ಪರಿಚಯ62: ಗಿಡಗಂಟೆಯಾ ಕೊರಳು

ಲೇಖಕಿ: ಪದ್ಮಾ ಶ್ರೀರಾಮ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
ವರುಷ: 2009         ಪುಟ: 122       ಬೆಲೆ: ರೂ.78/-

ಕನ್ನಡದಲ್ಲಿ ಪ್ರಕಟವಾಗಿರುವ ಗಿಡಮರಬಳ್ಳಿಗಳ ಮಾಹಿತಿ ನೀಡುವ ಪುಸ್ತಕಗಳು ವಿರಳ. ಅಂತಹ ವಿರಳ ಪುಸ್ತಕಗಳ ಸಾಲಿಗೆ ಸೇರಿದೆ ಪದ್ಮಾ ಶ್ರೀರಾಮ ಅವರ “ಗಿಡಗಂಟೆಯಾ ಕೊರಳು". “ಮಯೂರ" ಮಾಸಪತ್ರಿಕೆಯಲ್ಲಿ 20 ತಿಂಗಳುಗಳ ಕಾಲ ನಿರಂತರವಾಗಿ ಪ್ರಕಟವಾದ ಅವರ ಸಸ್ಯ ಲೇಖನಗಳೂ, ಕಸ್ತೂರಿ, ಕರ್ಮವೀರ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳೂ ಇದರಲ್ಲಿವೆ.

ಸುಮ ಸಂಕುಲದ ಅಂಕುರಾದ್ಭುತ ಎಂಬ ಮೊದಲ ಲೇಖನವು ಪರಕೀಯ ಪರಾಗಸ್ಪರ್ಶ ಕ್ರಿಯೆಗಾಗಿ ಸಸ್ಯಗಳು ಅಳವಡಿಸಿಕೊಂಡಿರುವ ಚತುರ ಹಾಗೂ ವಿಸ್ಮಯಕಾರಿ ವಿಧಾನಗಳನ್ನು ವಿವರಿಸುತ್ತದೆ. ಆರಂ ಲಿಲ್ಲಿ ಹೂ ಪರಾಗಸ್ಪರ್ಶಕ್ಕಾಗಿ ಜೀರುಂಡೆಯನ್ನು ಆಕರ್ಷಿಸುವ, ಒಂದು ದಿನ ಬಂಧಿಸಿಡುವ ಮತ್ತು ಬಿಡುಗಡೆ ಮಾಡುವ ವಿವರಗಳು ಆಸಕ್ತಿದಾಯಕ. ಅದೇ ರೀತಿಯಲ್ಲಿ, ಆಫ್ರಿಸ್ ಆರ್ಕಿಡ್ ಹೂ ಹೆಣ್ಣು ಕಣಜವನ್ನು ಹೋಲುವ ಲ್ಯಾಬೆಲ್ಲಂ (ವಿಶೇಷ ದಳದ) ಮೂಲಕ ಗಂಡು ಕಣಜವನ್ನು ಆಕರ್ಷಿಸುವ ಬಗೆ ಅಚ್ಚರಿದಾಯಕ. ಬ್ಲಾಕಿಯಾ ಕ್ಲೊರಾಂತ ಎಂಬ ಉಷ್ಣವಲಯದ ಪುಟ್ಟ ಪುಷ್ಪವಂತೂ ಜಾಣ್ಮೆಯಿಂದ ಇಲಿಗಳ ಮೂಲಕ ಪರಾಗಸ್ಪರ್ಶ ಮಾಡಿಕೊಳ್ಳುವ ತಂತ್ರವಂತೂ ವಿಸ್ಮಯದಾಯಕ.

