ನಮ್ಮೆಲ್ಲರ ದೊಡ್ಡ ಆಶೆ: ಬದುಕಿನಲ್ಲಿ ಒಳ್ಳೆಯದಾಗಬೇಕು ಎಂಬುದು. ಆದರೆ ಒಳ್ಳೆಯದಾಗಲಿಕ್ಕೆ ಏನು ಮಾಡಬೇಕು? ಎಂಬುದು ಗೊತ್ತಿಲ್ಲ ಅಥವಾ ಒಳಿತಿನ ದಾರಿಗಳ ಬಗ್ಗೆ ಗೊಂದಲವಿದೆ. ಯಾರನ್ನಾದರೂ ಕೇಳಿದರೆ ಹತ್ತಾರು ಸಲಹೆಸೂಚನೆಗಳು. ಸರಳವಾದ ದಾರಿಗಳನ್ನು ತೋರುವವರು ವಿರಳ.
ಚೆನ್ನಾಗಿ ಬದುಕಿದವರನ್ನು ಗಮನಿಸಿದರೆ ಸರಳವಾದ ಮೂರು ದಾರಿಗಳು ಕಾಣಿಸುತ್ತವೆ. ಮೊದಲನೆಯದು ಬದುಕಿನಲ್ಲಿ ಸಮಭಾವದ ಸಾಧನೆ.
ಯಾರ ಬದುಕೂ ಸರಳರೇಖೆಯಂತೆ ಸಾಗುವುದಿಲ್ಲ. ಬದುಕಿನಲ್ಲಿ ಏರಿಳಿತ ಸಹಜ. ಕೆಲವೊಮ್ಮೆ ಸಂತೋಷ, ಕೆಲವೊಮ್ಮೆ ದುಃಖ. ಆಗೆಲ್ಲ ಅತಿರೇಕವಲ್ಲದ ಪ್ರತಿಕ್ರಿಯೆ ತೋರುವುದೇ ಸಮಭಾವ. ಈ ವರ್ತನೆಯನ್ನು ಕಲಿಯುವುದು ಬದುಕಿನ ಒಳಿತಿಗೆ ತೀರಾ ಅಗತ್ಯ.
ಇದನ್ನು ಮಾನ್ಯ ಡಿ.ವಿ. ಗುಂಡಪ್ಪನವರು “ಮಂಕುತಿಮ್ಮನ ಕಗ್ಗ”ದ ಮುಕ್ತಕದಲ್ಲಿ ಮನಮುಟ್ಟುವಂತೆ ತಿಳಿಸಿದ್ದಾರೆ:
ನಗುವೊಂದು ರಸಪಾಕವಳುವೊಂದು ರಸಪಾಕ
ನಗುವಾತ್ಮ ಪರಿಮಳವ ಪಸರಿಸುವ ಕುಸುಮ
ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು
ಬಗೆದೆರಡನುಂ ಭುಜಿಸು – ಮಂಕುತಿಮ್ಮ
ಬದುಕಿನಲ್ಲಿ ನಗು ಮತ್ತು ಅಳು ಎರಡೂ ರಸಪಾಕಗಳೇ. ನಗು ಎಂಬುದು ಆತ್ಮದ ಪರಿಮಳವನ್ನೇ ಪಸರಿಸುವ ಹೂವು. “ಮುಖದಲ್ಲಿ ನಗು ಅರಳಿತು” ಎನ್ನುತ್ತೇವೆ. ಇನ್ನೊಂದು ತುತ್ತತುದಿಯ ಭಾವ ದುಃಖದುಗುಡ. ಇದು, ಆತ್ಮವನ್ನೇ ಕಡೆಯುವ ಮಂತು. ಈ ಮಥನದಿಂದ, ಮಜ್ಜಿಗೆ ಕಡೆದಾಗ ಬೆಣ್ಣೆ ಮೂಡಿ ಬರುವಂತೆ, ಆತ್ಮದ ಸತ್ತ್ವ ಮೇಲೆದ್ದು ಬರುತ್ತದೆ. ಬದುಕಿಗೆ ಇವೆರಡೂ ಬೇಕು ಎಂಬುದನ್ನು ತಿಳಿದು ಇವೆರಡನ್ನೂ ಅನುಭವಿಸಬೇಕು.
ಶಾಲಾಕಾಲೇಜಿನ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಕೆ, ಆಟೋಟ ಸ್ಪರ್ಧೆಗಳಲ್ಲಿ ಗೆಲುವು, ಹಾಡುಗಾರಿಕೆ ಹಾಗೂ ನೃತ್ಯಗಳ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಕೆ, ಯಾರೂ ಮಾಡಿರದ ಸಾಧನೆ ಮಾಡುವುದು, ಮದುವೆ ಆಗುವುದು, ಚುನಾವಣೆಗಳಲ್ಲಿ ಜಯ ಗಳಿಸುವುದು – ಇವೆಲ್ಲವೂ ಸಂತೋಷದ ಸಂಗತಿಗಳೇ.
