ಮಹಾಮಾರಿ ಕಳೆನಾಶಕ: ಮನುಕುಲಕ್ಕೇ ಮಾರಕ

       
ಭಾರತ, ಕೆನಡಾ, ಫ್ರಾನ್ಸ್, ಯುಎಸ್ಎ ಹಾಗೂ ಜಗತ್ತಿನ ಎಲ್ಲ ಭಾಗಗಳಲ್ಲಿ ಗ್ಲೈಫೊಸೇಟ್ ಕಳೆನಾಶಕದ ಬಳಕೆ ಮಹಾಮಾರಿಯಂತೆ ವ್ಯಾಪಿಸುತ್ತಿದೆ. ಈ ಕಳೆನಾಶಕ ಉತ್ಪಾದಿಸುವ ಮೊನ್ಸಾಂಟೋ ಕಂಪೆನಿ ವಿರುದ್ಧ, ಯುಎಸ್ಎ ದೇಶದಲ್ಲಿ ೪,೦೦೦ಕ್ಕಿಂತ ಅಧಿಕ ದಾವೆಗಳು ತೀರ್ಪಿಗಾಗಿ ಕಾಯುತ್ತಿವೆ.

ಅವುಗಳಲ್ಲಿ ಮೊಟ್ಟಮೊದಲ ದಾವೆ ಈಗ ಸ್ಯಾನ್ಫ್ರಾನ್ಸಿಸ್ಕೋ ಕೋರ್ಟಿನಲ್ಲಿ ನಡೆಯುತ್ತಿದೆ. ಈ ದಾವೆ ಹಾಕಿದಾತ ೪೬ ವರುಷ ವಯಸ್ಸಿನ ಡಿವೇಯ್ನೆ ಜಾನ್ಸನ್. ಗ್ಲೈಫೊಸೇಟ್ ಕಳೆನಾಶಕ ಬಳಕೆಯ ಅಪಾಯಗಳ ಬಗ್ಗೆ ಮೊನ್ಸಾಂಟೋ ಕಂಪೆನಿ ನನಗೆ ತಿಳಿಸಲೇ ಇಲ್ಲ ಎನ್ನುತ್ತಾನೆ ಆತ. ಅದರಿಂದಾಗಿ ಮರಣಾಂತಿಕ ಕ್ಯಾನ್ಸರಿನಿಂದ ನರಳುತ್ತಿದ್ದಾನೆ.

ಗ್ಲೈಫೊಸೇಟಿನಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಕಳೆನಾಶಕ್ಕಾಗಿ ಅದರ ಬಳಕೆ ಕೈಬಿಡಲು ಎಲ್ಲ ರೈತರೂ ತಯಾರಿಲ್ಲ. “ಗ್ಲೈಫೊಸೇಟ್ ಇಲ್ಲದೆ ನಾನು ಬೇಸಾಯ ಮಾಡಲು ಸಾಧ್ಯವಿಲ್ಲ” ಎನ್ನುತ್ತಾರೆ ಮಹಾರಾಷ್ಟ್ರದ ಯವತಮಾಲ್ ಜಿಲ್ಲೆಯ ಜರಾಂಗ್ ಗ್ರಾಮದ ವಸುದೇವೊ ರಾಥೋಡ್ (೪೦ ವರುಷ). ಅಲ್ಲಿನ ಮುಖ್ಯಬೆಳೆಗಳು ಹತ್ತಿ ಮತ್ತು ಸೋಯಾಬೀನ್. ತನ್ನ ೧೩ ಹೆಕ್ಟೇರ್ ಹೊಲದಲ್ಲಿ ಹತ್ತಿ ಬೆಳೆಯುತ್ತಿದ್ದಾರೆ ರಾಥೋಡ್. ಕೆಲಸದಾಳುಗಳಿಂದ ಕಳೆ ತೆಗೆಸುವ ಬದಲಾಗಿ, ಈ ವಿಷರಾಸಾಯನಿಕ ಸಿಂಪಡಿಸುವುದೇ ಅನುಕೂಲ ಎನ್ನುತ್ತಾರೆ ಅವರು; ಯಾಕೆಂದರೆ ಕೆಲಸದಾಳುಗಳಿಂದ ಕಳೆ ತೆಗೆಸುವ ವೆಚ್ಚ ಮೂರು ಪಟ್ಟು ಜಾಸ್ತಿ.