ತರುಲತೆಗಳನ್ನು ಕುರಿತ ಚಿಂತನೆ ಎಂಬ ಎರಡನೆಯ ಲೇಖನದಲ್ಲಿ ವಿವಿಧ ದೇಶಗಳಲ್ಲಿ ಮತ್ತು ಭಿನ್ನಭಿನ್ನ ಪರಿಸ್ಥಿತಿಗಳಲ್ಲಿ ಸಸ್ಯಗಳನ್ನು ಮನುಷ್ಯರು ಯಾವ್ಯಾವ ರೀತಿಗಳಲ್ಲಿ ಬೆಳೆಸುತ್ತಾರೆ ಎಂಬ ವಿವರಗಳಿವೆ. ಮರುಗ -ಮಲ್ಲಿಗೆ -ಪಚ್ಚೆ -ಮುಡಿವಾಳಗಳಿಗೆ ಪರಿಮಳದ ಉದಕವನು ಎರೆದವರಾರು? ಎಂಬ ಪ್ರಶ್ನೆಯನ್ನು ಎತ್ತುತ್ತಾರೆ. “ಹೂಗಳ ಕಂಪು ನನ್ನ ಸ್ಮೃತಿ ಕೋಶವನ್ನು ಜಾಗೃತಗೊಳಿಸುತ್ತದೆ. ಒಂದು ವಿಶಿಷ್ಟ ಕಂಪಿನಿಂದ ಒಂದು ವಿಶಿಷ್ಟ ನೆನಪು. ಇರುವಂತಿಗೆಯ ಕಂಪು, ಅಳಿದ ನನ್ನ ತಾಯಿಯ ನೆನಪು" ಎಂದು ದಾಖಲಿಸುತ್ತಾರೆ. ಕಳ್ಳಿಗಳ ಚಿತ್ರವಿಚಿತ್ರ ಹೆಸರುಗಳ ಬಗ್ಗೆ ಬರೆಯುತ್ತಾ, ಗೋಲ್ದನ್ ಬ್ಯಾರೆಲ್ ಮತ್ತು ಮದರ್-ಇನ್-ಲಾಸ್ ಸೀಟ್ ಎಂಬ ಹೆಸರಿನ ಕಳ್ಳಿಯನ್ನು ಪರಿಚಯಿಸುತ್ತಾರೆ. ದಪ್ಪಗೆ ಗುಂಡಗೆ ಗುಂಡುಕಲ್ಲಿನ ತರಹದ ಈ ಕಳ್ಳಿಗೆ ಬಂಗಾರದ ಪೀಪಾಯಿ ಎಂಬ ಹೆಸರೇನೋ ಚಂದ; ಆದರೆ ಅತ್ತೆಯ ಪೀಠ ಎನ್ನುವುದ್ಯಾಕೆ? ಎಂದು ಪ್ರಶ್ನಿಸುತ್ತಾರೆ.

ಅರಳುವ ಹೂವಿನೆಡೆ ಹೊರಳಿ ನೋಡಿದಾಗ… ಎಂಬ ಮೂರನೆಯ ಲೇಖನದಲ್ಲಿ “ಹಿಮಾಲಯದ ಪುಷ್ಪಕಣಿವೆಯನ್ನು ಎಲ್ಲರೂ ನೋಡುವುದು ಅಸಾಧ್ಯ. ಆದರೆ ನಮ್ಮಲ್ಲೇ ಕಂಡು ಬರುವ ಹೂಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದೇನೂ ಅಸಾಧ್ಯದ ಮಾತಲ್ಲ” ಎಂಬ ಅರಿವು ಮೂಡಿಸುವ ಮಾತಿದೆ. "ನಮ್ಮಲ್ಲಿರುವ ಸಸ್ಯಗಳ, ಪುಷ್ಪಗಳ ಪರಿಚಯವೇ ನಮಗೆ ಕಡಿಮೆ" ಎನ್ನುವ ಲೇಖಕಿ, ಕಳೆದ ವರುಷ ತಮಿಳುನಾಡಿನ ಎರ್ಕಾಡಿನಲ್ಲಿ, ಅದರ ಮುಂಚಿನ ವರುಷ ಕೇರಳದ ವೈನಾಡಿನಲ್ಲಿ ಕುರುಂಜಿ ಹೂ ಅರಳಿದಾಗ ಸುದ್ದಿಯಾದದ್ದನ್ನು ಪ್ರಸ್ತಾಪಿಸುತ್ತಾರೆ. (ಯಾಕೆಂದರೆ ಕುರಿಂಜಿ ಹೂ ಈ ಪ್ರದೇಶಗಳಲ್ಲಿ ಅರಳುವುದು ಎಂಟು ಅಥವಾ ಹನ್ನೆರಡು ವರುಷಗಳ ಅಂತರದಲ್ಲಿ). ಆದರೆ, “ತೊಂಬತ್ತರ ಆಗಸ್ಟ್, ಸಪ್ಟಂಬರ್ ತಿಂಗಳುಗಳಲ್ಲಿ ಕರ್ನಾಟಕದ ಬಾಬಾಬುಡನ್‌ಗಿರಿಯಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಅರಳಿದವು. ಇಂತಹ ಒಂದು ಪ್ರಕೃತಿದತ್ತ ಅದ್ಭುತಕ್ಕೆ ಸಲ್ಲಬೇಕಾಗಿದ್ದ ಮಾನ್ಯತೆ, ಪ್ರಚಾರ ಸಿಗಲಿಲ್ಲ" ಎಂದು ನೊಂದು ಬರೆದಿದ್ದಾರೆ. (ಈಗ ಎರಡು ದಶಕಗಳ ನಂತರ ಪರಿಸ್ಥಿತಿ ಕೊಂಚ ಬದಲಾಗಿದೆ. ಈ ವರುಷ 2022ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ, ಮುಳ್ಳಯ್ಯನ ಗಿರಿಯಲ್ಲಿ ಕುರಿಂಜಿ ಅರಳಿದಾಗ ಆ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ದೂರದೂರದ ಊರುಗಳಿಂದಲೂ ಅಲ್ಲಿಗೆ ಧಾವಿಸಿದ್ದರು; ಅವರ ವಾಹನಗಳು ಕಿಲೋಮೀಟರ್ ದೂರದ ವರೆಗೆ ಸಾಲುಗಟ್ಟಿ ನಿಂತಿದ್ದವು.)

