ಬದುಕಿನ ಗುರಿಸಾಧನೆಯ ಚಿಮ್ಮುಹಲಗೆ: ವರ್ತನೆ ಬದಲಾವಣೆ

ಬದುಕಿನ ಗುರಿಸಾಧನೆಗಾಗಿ ನಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಆದರೆ, ಹುಟ್ಟುಗುಣ ಘಟ್ಟ ಹತ್ತಿದರೂ ಬಿಟ್ಟು ಹೋಗದು ಎನ್ನುತ್ತಾರಲ್ಲ….

ಮಹಾಭಾರತ ಯುದ್ಧದ ಮುಂಚೆ, ಭಗವಾನ್ ಶ್ರೀಕೃಷ್ಣ ಸಂಧಾನಕ್ಕಾಗಿ ದುರ್ಯೋಧನನ ಬಳಿಗೆ ಬರುತ್ತಾನೆ. ರಾಜ್ಯಕ್ಕಾಗಿ ಪಾಂಡವರ ಪರವಾಗಿ ವಿನಂತಿಸುತ್ತಾನೆ. “ದುರ್ಯೊಧನಾ, ಅವರು ಪರಕೀಯರಲ್ಲ, ನಿನ್ನ ದಾಯಾದಿಗಳು. ಅವರೀಗ ಕೇಳುತ್ತಿರುವುದು ಒಂದು ತುಂಡು ನೆಲವನ್ನು; ಕೊಟ್ಟು ಬಿಡು” ಎನ್ನುತ್ತಾನೆ. ಅದಕ್ಕೆ ದುರ್ಯೋಧನನ ಪ್ರತಿಕ್ರಿಯೆ: “ಇಲ್ಲ, ಸಾಧ್ಯವೇ ಇಲ್ಲ. ಪಾಂಡವರಿಗೆ ಒಂದಿಂಚು ನೆಲವನ್ನೂ ಕೊಡುವುದಿಲ್ಲ.” ಆಗ ಭಗವಾನ್ ಶ್ರೀಕೃಷ್ಣ ಕೊನೆಯ ಮಾತನ್ನು ಹೇಳುತ್ತಾನೆ, “ದುರ್ಯೋಧನಾ, ಸರಿಯಾಗಿ ಯೋಚನೆ ಮಾಡು. ನೀನು ಮಾಡುತ್ತಿರುವುದು ತಪ್ಪು.” ಈ ಮಾತಿಗೆ ತಕ್ಷಣವೇ ದುರ್ಯೋಧನನ ಉತ್ತರ, “ಶ್ರೀಕೃಷ್ಣಾ, ಅದು ತಪ್ಪು ಅನ್ನೋದು ನನಗೂ ಗೊತ್ತಿದೆ. ಆದರೆ ಸರಿಯಾದ್ದನ್ನು ಮಾಡಲು ಮನಸ್ಸು ಬರುತ್ತಿಲ್ಲ.”

ನಮ್ಮ ಬದುಕಿನಲ್ಲಿ ಅನೇಕ ಬಾರಿ ನಾವೂ ಹೀಗೆಯೇ ವಾದಿಸಿದ್ದೇವೆ, ಅಲ್ಲವೇ? ನಮ್ಮ ಬದುಕಿನ ಗುರಿ ಸಾಧನೆಗೆ ಅಡ್ಡವಾಗಿರುವ ದುರ್ಗುಣಗಳನ್ನು ಬಿಡದಿರಲು ಮನಸ್ಸೇ ಕಾರಣ ಎನ್ನುತ್ತೇವೆ. ಸ್ವತಃ ಜವಾಬ್ದಾರಿ ವಹಿಸುವ ಬದಲಾಗಿ ನಮ್ಮ ಮನಸ್ಸಿನ ಮೇಲೆ ಜವಾಬ್ದಾರಿ ಹೊರಿಸುತ್ತೇವೆ. ಇದನ್ನು ಪರೀಕ್ಷಿಸಲಿಕ್ಕಾಗಿ, ಹಲವರು ಒಟ್ಟು ಸೇರಿದಾಗ ಒಂದು ಪ್ರಶ್ನೆ ಕೇಳಿ: “ನಿಮ್ಮಲ್ಲಿ ಎಷ್ಟು ಜನರಿಗೆ ಕೋಪ ಬರುತ್ತದೆ? ಕೈಯೆತ್ತಿ.” ಅಲ್ಲಿರುವ ಶೇಕಡಾ ೮೦ ಜನರು ಕೈಯೆತ್ತುತ್ತಾರೆ!

