ಬದುಕಿನ ಒಳಿತಿಗಾಗಿ ಪರರಿಗೆ ಸಹಾಯ ಮಾಡಿ

ಬದುಕಿನ ಒಳಿತಿಗಾಗಿ ಅನುಸರಿಸಬೇಕಾದ ಮೂರನೆಯ ದಾರಿ ಯಾವುದು? ಚೆನ್ನಾಗಿ ಬದುಕಿದವರನ್ನು ಗಮನಿಸಿದಾಗ ಕಾಣಿಸುವ ಆ ದಾರಿಯೇ ಪರರಿಗೆ ಸಹಾಯ ಮಾಡುವುದು.


ನಮಗೆ ಯಾರು ಸಹಾಯ ಮಾಡಿದ್ದಾರೆ? ನಾವು ಯಾಕೆ ಇತರರಿಗೆ ಸಹಾಯ ಮಾಡಬೇಕು? ಎಂಬ ಪ್ರಶ್ನೆ ಕೇಳುವವರು ಹಲವರು. ಹೀಗೆ ಪ್ರಶ್ನೆ ಕೇಳುವ ಮನೋಭಾವವನ್ನು ಒಂದು ಕ್ಷಣ ಬದಿಗಿಟ್ಟು, ನಮ್ಮ ಬದುಕನ್ನು ಅವಲೋಕಿಸಿದರೆ ಈ ಪ್ರಶ್ನೆಗಳಿಗೆ ನೇರಾನೇರ ಉತ್ತರ ಸಿಗುತ್ತದೆ.


ಎಲ್ಲ ಧರ್ಮಗಳೂ ಉಪದೇಶಿಸುವ ಒಂದು ಸಂಗತಿ: ನಿಮ್ಮ ಆಹಾರ ತಿನ್ನುವ ಮುಂಚೆ ಪ್ರಾರ್ಥನೆ ಮಾಡಿ. ಇದು ಯಾಕೆಂದು ಯೋಚಿಸಿದ್ದೀರಾ? ನೀವು ತಿನ್ನುವ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಇವನ್ನೆಲ್ಲ ಬೆಳೆಸಿದವರು ಯಾರು? ನೀವು ಯಾವತ್ತೂ ಕಾಣದವರು; ಬಿಸಿಲೆನ್ನದೆ ಮಳೆಯೆನ್ನದೆ ನಿಮಗಾಗಿ ಹೆಣಗಿದವರು; ನೆರೆ, ಬಿರುಮಳೆ, ಉರಿಬಿಸಿಲು, ಬಿರುಗಾಳಿ, ಬರಗಾಲ, ಆಲಿಕಲ್ಲು, ನೀರಿನ ತತ್ವಾರ – ಇವನ್ನೆಲ್ಲ ನಿಭಾಯಿಸಿ ನಿಮಗೆ ತುತ್ತು ನೀಡುವವರು. ನಿಮ್ಮಿಂದ ಆ ಕಾಯಕ ಮಾಡಲಾದೀತೇ?


ನಿಮಗೆ ಸಾವಿರಾರು ಜನರು ಸಹಾಯ ಮಾಡಿದ್ದಾರೆ! ನೀವು ಓಡಾಡುವ ರಸ್ತೆ ಮಾಡಿದವರು ಯಾರು? ನೀವು ವಾಸವಾಗಿರುವ ಮನೆ ಕಟ್ಟಿದವರು ಯಾರು? ನಿಮಗೆ ಹೆಸರೇ ಗೊತ್ತಿಲ್ಲದವರು. ಅಂದರೆ, ನಿಮ್ಮ ಬದುಕು ಹಸನಾಗಿಸಲಿಕ್ಕಾಗಿ ಅದೆಷ್ಟು ಜನರು ಹೆಣಗಿದ್ದಾರೆ ಹಾಗೂ ಹೆಣಗುತ್ತಿದ್ದಾರೆ! ನೀವು ಮಾಡಲು ತಯಾರಿಲ್ಲದ ಕೆಲಸಗಳನ್ನು ನಿಮಗಾಗಿ ಮಾಡಿದವರನ್ನು, ಮಾಡುತ್ತಿರುವವರನ್ನು ಮರೆಯಲಾದೀತೇ? ಅಷ್ಟೇ ಅಲ್ಲ, ಅವರಂತೆ ನೀವೂ ಪರರಿಗೆ ನಿಮ್ಮಿಂದಾದ ಸಹಾಯ ಮಾಡಬೇಡವೇ?