ಆದರೆ ಆ ಸಂತೋಷದ ಸಂಭ್ರಮಾಚರಣೆಗೆ ಮಿತಿ ಇರಬೇಡವೇ? ಕೆಲವರ ಸಂಭ್ರಮಾಚರಣೆಗಳು ಅಸಹ್ಯ ಎನಿಸುವಷ್ಟು ಅತಿರೇಕ. ಉದಾಹರಣೆಗೆ ತಮ್ಮ ಸಾಧನೆಯ ಬಗ್ಗೆ ಬೀದಿಬೀದಿಗಳಲ್ಲಿ ಬ್ಯಾನರುಗಳನ್ನು ಪ್ರದರ್ಶಿಸುವುದು, ಸಾವಿರಾರು ರೂಪಾಯಿ ವೆಚ್ಚ ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವುದು. ಹಾಗೆಯೇ ಇನ್ನು ಕೆಲವರ ಸಂಭ್ರಮಾಚರಣೆಯಿಂದ ಇತರರಿಗೆ ಬಹಳ ತೊಂದರೆ. ಉದಾಹರಣೆಗೆ, ಮದುವೆಯ ಅಥವಾ ಗೆಲುವಿನ ಸಂದರ್ಭದಲ್ಲಿ ಸಂಜೆಯಿಂದ ನಡುರಾತ್ರಿಯ ವರೆಗೆ ಊರಿಗೆಲ್ಲ ಕೇಳುವಷ್ಟು ಜೋರಾಗಿ ಹಾಡು ಹಾಕುವುದು, ರಸ್ತೆಯಲ್ಲಿ ಕುಣಿಯುತ್ತಾ ಸಂಚಾರಕ್ಕೆ ಅಡಚಣೆ ಮಾಡುವುದು.
23 ಮೇ 2019ರಂದು ಲೋಕಸಭಾ ಚುನಾವಣೆಯ ಫಲಿತಾಂಶ. ಬಿಜೆಪಿಗೆ ಚಾರಿತ್ರಿಕ ಜಯ. ಲೋಕಸಭೆಯ 525 ಸ್ಥಾನಗಳಲ್ಲಿ 300ಕ್ಕಿಂತ ಅಧಿಕ ಸ್ಥಾನ ಗೆದ್ದ ಸಂಭ್ರಮ. ಈ ಮಹಾನ್ ಸಂತೋಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರದು ಸಮಭಾವದ ನಡೆ. ದೇಶದ ಸಮಸ್ತ ಜನರಿಗೆ ಜಯವನ್ನು ಸಮರ್ಪಿಸುತ್ತ, ಅವರು ಹೇಳಿದ ಮಾತು, “ಇದು ಭಾರತದ ನವನಿರ್ಮಾಣಕ್ಕೆ ಜನಾದೇಶ.”
ಅತ್ಯಂತ ಆತ್ಮೀಯರ ಸಾವು, ಶಾಲಾಕಾಲೇಜು ಪರೀಕ್ಷೆಗಳಲ್ಲಿ ನಪಾಸು, ಶಕ್ತಿ ಮೀರಿ ತಯಾರಿ ನಡೆಸಿದ್ದರೂ ಆಟೋಟ ಸ್ಫರ್ಧೆಗಳಲ್ಲಿ ಸೋಲು, ಪಕ್ಷಪಾತದಿಂದಾಗಿ ಪ್ರತಿಭಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಕೈತಪ್ಪುವುದು, ನೆರೆ, ಬಿರುಗಾಳಿ, ಭೂಕಂಪ ಇಂತಹ ಪ್ರಾಕೃತಿಕ ವಿಕೋಪಗಳಿಂದ ಸಾವುನೋವು ಹಾಗೂ ಸೊತ್ತು ಹಾನಿ – ಇವೆಲ್ಲವೂ ಅತಿ ದುಃಖದ ಸಂಗತಿಗಳೇ.
