ಬಳಕೆದಾರರ ಸಂಗಾತಿ

ಪುಸ್ತಕ: ಬಳಕೆದಾರರ ಸಂಗಾತಿ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಬಳಕೆದಾರರ ವೇದಿಕೆ, ಮಂಗಳೂರು
ಪ್ರಕಟಣೆಯ ವರುಷ: ೨೦೦೨,     ಪುಟ: ೧೧೨,      ಬೆಲೆ: ರೂ.೫೦
ಮಂಗಳೂರಿನ “ಬಳಕೆದಾರರ ವೇದಿಕೆ” (ರಿ.) ಸ್ಥಾಪಕ ಸಂಚಾಲಕರಾದ ಅಡ್ಡೂರು ಕೃಷ್ಣ ರಾವ್ ಬಳಕೆದಾರರ ಜಾಗೃತಿಗಾಗಿ ಬರೆದ ಮಾಹಿತಿ ಬರಹಗಳ ಸಂಕಲನ ಈ ಪುಸ್ತಕ. ಇದು ಕನ್ನಡ ದಿನಪತ್ರಿಕೆ “ಉದಯವಾಣಿ”ಯಲ್ಲಿ ಪ್ರಕಟವಾದ ಅವರ “ಬಳಕೆದಾರ ಸಮಸ್ಯೆ – ಸಮಾಧಾನ” ಅಂಕಣ ಬರಹಗಳ ಎರಡನೆಯ ಸಂಕಲನ.

ಇದಲ್ಲಿರುವ ಕೆಲವು ಲೇಖನಗಳು:
-    ಔಷಧಿ ಡ್ರಾಪ್ಸ್: ಕಣ್ಣು ಜೋಪಾನ
-    ಇಂಜೆಕ್ಷನ್ ನೀರಿನಲ್ಲಿ ಸೋಂಕು
-    ಶೀತಕ್ಕೆ ಔಷಧಿ ಇದೆಯೇ?
-    ಮಲೇರಿಯಾ ಮಾತ್ರೆ ಪರೀಕ್ಷೆ
-    ಸದ್ದು: ಕಿವಿಗೆ ಗುದ್ದು
-    ಚಿಕಿತ್ಸಾ ಜಾಹೀರಾತುಗಳ ಮೋಸ
-    ಥ್ರೀ-ಪಿನ್-ಪ್ಲಗ್ಗಿನ ಶಾಕ್
-    ಫ್ರಿಜ್: ಒಳಹೊರಗು
-    ಸೀಲಿಂಗ್ ಫ್ಯಾನಿನ ಆಯ್ಕೆ
-    ಬೈಕ್ ಅಥವಾ ಸ್ಕೂಟರ್: ಆಯ್ಕೆ ನಿಮ್ಮದು
-    ಕ್ರೆಡಿಟ್ ಕಾರ್ಡಿನ ಇತಿಮಿತಿ
-    ಮನೆ ವಿಮೆ: ಏನು? ಹೇಗೆ?

ಮಡಿಕೇರಿಯ ಹೆಸರುವಾಸಿ ವಕೀಲರಾದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ಮುನ್ನುಡಿಯಲ್ಲಿ ಪುಸ್ತಕದ ಬಗ್ಗೆ ಬರೆದ ಮಾತುಗಳ ಆಯ್ದ ಭಾಗ: “ವರ್ತಮಾನದ ಮನುಷ್ಯ ನಿಂತಲ್ಲೇ ನಿಲ್ಲಬೇಕಾದರೂ ಓಡುತ್ತಲೇ ಇರಬೇಕಾದ ವಿರೋಧಾಭಾಸದ ಸ್ಥಿತಿ-ಗತಿಯಲ್ಲಿದ್ದಾನೆ.


