ಮಣ್ಣು ಮುಕ್ಕಿದ ಬಿಟಿ ಹತ್ತಿ ಪೇಟೆಂಟ್

       
ಕೃಷಿ ಜೈವಿಕ ತಂತ್ರಜ್ನಾನದ ದೈತ್ಯ ಕಂಪೆನಿ ಮೊನ್ಸಾಂಟೋದ ಬಿಟಿ ಹತ್ತಿಯ ಪೇಟೆಂಟ್ ಕೊನೆಗೂ ಮಣ್ಣು ಮುಕ್ಕಿತು – ಮೊನ್ಸಾಂಟೋ ಮತ್ತು ಅದರಿಂದ ಲೈಸನ್ಸ್ ಪಡೆದ ನುಜಿವೀಡು ಸೀಡ್ಸ್ ಲಿಮಿಟೆಡ್ (ಎನ್.ಎಸ್.ಎಲ್.) ನಡುವಣ ವರುಷಗಟ್ಟಲೆ ವ್ಯಾಜ್ಯದ ತೀರ್ಪನ್ನು ಢೆಲ್ಲಿ ಹೈಕೋರ್ಟಿನ ಡಿವಿಜನ್ ಬೆಂಚ್ ೧೧.೪.೨೦೧೮ರಂದು ಘೋಷಿಸಿದಾಗ.

ಮೊನ್ಸಾಂಟೋ ಜೈವಿಕವಾಗಿ ಮಾರ್ಪಡಿಸಿದ ಹತ್ತಿ ಬೀಜಗಳಿಗೆ ಭಾರತದಲ್ಲಿ ಪೇಟೆಂಟ್ ನೀಡಲಾಗದು ಎಂದು ಆ ದಾವೆಯ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯಾಕೆಂದರೆ, ಸಸ್ಯಗಳಿಗೆ ಮತ್ತು ಜೈವಿಕ ವಸ್ತುಗಳಿಗೆ ಪೇಟೆಂಟ್ ನೀಡುವುದನ್ನು ಭಾರತದ ಪೇಟೆಂಟ್ ಕಾಯಿದೆಯ ಸೆಕ್ಷನ್ ೩(ಜೆ) ನಿಷೇಧಿಸುತ್ತದೆ. ಆದ್ದರಿಂದ, ಅಮೇರಿಕಾದ ಜೈವಿಕ ತಂತ್ರಜ್ನಾನದ ಬೋಲ್ಗಾರ್ಡ್-೨ ಬಿಟಿ ಹತ್ತಿ ಬೀಜ ತಂತ್ರಜ್ನಾನದ ಪೇಟೆಂಟನ್ನು ಭಾರತದಲ್ಲಿ ಜ್ಯಾರಿ ಮಾಡಲು ಸಾಧ್ಯವಿಲ್ಲ. (ಈ ತಂತ್ರಜ್ನಾನವನ್ನು ಕಾಯಿಕೊರಕ ಹುಳವನ್ನು ಪ್ರತಿಬಂಧಿಸಲು ಅಭಿವೃದ್ಧಿ ಪಡಿಸಲಾಗಿದೆ.)

