ಚೆನ್ನಾಗಿ ಬದುಕಿದವರನ್ನು ಗಮನಿಸಿದಾಗ, ಬದುಕಿನ ಒಳಿತಿಗಾಗಿ ಅನುಸರಿಸಬೇಕಾದ ಎರಡನೆಯ ದಾರಿ ಕಾಣಿಸುತ್ತದೆ. ಅದುವೇ ಎಲ್ಲದರಲ್ಲೂ ಒಳಿತನ್ನೇ ನೋಡುವುದು.
ಬದುಕಿನಲ್ಲಿ ಒಂದಾದ ಮೇಲೊಂದು ಘಟನೆಗಳು ಜರಗುತ್ತಲೇ ಇರುತ್ತವೆ. ಪ್ರತಿಯೊಂದು ಘಟನೆಯ ಪರಿಣಾಮ ಬೇರೆಬೇರೆ ವ್ಯಕ್ತಿಗಳ ಮೇಲೆ ಬೇರೆಬೇರೆ. ಉದಾಹರಣೆಗೆ ಪರೀಕ್ಷಾ ಫಲಿತಾಂಶದ ಪ್ರಕಟಣೆ ಒಂದು ಘಟನೆ. ಆಗ ಉತ್ತಮ ಅಂಕ ಗಳಿಸಿದವರಿಗೆ ಮತ್ತು ಪಾಸಾದವರಿಗೆ ಸಂತೋಷ. ಆದರೆ ಕಡಿಮೆ ಅಂಕ ಗಳಿಸಿದವರಿಗೆ ಹಾಗೂ ಫೈಲಾದವರಿಗೆ ದುಃಖ. ಸಂಗೀತ, ನೃತ್ಯ, ಚಿತ್ರರಚನೆ, ರಸಪ್ರಶ್ನೆ, ಆಟೋಟ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳ ಫಲಿತಾಂಶ ಘೋಷಿಸಿದಾಗಲೂ ಹೀಗೆಯೇ ಆಗುತ್ತದೆ. ಹಾಕಿ, ಕ್ರಿಕೆಟ್, ಫುಟ್‍ಬಾಲ್, ಬಾಸ್ಕೆಟ್‍ಬಾಲ್, ಕೊಕ್ಕೋ, ಕಬಡ್ಡಿ ಇಂತಹ ಆಟಗಳ ರಾಜ್ಯ/ ರಾಷ್ಟ್ರೀಯ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿದಾಗಲೂ ಅದೇ ಕತೆ. ಚುನಾವಣಾ ಫಲಿತಾಂಶ ಪ್ರಕಟವಾದಾಗಲೂ ಅದೇ ಕಥೆವ್ಯಥೆ.
ಹಾಗಾಗಿ, ಈ ಘಟನೆಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಒಂದು ಲೋಟದಲ್ಲಿ ಅರ್ಧ ನೀರಿರುವಾಗ, ಆ ಲೋಟ ಅರ್ಧ ತುಂಬಿದೆ ಎಂಬುದೂ ನಿಜ; ಅದು ಅರ್ಧ ಖಾಲಿ ಎಂಬುದೂ ನಿಜ. ಲೋಟ ಅರ್ಧ ತುಂಬಿದೆ ಎಂದು ಭಾವಿಸುವುದೇ ಸಕಾರಾತ್ಮಕ ಯೋಚನೆ. ಆ ಲೋಟ ಅರ್ಧ ಖಾಲಿ ಎಂದುಕೊಳ್ಳುವುದೇ ನಕಾರಾತ್ಮಕ ಯೋಚನೆ.
ನಕಾರಾತ್ಮಕ ಯೋಚನೆಯಿಂದ ಯಾವುದೇ ಪ್ರಯೋಜನವಿಲ್ಲ. ಆದರೆ, ಸಕಾರಾತ್ಮಕ ಯೋಚನೆ ಬದುಕನ್ನೇ ಬದಲಾಯಿಸ ಬಲ್ಲದು, ಅಲ್ಲವೇ? ಮಾನ್ಯ ನರೇಂದ್ರ ಮೋದಿಯವರು 2014ರಲ್ಲಿ ಭಾರತದ ಪ್ರಧಾನಿಯಾದರು. ಆ ವರುಷ ಸ್ವಾತಂತ್ರ್ಯ ದಿನದಂದು ಎರಡು ಮುಖ್ಯ ಯೋಜನೆಗಳನ್ನು ಘೋಷಿಸಿದರು. ಇನ್ನು ಆರು ತಿಂಗಳೊಳಗೆ ಇಪ್ಪತ್ತು ಕೋಟಿ ಬ್ಯಾಂಕ್ ಎಕೌಂಟುಗಳನ್ನು ತೆರೆದು, ನಮ್ಮ ದೇಶದ ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಬ್ಯಾಂಕ್ ಎಕೌಂಟು ಹೊಂದುವಂತೆ ಮಾಡುವುದು ಮೊದಲನೆಯ ಯೋಜನೆ. ಇನ್ನು ಒಂದು ವರುಷದೊಳಗೆ, ಪ್ರತಿಯೊಂದು ಶಾಲೆಯಲ್ಲಿಯೂ ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು ಎರಡನೆಯ ಯೋಜನೆ.