ಆದರೆ, ಇಂತಹ ಸಂಕಟದ ಸಂದರ್ಭಗಳಲ್ಲಿ ನಾವು ಅವನ್ನು ಹೇಗೆ ಎದುರಿಸುತ್ತೇವೆ ಎಂಬುದೇ ನಮ್ಮ ಸತ್ತ್ವಪರೀಕ್ಷೆ. ಆಗ ನಾಪತ್ತೆಯಾಗುವುದು, ಅಳುತ್ತಾ ಕೂರುವುದು, ಮತ್ತೆಮತ್ತೆ ಸಂಕಟದ ಬಗ್ಗೆಯೇ ಮಾತಾಡುವುದು, ಇತರರು ಅಥವಾ ದೇವರು ತಮ್ಮ ಸಂಕಟಕ್ಕೆ ಕಾರಣವೆಂದು ದೂಷಿಸುವುದು, ಜೀವನದಲ್ಲೇ ಆಸಕ್ತಿ ಕಳೆದುಕೊಳ್ಳುವುದು – ಇವೆಲ್ಲ ಅತಿರೇಕದ ಪ್ರತಿಕ್ರಿಯೆಗಳು.
ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ತೀರಿಕೊಂಡಾಗ “ಮುಂದೇನು ಗತಿ” ಎಂದು ಕಂಗಾಲಾದವರು ಹಲವರು. ಆ ಬಿಕ್ಕಟ್ಟಿನ ಸಮಯದಲ್ಲಿ, ಸರಕಾರದ ಚುಕ್ಕಾಣಿ ಹಿಡಿದು, ಪ್ರಧಾನ ಮಂತ್ರಿಯ ಜವಾಬ್ದಾರಿ ಒಪ್ಪಿಕೊಂಡು, ದೇಶಕ್ಕೆ ಸಮರ್ಥ ನಾಯಕತ್ವ ಒದಗಿಸಿದವರು ಲಾಲ್ ಬಹದ್ದೂರ್ ಶಾಸ್ತ್ರಿ. ಇದೂ ಸಮಭಾವದ ಅತ್ಯುನ್ನತ ನಿದರ್ಶನ.
ಬದುಕಿನಲ್ಲಿ ಸಮಭಾವದ ಪಾಲನೆಗೆ ದೊಡ್ಡ ಅಡ್ಡಿ ಎಲ್ಲದರಲ್ಲಿಯೂ ತಪ್ಪು ಹುಡುಕುವ ಸ್ವಭಾವ. ಇದನ್ನು ಡಿವಿಜಿಯವರು ಇನ್ನೊಂದು ಮುಕ್ತಕದಲ್ಲಿ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ:
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು
ಒರಟು ಕೆಲಸವೋ ಬದುಕು – ಮಂಕುತಿಮ್ಮ
ಪುಟ್ಟ ಮಗು ಆಟಿಕೆಗಳನ್ನು ಒಪ್ಪಓರಣವಾಗಿ ಇಡದಿದ್ದರೆ…. ಪತ್ರಿಕೆ ಓದಿದ ಮಗ/ ಮಗಳು ಅದನ್ನು ಅಚ್ಚುಕಟ್ಟಾಗಿ ಮಡಚಿ ಇಡದಿದ್ದರೆ… ಸಾರಿಗೆ ಉಪ್ಪು ಕಡಿಮೆಯಾದರ ಅಥವಾ ಹೆಚ್ಚಾದರೆ…. ಸಮಾರಂಭಕ್ಕೆ ಬರುತ್ತೇನೆಂದಿದ್ದ ಗೆಳೆಯ ಬಾರದಿದ್ದರೆ… ಎಲ್ಲಿಗೋ ಹೊರಡುವಾಗ ಮಳೆ ಬಂದರೆ ಏನಾಯಿತು? ಅದರಿಂದಾಗಿ ಭೂಲೋಕ ಮುಳುಗೋದಿಲ್ಲ ಅಥವಾ ಬದುಕು ಮುಗಿಯೋದಿಲ್ಲ. ಇಂತಹ ಸಂದರ್ಭಗಳಲ್ಲಿ ರೇಗಾಡುವ ವ್ಯಕ್ತಿಗಳೇ ತಮ್ಮ ಹಾಸಿಗೆಯಲ್ಲಿ ತಾವೇ ಮುಳ್ಳು ಹರಡಿ, ನಂತರ ಆ ಮುಳ್ಳು ಚುಚ್ಚುತ್ತದೆಂದು ಎಗರಾಡುವವರು.
ಬದುಕಿನಲ್ಲಿ ಎಲ್ಲವೂ ನಾವೆಣಿಸಿದಂತೆ ಆಗಬೇಕೆಂದಿಲ್ಲ. ಹೆಚ್ಚುಕಡಿಮೆ ಆಗೋದು ಸಹಜ. ನಮ್ಮಲ್ಲಿ ಸಮಭಾವ ಇದ್ದರೆ, ಅವನ್ನೆಲ್ಲ ನಿಭಾಯಿಸಿ, ಬದುಕಿನಲ್ಲಿ ಒಳಿತು ಸಾಧಿಸಲು ಸಾಧ್ಯ, ಅಲ್ಲವೇ?
(ಜೂನ್ 2019)