ಇದರರ್ಥ, ಎನ್.ಎಸ್.ಎಲ್. ಮತ್ತು ಇತರ ಹಲವು ಲೈಸನ್ಸ್ ಪಡೆದ ಕಂಪೆನಿಗಳು ಈ ತಂತ್ರಜ್ನಾನವನ್ನು ಮುಕ್ತವಾಗಿ ಬಳಸಬಹುದು ಮತ್ತು ಮಾರಬಹುದು. ಮೊನ್ಸಾಂಟೋದ ಪೇಟೆಂಟ್ ನಂಬ್ರ ೨೧೪೪೩೬ನ್ನು (ಬ್ಯಾಸಿಲ್ಲಸ್ ತುರಿನ್ಜಿನ್ಸಿಸ್ ಡೆಲ್ಟಾ ಎಂಡೋಟಾಕ್ಸಿನುಗಳನ್ನು ಅಭಿವ್ಯಕ್ತಿಸಲಿಕ್ಕಾಗಿ ಸಸ್ಯಗಳನ್ನು ಪರಿವರ್ತಿಸುವ ವಿಧಾನಗಳು) ಜಸ್ಟಿಸ್ ರವೀಂದ್ರ ಭಟ್ ಮತ್ತು ಜಸ್ಟಿಸ್ ಯೋಗೇಶ್ ಖನ್ನ ಅವರ ಪೀಠ ರದ್ದು ಪಡಿಸಿತು. ಬೊಲ್ಗಾರ್ಡ್-೨ ಬೀಜಗಳಲ್ಲಿ ಮಣ್ಣಿನ ಬ್ಯಾಕ್ಟಿರಿಯಾ ಬ್ಯಾಸಿಲ್ಲಸ್ ತುರಿನ್ಜಿನ್ಸಿಸ್ನಿಂದ ತೆಗೆಯಲಾದ ಜೀನ್ಗಳಿವೆ (ಸಿಆರ್ವೈ೧ಎಸಿ ಮತ್ತು ಸಿಆರ್ವೈ೨ಎಬಿ). ಆದ್ದರಿಂದಲೇ ಇದಕ್ಕೆ “ಬಿಟಿ” ಎಂಬ ಹೆಸರು. ಆ ಜೀನ್ಗಳು ಹತ್ತಿ ಗಿಡಗಳನ್ನು ಈ ಮೂರು ಪೀಡೆಕೀಟಗಳಿಂದ ರಕ್ಷಿಸುತ್ತವೆ ಎನ್ನಲಾಗಿದೆ: ಅಮೆರಿಕನ್ ಕಾಯಿಕೊರಕ, ಗುಲಾಲಿ ಕಾಯಿಕೊರಕ ಮತ್ತು ಚುಕ್ಕಿ ಕಾಯಿಕೊರಕ. ಮೊದಲನೇ ತಲೆಮಾರಿನ ಈ ಹೈಬ್ರಿಡ್ ಹತ್ತಿಬೀಜಗಳಲ್ಲಿ (ಇವುಗಳಿಗೆ ಮೊನ್ಸಾಂಟೋ ಇಟ್ಟ ಹೆಸರು ಬೊಲ್ಗಾರ್ಡ್) ಸಿಆರ್ವೈ೧ಎಸಿ ಜೀನ್ ಮಾತ್ರ ಇತ್ತು.

