ಲೇಖಕಿ: ಸುಮಂಗಲಾ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2009 ಪುಟ: 150 ಬೆಲೆ: ರೂ.80/-
ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ ಅಜ್ಜಿಯೊಬ್ಬಳದು. ತನ್ನ ಅಂತ್ಯ ಸಮೀಪಿಸುತ್ತಿದ್ದಂತೆ, ಬದುಕಿನುದ್ದಕ್ಕೂ ತನ್ನ ಕಿವಿಯಲ್ಲಿದ್ದ ಮುತ್ತಿನ ಬುಗುಡಿಯನ್ನು ಅಚಾನಕ್ಕಾಗಿ ಎರಡನೆಯ ಮಗನ ಸ್ನೇಹಿತೆಗೆ ದಾನ ಮಾಡ್ತಾಳೆ. ಮೊದಲ ಸೊಸೆಗೆ ಅಥವಾ ಎರಡನೇ ಸೊಸೆಗೆ ಕೊಡಬಹುದಾಗಿತ್ತು. ಈ ಕ್ರಿಯೆಯ ಜಿಜ್ನಾಸೆ ಮತ್ತು ಆಕೆಯ ಮರಣಾ ನಂತರದ ಘಟನಾವಳಿಗಳು ಕತೆಯ ಹೂರಣ.
ಎರಡನೇ ಕತೆ ಸಂಕಲನದ ಶೀರ್ಷಿಕೆ “ಕಾಲಿಟ್ಟಲ್ಲಿ ಕಾಲುದಾರಿ”. ಕೆಲವು ದಿನಗಳ ರಜೆಯಲ್ಲಿ ದೂರದೂರಿನಿಂದ ತನ್ನೂರಿಗೆ ಮರಳಿದ ಯುವತಿ ತೆರೆದಿಡುವ ಕಥನ. ಅಲ್ಲಿ, ಅಪ್ಪ ಮತ್ತು ದಾಯಾದಿ ಅಣ್ಣನೊಂದಿಗೆ ಅವಳ ಪ್ರವಾಸ - ವರುಷಗಳ ಮುಂಚೆ ತನ್ನ ಅಪ್ಪ ಬಾಳಿದ್ದ, ಕೃಷಿ ಮಾಡುತ್ತಿದ್ದ, ಈಗ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಜಾಗಕ್ಕೆ. ಹಳೆಯ ದಿನಗಳನ್ನು ಅಪ್ಪ ನೆನೆಯುತ್ತಿದ್ದಂತೆ, ಇವಳಲ್ಲೂ ಭಾವನೆಗಳ ತಾಕಲಾಟ.
“ಒಂಟಿ ಗೆಜ್ಜೆ” ಅಮ್ಮ - ಮಗಳ ಸಂವಾದದಲ್ಲಿ ತೆರೆದುಕೊಳ್ಳುವ, ನೃತ್ಯವನ್ನು ಪ್ರೀತಿಸುವ ಎರಡು ಹೆಣ್ಣು ಜೀವಗಳ ಕತೆ. ಅಮ್ಮನಿಗೆ ಮದುವೆಯಾಗಿ ಹತ್ತು ವರುಷ ನೃತ್ಯ ಮಾಡಲಾಗದ ಅಸಹಾಯಕತೆ. ಕೊನೆಗೆ ಆಕೆ ಪುನಃ ಗೆಜ್ಜೆ ಕಟ್ಟಿ ನರ್ತಿಸತೊಡಗುತ್ತಾಳೆ. ಈಗ ಮಗಳು ಮಿನು ಮದುವೆಯಾಗಿದ್ದಾಳೆ. ಅದೊಂದು ದಿನ ಅಮ್ಮನನ್ನು ನೋಡಲು ಬಂದಾಗ, ಇಬ್ಬರೂ ಒಂಟಿ ಗೆಜ್ಜೆ ಕಟ್ಟಿ ನರ್ತಿಸುತ್ತಾರೆ. ಅನಂತರ, ತನ್ನ ಮನೆಗೆ ಮರಳಿದ ಮಿನು, ಅಮ್ಮನೊಂದಿಗೆ ಅನಿರೀಕ್ಷಿತ ಘಟನೆ ಹಂಚಿಕೊಳ್ಳುತ್ತಾ ಒಂದು ಮಾತು ಹೇಳುತ್ತಾಳೆ. ಅದರಿಂದಾಗಿ ಭಾವನೆಗಳ ಸ್ಫೋಟ.
"ನಗು ಕಳೆಯದಿರಲಿ” ಕತೆಯಲ್ಲಿ ನಿರೂಪಕಿ ಹೇಳುವುದು ಕಾಲೇಜು ದಿನಗಳ ನೆನಪುಗಳನ್ನು. ಅವಳ ಸಹಪಾಠಿ ಲತಾಳಿಗೆ ಅಸ್ತಮಾ ಮತ್ತು ದೃಷ್ಟಿದೋಷದ ಸಮಸ್ಯೆಗಳು. ಅದನ್ನೇ ದಾಳವಾಗಿಸಿಕೊಂಡು, ಗೆಳತಿಯರ ನೋಟ್ಸ್ ಪಡೆಯುತ್ತಾಳೆ. ಆದರೆ, ತಾನು ಇತರರಿಂದ ಸಂಗ್ರಹಿಸಿದ್ದ ನೋಟ್ಸ್ ