ಬದುಕಿನಲ್ಲಿ ಗಳಿಸಬೇಕು ಮತ್ತು ಉಳಿಸಬೇಕು ಎಂಬ ಮಾತನ್ನು ನಾವೆಲ್ಲರೂ ಆಗಾಗ ಕೇಳುತ್ತೇವೆ. ಆದರೆ ಏನನ್ನು ಗಳಿಸಬೇಕು ಮತ್ತು ಎಷ್ಟು ಉಳಿಸಬೇಕು ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ, ಅಲ್ಲವೇ?
ಗಳಿಸುವುದು ಎಂಬ ಮಾತೆತ್ತಿದರೆ ನಮಗೆ ಕಾಣಿಸುವುದು ಹಣ. ಈ ಹಣ ಗಳಿಸುವುದು ಯಾಕೆಂದರೆ ಸಂಪತ್ತು ಕೂಡಿ ಹಾಕಲಿಕ್ಕೆ ಎಂದೇ ಬಹಳ ಜನ ನಂಬಿದ್ದಾರೆ. ಕೋಟಿಕೋಟಿ ಬೆಲೆಯ ಚಿನ್ನ, ಬೆಳ್ಳಿ, ಮನೆ, ಬಂಗಲೆ, ಸೈಟು, ಫ್ಲಾಟು, ಜಮೀನು, ಬ್ಯಾಂಕ್ ಠೇವಣಿ, ಕಂಪೆನಿ ಷೇರು, ವಾಹನಗಳು ಇತ್ಯಾದಿ ಖರೀದಿಸಿ ಶೇಖರಿಸುವುದೇ ಹಲವರ ಜೀವನದ ಗುರಿಯಾಗಿದೆ. ಅಷ್ಟೆಲ್ಲ ಸಂಪತ್ತು ರಾಶಿ ಹಾಕಿದರೆ, ಅದನ್ನೆಲ್ಲ ದಕ್ಕಿಸಿಕೊಳ್ಳಲು ಸಾಧ್ಯವೇ?
ಈ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ್ದಾರೆ, ಮಾನ್ಯ ಡಿ.ವಿ. ಗುಂಡಪ್ಪನವರು, ಈ ಮುಕ್ತಕದಲ್ಲಿ:
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? – ಮಂಕುತಿಮ್ಮ
ನೀನು ಎಷ್ಟೇ ಉಂಡರೂ, ನಿನ್ನ ಮೈಗೆ ಪುಷ್ಟಿ ಆಗುವುದೆಷ್ಟು? ನಿನ್ನ ಹೊಟ್ಟೆ ಜೀರ್ಣಿಸುವಷ್ಟೇ. ಅದಕ್ಕಿಂತ ಹೆಚ್ಚಿಗೆ ತಿಂದ ಆಹಾರವೆಲ್ಲ ಕಸವಾಗಿ ಹೊರ ಹೋಗುತ್ತದೆ. ಹಾಗೆಯೇ, ನೀನು ಎಷ್ಟೇ ಸಂಪತ್ತು ಗಳಿಸಿದರೂ, ನಿನಗೆ ದಕ್ಕುವುದು ಮುಷ್ಟಿ ಪಿಷ್ಟ ಅಂದರೆ ಒಂದು ಹಿಡಿ ಹಿಟ್ಟು ಎನ್ನುತ್ತಾರೆ ಡಿವಿಜಿಯವರು. ನಿಮ್ಮ ಬಳಗದಲ್ಲಿ ಯಾರಾದರೂ ತೀರಿಕೊಂಡಾಗ, ಅವರ ಶವಸಂಸ್ಕಾರದಲ್ಲಿ ನೀವು ಭಾಗವಹಿಸಿದ್ದರೆ, ನಿಮಗೆ ಡಿವಿಜಿಯವರ ಮಾತು ಮನಸ್ಸಿಗೆ ತಟ್ಟುತ್ತದೆ. ಯಾಕೆಂದರೆ, ಪ್ರಾಣ ಬಿಟ್ಟು ಹೋಗುವಾಗ ಯಾರೊಬ್ಬರೂ ಏನನ್ನೂ ಒಯ್ಯುವುದಿಲ್ಲ; ತಾವು ಗಳಿಸಿದ್ದನ್ನೆಲ್ಲ ಈ ಲೋಕದಲ್ಲೇ ಬಿಟ್ಟು ಹೋಗುತ್ತಾರೆ, ಅಲ್ಲವೇ? ಅದಕ್ಕಾಗಿಯೇ, ಬದುಕಿನಲ್ಲಿ ಗಳಿಸಿ, ಉಳಿಸುವ ಬಗ್ಗೆ ನಮ್ಮ ಧೋರಣೆ ಹೇಗಿರಬೇಕೆಂದು ಮಾನ್ಯ ಗುಂಡಪ್ಪನವರು ಇನ್ನೊಂದು ಮುಕ್ತಕದಲ್ಲಿ ದಾರಿ ತೋರಿಸುತ್ತಾರೆ:
ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ
ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ
ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವುದೂ ಬೆತ್ತಲಾಗಿ ಎಂಬ ದೊಡ್ಡ ಸತ್ಯವನ್ನು ಈ ಮುಕ್ತಕದಲ್ಲಿ ಜ್ನಾಪಿಸುತ್ತಾರೆ ಡಿವಿಜಿಯವರು. ಹುಟ್ಟು-ಸಾವುಗಳ ನಡುವಿನ ನಾಲ್ಕು ದಿನ ಮಾತ್ರ ನಿನ್ನ ವಸ್ತ್ರವೇಷಗಳ ಸಡಗರ. ಕೊನೆಗೊಂದು ದಿನ ಬಂದೇ ಬರುತ್ತದೆ – ಸಾವಿನ ಮನೆಗೆ ಕಾಲಿಟ್ಟ ನಿನ್ನನ್ನು ಚಟ್ಟಕ್ಕೆ ಏರಿಸುವ ದಿನ. ಅದಕ್ಕಿಂತ ಮುಂಚೆ, ನೀನಾಗಿಯೇ ನಿನ್ನ ಬದುಕಿನ ಕಂತೆಗಳನ್ನೆಲ್ಲ ಕಿತ್ತೆಸೆದು ಬಿಡು ಎಂಬುದು ಡಿವಿಜಿಯವರ ನೇರನುಡಿ.
ಹಾಗೆ, ಬದುಕಿನ ಕಂತೆಗಳನ್ನೆಲ್ಲ ಕಿತ್ತೆಸದವರಿಗೆ ಮಾತ್ರ ತಮ್ಮ ಬದುಕಿನಿಂದ ನಿಜವಾಗಿ “ಗಳಿಸಲು” ಸಾಧ್ಯವಾಗುತ್ತದೆ. ನಮ್ಮ ದೇಶದ ಎರಡನೆಯ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನವನ್ನು ಗಮನಿಸೋಣ. ತಾಷ್ಕೆಂಟಿನಲ್ಲಿ 10 ಜನವರಿ 1966ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವಣ ಚಾರಿತ್ರಿಕ ಒಪ್ಪಂದಕ್ಕೆ ಅವರು ಸಹಿ ಹಾಕಿದರು. ಮರುದಿನ ಮುಂಜಾನೆ ಅವರು ಅಲ್ಲೇ ವಿಧಿವಶರಾದರು. ನಮ್ಮ ದೇಶದ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದಾಗ, ಯಾವುದೇ ಆಸ್ತಿ ಉಳಿಸಿರಲಿಲ್ಲ! ತಮ್ಮ ಹೆಂಡತಿ, ಮಕ್ಕಳಿಗಾಗಿ ಕಿಂಚಿತ್ ಹಣವನ್ನೂ ಕೂಡಿಟ್ಟಿರಲಿಲ್ಲ. ಅವರಿಗೆ ಒಂದು ಸ್ವಂತ ಮನೆಯೂ ಇರಲಿಲ್ಲ!