“ಇದೆಲ್ಲ ಆಗುವಹೋಗುವ ಕೆಲಸವಲ್ಲ” ಎಂದು ಟೀಕಿಸಿದವರು ಹಲವರು. ಯಾಕೆಂದರೆ ಆ ಯೋಜನೆಗಳ ಅಗಾಧತೆ ಹಾಗಿತ್ತು. ಆದರೆ, ಆರೇ ತಿಂಗಳಲ್ಲಿ ವಿವಿಧ ಬ್ಯಾಂಕುಗಳಲ್ಲಿ “ಜನ್ ಧನ್” ಯೋಜನೆ ಅನುಸಾರ ಇಪ್ಪತ್ತು ಕೋಟಿ ಹೊಸ ಉಳಿತಾಯ ಎಕೌಂಟುಗಳನ್ನು ತೆರೆಯಲಾಯಿತು. ಜನವರಿ 2019ರಲ್ಲಿ ಜನ್ ಧನ್ ಬ್ಯಾಂಕ್ ಖಾತೆಗಳ ಸಂಖ್ಯೆ 33 ಕೋಟಿ ದಾಟಿತ್ತು. ಆ ಎಕೌಂಟುಗಳಲ್ಲಿ ಆಗಲೇ 90,000 ಕೋಟಿ ರೂಪಾಯಿ ಠೇವಣಿ ಇದೆ. ಇದರಿಂದಾಗಿ, ಅಡುಗೆ ಅನಿಲ ಸಿಲಿಂಡರಿನ ಸಬ್ಸಿಡಿಯಿಂದ ತೊಡಗಿ ಸರಕಾರದ ಹಲವು ಯೋಜನೆಗಳ ಸಬ್ಸಿಡಿ/ ಹಣ ಸಹಾಯವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲು ಸಾಧ್ಯವಾಗಿದೆ. ಹಾಗೆಯೇ, ಒಂದು ವರುಷದೊಳಗೆ ಲಕ್ಷಗಟ್ಟಲೆ ಶಾಲೆಗಳಲ್ಲಿ ಬಾಲಕ – ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಯಿತು. ಅವುಗಳ ನಿರ್ವಹಣೆಗೂ ವ್ಯವಸ್ಥೆ ಮಾಡಲಾಯಿತು.
ಈ ಯೋಜನೆಗಳನ್ನು ಘೋಷಿಸಿ, ಅವುಗಳ ಸಾಧನೆಗೆ ಸಮರೋಪಾದಿಯಲ್ಲಿ ಮುನ್ನುಗ್ಗಿದ ಕಾರಣದಿಂದಾಗಿ, ಗಡುವಿನ ಮುಂಚೆಯೇ ಗುರಿ ತಲಪಲು ಸಾಧ್ಯವಾಯಿತು ಎಂಬುದು ಗಮನಾರ್ಹ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಗಳಿಸಿದ ನಂತರ 67 ವರುಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಒಂದೇ ವರುಷದಲ್ಲಿ ಸಾಧಿಸಲಾಯಿತು ಎಂಬುದು ಸಕಾರಾತ್ಮಕ ಚಿಂತನೆಯ ಅಂದರೆ ಒಳಿತನ್ನೇ ನೋಡುವುದರ ತಾಕತ್ತಿನ ಪುರಾವೆ, ಅಲ್ಲವೇ?
ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ವೈಯುಕ್ತಿಕ ನೆಲೆಯಲ್ಲಿಯೂ ಸಕಾರಾತ್ಮಕ ಚಿಂತನೆಯಿಂದ ಸಹಾಯವಾಗುತ್ತದೆ. ಇದನ್ನೇ “ಮಂಕುತಿಮ್ಮನ ಕಗ್ಗ”ದ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನಮರು ಮಾರ್ಮಿಕವಾಗಿ ತಿಳಿಸುತ್ತಾರೆ:
ಸತ್ತೆನೆನಬೇಡ; ಸೋತೆನೆನಬೇಡ
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ
ಬದುಕಿನಲ್ಲಿ ಯಾವತ್ತೂ “ನಾನು ಸತ್ತೆ, ನಾನು ಸೋತೆ, ನನ್ನ ಸತ್ತ್ವದ ಚಿಲುಮೆ ಬತ್ತಿ ಹೋಯಿತು” ಎನ್ನಬೇಡ. ಮೃತ್ಯುವೆಂಬುದು ಕೂಡ ನಾಟಕದಲ್ಲಿ ಪರೆದೆ ಇಳಿದಂತೆ; ಮತ್ತೆ ಪರದೆ ಮೇಲೇರುತ್ತದೆ, ನಾಳೆಯ ಬಾಳು ಮುಂದುವರಿಯುತ್ತದೆ ಎನ್ನುತ್ತಾರೆ ಡಿ.ವಿ.ಜಿ.