ನಮ್ಮ ಪರಿಕರಗಳು ಬದಲಾಗಿವೆ. ಸೌದೆಯ ಬದಲಿಗೆ ಗ್ಯಾಸ್, ಪತ್ರದ ಬದಲಿಗೆ ಎಸ್ಸಿಮ್ಮೆಸ್, ಝಣ ಝಣ ಎಣಿಸುವ ಹಣದ ಬದಲಿಗೆ ಕ್ರೆಡಿಟ್ / ಡೆಬಿಟ್ ಕಾರ್ಡ್ – ಹೀಗೆ ಸೌಲಭ್ಯಗಳೆಲ್ಲ ಹೊಸ ರೂಪ ತಳೆದಿವೆ. ಐಚ್ಛಿಕವೆಂದು ನಂಬಲಾದ ಸಂಗತಿಗಳು ಅನಿವಾರ್ಯವಾಗುತ್ತಿವೆ. ಒಲ್ಲದ ಸಂಸಾರವೆಂದು ತಿಳಿದುಕೊಂಡರೂ ಇರುವಷ್ಟು ದಿನ ಬದುಕಬೇಕಲ್ಲ! ಈ ನಿಭಾಯಿಸುವಿಕೆಗೆ ಅಪೂರ್ವವಾದ ಜಾಗ್ರತೆ, ಜಾಗೃತಿ ಬೇಕು. ಎಡವಿದರೆ ಎಲ್ಲ ಕಡೆ ಅಪಾಯ.

ನಿತ್ಯ ನೈಮಿತ್ತಿಕ ಜೀವನದ ವ್ಯಾವಹಾರಿಕ ಮುಖಗಳಲ್ಲಿ ಹೇಗೆ ವಿವೇಚನೆಯನ್ನು ಬಳಸಬೇಕೆಂಬುದನ್ನು ನಿದರ್ಶನಗಳ ಮೂಲಕ ತಿಳಿಸುವುದು ಸುಲಭಸಾಧ್ಯವಲ್ಲ. ನಾವು ಬಳಸುವ ಗ್ಯಾಸ್, ಫ್ರಿಜ್, ನಮ್ಮ ಕಿವಿ ತಮ್ಮಟೆಗಳನ್ನು ಘಾಸಿಗೊಳಿಸಬಲ್ಲ ಶಬ್ದಮಾಲಿನ್ಯ, ಸೌಂದರ್ಯವರ್ಧಕ ಸಾಧನಗಳು, ತೀರಾ ಸರಳವೆಂದು ತಿಳಿಯುವ ಬಲ್ಬು, ಪ್ಲಗ್, ಫ್ಯಾನ್ ಇವೇ ಮುಂತಾದ ವಿಚಾರಗಳ ಕುರಿತು ಸುಲಲಿತವಾದ ಪರಿಣಾಮಕಾರೀ ವಿಶ್ಲೇಷಣೆಯನ್ನು ಗೆಳೆಯ ಅಡ್ಡೂರು ಕೃಷ್ಣ ರಾವ್ ಮಾಧ್ಯಮಗಳಲ್ಲಿ ಮಾಡುತ್ತಲೇ ಬಂದಿದ್ದಾರೆ. ಪತ್ರಿಕೋದ್ಯಮ, ಕೃಷಿ, ಬಳಕೆದಾರರ ಚಳುವಳಿ ಮುಂತಾದ ಹತ್ತು ಹಲವು ಆಸಕ್ತಿಗಳ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣ ರಾವ್ ಶ್ರೀಸಾಮಾನ್ಯನನ್ನು ಬಡಿದೆಚ್ಚರಿಸುತ್ತಲೇ ಬಂದಿದ್ದಾರೆ. ಯಾವುದೇ ವಿಚಾರವನ್ನೂ ಅವರು ಪ್ರೀತಿಯಿಂದ, ಆತ್ಮೀಯತೆಯಿಂದ ಹೇಳಬಲ್ಲರು.

ಕೃಷ್ಣ ರಾವ್ ಅವರ ಈ ಕೃತಿ ಅವರ ಸತತ ಸಾಧನೆಯ ಒಂದು ಮೆಟ್ಟಲನ್ನು ಶಕ್ತವಾಗಿ ತೋರಿಸುತ್ತದೆ. ನಿತ್ಯ ಕೈಪಿಡಿಯಂತೆಯೂ ಉಪಯೋಗವಾಗಬಲ್ಲ ವೈಶಿಷ್ಟವೂ ಈ ಕೃತಿಗಿದೆ.”