ಯುಫೋರ್ಬಿಯಾ ಎಂಬ ಮಂಜಿನ ಖನಿ, ಶ್ವೇತ ನಕ್ಷತ್ರ ಅರಳಿಸುವ ಹಾಲೆಮರ, ನೀಲಿ ಮೊಗದ ಚಲುವೆ ಕುರಿಂಜಿ, ಹೃದಯ ಕದಿಯುವ ಕಳ್ಳಿ (ಬ್ರಹ್ಮಕಮಲ), ಮೂರು ಲೋಕದ ಮೋಹ ಕರೆವಂತೆ (ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ), ರಾಫ್ಲೆಸಿಯಾ (ಪ್ರಚಂಡ ದುರ್ನಾತ ಬೀರುವ ಹೂ), ಇಂದು ಕೆಂದಾವರೆ ದಳದಳಿಸೆ ದಾರಿಯಲಿ,  ಫರ್ನ್‌ಗಳು (ಜರೀಗಿಡ), ಗ್ಲೋರಿ ಲಿಲ್ಲಿ, ಮುಟ್ಟಿದರೆ ಮುನಿ ಔಷಧಿಯ ಖನಿ, ಸಗ್ಗವಕ್ಕಿಯೂ ಏಡಿಕೊಂಡಿಯೂ, ಜೀವಂತ ಪಳೆಯುಳಿಕೆ - ಗಿಂಕೊ - ಇವು ಆಯಾ ಹೆಸರಿನ ಸಸ್ಯಗಳನ್ನು ಪರಿಚಯಿಸುವ ಲೇಖನಗಳು.

ಸಸ್ಯಲೋಕದ ರಾಜಕುಮಾರರು - ಇದು ಬೈನೆ ಮರ, ತಾಳೆಮರ, ಅಸಾಯಿ ಪಾಮ್, ಡೆಸ್‌ಮಾನ್‌ಕಸ್ ಪಾಮ್ ಇತ್ಯಾದಿ ಪಾಮ್ ಕುಟುಂಬಕ್ಕೆ ಸೇರಿದ ಸಸ್ಯಗಳ ಪರಿಚಯಾತ್ಮಕ ಬರಹ. ಸಂಜೆ ಅರಳುವ ಸೊಬಗಿಯರು ಲೇಖನದಲ್ಲಿದೆ ಅಂತಹ ಹೂಗಳ ಪರಿಚಯ - ಸಂಜೆಮಲ್ಲಿಗೆ (ಚಂದ್ರ ಮಲ್ಲಿಗೆ, ಮಧ್ಯಾಹ್ನ ಮಲ್ಲಿಗೆ, ಬಯ್ಯ ಮಲ್ಲಿಗೆ), ಪಾರಿಜಾತ, ರಾತ್ರಿರಾಣಿ, ಬ್ರನ್‌ಫಿಲ್ಸಿಯಾ, ಹಾಗೂ ನೀಲಗಿರಿ ಬೆಟ್ಟಗಳ ಇನಾತಿರಾ ಟೆಟ್ರಾಪ್ಟಿರಾ. “ಪಂಚವಟಿ" ಎಂಬ ಬರಹ ಫೈಕಸ್ ಕುಟುಂಬಕ್ಕೆ ಸೇರಿದ ಆಲ, ಅಶ್ವತ್ಥ, ಅತ್ತಿ ಹಾಗೂ ಗೋಣಿ ಮರಗಳನ್ನು ಪದಜಾಲದಲ್ಲಿ ಚಿತ್ರಿಸುವ ಬರಹ.