ಇದೇ ವರುಷ ಜೂನ್ ೭ರಂದು, ಬೃಹತ್ ವಹಿವಾಟಿನ ಈ ಕಳೆನಾಶಕವನ್ನು ಮೊನ್ಸಾಂಟೋ ಕಂಪೆನಿಯಿಂದ ಜರ್ಮನಿಯ ಫಾರ್ಮಾ ಕಂಪೆನಿ ಬೇಯರ್ ಖರೀದಿಸಿದೆ. ಹೊಲ ಮತ್ತು ತೋಟಗಳಲ್ಲಿ ಬೆಳೆಯುವ ಕಳೆ ನಾಶ ಮಾಡಲು ರೈತರಿಂದ ಈ ಕಳೆನಾಶಕದ ಬಳಕೆ. ಅಷ್ಟೇ ಅಲ್ಲ, ರೈಲ್ವೇ ಹಳಿಗಳು, ಉದ್ಯಾನಗಳು ಮತ್ತು ಕೆರೆಸರೋವರಗಳಲ್ಲಿ ಬೆಳೆಯುವ ಅನವಶ್ಯಕ ಗಿಡಬಳ್ಳಿಗಳನ್ನು ನಾಶ ಮಾಡಲಿಕ್ಕೂ ಇದೇ ವಿಷರಾಸಾಯನಿಕದ ಬಳಕೆ. ಬೆಳೆದು ನಿಂತಿರುವ ಪೈರಿನ ಮೇಲೆಯೂ ಇದನ್ನು ಸಿಂಪಡಿಸುತ್ತಾರೆ – ಕೊಯ್ಲು ಸುಲಭವಾಗಲೆಂದು!
೧೯ ವರುಷಗಳಲ್ಲಿ ಗ್ಲೈಫೊಸೇಟ್ ಮಾರಾಟ ೧೫ ಪಟ್ಟು ಹೆಚ್ಚಳ
ಹಾಗಿರುವಾಗ, ಗ್ಲೈಫೊಸೇಟಿನ ಮಾರಾಟ ವರುಷದಿಂದ ವರುಷಕ್ಕೆ ಹೆಚ್ಚುತ್ತಲೇ ಇರುವುದು ಅಚ್ಚರಿಯಲ್ಲ. ಇದನ್ನು ೧೯೭೪ರಲ್ಲಿ ಬಿಡುಗಡೆ ಮಾಡಿದಾಗಿನಿಂದ, ಜಾಗತಿಕವಾಗಿ ೮.೬ ಬಿಲಿಯನ್ ಕಿಗ್ರಾ. ಗ್ಲೈಫೊಸೇಟನ್ನು ಮಾರಾಟ ಮಾಡಲಾಗಿದೆ ಎನ್ನುತ್ತದೆ, “ಎನ್ವೈರನ್ಮೆಂಟಲ್ ಸೈನ್ಸಸ್ ಯುರೋಪ್” ನಿಯತಕಾಲಿಕದ ಫೆಬ್ರವರಿ ೨೦೧೬ರ ಒಂದು ಲೇಖನ. ಜಾಗತಿಕವಾಗಿ, ಇದರ ಒಟ್ಟು ಮಾರಾಟ ೧೯೯೫ರ ೫೧ ದಶಲಕ್ಷ ಕಿಲೋಗ್ರಾಮುಗಳಿಂದ ೨೦೧೪ರಲ್ಲಿ ೭೫೦ ದಶಲಕ್ಷ ಕಿಲೋಗ್ರಾಮುಗಳಿಗೆ ಏರಿದೆ. ಅಂದರೆ ಸುಮಾರು ೧೫ ಪಟ್ಟು ಹೆಚ್ಚಳ! ಈ ಹೆಚ್ಚಳಕ್ಕೆ ಮತ್ತು ಜೈವಿಕವಾಗಿ ಮಾರ್ಪಡಿಸಿದ (ಜೈಮಾ – ಕುಲಾಂತರಿ) ಕಳೆನಾಶಕ-ಪ್ರತಿರೋಧಿ ತಳಿಗಳ ಪ್ರಸಾರಕ್ಕೆ ಸಂಬಂಧವಿದೆ. ಅವನ್ನು ಬೆಳೆದಾಗ ಈ ವಿಷ ಸಿಂಪಡಿಸಿದರೆ ಕಳೆನಾಶ ಸುಲಭ. ಆದ್ದರಿಂದ, ಅಧಿಕ ಲಾಭ ಗಳಿಕೆಗಾಗಿ ಈ ಕಳೆನಾಶಕ ರೈತರ ಅಚ್ಚುಮೆಚ್ಚಿನದ್ದಾಗಿದೆ. ಉದಾಹರಣೆಗೆ ಚಹಾ ತೋಟಗಳ ಇಳುವರಿ ಕಳೆಗಳಿಂದಾಗಿ ಶೇಕಡಾ ೭೦ ಕಡಿಮೆಯಾದೀತು! ಅದನ್ನು ತಪ್ಪಿಸಲಿಕ್ಕಾಗಿ ಕಳೆನಾಶಕಗಳ ಭರ್ಜರಿ ಬಳಕೆ.

ಗ್ಲೈಫೊಸೇಟ್ ಸಸ್ಯಗಳನ್ನು ಹೇಗೆ ಕೊಲ್ಲುತ್ತದೆ? ಅಮಿನೋ ಆಮ್ಲಗಳು ಮತ್ತು ಅತ್ಯವಶ್ಯಕ ಪೋಷಕಾಂಶಗಳ ತಯಾರಿಯಲ್ಲಿ ಸಹಕರಿಸುವ ಒಂದು ಕಿಣ್ವದ ಕೆಲಸವನ್ನು ತಡೆಗಟ್ಟುವ ಮೂಲಕ. ಚಹಾ ತೋಟಗಳಲ್ಲಿ ಮತ್ತು ಕೃಷಿಬೆಳೆಗಳ ಹೊರತಾದ ಸಸ್ಯಗಳ ನಾಶಕ್ಕೆ ಮಾತ್ರ ಗ್ಲೈಫೊಸೇಟಿನ ಸಿಂಪಡಣೆಗೆ ಅನುಮತಿಯಿದೆ. ಆದರೆ, ರಾಥೋಡ್ ಅವರಂತಹ ಸಾವಿರಾರು ರೈತರು ಕಾನೂನುಬಾಹಿರವಾಗಿ ಮತ್ತು ವಿವೇಚನಾರಹಿತವಾಗಿ ಇದನ್ನು ಸಿಂಪಡಿಸುತ್ತಿದ್ದಾರೆ! ಹಾಗೆಯೇ ಹಲವು ಬೆಳೆಗಳ ಮೇಲೆ ಗ್ಲೈಫೊಸೇಟನ್ನು ಸುರಿಯಲಾಗುತ್ತಿದೆ – ಬೆಳೆದು ನಿಂತ ಆಹಾರ-ಸಸ್ಯಗಳನ್ನು ಪ್ಲಾಸ್ಟಿಕ್ ಬಾಲ್ದಿಯಿಂದ ಮುಚ್ಚಿ (ಅವು ಗ್ಲೈಫೊಸೇಟಿನಿಂದಾಗಿ ಸತ್ತು ಹೋಗದಂತೆ), ಆ ಸಸ್ಯಗಳ ಸುತ್ತಲೂ ಬೆಳೆದ ಕಳೆಗಳ ಮೇಲೆ ಗ್ಲೈಫೊಸೇಟನ್ನು ಸುರಿಯುತ್ತಾರೆ!