ಆದರೆ, ಶಾಸ್ತ್ರಿಯವರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು. ಉತ್ತರ ಪ್ರದೇಶದ ಮೊಗಲ್ ಸರಾಯಿಯಲ್ಲಿ ತೀರಾ ಬಡ ಕುಟುಂಬದಲ್ಲಿ ಹುಟ್ಟಿ, ಭಾರತದಂತಹ ಮಹಾನ್ ದೇಶದ ಪ್ರಧಾನಮಂತ್ರಿಯಾಗಿ, ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರೆನಿಸಿದ ಶಾಸ್ತ್ರಿಯವರ ಸಾಧನೆ ಬಹು ದೊಡ್ಡದು. ತಮ್ಮ ಧೀಮಂತಿಕೆ, ಪ್ರಾಮಾಣಿಕತೆ, ಕಾರ್ಯನಿಷ್ಠೆ, ಆಡಳಿತ ಸಾಮರ್ಥ್ಯಗಳ ಬಲದಿಂದ ಆ ಎತ್ತರಕ್ಕೆ ಏರಿದ ಶಾಸ್ತ್ರಿಯವರು ನುಡಿದಂತೆ ನಡೆದವರು.
ಆದ್ದರಿಂದಲೇ, “ಶಾಸ್ತ್ರಿ ವ್ರತ” ಅಂದರೆ ಸೋಮವಾರ ರಾತ್ರಿ ಉಪವಾಸಕ್ಕಾಗಿ ಅವರು ಕರೆ ನೀಡಿದಾಗ, ಕೋಟಿಗಟ್ಟಲೆ ಜನರು ಆ ಕರೆಗೆ ಓಗೊಟ್ಟು ಆಹಾರ ಉಳಿಸಲು ಸಹಕರಿಸಿದರು. ಭಾರತೀಯರು ತೀರಾ ಸಂಕಟದ ಪರಿಸ್ಥಿತಿಯಲ್ಲಿ ಇದ್ದಾಗ, ಶಾಸ್ತ್ರಿಯವರು ನೀಡಿದ “ಜೈ ಜವಾನ್! ಜೈ ಕಿಸಾನ್!” ಎಂಬ ಘೋಷವಾಕ್ಯ ಭಾರತದ ಮೂಲೆಮೂಲೆಯಲ್ಲಿಯೂ ಜನರಲ್ಲಿ ಧೈರ್ಯ, ಸ್ಥೈರ್ಯ ತುಂಬಿತು. ಇಂದಿನ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಪತಿಗಳ ಬದುಕಿಗೆ ಹೋಲಿಸಿದಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರದು ನಂಬಲಿಕ್ಕಾಗದ ಸರಳ ಬದುಕು. ಮಹಾತ್ಮಾ ಗಾಂಧಿಯವರ ಸರಳ ಜೀವನವನ್ನೇ ತಮ್ಮ ಆದರ್ಶವಾಗಿ ಇಟ್ಟುಕೊಂಡು ಬಾಳಿದವರು ಶಾಸ್ತ್ರಿ. ಆದ್ದರಿಂದಲೇ, ಢೆಲ್ಲಿಯಲ್ಲಿರುವ ಅವರ ಸ್ಮಾರಕ “ವಿಜಯ ಘಾಟ್”ಗೆ ಪ್ರತಿ ದಿನವೂ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಂದ ಅವರಿಗೆ ಶ್ರದ್ಧಾಂಜಲಿ ಅರ್ಪಣೆ. ಶಾಸ್ತ್ರಿಯವರು ಭಾರತ ಹಾಗೂ ವಿಶ್ವದ ಜನರಿಂದ ಗಳಿಸಿದ್ದು ಅಪಾರ ಗೌರವ.
ಬದುಕಿನಲ್ಲಿ ಏನನ್ನು ಗಳಿಸಬೇಕು? ಎಷ್ಟು ಉಳಿಸಬೇಕು? ಎಂಬುದಕ್ಕೆ ಕೋಟಿಗಟ್ಟಲೆ ಜನರ ಗೌರವಾದರ ಗಳಿಸಿ, ಶಾಶ್ವತ ನೆನಪು ಉಳಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬದುಕು ಮಹಾನ್ ನಿದರ್ಶನ.
(ನವಂಬರ್ 2018)