ಮರಿಗಿಡುಗದ ನೆತ್ತಿಯ ಮೇಲೆಯೇ ಐದಾರು ಬಾರಿ ಸುತ್ತಿ ಕಣ್ಮರೆಯಾಗುವ ವಿಚಿತ್ರ ಆಟ. ದಿನದಿಂದ ದಿನಕ್ಕೆ ಅದರ ಹಾರಾಟ ಮರಿಗಿಡುಗಕ್ಕೆ ಹತ್ತಿರಹತ್ತಿರ. ಕೊನೆಗೊಂದು ದಿನ, ಆ ದೊಡ್ಡ ಗಿಡುಗ ತೀರಾ ಕೆಳಕ್ಕಿಳಿದು, ಮರಿಗಿಡುಗಕ್ಕೆ ತನ್ನ ರೆಕ್ಕೆ ಚಕ್ಕನೆ ತಗಲಿಸಿತು. ತಕ್ಷಣ ಅದು ಗಗನಕ್ಕೇರಿ ಮಾಯವಾಯಿತು. ಆ ಕ್ಷಣದಲ್ಲಿ ಮರಿಗಿಡುಗದ ಮೈಯಲ್ಲಿ ವಿದ್ಯುತ್ ಸಂಚಾರ. ಒಮ್ಮೆಲೇ ಅದು ತನ್ನ ರೆಕ್ಕೆಗಳನ್ನು ಹರಡಿ, ರಪರಪನೆ ಬಡಿಯುತ್ತ ನೆಲದಿಂದ ಮೇಲಕ್ಕೆ ಚಿಮ್ಮಿತು. ಆ ರಭಸಕ್ಕೆ ಕಿತ್ತು ಬಂತು ನೆಲದ ಗೂಟ. ಆಕಾಶಕ್ಕೇರಿದ ಮರಿಗಿಡುಗ ಹೊಸ ಬದುಕಿನತ್ತ ಹಾರಿತು.
ನಮ್ಮನ್ನು ನೆಲದ ಗೂಟಕ್ಕೆ ಬಿಗಿದವರು ಯಾರು? ಯಾರೇ ಬಿಗಿದಿರಲಿ, ಆ ಗೂಟ ಕಿತ್ತೊಗೆದು ಆಕಾಶಕ್ಕೆ ಚಿಮ್ಮಬಲ್ಲ ಚೇತನ ನಮ್ಮಲ್ಲಿದೆ, ಅಲ್ಲವೇ?
(ಆಗಸ್ಟ್ 2018)