ಮಹಿಕೋ – ಮೊನ್ಸಾಂಟೋ ಬಯೋಟೆಕ್ ಲಿಮಿಟೆಡ್ (ಎಂಎಂಬಿಎಲ್) ಮೂಲಕ ಮೊನ್ಸಾಂಟೋ ಕಂಪೆನಿ ಬೊಲ್ಗಾರ್ಡ್-೨ ತಂತ್ರಜ್ನಾನಕ್ಕೆ ಪಡೆದಿದ್ದ ಪೇಟೆಂಟಿಗೆ ಭಾರತದಲ್ಲಿ ಕಾನೂನಿನ ರಕ್ಷಣೆ ಇಲ್ಲವೆಂದು ಕೋರ್ಟ್ ಆದೇಶಿಸಿದೆ. ಹಾಗಾಗಿ, ಈ ತಂತ್ರಜ್ನಾನಕ್ಕೆ ರಾಯಧನ (ರಾಯಲ್ಟಿ) ಪಾವತಿಸಬೇಕಾಗಿದ್ದರೆ, ಅದನ್ನು ಕೇಂದ್ರ ಕೃಷಿ ಮಂತ್ರಾಲಯ ನಿರ್ಧರಿಸ ಬೇಕಾಗಿದೆ. ಅದೇನಿದ್ದರೂ, ಬಿಟಿ ಸಸ್ಯಗಳನ್ನು “ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಆಂಡ್ ಫಾರ್ಮರ್ಸ್ ರೈಟ್ಸ್ ಅಥಾರಿಟಿ” ಎಂಬ ಪ್ರಾಧಿಕಾರದಲ್ಲಿ ನೋಂದಾಯಿಸಲು ಮೂರು ತಿಂಗಳೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹತ್ತಿ ಬೆಳೆಗಾರರು ಸೋತುಸುಣ್ಣವಾದಾಗ ಬಂದಿದೆ ತೀರ್ಪು
ಈ ಹಗರಣದ ದುರಂತ ಏನೆಂದರೆ ಬೊಲ್ಗಾರ್ಡ್-೨ ಹತ್ತಿ ತಳಿ ಬೆಳೆದ ರೈತರು ಅದರಿಂದಾಗಿ ಸೋತು ಸುಣ್ಣವಾಗಿರುವಾಗ ಕೋರ್ಟ್ ಈ ತೀರ್ಪು ನೀಡಿದೆ. ದೇಶದ ಉದ್ದಗಲದಲ್ಲಿ ಹತ್ತಿ ಹೊಲಗಳಲ್ಲಿ ಗುಲಾಲಿ ಕಾಯಿಕೊರಕದ ಧಾಳಿ ಹೆಚ್ಚುತ್ತಿದೆ; ಆ ಕೀಟಕ್ಕೆ ನಿರೋಧಶಕ್ತಿ ಹೊಂದಿದೆ ಎಂದು ಮೊನ್ಸಾಂಟೋ ಘೋಷಿಸುವ ಬೊಲ್ಗಾರ್ಡ್-೨ ಹತ್ತಿ ತಳಿ ನೆಲ ಕಚ್ಚಿದೆ. ಭಾರತದಲ್ಲಿ ಹತ್ತಿ ಕೃಷಿ ೧೨.೨ ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದು, ಇದರ ಶೇಕಡಾ ೯೦ ಭಾಗದಲ್ಲಿ ಬಿಟಿ ಹತ್ತಿ ಹೈಬ್ರಿಡ್ ತಳಿಗಳನ್ನು –ಮುಖ್ಯವಾಗಿ ಬೊಲ್ಗಾರ್ಡ್-೨ ಹತ್ತಿ ತಳಿಯನ್ನು- ಬೆಳೆಯಲಾಗುತ್ತಿದೆ. ಇವುಗಳಿಗೆ ನೀಡಲಾಗಿರುವ ಪೇಟೆಂಟ್ ಅವಧಿ ೨೦೧೯ರಲ್ಲಿ ಮುಗಿಯಲಿದೆ (ಪೇಟೆಂಟಿಗೆ ಅರ್ಜಿ ಸಲ್ಲಿಸಿದ ನವಂಬರ್ ೧೯೯೯ರಿಂದ ೨೦ ವರುಷ ಅವಧಿ).
ಇಂತಹ ಪರಿಸ್ಥಿತಿಯಲ್ಲಿ, ಸಾರ್ವಜನಿಕ ರಂಗದ ಹತ್ತಿ ಸಂಶೋಧನಾ ಸಂಸ್ಥೆಯೂ, ಹತ್ತಿಯ ಭಯಂಕರ ಪೀಡೆಕೀಟಕ್ಕೆ ಬಿಟಿ ತಂತ್ರಜ್ನಾನ ಆಧಾರಿತ ಪರಿಹಾರವನ್ನೇ ಬೆಂಬತ್ತಿದೆ ಎಂಬುದು ಇನ್ನೂ ನಿರಾಶೆಯ ವಿಷಯ. ನಾಗಪುರದ ಕೇಂದ್ರೀಯ ಹತ್ತಿ ಸಂಶೋಧಾನಾ ಸಂಸ್ಥೆ (ಸಿಐಸಿಆರ್) ತನ್ನ ಬಿಟಿ ಹತ್ತಿ ತಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕೆಲವು ವರುಷಗಳ ಮುಂಚೆ ಪ್ರಕಟಿಸಿತ್ತು. ಆದರೆ, ಆ ಬಿಟಿ ಹತ್ತಿ ತಳಿ ಇನ್ನೂ ತಯಾರಾಗಿಲ್ಲ.