ಜೀವನದಲ್ಲಿ ಅತ್ಯಂತ ದೊಡ್ಡ ದುಃಖ ಆಪ್ತರ ಸಾವು. ಹಾಗಂತ, ಮೃತ್ಯು ಬಂದು ಎಗರಿದಾಗ ಅಳುತ್ತಾ ಕೂತರೆ ಸತ್ತವರು ಎದ್ದು ಬರುತ್ತಾರೆಯೇ? ಇಲ್ಲ. ಅದರ ಬದಲಾಗಿ, ಅಗಲಿದವರ ನೆನಪಿನಲ್ಲಿ ಮುನ್ನಡೆದರೆ ಹೊಸ ಬದುಕು ತೆರೆದುಕೊಳ್ಳುತ್ತದೆ. ಎರಡು ಕುಟುಂಬಗಳ ಕತೆ ಗಮನಿಸೋಣ. ಎರಡೂ ಕುಟುಂಬಗಳ ಬೆಳೆದು ನಿಂತ ಮಗಂದಿರು ವಿಧಿವಶರಾದರು. ಮೊದಲನೆಯ ಕುಟುಂಬದ ತಂದೆ, ಮಗ ಸತ್ತ ದುಃಖದಲ್ಲಿ ಮುಳುಗಿ ಹೋದ. ಮಗನ ಸಾವಿನ ನೋವಿನಿಂದ ಹೊರಬರಲಾಗದೆ ಚಡಪಡಿಸಿದ. ಎಲ್ಲದರಲ್ಲಿಯೂ ಆಸಕ್ತಿ ಕಳಕೊಂಡ. ಕೊನೆಗೆ ಈತನ ಆರೋಗ್ಯವೂ ಹದಗೆಟ್ಟು, ಈತನೂ ಒಂದು ವರುಷದಲ್ಲೇ ತೀರಿಕೊಂಡ. ಹಾಗಾದರೆ, ಈತ ದುಃಖ ಪಟ್ಟು ಏನು ಸಾಧಿಸಿದಂತಾಯಿತು?
ಎರಡನೆಯ ಕುಟುಂಬದ ತಂದೆ, ಮಗ ಸತ್ತ ದುಃಖದ ಭಾರವನ್ನು ಎದುರಿಸಲು ತಯಾರಾದ. ಮಗನ ಸಾವು ಜಗನ್ನಿಯಾಮಕನ ನಿರ್ಧಾರ ಎಂದು ಸ್ವೀಕರಿಸಿದ. ದುಃಖ ತಡೆಯಲು ಕಷ್ಟವಾದಾಗ, ತನ್ನ ಮಗ ಬದುಕಿದ್ದ ಇಪ್ಪತ್ತು ವರುಷಗಳಲ್ಲಿ ನೀಡಿದ ಸಂತೋಷದ ಅನುಭವಗಳನ್ನು ನೆನಪು ಮಾಡಿಕೊಂಡ. ನನ್ನ ಮಗ ಸತ್ತರೇನಂತೆ. ನನ್ನ ಮನೆಯ ಬೀದಿಯ ಇತರ ಮನೆಗಳ ಮಕ್ಕಳು ನನ್ನ ಮಗನಂತೆಯೇ ಎಂದು ಭಾವಿಸಿದ. ಆ ಎಲ್ಲ ಮನೆಗಳ ಮಕ್ಕಳನ್ನು ಆಗಾಗ ಮಾತನಾಡಿಸ ತೊಡಗಿದ. ಅವರಿಗೆ ಶಾಲಾ ಪುಸ್ತಕ, ಸಮವಸ್ತ್ರ ನೀಡ ತೊಡಗಿದ. ನಿಧಾನವಾಗಿ ಆತನ ದುಃಖದ ಹೊರೆ ಕಡಿಮೆಯಾಯಿತು. ನೆರೆಕರೆಯ ಮಕ್ಕಳಲ್ಲೇ ತನ್ನ ಮಗನನ್ನು ಕಾಣುತ್ತಾ ಅವರಿಗೆ ಉಪಕಾರಿಯಾಗಿ, ಅವರ ಅಚ್ಚುಮೆಚ್ಚಿನವನಾಗಿ ಬಾಳ ತೊಡಗಿದ.
ಬದುಕಿನ ಒಳಿತಿಗಾಗಿ ಎಲ್ಲದರಲ್ಲಿಯೂ ಒಳಿತನ್ನು ಕಾಣುವುದೆಂದರೆ ಇದೇ ಅಲ್ಲವೇ?
(ಜುಲಾಯಿ 2019)