ಜೈವಿಕವಾಗಿ ಮಾರ್ಪಡಿಸಿದ ಕಳೆನಾಶಕ-ಪ್ರತಿರೋಧಿ (ಉದಾಹರಣೆಗೆ ಕಾನೂನುಬಾಹಿರವಾಗಿ ಭಾರತದ ಕೆಲವು ಭಾಗಗಳಲ್ಲಿ ಬೆಳೆಸುತ್ತಿರುವ ಬೊಲ್ಗಾರ್ಡ್ -೩ ಹತ್ತಿ ತಳಿ) ಬೆಳೆಗಳ ಮೇಲಂತೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಗ್ಲೈಫೊಸೇಟ್ ಸಿಂಪಡಿಸುತ್ತಾರೆ (ಕಳೆನಾಶಕ-ಪ್ರತಿರೋಧಿ ತಳಿಗಳಿಗಳಿಗೆ ವಿಷರಾಸಾಯನಿಕಗಳಿಂದ ಹಾನಿಯಾಗದು ಎಂಬ ನಂಬಿಕೆಯಿಂದ). ಈ ನಿಟ್ಟಿನಲ್ಲಿ, ರೈತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯವತಮಾಲಿನ ಲಾಭರಹಿತ ಸಂಘಟನೆ “ಶೇತ್ಕಾರಿ ನ್ಯಾಯಹಕ್ಕು ಆಂದೋಲನ ಸಮಿತಿ”ಯ ಸಂಚಾಲಕ ದೇವಾನಂದ ಪವಾರ್ ಹೇಳಿಕೆ ಹೀಗಿದೆ: “ರಾಸಾಯನಿಕದ ದೀರ್ಘಕಾಲಿಕ ಆರೋಗ್ಯ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತ ಕೂರಲು ರೈತರಿಂದಾಗದು. ಅವರು ಇವತ್ತಿನ ದಿನ ಬದುಕುವುದು ಹೇಗೆಂದು ನೋಡುತ್ತಾರೆ.”

ಭಾರತದಲ್ಲಿ ಗ್ಲೈಫೊಸೇಟ್ ಮಾರಾಟದ ಮಾಹಿತಿ, ಸಸ್ಯಸಂರಕ್ಷಣೆ, ಕ್ವಾರಂಟೈನ್ ಮತ್ತು ಸಂಗ್ರಹಣೆ ವಿಭಾಗದಲ್ಲಿ ಲಭ್ಯ. ಆದರೆ, ಆ ವಿಭಾಗ ನೀಡುವ ಮಾಹಿತಿ ೨೦೧೪-೧೫ರದ್ದು. ಈಗ ಭಾರತದ ಹಲವೆಡೆಗಳಲ್ಲಿ ಜೈಮಾ ಕಳೆನಾಶಕ- ಪ್ರತಿರೋಧಿ ತಳಿಗಳನ್ನು ಬೆಳೆಸಲಾಗುತ್ತಿದೆ. ಇದರಿಂದಾಗಿ, ಗ್ಲೈಫೊಸೇಟಿನ ಬಳಕೆ ಹೆಚ್ಚಾಗಿರಲೇ ಬೇಕು. ಯವತಮಾಲಿನ ಅಜಯ್ ಕೃಷಿಕೇಂದ್ರದ ಮಾಲೀಕ ಅಜಯ್ ಯೆರವಾರ್, ಕಳೆದ ವರುಷ ತಾನೇ ಸ್ವತಃ ೩೦೦ ಲೀಟರ್ ಗ್ಲೈಫೊಸೇಟ್ ಮಾರಿದ್ದೇನೆ ಎನ್ನುತ್ತಾರೆ.

ಭಾರತದಲ್ಲಿ ಮಾರಾಟವಾಗುವ ಹಲವಾರು ಪೀಡೆನಾಶಕಗಳಲ್ಲಿ ಗ್ಲೈಫೊಸೇಟ್ ಇದೆ. ಆದರೆ “ರೌಂಡ್-ಅಪ್” ಎಂಬುದು ಅತ್ಯಂತ ರೈತಪ್ರಿಯ ಕಳೆನಾಶಕ. ಮೊನ್ಸಾಂಟೋ ಕಂಪೆನಿಯ ವಾರ್ಷಿಕ ವರದಿ ಪ್ರಕಾರ, ೨೦೧೫-೧೬ರ ರೌಂಡ್-ಅಪ್ ಮಾರಾಟ ಪರಿಮಾಣಕ್ಕಿಂತ ೨೦೧೬-೧೭ರ ಪರಿಮಾಣ ಶೇ.೯ ಜಾಸ್ತಿ. ಅದು ಎಷ್ಟು ಕಿಲೋಗ್ರಾಮ್ ಎಂಬ ಮಾಹಿತಿ ನೀಡಲು ಮೊನ್ಸಾಂಟೋದ ಭಾರತದ ಕಚೇರಿ ತಯಾರಿಲ್ಲ. ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ದಾಖಲಾತಿ ಸಮಿತಿ (ಸಿಐಬಿ ಆಂಡ್ ಆರ್ಸಿ) ಕೂಡ ಈ ಮಾಹಿತಿ ನೀಡುತ್ತಿಲ್ಲ.

ಕೃಷಿಯಲ್ಲಿ ಬಳಸುವ ವಿಷರಾಸಾಯನಿಕಗಳ ಅಪಾಯಕಾರಿ ಪರಿಣಾಮಗಳು ರೈತರಿಗೆ ಗೊತ್ತಿಲ್ಲವೆಂದಲ್ಲ. ಕಳೆದ ವರುಷ (೨೦೧೭) ಮುಂಗಾರಿನಲ್ಲಿ ಯವತಮಾಲ್ ಜಿಲ್ಲೆಯಲ್ಲಿ ೨೩ ರೈತರು ಮತ್ತು ಕೃಷಿಕೆಲಸಗಾರರು ಮರಣ ಹೊಂದಿದರು; ಅಸಹಜ ಎತ್ತರಕ್ಕೆ ಬೆಳೆದಿದ್ದ ಹತ್ತಿ ಗಿಡಗಳಿಗೆ ಪೀಡೆನಾಶಕಗಳನ್ನು ಸಿಂಪಡಿಸುತ್ತಿದ್ದಾಗ, ಅದರ ವಿಷತುಂಬಿದ ಗಾಳಿ ಉಸಿರಾಡಿದ ಕಾರಣದಿಂದಾಗಿ. ಪೀಡೆನಾಶಕಗಳ ವಿರುದ್ಧ ಹೋರಾಡುತ್ತಿರುವ ಪಾನ್ (ಪಿ.ಎ.ಎನ್. –ಪೆಸ್ಟಿಸೈಡ್ ಆಕ್ಷನ್ ನೆಟ್-ವರ್ಕ್ ಇಂಡಿಯಾ) ಸಂಸ್ಥೆ ಅಲ್ಲಿ ಪರಿಶೀಲನೆ ನಡೆಸಿತ್ತು. ಅಲ್ಲಿ ಜೈಮಾ ಹತ್ತಿಬೀಜ ಬಿತ್ತಿ ಬೆಳೆಸಿದ್ದು, ಹತ್ತಿ ಗಿಡಗಳು ಅಸಹಜ ಎತ್ತರಕ್ಕೆ ಬೆಳೆಯಲು ಕಾರಣವಾಗಿರ ಬಹುದು ಎಂಬುದು ಪಾನ್ ನೀಡಿದ ಮಾಹಿತಿ. ಆ ಪ್ರದೇಶದಲ್ಲಿ “ರೌಂಡ್ ಅಪ್ ರೆಡಿ ಫ್ಲೆಕ್ಸ್” ಹತ್ತಿ ಬೀಜಗಳನ್ನು ಕಾನೂನುಬಾಹಿರವಾಗಿ ಬೆಳೆಯುತ್ತಿದ್ದಾರೆ ಎನಿಸುತ್ತದೆ. ಎತ್ತರವಾಗಿ ನಿಕಟವಾಗಿ ಬೆಳೆದಿದ್ದ ಹತ್ತಿಗಿಡಗಳು ಗಾಳಿಯಲ್ಲಿ ವಿಷರಾಸಾಯನಿಕಗಳು ಪಸರಿಸಲು ಅಡ್ಡಿಯಾದವು; ಆ ವಿಷಭರಿತ ಗಾಳಿಯ ಉಸಿರಾಟವೇ ಕೆಲಸಗಾರರ ಪ್ರಾಣ ತೆಗೆಯಿತು.

ಆ ಸಾವುಗಳ ನಂತರ, ಯವತಮಾಲಿನಲ್ಲಿ ಕೃಷಿ ಇಲಾಖೆ ಐದು ಪೀಡೆನಾಶಕಗಳ ಮಾರಾಟ ನಿಷೇಧಿಸಿತು. ಆದರೆ, ಗ್ಲೈಫೊಸೇಟ್ ಮಾರಾಟ ನಿಷೇಧಿಸಲಿಲ್ಲ. ಅದೇನಿದ್ದರೂ, ಕೃಷಿ ಇಲಾಖೆಯು ಗ್ಲೈಫೊಸೇಟಿನ ಮಾರಾಟಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿತು –ಜೈಮಾ ಕೀಟನಾಶಕ-ಪ್ರತಿರೋಧಿ ಹತ್ತಿ ತಳಿಯ ಕೃಷಿಯನ್ನು ತಡೆಯಲಿಕ್ಕಾಗಿ. ಗ್ಲೈಫೊಸೇಟ್ ಮಾರಕ ವಿಷ ಎಂಬುದು ಖಂಡಿತ. ಯವತಮಾಲಿನ ವಸಂತರಾವ್ ನಾಯಕ್ ಸರಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೊಫೆಸರ್ ಶೇಖರ್ ಘೊಡೇಶ್ವರ್ ಹೇಳುತ್ತಾರೆ, “ಗ್ಲೈಫೊಸೇಟ್ ವಿಷಬಾಧೆಯಿಂದ ಬಳಲುವ ಹಲವು ರೋಗಿಗಳು (ನಮ್ಮ ಆಸ್ಪತ್ರೆಗೆ) ಬರುತ್ತಲೇ ಇರುತ್ತಾರೆ.”

ಆರೋಗ್ಯದ ಮೇಲೆ ಗ್ಲೈಫೊಸೇಟಿನ ದುಷ್ಪರಿಣಾಮಗಳು ಏನು?
ಗ್ಲೈಫೊಸೇಟಿನಿಂದಾಗಿ ಇವೆಲ್ಲ ದುಷ್ಪರಿಣಾಮಗಳನ್ನು ದಾಖಲಿಸಲಾಗಿದೆ. ಮೂತ್ರಕೋಶ ಮತ್ತು ಲಿವರಿಗೆ ಹಾನಿ, ಕರುಳಿನ ಸೂಕ್ಷ್ಮಜೀವಿಗಳಲ್ಲಿ ಬದಲಾವಣೆಗಳು, ಕ್ಯಾನ್ಸರ್, ಎಂಡೋಕ್ರೈನಿಗೆ ತೊಂದರೆ, ನರಜಾಲಕ್ಕೆ ಹಾನಿ, ಶರೀರದ ರೋಗನಿರೋಧ ವ್ಯವಸ್ಥೆಯ ಸೋಲು ಮತ್ತು ವಿಪರೀತ ವಿಷಸೇವನೆಯಿಂದಾಗುವ ಪರಿಣಾಮಗಳು. ಗ್ಲೈಫೊಸೇಟ್ ಸೇರಿಸಿ ತಯಾರಿಸಿದ ಪೀಡೆನಾಶಕಗಳು, ಗ್ಲೈಫೊಸೇಟಿಗಿಂತಲೂ ಹಾನಿಕಾರಕ ಎಂದು ತಿಳಿದು ಬಂದಿದೆ. ಉದಾಹರಣೆಗೆ, ಗ್ಲೈಫೊಸೇಟಿನ “ಕ್ಷಮತೆ” ಹೆಚ್ಚಿಸಲಿಕ್ಕಾಗಿ, ಅದಕ್ಕೆ ಪೊಲಿಎಥೋಪೈಲೇಟೆಡ್ ಟಾಲೊ ಅಮಿನ್ (ಪಿಓಇಎ) ಎಂಬ ವಿಷರಾಸಾಯನಿಕವನ್ನು ಮೊನ್ಸಾಂಟೋ ಕಂಪೆನಿ ಸೇರಿಸುತ್ತದೆ; ಇದು ಮನುಷ್ಯರ ಎಂಬ್ರಯೋನಿಕ್ ಮೂತ್ರಕೋಶದ ಕೋಶಗಳಿಗೆ ಗ್ಲೈಫೊಸೇಟಿಗಿಂತ ೩,೪೫೦ ಪಟ್ಟು ಜಾಸ್ತಿ ವಿಷಕಾರಿ ಎಂದು ಗೊತ್ತಾಗಿದೆ! ಈ ವಿಷರಾಸಾಯನಿಕದಲ್ಲಿ (ಫಾರ್ಮುಲೇಷನ್) ಆರ್ಸೆನಿಕ್, ಕ್ರೋಮಿಯಂ, ಕೋಬಾಲ್ಟ್, ಸೀಸ ಮತ್ತು ನಿಕ್ಕಲ್ – ಈ ವಿಷಗಳೂ ಸೇರಿಸಲ್ಪಟ್ಟಿವೆ ಎನ್ನುತ್ತದೆ “ಟಾಕ್ಸಿಕಾಲಜಿ ರಿಪೋರ್ಟ್ಸ್” ನಿಯತಕಾಲಿಕದ ಡಿಸೆಂಬರ್ ೨೦೧೭ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿ. ಗಮನಿಸಿ: ಯಾವುದೇ ಪೀಡೆನಾಶಕದಲ್ಲಿ ಮೂಲವಿಷ (ಉದಾ: ಗ್ಲೈಫೊಸೇಟ್)ದೊಂದಿಗೆ ಬೆರೆಸುವ ಪೂರಕವಿಷಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ.