ಈ ರೀತಿಯಲ್ಲಿ ಹತ್ತಿ ಬೆಳೆಗಾರರು ತಂತ್ರಜ್ನಾನದ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅವರಿಗೆ ಮೊದಲ ಆಘಾತ ೨೦೦೨ರಲ್ಲಿ – ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರಕಾರವು ಕಾನೂನುಬಾಹಿರವಾಗಿ ಬೆಳೆದಿದ್ದ ಮೊನ್ಸಾಂಟೋ ಕಂಪೆನಿಯ ಬೊಲ್ಗಾರ್ಡ್ ಹತ್ತಿ ತಳಿಗೆ ಮಾನ್ಯತೆ ನೀಡಿದಾಗ. ಗಮನಿಸಿ: ಆ ಹತ್ತಿ ತಳಿ ಬೆಳೆಯುವಾಗ, ಪರವಾನಗಿ ಪಡೆಯಲು ಅಗತ್ಯವಾದ ಯಾವುದೇ ಪ್ರಕ್ರಿಯೆ ಅನುಸರಿಸಿರಲಿಲ್ಲ. ಗುಜರಾತಿನಲ್ಲಿ ಅದರ ಕಾನೂನುಬಾಹಿರ ಕೃಷಿ ಆರಂಭಿಸುವ ಮುನ್ನ, ವ್ಯಾಪಕ ಜಮೀನಿನಲ್ಲಿ ಆ ತಳಿಯ ಕ್ಷೇತ್ರ ಪ್ರಯೋಗಗಳು ನಡೆದಿರಲೇ ಇಲ್ಲ. ಅಲ್ಲಿನ ರಾಜ್ಯ ಸರಕಾರ, ಈ ಲೋಪವನ್ನು ಗಂಭೀರವಾಗಿ ಪರಿಗಣಿಸಲಿಲ್ಲ – ರೈತರು ಅತ್ಯಾಧುನಿಕ ತಂತ್ರಜ್ನಾನ ಬಳಸಲಿ ಎಂಬ ನೆವನದಿಂದ.

ಆಗಿನಿಂದಲೇ ಬೇರೆಬೇರೆ ರಾಜ್ಯಗಳು ಬಿಟಿ ಹತ್ತಿ ಬೀಜಗಳ ಮೇಲೆ ಮೊನ್ಸಾಂಟೋ ಕಂಪೆನಿ ವಸೂಲಿ ಮಾಡುವ ರಾಯಧನವನ್ನು ತಗ್ಗಿಸಲು ವಿವಿಧ ಕ್ರಮಗಳನ್ನು ಬಳಸಿವೆ. ಆರಂಭದಲ್ಲಿ, ಪ್ರತಿಯೊಂದು ಹತ್ತಿ ಬೀಜ ಪ್ಯಾಕೆಟಿನ ಮಾರಾಟ ಬೆಲೆಯ ಶೇ.೬೬ ರಾಯಧನ ವಸೂಲಿ ಮಾಡಲಾಗಿತ್ತು. ಕೊನೆಗೆ, ರಾಜಶೇಖರ ರೆಡ್ಡಿ ಮುಖ್ಯಮಂತ್ರಿ ಆಗಿದ್ದಾಗ, ಏಕಸ್ವಾಮ್ಯ ಮತ್ತು ಪ್ರತಿಬಂಧಕ ವಾಣಿಜ್ಯ ವ್ಯವಹಾರಗಳ ಕಾನೂನು ಪ್ರಯೋಗಿಸಿ, ಕೋರ್ಟ್ ಮೂಲಕ ಆಂಧ್ರಪ್ರದೇಶ ಸರಕಾರವು ಬಿಟಿ ಹತ್ತಿ ಬೀಜಗಳ ಬೆಲೆ ಇಳಿಸಿತ್ತು. ಇತರ ಕೆಲವು ರಾಜ್ಯಗಳೂ ಅದೇ ರೀತಿಯಲ್ಲಿ ದೈತ್ಯ ಕಂಪೆನಿ ಮೊನ್ಸಾಂಟೋದ ಸುಲಿಗೆಗೆ ತಡೆಯೊಡ್ಡಿದವು.

ಈಗಿನ ಕೋರ್ಟ್ ಸಮರಕ್ಕೆ ಕಾರಣ ನುಜಿವೀಡು ಸೀಡ್ಸ್ ಕಂಪೆನಿ ಮತ್ತು ಮೊನ್ಸಾಂಟೋ ಕಂಪೆನಿಗಳ ನಡುವಣ ವಿವಾದ. ಎನ್.ಎಸ್.ಎಲ್. ಭಾರತದ ಅತಿ ದೊಡ್ಡ ಹೈಬ್ರಿಡ್ ಬೀಜ ಕಂಪೆನಿ. ಅದರ ಚೇರ್ಮನ್ ಮತ್ತು ಮೆನೇಜಿಂಗ್ ಡೈರೆಕ್ಟರ್ ಪ್ರಭಾಕರ ರಾವ್. ಅವರು ೨೦೧೫ರಲ್ಲಿ, ಎಂಎಂಬಿಎಲ್ (ಮೊನ್ಸಾಂಟೋದ ಸಹಭಾಗಿ ಕಂಪೆನಿ) ರಾಯಧನದಲ್ಲಿ ಶೇ.೧೦ ಕಡಿಮೆ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು. ಈ ಬೇಡಿಕೆಗೆ ಇತರ ಬೀಜ ಕಂಪೆನಿಗಳೂ ದನಿಗೂಡಿಸಿದವು. ಯಾಕೆಂದರೆ, ಕೆಲವು ರಾಜ್ಯಗಳು ಬಿಟಿ ಹತ್ತಿ ಬೀಜಗಳ ಮಾರಾಟ ಬೆಲೆ ನಿಗದಿ ಪಡಿಸಿದ್ದರಿಂದಾಗಿ, ಮೊನ್ಸಾಂಟೋ ಕೇಳಿದಷ್ಟು ರಾಯಧನ ಪಾವತಿಸಲು ಸಾಧ್ಯವೇ ಇರಲಿಲ್ಲ.

