ಹಸುರು ಹೆಜ್ಜೆ (೨)

ಪುಸ್ತಕ: ಹಸುರು ಹೆಜ್ಜೆ

(ಪುಸ್ತಕ ಪರಿಚಯ: ಭಾಗ ೨)

ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಕೃಷಿ ಅನುಭವ ಕೂಟ, ಅಡ್ಡೂರು
ಪ್ರಕಟಣೆಯ ವರುಷ: ೨೦೦೫,     ಪುಟ: ೧೨೮,     ಬೆಲೆ: ರೂ.೬೦

ಕೃಷಿ ಪತ್ರಿಕೆ “ಅಡಿಕೆ ಪತ್ರಿಕೆ”ಯ ಕಾರ್ಯನಿರ್ವಾಹಕ ಸಂಪಾದಕ ಮತ್ತು “ಜಲ ಸಂರಕ್ಷಣೆ” ಆಂದೋಲನ ಹಾಗೂ “ಭವಿಷ್ಯದ ಬೆಳೆ ಹಲಸು” ಆಂದೋಲನದ ನೇತಾರ ಶ್ರೀಪಡ್ರೆಯವರು ಮುನ್ನುಡಿಯಲ್ಲಿ ಈ ಪುಸ್ತಕದ ಬರಹಗಳ ಬಗ್ಗೆ  ಹೀಗೆ ಬರೆದಿದ್ದಾರೆ: “ಪರಿಚಯಸ್ಥರ ತೋಟಕ್ಕೆ ಹೋಗಲಿ, ತಾನು ದುಡಿಯುವ ಬ್ಯಾಂಕಿನ ಗ್ರಾಹಕರ ಸಭೆಯಲ್ಲಿ ಭಾಗವಹಿಸಲಿ, ಪತ್ರಿಕೋದ್ಯಮ ತರಬೇತಿಗೆಂದು ಮೇಷ್ಟ್ರಾಗಿ ಯಾವುದೋ ಹಳ್ಳಿಯಲ್ಲಿ ಉಳಿಯಲಿ, ಅಡ್ಡೂರು ಒಂದು ಬರಹ ಹೆಣೆಯುತ್ತಾರೆ. ಅದು ಬರಹಕ್ಕಾಗಿ ಬರಹ ಖಂಡಿತ ಅಲ್ಲ….. ಅವು ನಮ್ಮ ಮನಸ್ಸಿಗೂ, ಮೆದುಳಿಗೂ ಕೆಲಸ ಕೊಡುತ್ತವೆ; ಚಿಂತನೆಗೆ ಹಚ್ಚುತ್ತವೆ”.

ಇಂತಹ ಬರಹಗಳು ರೂಪುಗೊಂಡ “ಹಸುರು ಹೆಜ್ಜೆಗಳ ಜಾಡ”ನ್ನು ಪುಸ್ತಕದ ಆರಂಭದಲ್ಲಿ ಹೀಗೆ ದಾಖಲಿಸಿದ್ದಾರೆ ಅಡ್ಡೂರು ಕೃಷ್ಣ ರಾವ್: “ನಮ್ಮೂರು ಅಡ್ಡೂರಿನಲ್ಲಿ ೧೯೬೦ರ ದಶಕದಲ್ಲಿ ಕಳೆದ ಬಾಲ್ಯದ ದಿನಗಳ ನೆನಪುಗಳಿನ್ನೂ ಹಚ್ಚ ಹಸುರು. ಅವು ಹಸುರು ಲೋಕದಲ್ಲಿ ನನ್ನ ಪಯಣದ ಮೊದಲ ಹೆಜ್ಜೆಗಳು.

ಅಲ್ಲಿ ಕಲ್ಲುಗುಡ್ಡೆಯ ಗೇರುಮರಗಳನ್ನೇರಿ ಹಣ್ಣು ಕೀಳುವಾಗ, ತಾರಿಪಾಡಿಯ ಪುಟ್ಟ ಕಾಡಿನ ದಟ್ಟ ಮರಗಳ ಬುಡದಲ್ಲಿ ಬಿದ್ದ ಗಿಣಿಮೂಗಿನ ಮಾವಿನಹಣ್ಣುಗಳನ್ನು ಹೆಕ್ಕುವಾಗ, ನೇರಳೆ ಮರದ ಹಣ್ಣುಗಳನ್ನು ಉದುರಿಸಿ ತಿಂದು ಹಲ್ಲುಗಳೆಲ್ಲ ನೇರಳೆ ಬಣ್ಣಕ್ಕೆ ತಿರುಗಿದಾಗ, ಮುಸ್ಸಂಜೆಯಾದಾಗ ಅಮ್ಮ ಕರೆದರೂ ಮನೆಗೆ ಬಾರದೆ ಗುಡ್ಡ ಸುತ್ತುತ್ತಿದ್ದಾಗ ಅಲ್ಲಿಯ ಹಸುರು ಹಾಗೆಯೇ ಇರುತ್ತದೆಂದು ನಂಬಿದ್ದೆ.