ಈ ಪುಸ್ತಕದ ಉದ್ದೇಶ “ಕತ್ತಲ ಹಾದಿಯ ಬಳಕೆದಾರನಿಗೆ ಮನೆ ಬೆಳಕು ತೋರುವುದು” ಎನ್ನುತ್ತಾರೆ ಲೇಖಕ ಅಡ್ಡೂರು ಕೃಷ್ಣ ರಾವ್ ಮುನ್ನುಡಿಯಲ್ಲಿ: “ ನಮಗೆ ವಸ್ತುಗಳೂ ಸೇವೆಗಳೂ ಬೇಕೇ ಬೇಕು. ಇವನ್ನು ಹಣ ತೆತ್ತು ಪಡೆಯುವಾಗೆಲ್ಲ, “ಬಳಕೆದಾರರ ರಕ್ಷಣಾ ಕಾಯಿದೆ” ಅನುಸಾರ ನಾವು ಬಳಕೆದಾರರು. ಈ ಸನ್ನಿವೇಶದಲ್ಲಿ ಮೂಡುವ ಪ್ರಶ್ನೆಗಳು:
-    ಬಳಕೆದಾರರಾಗಿ ನಮ್ಮ ಹಕ್ಕುಗಳೇನು? ಜವಾಬ್ದಾರಿಗಳೇನು?
-    ನಮ್ಮ ಹಕ್ಕುಗಳಿಗೆ ಧಕ್ಕೆಯಾದಾಗ ಹಕ್ಕುಸಾಧನೆ ಮಾಡುವ ವಿಧಾನಗಳೇನು?
-    ಕಾನೂನಿನ ಚೌಕಟ್ಟಿನೊಳಗೆ ಶಿಸ್ತುಬದ್ಧವಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಹೇಗೆ?
-    ಪೂರೈಕೆದಾರರು ಯಾರು? ಅವರ ಕರ್ತವ್ಯಗಳೇನು?
-    ಅವರು ತಮ್ಮ ಕರ್ತವ್ಯ ಪಾಲಿಸದಿದ್ದಾಗ, ಅದನ್ನು ಅವರಿಗೆ ಮನಗಾಣಿಸುವುದು ಹೇಗೆ?
-    ಅವರಿಂದಾಗಿ ಆರ್ಥಿಕ ನಷ್ಟ ಹಾಗೂ ಮಾನಸಿಕ ಹಿಂಸೆ ಆದಾಗ ಪರಿಹಾರ ಪಡೆಯುವುದು ಹೇಗೆ?