ಬೆಟ್ಟಗಳ ನಾಡಿನ ಸುಮಸಂಕುಲ ಲೇಖನವು ಊಟಿಯ ಜಗದ್ವಿಖ್ಯಾತ "ಫ್ಲವರ್ ಶೋ" ವರ್ಣಿಸುತ್ತದೆ. ಆನೆಸೌತೆಕಾಯಿ ಮರ, ನಾಗಲಿಂಗ ಪುಷ್ಪದ ಮರ ಮತ್ತು ಬಾವೋಬಾಬ್ ಮರಗಳನ್ನು ಪರಿಚಯಿಸುವ ಬರಹ “ವಿಚಿತ್ರ ವೃಕ್ಷಗಳು”. ಬೇಲಿಹೂಗಳು, ಹಗಲಹಿರಿಮೆ ಎಂಬ ಚಂದದ ಕನ್ನಡದ ಹೆಸರಿನ ಮಾರ್ನಿಂಗ್ ಗ್ಲೋರಿ ಹೂಗಳ (ಸಸ್ಯಶಾಸ್ತ್ರೀಯ ಹೆಸರು ಐಪೋಮಿಯಾ) ನೋಟ “ಬನದಲಿ ಒಂದು ದಿನ..." ಬರಹದಲ್ಲಿ ಲಭ್ಯ. “ನೂರು ಬಣ್ಣ ನೂರು ಲೋಕ" ಲೇಖನ ಲಂಡನ್ ಪುಷ್ಪಲೋಕದ ದಾಖಲಾತಿ.

ಶೋಲಾ ಕಾಡಿನ ಶೋಕ ಗೀತೆ - ಇದು ಕರ್ನಾಟಕದ ಬಾಬಾಬುಡನ್‌ಗಿರಿ, ಕುದುರೆ ಮುಖ, ಬಿಳಿಗಿರಿರಂಗನ ಬೆಟ್ಟ ಮತ್ತು ತಮಿಳುನಾಡಿನ ನೀಲಗಿರಿ, ಕೊಡೈ, ಪಳನಿ ಬೆಟ್ಟಗಳಲ್ಲಿ ಕಂಡು ಬರುವ ಶೋಲಾ ಕಾಡುಗಳಿಗೆ ( 43 ವರುಷಗಳ ಮುಂಚೆ) ಮನುಷ್ಯರಿಂದ ಒದಗಿರುವ ದುಸ್ಥಿತಿಯನ್ನು ದಾಖಲಿಸುವ ಲೇಖನ. ಅವು ನಾಶವಾದರೆ ಮಾನವಕುಲದ ಉಳಿವಿಗೇ ಕುತ್ತು ಎಂಬುದನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಲೇಖಕಿ ಪದ್ಮಾ ಶ್ರೀರಾಮ.

ಆರ್ಕಿಡ್‌ಗಳ ಹುಚ್ಚು ಅಮೆರಿಕದ ಅಚ್ಚುಮೆಚ್ಚು ಬರಹದಲ್ಲಿ ಸಸ್ಯಲೋಕದ ಅದ್ಭುತಗಳಾದ ಆರ್ಕಿಡ್‌ಗಳ ಬಗ್ಗೆ ಹಲವಾರು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ ಲೇಖಕಿ. ಲೇಖನದ ಕೊನೆಯಲ್ಲಿರುವ “ಜೀವಂತವಾಗಿರುವ ಸಸ್ಯಗಳೂ ಸಹ ಒಂದು ದೇಶದ ಸಂಪತ್ತಲ್ಲವೇ?” ಎಂಬ ಪ್ರಶ್ನೆ ನಮ್ಮ ಚಿಂತನೆಯನ್ನು ಬಡಿದೆಬ್ಬಿಸುತ್ತದೆ.

ನಾವೆಲ್ಲ ದಿನನಿತ್ಯ ನೋಡುವ ಹಲವಾರು ಸಸ್ಯಗಳನ್ನು ಅತ್ಯಂತ ಸರಳ ಸುಂದರ ಕಾವ್ಯಮಯ ಭಾಷೆಯಲ್ಲಿ ಪರಿಚಯಿಸಿರುವುದು ಈ ಪುಸ್ತಕದ ವಿಶೇಷತೆ. ಸಸ್ಯವಿಜ್ನಾನದ ಬಗ್ಗೆ ಲೇಖನಗಳನ್ನು ಬರೆಯುವ ಸಸ್ಯವಿಜ್ನಾನಿಗಳು ಅಕಾಡೆಮಿಕ್ ಭಾಷೆಯಲ್ಲಿ, ವಿಷಯವನ್ನು ಜಟಿಲವಾಗಿಸಿ, ಓದುಗರಿಗೆ ಓದಲು ಕಷ್ಟವೆನಿಸುವ ರೀತಿಯಲ್ಲಿ ಬರೆಯುವುದು ಸಾಮಾನ್ಯ. ಹಾಗಿರುವಾಗ ಇಲ್ಲಿನ ಲೇಖನಗಳು ಓದುಗರಿಗೆ ಅರ್ಥವಾಗುವಂತೆ ಹೇಗೆ ಬರೆಯಬಹುದು ಎಂಬುದಕ್ಕೆ ಉತ್ತಮ ಮಾದರಿಗಳಾಗಿವೆ.