ಆದರೆ ಹಾಗಾಗಲಿಲ್ಲ. ಅಲ್ಲಿಯ ಪರಿಸರ, ಕೃಷಿ ಹಾಗೂ ಜನಜೀವನ ಬದಲಾಗುತ್ತಿದ್ದಂತೆ ೧೯೭೩ರಲ್ಲಿ ಬೆಂಗಳೂರಿನ ಹೆಬ್ಬಾಳದ ಕೃಷಿಕಾಲೇಜಿಗೆ ಕಾಲಿಟ್ಟಿದ್ದೆ. ಅಲ್ಲಿ ನಾಲ್ಕು ವರುಷಗಳ ಓದು. ರಾಗಿ, ಭತ್ತ, ನೆಲಗಡಲೆ ಸ್ವತಃ ಬೆಳೆಸಿದ ಅನುಭವ. ಕರ್ನಾಟಕ ಪ್ರವಾಸ ಹಾಗೂ ಭಾರತ ಪ್ರವಾಸದಲ್ಲಿ ಹಲವು ಕೃಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ. ಕೃಷಿ ವಿಸ್ತರಣಾ ಗ್ರಾಮ ಶಿಬಿರದಲ್ಲಿ ಹಳ್ಳಿಯಲ್ಲೇ ಉಳಿದಾಗ ಗ್ರಾಮೀಣ ಬದುಕಿನ ಇನ್ನಷ್ಟು ಪರಿಚಯ. ಕೃಷಿ ಪದವಿ ಶಿಕ್ಷಣ ಮುಗಿಯುವಾಗ ಕೃಷಿರಂಗದ ವಿವಿಧ ಮುಖಗಳ ಅರಿವು.

ಅನಂತರ ೧೯೮೦ರ ದಶಕದಲ್ಲಿ “ಕೃಷಿ ಅನುಭವ ಕೂಟ”ದ ಸಂಚಾಲಕನಾಗಿದ್ದಾಗ ತಿಂಗಳಿಗೊಂದು ಸರಳ ಕಾರ್ಯಕ್ರಮ. ಆಗೆಲ್ಲ ಅನುಭವದಲ್ಲಿ ಮಾಗಿದ ಕೃಷಿಕರ ಸಂಪರ್ಕ. ಕೃಷಿಯೇ ಜೀವನಕ್ರಮವಾಗಿರುವ ಅವರ ಅನುಭವದಿಂದ ನನಗೆ ದಕ್ಕಿದ್ದು ಕಾಲೇಜಿನ ಕೋಣೆಗಳಲ್ಲಿ ಪಡೆದ ಪಾಠಗಳಿಗಿಂತ ಭಿನ್ನವಾದ ಪಾಠಗಳು.

ಬ್ಯಾಂಕಿನ ಉದ್ಯೋಗದ ನಿಮಿತ್ತ ಇಸವಿ ೨೦೦೦ದಲ್ಲಿ ಚಿಕ್ಕಮಗಳೂರಿಗೆ ಪಯಣ. ಅಲ್ಲಿ “ಘಟ್ಟದ ಮೇಲಿನ ಕೃಷಿ”ಯನ್ನು ಹತ್ತಿರದಿಂದ ಕಾಣುವ ಅವಕಾಶ. ಅದೊಂದು ದಿನ ತಂದೆ ಅಡ್ಡೂರು ಶಿವಶಂಕರ ರಾಯರಿಂದ ನನಗೆ ಫೋನ್ ಕರೆ. ಕಳೆದ ಐವತ್ತು ವರುಷಗಳಿಂದ ಕೃಷಿಯೇ ಅವರ ಬದುಕು. ಆದರೆ ತೆಂಗಿನಕಾಯಿಗಳ ಬೆಲೆ ಕುಸಿತ, ಕೃಷಿಯನ್ನು ಆಧರಿಸಿ ಬದುಕಬಹುದೆಂಬ ಅವರ ನಂಬಿಕೆಯನ್ನೇ ಅಲುಗಾಡಿಸಿತು.