ನೀವು ಯಾಕೆ ಇತರರಿಗೆ ಸಹಾಯ ಮಾಡಬೇಕು? ಇದೊಂದು ಯಕ್ಷಪ್ರಶ್ನೆ. ನಿಮ್ಮ ಬಾಲ್ಯದ ಸಹಪಾಠಿಗಳಲ್ಲಿ ಎಷ್ಟು ಜನರು ತೀರಿಕೊಂಡಿದ್ದಾರೆ? ನಿಮ್ಮ ಓರಗೆಯವರಲ್ಲಿ ಎಷ್ಟು ಜನರು ಇಹಲೋಕ ತ್ಯಜಿಸಿದ್ದಾರೆ? ನೀವು ಉಳಿದಿದ್ದೀರಲ್ಲಾ…. ನೀವೆಷ್ಟು ಪುಣ್ಯವಂತರು! ಅದಕ್ಕಾಗಿ, ನೀವಿರುವಷ್ಟು ದಿನ ಇತರರಿಗೆ ಸಹಾಯ ಮಾಡಬೇಕು. ಇನ್ನೂ ಒಂದು ಸಂಗತಿ: ಕೈಯಿಲ್ಲದ, ಕಾಲಿಲ್ಲದ, ಕಣ್ಣಿಲ್ಲದ, ಮಾತು ಬಾರದ, ಕಿವಿ ಕೇಳದ, ಮಾನಸಿಕ ಸಮತೋಲನವಿಲ್ಲದ ಸಾವಿರಾರು ಜನರನ್ನು ನೀವು ಕಂಡಿದ್ದೀರಿ. ನಿಮಗೆ ಆ ಜಗನ್ನಿಯಾಮಕ ಇವೆಲ್ಲವನ್ನೂ ಕೊಟ್ಟಿದ್ದಾನೆ; ಮಾತ್ರವಲ್ಲ, ಊನವಿಲ್ಲದೆ ಕೊಟ್ಟಿದ್ದಾನೆ. ಅದಕ್ಕಾಗಿಯಾದರೂ, ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿ ಇತರರಿಗೆ ಸಹಾಯ ಮಾಡಬೇಕು, ಅಲ್ಲವೇ?


ಬಹಳ ಜನರು ಕೇಳುವ ಮತ್ತೊಂದು ಪ್ರಶ್ನೆ: ಪರರಿಗೆ ಸಹಾಯ ಮಾಡಲು ನನ್ನ ಬಳಿ ಏನಿದೆ? ನನ್ನಲ್ಲಿ ಯಾವುದೇ ಸೊತ್ತುಗಳಿಲ್ಲ. ಇಂಥವರು ತಾವು ಯೋಚನೆ ಮಾಡುವ ಧಾಟಿಯನ್ನೇ ಬದಲಾಯಿಸ ಬೇಕಾಗಿದೆ. ಯಾಕೆಂದರೆ, ಪ್ರತಿಯೊಬ್ಬರ ಬಳಿಯೂ ಕೋಟಿಗಟ್ಟಲೆ ರೂಪಾಯಿಗಳ ಸೊತ್ತುಗಳಿವೆ. ಉದಾಹರಣೆಗೆ, ಕಣ್ಣುಗಳು,ಕಿಡ್ನಿಗಳು, ಯಕೃತ್, ಹೃದಯ ಇತ್ಯಾದಿ. ಇವಕ್ಕೆ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿಸಲು ತುದಿಗಾಲಲ್ಲಿ ನಿಂತವರು ಇದ್ದಾರೆ. ಇದು ಯಾವುದನ್ನಾದರೂ ಅವರಿಗೆ ಮಾರಲು ಸಿದ್ಧರಿದ್ದೀರಾ? ಇಲ್ಲ, ಯಾಕೆಂದರೆ ಅವು ಬೆಲೆ ಕಟ್ಟಲಾಗದ  ಸೊತ್ತುಗಳು. ಇಂತಹ ಸೊತ್ತುಗಳ ಒಡೆಯರಾಗಿದ್ದು, ನನ್ನ ಬಳಿ ಏನೂ ಇಲ್ಲ ಎಂದರೆ ಒಪ್ಪಲಾದೀತೇ? ಹಾಗಾಗಿ, ಇವೆಲ್ಲ ಅಮೂಲ್ಯ ಸೊತ್ತುಗಳನ್ನು ಅಚ್ಚುಕಟ್ಟಾಗಿ ಬಳಸಿ ಇತರರಿಗೆ ಸಹಾಯ ಮಾಡಿ. ನಿಮ್ಮಿಂದ ಏನನ್ನು ಮಾಡಲು ಸಾಧ್ಯವೋ ಅದನ್ನು ಮಾಡಿ. ನೊಂದವರ ಮುಖದಲ್ಲಿ ನಗು ಅರಳಿಸಲು ನಿಮ್ಮೊಂದು ಮುಗುಳುನಗು ಸಾಕು!


