ಪುಸ್ತಕ: ಹಸುರು ಹೆಜ್ಜೆ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಕೃಷಿ ಅನುಭವ ಕೂಟ, ಅಡ್ಡೂರು
ಪ್ರಕಟಣೆಯ ವರುಷ: ೨೦೦೫, ಪುಟ: ೧೨೮, ಬೆಲೆ: ರೂ.೬೦
ಕೃಷಿಕರೊಬ್ಬರ ಮಗ, ಕೃಷಿ ಪದವೀಧರ, ಬ್ಯಾಂಕಿನ ಕೃಷಿ ಅಧಿಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬರವಣಿಗೆಯ ತರಬೇತಿದಾರ, ಪ್ರಗತಿಪರ ಕೃಷಿಕರ ಸಂಘಟಕ, ಸಾವಯವ ಕೃಷಿ ಆಂದೋಲನದ ಕಾರ್ಯಕರ್ತ, ಕೃಷಿ ಅಂಕಣಕಾರ ಹಾಗೂ ಬರಹಗಾರ ಮತ್ತು ಸ್ವತಃ ಕೃಷಿಕರಾಗಿರುವ ಅಡ್ಡೂರು ಕೃಷ್ಣ ರಾವ್ ಕೃಷಿಯ ವಿವಿಧ ಆಯಾಮಗಳ ಬಗ್ಗೆ ಬರೆದಿರುವ ಅಪರೂಪದ ಪುಸ್ತಕ ಇದು.
ಕೃಷಿಕರೇ ಮೂರು ದಶಕಗಳಿಂದ ರೂಪಿಸುತ್ತಿರುವ ಕೃಷಿ ಪತ್ರಿಕೆ “ಅಡಿಕೆ ಪತ್ರಿಕೆ”ಯ ಕಾರ್ಯನಿರ್ವಾಹಕ ಸಂಪಾದಕ ಮತ್ತು “ಜಲ ಸಂರಕ್ಷಣೆ” ಆಂದೋಲನ ಹಾಗೂ “ಭವಿಷ್ಯದ ಬೆಳೆ ಹಲಸು” ಆಂದೋಲನದ ನೇತಾರ ಶ್ರೀಪಡ್ರೆಯವರು ಈ ಪುಸ್ತಕವನ್ನು ಮುನ್ನುಡಿಯಲ್ಲಿ ಪರಿಚಯಿಸುವ ಬಗೆ ಹೀಗಿದೆ: “ಪರಿಚಯಸ್ಥರ ತೋಟಕ್ಕೆ ಹೋಗಲಿ, ತಾನು ದುಡಿಯುವ ಬ್ಯಾಂಕಿನ ಗ್ರಾಹಕರ ಸಭೆಯಲ್ಲಿ ಭಾಗವಹಿಸಲಿ, ಪತ್ರಿಕೋದ್ಯಮ ತರಬೇತಿಗೆಂದು ಮೇಷ್ಟ್ರಾಗಿ ಯಾವುದೋ ಹಳ್ಳಿಯಲ್ಲಿ ಉಳಿಯಲಿ, ಅಡ್ಡೂರು ಒಂದು ಬರಹ ಹೆಣೆಯುತ್ತಾರೆ. ಅದು ಬರಹಕ್ಕಾಗಿ ಬರಹ ಖಂಡಿತ ಅಲ್ಲ.
ವಿಷಯದ ಅಂತರಂಗ ಗ್ರಹಿಸಬಲ್ಲ ಚುರುಕಿನ ಪತ್ರಕರ್ತರನ್ನು ಎಲ್ಲಾದರೂ ಒಯ್ದು ಬಿಡಿ. ಅವರು ಜನರೊಡನೆ ಒಡನಾಡುತ್ತಾರೆ. ಕುಶಲೋಪರಿ ನಡೆಸುತ್ತಾರೆ. ಮಾತಾಡುತ್ತಾ ಅಲ್ಲಿನ ರೀತಿನೀತಿ, ಕೃಷಿಕ್ರಮ, ಸಂಸ್ಕೃತಿ, ಬದುಕು, ಆಹಾರಕ್ರಮ, ಪ್ರಯೋಗಗಳಲ್ಲಿ ಎಲ್ಲೋ ಒಂದು ಆಸಕ್ತಿಯ ಎಳೆಯನ್ನು ಮನದಲ್ಲೇ ಕಂಡುಕೊಳ್ಳುತ್ತಾರೆ. ಸಂಬಂಧಪಟ್ಟ ಮಾಹಿತಿ ಬೆರೆಸಿ ಅದನ್ನು ಪೋಷಿಸಿ ನಾವು – ನೀವು ತಲೆದೂಗುವಂತಹ ಅಕ್ಷರಪಾಕ ಸಿದ್ಧಗೊಳಿಸಿ ಉಣಿಸುತ್ತಾರೆ.
ಅಲ್ಲಿಲ್ಲಿಂದ ಹೂಗಳನ್ನು ಆಯ್ದು ಪೋಣಿಸಿ ಇವರು ಎದುರಿಡುವ ಮಾಲೆ ಆಘ್ರಾಣಿಸಿ ಬಿಟ್ಟುಬಿಡುವಂಥದ್ದಲ್ಲ; ಅವು ನಮ್ಮ ಮನಸ್ಸಿಗೂ, ಮೆದುಳಿಗೂ ಕೆಲಸ ಕೊಡುತ್ತವೆ; ಚಿಂತನೆಗೆ ಹೆಚ್ಚುತ್ತವೆ.
ಈ ಸಂಕಲನದಲ್ಲಿ ಅವರು ದಿನಪತ್ರಿಕೆಗೆ ಬರೆದ ಅಂಕಣಗಳು ಮತ್ತು ನುಡಿಚಿತ್ರಗಳಲ್ಲಿ ಆಯ್ದ ಕೆಲವು ಇವೆ. ಅಂಕಣ ಬರಹಗಳು ಸಾಮಾನ್ಯವಾಗಿ ಹಾಯಾಗಿ ಓದಿಸಿಕೊಂಡು ಹೋಗಿ ಓದುಗನಿಗೆ ಮುದವನ್ನು, ಒಂದಷ್ಟು ಹೊಸ ಚಿಂತನೆಯನ್ನು, ಅನುಭವವನ್ನು ಕೊಟ್ಟರೂ ಸಾಕು. ಆದರೆ, ಅಡ್ಡೂರರ ಅಂಕಣ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ. ಅದರಲ್ಲಿ ಎದ್ದುಕಾಣುವ ಸಂದೇಶವಿದೆ, ಗಟ್ಟಿ ಅನುಭವದ ಬಂಡವಾಳವಿದೆ, ಸಮಾಜದಲ್ಲಿನ ಒಳ್ಳೆತನಕ್ಕೆ ನೀರೆರೆಯುವ ಹೃದಯವೈಶಾಲ್ಯವಿದೆ. ಸತ್ಯವನ್ನು ಹೊರಬಗೆದು ಎದುರೊಡ್ಡುವ ಛಲವಿದೆ…..
ತೇಗದ ಕಾಡಿನಲ್ಲಿ ನಮ್ಮಿಂದ ಬಾಳೆಹಣ್ಣು ಪಡೆಯಲು ಕೈಯೊಡ್ಡುವ ಕೋತಿಗಳ ಸೋಜಿಗದ ಕತೆಯನ್ನು ಉಳಿದವರು ನಾಲ್ಕೆಡೆ ಹೇಳಿ ಮರೆಯಬಹುದು. ಆದರೆ ಅಡ್ಡೂರು ಇದನ್ನು ಎದುರಿಟ್ಟು ಏಕಜಾತಿಯ ತೋಪಿನ ಅಪಾಯವನ್ನು ನವಸಾಕ್ಷರರಿಗೂ ಅರ್ಥವಾಗುವಂತೆ ಬಿಡಿಸಿಡುತ್ತಾರೆ.
ಒಬ್ಬ ಲೇಖಕನ ಆಶಯವನ್ನು, ಆಳವನ್ನು, ಸಮಾಜಹಿತದ ದೃಷ್ಟಿಯನ್ನು ಅರ್ಥೈಸಲು ಮುಂದಿನ ಮೂರು ಅಗುಳುಗಳು ಸಾಕು. “ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕಿದ್ರೆ ನದಿಯನ್ನಲ್ಲ, ಜನ ಮನಸ್ಸನ್ನು ತಿರುಗಿಸಬೇಕಾಗಿದೆ”, “ಇಲ್ಲದ್ದರ ಬಗ್ಗೆ ಕೊರಗುವವರ ಮುಂದೆ ಇದ್ದದ್ದರ ಬಗ್ಗೆ ಖುಷಿಪಡುವ ಮರಿಯೋ ಸಂಪರ್ಕಕ್ಕೆ ಬಂದವರಲ್ಲಿ ಆತ್ಮವಿಶ್ವಾಸದ ಬೀಜ ಬಿತ್ತಬಲ್ಲವರು”. “ಹದ್ದುಗಳು ಪರಿಸರದ ಜಾಡಮಾಲಿಗಳಷ್ಟೇ ಅಲ್ಲ, ಪರಿಸರದ ಆರೊಗ್ಯ ಸೂಚಕವೂ ಆಗಿವೆ. ಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರೆ ಪರಿಸರದ ಸಮತೋಲನ ಹದಗೆಡುತ್ತಿದೆ ಎಂದರ್ಥ. ಇದು ಕೃಷಿಕರಿಗೂ ಇತರರಿಗೂ ಎಚ್ಚರಿಕೆಯ ಘಂಟೆ”.