ಈ ವಿವಾದ ಬಿಗಡಾಯಿಸಿತು. ಕೊನೆಗೆ, ಎನ್.ಎಸ್.ಎಲ್. ಜೊತೆಗಿನ ಒಪ್ಪಂದವನ್ನೇ ಎಂಎಂಬಿಎಲ್ ರದ್ದುಪಡಿಸಿತು; ಎನ್.ಎಸ್.ಎಲ್. ತನಗೆ ರೂ.೧೪೦ ಕೋಟಿ ಬಾಕಿ ಮಾಡಿದೆ ಎಂಬುದು ಎಂಎಂಬಿಎಲ್ ವಾದ. ಅನಂತರ, ನ್ಯಾಷನಲ್ ಸೀಡ್ಸ್ ಎಸೋಸಿಯೇಷನ್ ಆಫ್ ಇಂಡಿಯಾ (ಬೀಜ ಉತ್ಪಾದಕ ಕಂಪೆನಿಗಳ ರಾಷ್ಟ್ರೀಯ ಸಂಘಟನೆ) ಕೇಂದ್ರ ಸರಕಾರದ ಹಂತದಲ್ಲಿ ಎಂಎಂಬಿಎಲ್ ಮೇಲೆ ಒತ್ತಡ ಹೇರಿತು. ಅಂತಿಮವಾಗಿ, ಕೇಂದ್ರ ಕೃಷಿ ಮಂತ್ರಾಲಯ ಬೀಜದ ಮಾರಾಟ ಬೆಲೆಗಳ ಮೇಲೆ ಕಠಿಣ ನಿಯಂತ್ರಣ ಹೇರಿತು; ಇದರಿಂದಾಗಿ ಮೊನ್ಸಾಂಟೋ ಕಂಪೆನಿಯ ಲಾಭ ಶೇ.೧೬ ಕುಸಿಯಿತು.
ಆದರೆ, ಇನ್ನು ಕೆಲವು ತಿಂಗಳ ನಂತರ ಮೊನ್ಸಾಂಟೋ ಎಂಬ ಕಂಪೆನಿ ಇರುತ್ತದೆಯೇ? ಎಂಬುದೇ ಈಗಿನ ಮುಖ್ಯ ಪ್ರಶ್ನೆ. ಯಾಕೆಂದರೆ, ಇನ್ನೊಂದು ದೈತ್ಯ ಕಂಪೆನಿ ಜರ್ಮನಿಯ ಬೇಯರ್ ೬೬ ಬಿಲಿಯನ್ ಡಾಲರುಗಳಿಗೆ ಮೊನ್ಸಾಂಟೋ ಕಂಪೆನಿಯನ್ನು ಖರೀದಿಸಿದೆ. ಈ ಖರೀದಿಯನ್ನು ಯುರೋಪಿಯನ್ ಯೂನಿಯನ್ ಮತ್ತು ಯುಎಸ್ಎ ದೇಶ ಮಾನ್ಯ ಮಾಡಿವೆ. ಭಾರತದ ಕಾಂಪಿಟೀಷನ್ ಕಮಿಷನ್ ಈ ಖರೀದಿಯ ಪರಿಣಾಮಗಳನ್ನು ಪರಿಶೀಲಿಸುತ್ತಿದೆ.