ಈ ಸನ್ನಿವೇಶವನ್ನು ವಿಶ್ಲೇಷಣೆ ಮಾಡೋಣ. ಅಲ್ಲಿ ಎರಡು ವರ್ಗದ ವ್ಯಕ್ತಿಗಳಿದ್ದಾರೆ: ಕೋಪ ಬರುವುದಿಲ್ಲ ಎನ್ನುವವರು ಮತ್ತು ಕೋಪ ಬರುತ್ತದೆ ಎನ್ನುವವರು. ಎರಡೂ ವರ್ಗಗಳ ವ್ಯಕ್ತಿಗಳು ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ.
ಯಾಕೆಂದರೆ, ಮನುಷ್ಯನಾದವನಿಗೆ ಕೋಪ ಸಹಜ; ಅದೇನೂ ಅವಮಾನದ ವಿಷಯವಲ್ಲ. ಆದ್ದರಿಂದ, ಕೋಪ ಬರುವುದಿಲ್ಲ ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಲಿ.

ಇನ್ನು ಎರಡನೆಯ ವರ್ಗದ ವ್ಯಕ್ತಿಗಳು: ಕೋಪ ಬರುತ್ತದೆ ಎನ್ನುವವರು. ಇವರು ಜಾಣರು. ಇವರು ಹೇಗೆ ಯೋಚಿಸುತ್ತಾರೆ ಗೊತ್ತೇ? “ನಾನು ಬಹಳ ಒಳ್ಳೆಯ ಮನುಷ್ಯ. ಆದರೆ ಈ ಕೋಪ ಅನ್ನೋದು ಕೆಲವೊಮ್ಮೆ ಬರುತ್ತದೆ; ಮತ್ತೆ ಹೋಗುತ್ತದೆ” ಎಂದು ತಮ್ಮ ವರ್ತನೆಯ ತಪ್ಪನ್ನೆಲ್ಲ ಕೋಪದ ಮೇಲೆ ಹೊರಿಸುತ್ತಾರೆ. ಅವರು ಎಲ್ಲಿಯ ವರೆಗೆ ಈ ರೀತಿ ಯೋಚಿಸುತ್ತಾ ಇರುತ್ತಾರೋ, ಅಲ್ಲಿಯ ವರೆಗೆ ಅವರಿಗೆ ತಮ್ಮ ವರ್ತನೆಯನ್ನು ಬದಲಾಯಿಸಲು ಸಾಧ್ಯವಾಗೋದಿಲ್ಲ. ಯಾಕೆಂದರೆ, ಕೋಪ ಅನ್ನೋದು ಒಳಗೆ ಬಂದು, ಹೊರಗೆ ಹೋಗುವ ವಸ್ತುವಲ್ಲ. ಅದು ನಮ್ಮೊಳಗೆ ಹುಟ್ಟುವ ಒಂದು ಭಾವನೆ. “ನಮ್ಮ ಮನೆಯ ಮುಂದಿನ ಕೋಣೆಯೊಳಗೆ ಒಂದು ನಾಯಿ ಮರಿ ಬಂತು. ಓಡಿಸಿದಾಗ ಅದು ಹೊರಗೆ ಹೋಯಿತು” ಎನ್ನುವುದು ಸರಿ. ಆದರೆ, ಕೋಪದ ಬಗ್ಗೆಯೂ ಹಾಗೆ ಹೇಳಬಾರದು; ಯಾಕೆಂದರೆ ಅದು ನಾಯಿ ಮರಿಯಲ್ಲ. ಆದ್ದರಿಂದ, “ನಾನು ಕೋಪ ಮಾಡಿಕೊಳ್ಳುತ್ತೇನೆ” ಎಂಬುದು ಸರಿಯಾದ ಹೇಳಿಕೆ. ಹೀಗೆಂದಾಗ, ನಮ್ಮ ವರ್ತನೆಗೆ ನಾವೇ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಆಗ ಅದನ್ನು ಬದಲಾಯಿಸಿಕೊಳ್ಳುವ ದಾರಿ ಸ್ಪಷ್ಟವಾಗುತ್ತದೆ.

ಹಾಗಾದರೆ, ಆ ವರ್ತನೆಯ ಬದಲಾವಣೆಗೆ ಏನು ಮಾಡಬೇಕು? ನಾನು ಕೋಪ ಮಾಡಿಕೊಳ್ಳಬಾರದು, ಅಷ್ಟೇ. ಅಂದರೆ, ಕೋಪ ಮಾಡಿಕೊಂಡಾಗ, ಅಗ್ನಿಪರ್ವತದಂತೆ ಉಕ್ಕುವ ಆ ಭಾವನೆ ನನ್ನ ಅರಿವಿಗೆ ಬಂದೊಡನೆ, “ಒಂದರಿಂದ ನೂರರ ವರೆಗೆ” ಎಣಿಕೆ ಮಾಡಿ. ಅಥವಾ 108 ಸಲ ಹಿತವೆನಿಸುವ ಮಂತ್ರ ಜಪಿಸಿ. ಅಥವಾ ಐದು ನಿಮಿಷ ಪ್ರಾರ್ಥನೆ ಮಾಡಿ. ಅಥವಾ ನಿಮಗೆ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ಹತ್ತು ಸಲ ನೆನಪು ಮಾಡಿಕೊಳ್ಳಿ. ಅಥವಾ ಒಂದು ಲೋಟ ನೀರು ನಿಧಾನವಾಗಿ ಕುಡಿಯಿರಿ. ಅಥವಾ ಒಂದು ಕಾಳು ಏಲಕ್ಕಿ ಬಾಯಿಗೆ ಹಾಕಿಕೊಂಡು ನಿಧಾನವಾಗಿ ಜಗಿಯಿರಿ. ಹೀಗೆ ಮಾಡುತ್ತಿರುವಾಗ ಕೋಪದ ಭಾವನೆ ಕರಗಿ ಹೋಗುವುದನ್ನು ಗಮನಿಸಿ. ಕೊನೆಗೆ, ನಿಮ್ಮ ವರ್ತನೆಯನ್ನು ಬದಲಾಯಿಸಿಕೊಂಡ ಖುಷಿಯಲ್ಲಿ ನಕ್ಕು ಬಿಡಿ.

ನಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳಲು ದಾರಿದೀಪದಂತಿರುವ ಮೂರು ಪುಸ್ತಕಗಳನ್ನು ದಿವಂಗತ ಡಾ. ಮೀನಗುಂಡಿ ಸುಬ್ರಹ್ಮಣ್ಯ ಬರೆದಿದ್ದಾರೆ. ಅವರ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಮತ್ತು ಅದರ ಮುಂದುವರಿದ ಭಾಗವಾದ “ಮಡದಿ ಮತ್ತೊಬ್ಬ ಚೆಲುವಗೆ” ಪುಸ್ತಕಗಳಲ್ಲಿ ನಮ್ಮ ವರ್ತನೆಗಳ ಬದಲಾವಣೆಗೆ ಸಹಕರಿಸುವ ಹಲವು ತಂತ್ರಗಳು ಸತ್ಯಘಟನೆಗಳ ರೂಪದಲ್ಲಿವೆ. ಕೀಳರಿಮೆಯಿಂದ ಹೊರ ಬರುವುದು ಹೇಗೆ? ಪ್ರಿಯತಮ ಅಥವಾ ಪ್ರಿಯತಮೆ ಕೈಕೊಟ್ಟಾಗ ಆ ನೋವಿನಿಂದ ಪಾರಾಗುವುದು ಹೇಗೆ? ಇವನ್ನೆಲ್ಲ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಹಾಗೆಯೇ, ನಮ್ಮೆಲ್ಲ ಸಮಸ್ಯೆಗಳಿಗೆ ಮೂಲವಾದ “ಮನಸ್ಸು” ಎಂಬ ಗೊಂದಲದಿಂದ ಹೊರಬರಲಿಕ್ಕಾಗಿ “ಮನಸ್ಸು ಇಲ್ಲದ ಮಾರ್ಗ”ವನ್ನು ತೋರಿಸಿದ್ದಾರೆ ಅದೇ ಹೆಸರಿನ ಪುಸ್ತಕದಲ್ಲಿ. ಇದರಲ್ಲಿವೆ ಗೆಸ್ಟಾಲ್ಟ್ ಥೆರಪಿ ಮತ್ತು ಮನೋವಿಶ್ಲೇಷಣೆಯ ಅದ್ಭುತ ವಿವರಣೆ. (ಆ ಮೂರು ಪುಸ್ತಕಗಳ ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು)

ನಮ್ಮ ಬದುಕಿನ ಗುರಿ ಸಾಧನೆಗೆ ವರ್ತನೆ ಬದಲಾವಣೆಯೇ ಚಿಮ್ಮುಹಲಗೆ. ಆ ಸಾಧನೆಗೆ ನಮ್ಮ ವರ್ತನೆಗಳೇ ಅಡ್ಡಿಯಾಗಿದ್ದರೆ, ಅವನ್ನು ನಿವಾರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಅದಕ್ಕೆ ದಾರಿಗಳು ನೂರಾರಲ್ಲ, ಸಾವಿರಾರು. ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ”ದ ಪ್ರತಿಯೊಂದು ಮುಕ್ತಕವೂ ಬದುಕಿನ ಗಮ್ಯದೆಡೆಗೆ ಸಾಗುವ ದಾರಿಗಳನ್ನು ತೆರೆದಿಡುತ್ತದೆ. ಭಗವದ್ಗೀತೆಯಂತೂ ಬದುಕಿನ ಪರಿಪೂರ್ಣತೆಯತ್ತ ನಮ್ಮನ್ನು ಮುನ್ನಡೆಸಬಲ್ಲ ಬೆಳಕಿನ ಪುಂಜ. ನೆವನಗಳನ್ನು ಕಿತ್ತೊಗೆದು, ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಬನ್ನಿ.

(ಸಪ್ಟಂಬರ್ 2018)