ತೀರಾ ಸಾಮಾನ್ಯ ಎಂದೆನಿಸುವ ವಿಚಾರದಲ್ಲೊಂದು ಗಂಭೀರ ಕತೆಯ ಜಾಡು ಹಿಡಿದು ತನ್ನ ಬತ್ತಳಿಕೆಯಲ್ಲಿನ ಮಾಹಿತಿಗಳನ್ನು ತುಂಬಿ ಪರಿಣಾಮಕಾರಿಯಾಗಿಸಿ ಬಡಿಸುವ ಕಲೆ ಅಡ್ಡೂರರ ಅಂಕಣ ಬರಹಗಳಲ್ಲಿದೆ. ಇವರಿಗೆ ಇಷ್ಟೊಂದು ಮಾಹಿತಿ ಸಿಗುವುದು ಎಲ್ಲಿಂದ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಅವರನ್ನು ಹಿಂಬಾಲಿಸಬೇಕು.
ತರಬೇತಿ ಶಿಬಿರಗಳಲ್ಲಿ ಸಹಸಂಪನ್ಮೂಲ ವ್ಯಕ್ತಿಗಳು ಮಾತಾಡುತ್ತಿದ್ದಾಗ, ಅಧ್ಯಯನಪೂರ್ಣ ವಿಷಯಗಳ ಭಾಷಣ ಕೇಳುವಾಗ ಚಪ್ಪಾಳೆ ಬಡಿಯುವ ಅಭ್ಯಾಸ ಇವರಿಗಿಲ್ಲ. ಏಕೆಂದರೆ ಒಂದು ಕೈ – ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುವಷ್ಟೇ ತರಾತುರಿ ಮತ್ತು ವೇಗದಿಂದ ಟಿಪ್ಪಣಿ ಮಾಡುತ್ತಿರುತ್ತದೆ. ಅವರಿಗೆ ಇದು ಅಪ್ಪನಿಂದ ಬಂದ ಅಭ್ಯಾಸ. ಬರೆಯಲು ಕುಳಿತಾಗ ಬೇಕುಬೇಕಾದ ಪೋಷಕ ಮಾಹಿತಿಯನ್ನು ಎತ್ತಿಕೊಳ್ಳಲು ಈ ಥರದ “ಮಾಹಿತಿ ಖಜಾನೆ” ನಮ್ಮಲ್ಲಿ ಎಷ್ಟು ಮಂದಿಯಲ್ಲಿದೆ?
“ನಾಲ್ಕು ವರ್ಷ ಹಿಂದೆ ಅಭ್ಯುದಯ ಪತ್ರಿಕೋದ್ಯಮದ ಬಗ್ಗೆ ನೀವು ಹೇಳಿದ್ದು ಹೀಗೆ” ಅಂತ ನಮ್ಮಲ್ಲಿಲ್ಲದ ಈ ಟಿಪ್ಪಣಿಯ ನೆರಳುಪ್ರತಿ ಹಿಡಿಯುವಷ್ಟು ಅಚ್ಚುಕಟ್ಟು ಅಡ್ಡೂರರ ದಾಖಲಾತಿ. ಅವರ ದಾಖಲಾತಿಯ ಕ್ರಮದಿಂದ ತೊಡಗಿ ಬರಹಗಳ ವಿಷಯ ಪ್ರವೇಶ, ಬರವಣಿಗೆಯ ಗತಿ, ವಿಚಾರಗಳ ನಡುವೆ ಕೊಂಡಿ ಹಾಕುವ ಜಾಣ್ಮೆ, ಭಾಷೆ, ಓದುಗನನ್ನು ಅನಾಮತ್ತಾಗಿ ಎತ್ತಿ ವಿಷಯದ ಸ್ಥಳಕ್ಕೆ ಒಯ್ಯುವಂತಹ ಚಿತ್ರಣ – ಇವೆಲ್ಲವೂ ಮನಮುಟ್ಟುವಂಥದ್ದು. ಪತ್ರಿಕೋದ್ಯಮದ ವಿದ್ಯಾರ್ಥಿಗಳ ಮಟ್ಟಿಗಂತೂ ಅಧ್ಯಯನಯೋಗ್ಯ.”