ಇವೆಲ್ಲ ಭಾರತದ ಹತ್ತಿ ಬೆಳೆಗಾರರಿಗೆ ಆಸಕ್ತಿ ಹುಟ್ಟಿಸದ ಬೆಳವಣಿಗೆಗಳು. ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ ಮತ್ತು ಗುಜರಾತಿನ ಹತ್ತಿ ಬೆಳೆಗಾರರು ಹತ್ತಿ ಕಾಯಿಕೊರಕದ ನಿಯಂತ್ರಣದ “ಯುದ್ಧ”ದಲ್ಲಿ ಮುಳುಗಿದ್ದಾರೆ. ಹತ್ತಿ ಬೆಳೆಗಾರರ ಹಿತರಕ್ಷಣೆಯ ಜವಾಬ್ದಾರಿಯಿಂದ ಕೇಂದ್ರ ಸರಕಾರ ತಪ್ಪಿಸಿಕೊಳ್ಳುವಂತಿಲ್ಲ; ಯಾಕೆಂದರೆ, ನವಂಬರ್ ೨೦೧೫ರಲ್ಲಿ ಕಾಯಿಕೊರಕ ಹುಳಗಳು ವ್ಯಾಪಕ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಧ್ವಂಸ ಮಾಡಿದ್ದು ಕೇಂದ್ರ ಸರಕಾರಕ್ಕೆ ತಿಳಿದಿದೆ. ಕಾಯಿಕೊರಕ ಹುಳಗಳು ಬೊಲ್ಗಾರ್ಡ್-೨ ಹತ್ತಿ ತಳಿಗೆ ನಿರೋಧ ಶಕ್ತಿ ಬೆಳೆಸಿಕೊಂಡ ಕಾರಣದಿಂದಾಗಿ ಈ ತಳಿ ನಿಷ್ಪ್ರಯೋಜಕ ಎಂಬುದು ಆಗಲೇ ಸಾಬೀತಾಗಿತ್ತು. ಆ ಪೀಡೆಕೀಟದ ನಿಯಂತ್ರಣಕ್ಕೆ ಬೇರೊಂದು ಕಳೆನಾಶಕ ಸಹನೀಯತೆಯ (ಹರ್ಬಿಸೈಡ್ ಟಾಲರೆಂಟ್) ತಳಿಯಿದೆ ಎಂಬುದು ಮೊನ್ಸಾಂಟೋ ಕಂಪೆನಿಯ ಹೇಳಿಕೆ; ಆದರೆ, ನಮ್ಮ ದೇಶದಲ್ಲಿ ಆ ತಳಿಯ ಕೃಷಿಗೆ ಪರವಾನಗಿ ನೀಡಲಾಗಿಲ್ಲ. ಹಾಗಿದ್ದರೂ, ಆ ತಳಿಯ ಕಾನೂನುಬಾಹಿರ ಕೃಷಿ ಹಲವು ರಾಜ್ಯಗಳಲ್ಲಿ ಶುರುವಾಗಿದೆ!
 
ಹತ್ತಿ ಬೆಳೆಯ ಕಾಯಿಕೊರಕ ನಿಯಂತ್ರಣದಲ್ಲಿ ಬಿಟಿ ತಂತ್ರಜ್ನಾನ ಸೋತಿದೆ ಎಂಬುದು ಮತ್ತೆಮತ್ತೆ ಸಾಬೀತಾಗಿದೆ. ಆದರೂ, ಬಿಟಿ ತಂತ್ರಜ್ನಾನ ಆಧಾರಿತ ಮತ್ತೊಂದು ಹತ್ತಿ ತಳಿ ಕಾಯಿಕೊರಕ ನಿರೋಧ ಗುಣ ಹೊಂದಿದೆ ಎಂಬ ಕಂಪೆನಿಗಳ ಲೊಳಲೊಟ್ಟೆ ನಂಬಿ, ಹತ್ತಿ ಬೆಳೆಗಾರರು ಆ ತಳಿ ಬೆಳೆಯುತ್ತಿದ್ದಾರಲ್ಲ! ನಾವು ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ, ಪ್ರಕೃತಿ ನಮಗೆ ಪಾಠ ಕಲಿಸುತ್ತದೆ, ಅಲ್ಲವೇ?

(ಅಡಿಕೆ ಪತ್ರಿಕೆ, ಆಗಸ್ಟ್ ೨೦೧೮)

ಫೋಟೋ: ಹತ್ತಿ ಹೂ, ಕೃಪೆ: ವಿಕಿಮಿಡಿಯಾ