ಆಗ ನಿರ್ಧರಿಸಿದೆ:
-ಹಸುರು ಲೋಕದಲ್ಲಿ ನಾಲ್ಕು ದಶಕಗಳ ಕೃಷಿ, ಕೃಷಿಕರು, ಗ್ರಾಮೀಣ ಬದುಕು ಹಾಗೂ ಪರಿಸರದ ಬಗ್ಗೆ ಹೆಪ್ಪುಗಟ್ಟಿದ ನನ್ನ ಅನುಭವಗಳನ್ನು ದಾಖಲಿಸಬೇಕೆಂದು.
-ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಇಳಿದು ಬರುವ ಮರದ ದಿಮ್ಮಿಗಳು ತುಂಬಿದ ಲಾರಿಗಳನ್ನು ಕಂಡಾಗ, ದೂರದ ಕಾಡಿಗೆ ಬೆಂಕಿ ಬಿದ್ದು ಅಲ್ಲಿನ ಜೀವವೈವಿಧ್ಯವೆಲ್ಲ ಸುಟ್ಟು ಹೋದಾಗ ತುಡಿಯುವ ಮನದ ನೋವಿಗೆ ಮಾತಾಗಬೇಕೆಂದು.
-ಹಕ್ಕಿಗಳು, ಜೇಡಗಳಂತಹ ಜೀವಜಾಲದ ಕೊಂಡಿಗಳ ಸಂಖ್ಯೆ ಕ್ಷೀಣಿಸುವಾಗ ಮೇಲ್ನೋಟಕ್ಕೆ ಕಾಣದ್ದನ್ನು ಬೊಟ್ಟು ಮಾಡಿ ತೋರಿಸಬೇಕೆಂದು.
-ಹಳ್ಳಿಗಾಡಿನ ಜನರ ಅನುಶೋಧನೆಗಳನ್ನೂ ಬೆರಗುಗೊಳಿಸುವ ಆವಿಷ್ಕಾರಗಳನ್ನೂ ಪಾರಂಪರಿಕ ಜ್ನಾನದ ತುಣುಕುಗಳನ್ನೂ ಇತರರ ಜೊತೆ ಹಂಚಿಕೊಳ್ಳಬೇಕೆಂದು.
-ಕೃಷಿರಂಗದಲ್ಲಿ ನಿರಾಶೆ ಹಾಗೂ ಹತಾಶೆ ಕವಿದಿರುವಾಗ ಆಶಾಭಾವ ಚಿಮ್ಮಿಸಿ, ಆತ್ಮವಿಶ್ವಾಸ ಬೆಳೆಸಬಲ್ಲ ಸಾಧಕರನ್ನೂ ಸಾಧನೆಗಳನ್ನೂ ಪರಿಚಯಿಸಬೇಕೆಂದು.

ಆ ಹಂಬಲದ ಫಲ, ಈ ನಾಲ್ಕು ವಿಭಾಗಗಳಲ್ಲಿ, ನಿಮ್ಮೆದುರು ಇಟ್ಟಿರುವ ಬರಹಗಳು:
-ಸುದ್ದಿಯಾಗದ ಸಾಧಕರು
-ಕೃಷಿಯ ಚದುರಂಗ
-ಪರಿಸರದ ಸೀಳುನೋಟಗಳು
-ನೀರಿನ ಒಳನೋಟಗಳು

ಇವು ಕೃಷಿಕನ ಮಗನೊಬ್ಬನ ಬದುಕಿನ ಹಸುರಿನ ಹುಡುಕಾಟದ ನಿರಂತರ ಪಯಣದಲ್ಲಿ ಮೂಡಿದ ಹೆಜ್ಜೆಗಳು. ಇವನ್ನು ಓದುತ್ತ ಓದುತ್ತ ಇಂಥದೊಂದು ಪಯಣದಲ್ಲಿ ಹೆಜ್ಜೆ ಹಾಕಬೇಕೆಂದು ನಿಮಗನಿಸಿದರೆ ನನ್ನ ಬರಹ ಸಾರ್ಥಕ.