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ


ಪರರಿಗೆ ಯಾಕೆ ಸಹಾಯ ಮಾಡಬೇಕು? ಎಂಬ ಪ್ರಶ್ನೆಗೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ ಮನಮುಟ್ಟುವ ಉತ್ತರ ಕೊಟ್ಟಿದ್ದಾರೆ. ಬೆಟ್ಟದಡಿಯ ಹುಲ್ಲಾಗು; ಪಶುಗಳಿಗೆ ಮೇವಾಗು (ಚರಂಡಿ ಬದಿಯ ಹುಲ್ಲಾದರೆ ಪಶುಗಳೂ ತಿನ್ನುವುದಿಲ್ಲ). ಅಂದರೆ ಪರೋಪಕಾರಿಯಾಗು. ಮನೆಯವರಿಗಂತೂ ಮಲ್ಲಿಗೆಯಾಗು; ಯಾವಾಗಲೂ ಅವರ ಮನವನ್ನರಳಿಸು. ವಿಧಿ ಕಷ್ಟಗಳ ಮಳೆ ಸುರಿದಾಗ ಕಲ್ಲಾಗು; ಗೊಣಗದೆ ಸಹಿಸಿಕೋ. ದೀನದುರ್ಬಲರಿಗೆ ಬೆಲ್ಲಸಕ್ಕರೆಯಾಗು; ನಿನಗಿಂತ ಹೆಚ್ಚಿನ ಸಂಕಟದಲ್ಲಿ ಇರುವವರಿಗೆ ಕೈಲಾದ ಸಹಾಯ ಮಾಡು. ಇದೆಲ್ಲ ಆಗಲಿಕ್ಕಾಗಿ ಎಲ್ಲರೊಳಗೊಂದಾಗು ಎನ್ನುತ್ತಾರೆ ಡಿವಿಜಿ. ಸಾಧ್ಯವೇ? ಎಲ್ಲರೊಳಗೆ ಒಂದಾದಾಗ ಮಾತ್ರ, ಪರರಿಗೆ ನೋವು ಮಾಡುವುದೆಂದರೆ ನಮಗೆ ನಾವೇ ನೋವು ಮಾಡಿಕೊಂಡಂತೆ ಎಂಬುದು ತಿಳಿಯುತ್ತದೆ. ಈ ಉದಾತ್ತ ತತ್ವವನ್ನು ದಿಗಂತಕ್ಕೆ ವಿಸ್ತರಿಸುತ್ತಾ ಬುದ್ಧ ಹೇಳುತ್ತಾನೆ: “ಪರರಿಗೆ ಬಡಿದಾಗ, ಬಯ್ದಾಗ ಮಾತ್ರವಲ್ಲ; ಪರರ ಬಗ್ಗೆ ಕೆಟ್ಟ ಯೋಚನೆ ಮಾಡಿದಾಗಲೂ ನೀನು ಅವರಿಗೆ ನೋವು ಕೊಡುತ್ತಿ.” ಹಾಗೆ ಮಾಡದೆ ಇರಬೇಕಾದರೆ, ಪರರನ್ನು ತನ್ನಂತೆ ಬಗೆಯಬೇಕಾಗುತ್ತದೆ.


ಪರರಿಗೆ ಯಾಕೆ ಸಹಾಯ ಮಾಡಬೇಕು? ಎಂಬ ಚಿಂತನೆಯಲ್ಲಿ ಗಮನಿಸಬೇಕಾದ ಮಗದೊಂದು ಸಂಗತಿ:
ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ
ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು?
ಬಗೆಯದೀ ಲೆಕ್ಕವನು ಜಗದುಣಿಸನುಂಬವನು
ಮೃಗಮಾತ್ರನಲ್ಲವೇಂ? – ಮರುಳ ಮುನಿಯ


ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವೆರಡರಲ್ಲಿ ಹೆಚ್ಚು ಯಾವುದು? ಅದರಲ್ಲಿ ನಿನ್ನ ಕೊಡುಗೆ ಎಷ್ಟು? ಈ ಲೆಕ್ಕಾಚಾರ ಮಾಡದೆ, “ಜಗತ್ತಿನಿಂದ ನನಗೆ ಇನ್ನಷ್ಟು ಸಿಗಲಿ, ಮತ್ತಷ್ಟು ಸಿಗಲಿ” ಎನ್ನುತ್ತಾ ಬಾಚಿಕೊಳ್ಳುವವನು ಮೃಗಮಾತ್ರನಲ್ಲವೇ? ಎಂದು ಕೇಳುತ್ತಾರೆ ಡಿವಿಜಿ.
ಆದ್ದರಿಂದ, ಜಗತ್ತಿನಿಂದ ಪಡೆದದ್ದು ಸಾಕು ಎಂಬ ಭಾವ ನಮ್ಮಲ್ಲಿ ಬೆಳೆಯಲಿ; ಇನ್ನಾದರೂ ಜಗತ್ತಿಗೆ ಕೊಡುವ ಬುದ್ಧಿ ಬರಲಿ. ಅದರಿಂದ ನಮ್ಮೆಲ್ಲರ ಬದುಕಿಗೆ ಒಳಿತಾಗಲಿ.
(ಆಗಸ್ಟ್ 2019)