“ಗ್ಲೈಫೊಸೇಟನ್ನು ತಕ್ಷಣವೇ ನಿಷೇಧಿಸಬೇಕು, ಯಾಕೆಂದರೆ ಅದರ ಸಕ್ರಿಯ ವಸ್ತುಘಟಕಗಳ ಘೋಷಣೆಯಲ್ಲಿ ಭಾರೀ ಮೋಸವಿದೆ. ಭಾರಲೋಹಗಳನ್ನು, ಮುಖ್ಯವಾಗಿ ಆರ್ಸೆನಿಕ್, ಗ್ಲೈಫೊಸೇಟಿಗೆ ಫಾರ್ಮುಲೆಂಟುಗಳಾಗಿ ಸೇರಿಸಲಾಗಿದೆ. ಆದರೆ, ಅವು ಸಕ್ರಿಯ ಅಂಶಗಳೆಂದು ಘೋಷಿಸಲಾಗಿಲ್ಲ. ಹಾಗಾಗಿ, ಅವು (ಪೀಡೆನಾಶಕದಲ್ಲಿರುವ) ಗುಪ್ತ ಹಾಗೂ ಅಘೋಷಿತ ವಿಷಗಳು” ಎನ್ನುತ್ತಾರೆ ಗಿಲ್ಲೆಸ್ ಎರಿಕ್ ಸೆರಲಿನಿ. ಅವರು ಫ್ರಾನ್ಸಿನ ಕೇನ್ ನಾರ್ಮಂಡಿ ವಿಶ್ವವಿದ್ಯಾಲಯದ ಅಣು-ಜೀವವಿಜ್ನಾನಿ ಹಾಗೂ ಜೈಮಾ ಬೆಳೆಗಳು ಮತ್ತು ಆರೋಗ್ಯದ ಮೇಲೆ ಅವುಗಳ ಪರಿಣಾಮಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದವರು.

ಫಸಲು ಹೆಚ್ಚಾಗಲಿ ಎಂಬ ಕಾರಣಕ್ಕಾಗಿ ರೈತರು ಬೆಳೆಗಳಿಗೆ ಸಿಂಪಡಿಸುವ ವಿಷರಾಸಾಯನಿಕಗಳು ಮಹಾಮಾರಿಗಳು. ಅವುಗಳು ಕ್ಯಾನ್ಸರ್ಕಾರಕ ವಿಷಗಳು ಎಂಬುದು ಮತ್ತೆಮತ್ತೆ ಸಾಬೀತಾಗುತ್ತಲೇ ಇದೆ. ಎಂಡೋಸಲ್ಫಾನನ್ನು ಗೇರುತೋಟಗಳ ಮೇಲೆ ಹೆಲಿಕಾಪ್ಟರಿನ ಮೂಲಕ ದಶಕಗಳ ಕಾಲ ಸಿಂಪಡಿಸಿದ್ದರಿಂದ ಆದ ವಿಷಪರಿಣಾಮಗಳು ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯುತ್ತಿರುವ ಘೋರ ಉದಾಹರಣೆ, ಕರ್ನಾಟಕದ ಬೆಳ್ತಂಗಡಿ ಮತ್ತು ಕೇರಳದ ಕಾಸರಗೊಡು ಪ್ರದೇಶಗಳಲ್ಲಿ, ನಮ್ಮ ಕಣ್ಣುಗಳ ಮುಂದೆಯೇ ಈಗಲೂ ಇರುವ ಜೀವಂತ ಪುರಾವೆ. ಕೆಟ್ಟ ಮೇಲೂ ಬುದ್ಧಿ ಬಾರದಿದ್ದರೆ….?

(ಅಡಿಕೆ ಪತ್ರಿಕೆ, ಸಪ್ಟಂಬರ್ ೨೦೧೮)

ಫೋಟೋ ಕೃಪೆ: ಡೌನ್ ಟು ಅರ್ತ್ ಪಾಕ್ಷಿಕ