ಬಹುಪಾಲು ಬಳಕೆದಾರರಿಗೆ ಇವೆಲ್ಲ ಗೊತ್ತಿಲ್ಲ. ೨೫ ವರುಷಗಳ ಮುಂಚೆ ನನಗೂ ಗೊತ್ತಿರಲಿಲ್ಲ. ಆಗೊಮ್ಮೆ ರಾಷ್ಟ್ರಮಟ್ಟದಲ್ಲಿ ವಿಶ್ವಾಸಾರ್ಹತೆ ಗಳಿಸಿರುವ ಉಡುಪಿ ಜಿಲ್ಲೆಯ ಬಸ್ರೂರಿನ “ಬಳಕೆದಾರರ ವೇದಿಕೆ” ಜರಗಿಸಿದ ತರಬೇತಿ ಶಿಬಿರದಲ್ಲಿ ಭಾಗವಹಿಸಿದೆ. ಅದುವೇ ನಾನು ಅಂದಿನಿಂದ ಇಂದಿನ ವರೆಗೆ ಬಳಕೆದಾರರ ಆಂದೋಲನದಲ್ಲಿ ತೊಡಗಿಸಿಕೊಳ್ಳಲು ಮತ್ತು ಮಂಗಳೂರಿನಲ್ಲಿ “ಬಳಕೆದಾರರ ವೇದಿಕೆ” ಸ್ಥಾಪಿಸಿ ಮುನ್ನಡೆಸಲು ಕಾರಣವಾಯಿತು.
ಅನಂತರ ನೂರಾರು ಬಳಕೆದಾರರ ಶಿಬಿರಗಳಲ್ಲಿ ತರಬೇತಿದಾರನಾಗಿ ಭಾಗವಹಿಸಿದೆ. ಅಲ್ಲಿ ನಾನು ಕಂಡುಕೊಂಡ ವಿಷಯ: ಶೇಕಡಾ ೯೦ ಬಳಕೆದಾರರಿಗೆ ನಿತ್ಯಬಳಕೆಯ ವಸ್ತು ಹಾಗೂ ಸೇವೆಗಳ ಬಗ್ಗೆ ಮಾಹಿತಿ ಇಲ್ಲ. ಅದನ್ನು ತಿಳಿದು ಕೊಳ್ಳುವ ಇಚ್ಛೆ ಅವರಿಗಿದ್ದರೂ ವಿಶ್ವಾಸಾರ್ಹ ಮಾಹಿತಿ ಸಿಗುತ್ತಿಲ್ಲ. ಅದಕ್ಕಾಗಿ ನಾನು ಈ ವಿಷಯದಲ್ಲಿ ಅಂತಹ ಮಾಹಿತಿ ಒದಗಿಸುವ ಲೇಖನಗಳನ್ನು ಬರೆಯತೊಡಗಿದೆ.

ಇಂತಹ ಲೇಖನಗಳಿರುವ ೨೦೦೨ರಲ್ಲಿ ಪ್ರಕಟವಾದ ನನ್ನ ಮೊದಲನೆಯ ಪುಸ್ತಕ “ಜನಜಾಗೃತಿಯ ಸಾಧನ: ಮಾಹಿತಿ ಮಂಥನ”ಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಂತರ ಬರೆದ ಮಾಹಿತಿ ಬರಹಗಳನ್ನು ಇದೀಗ ಪುಸ್ತಕರೂಪದಲ್ಲಿ ಮಂಗಳೂರಿನ “ಬಳಕೆದಾರರ ವೇದಿಕೆ” ಪ್ರಕಟಿಸುತ್ತಿದೆ.

ಇಂದಿನ ಮಾಹಿತಿ ಸ್ಫೋಟದ ಯುಗದಲ್ಲಿಯೂ ಬಳಕೆದಾರರದು ಕತ್ತಲ ಹಾದಿಯ ಪಯಣ. ಅಂತಹ ಪಯಣಿಗರಿಗೆ ಈ ಲೇಖನಗಳು ಮನೆ ಬೆಳಕಿನಂತೆ ಆಗಬೇಕೆಂಬುದು ನನ್ನ ಆಶಯ.”

“ಈ ಪುಸ್ತಕದ ಯಾವುದೇ ಲೇಖನದ ಹಕ್ಕು ಕಾದಿರಿಸಲಾಗಿಲ್ಲ” ಎಂಬುದು ಇದರ ಮತ್ತೊಂದು ವಿಶೇಷ. “.. ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಏಕಮಾತ್ರ ಉದ್ದೇಶದಿಂದ ಬರೆದ ಈ ಲೇಖನಗಳು ಸಾಕಷ್ಟು ನಾಗರಿಕರಿಗೆ ತಲುಪಿದಲ್ಲಿ ಅವುಗಳ ಉದ್ದೇಶ ಸಾರ್ಥಕ. ಆದ್ದರಿಂದ ಈ ಲೇಖನಗಳನ್ನು ಯಾರೂ ಮರುಪ್ರಕಟಿಸಬಹುದು” ಎಂದು ಪುಟ ೮ರಲ್ಲಿ ಘೋಷಿಸಿದ್ದಾರೆ ಲೇಖಕ ಅಡ್ಡೂರು ಕೃಷ್ಣ ರಾವ್.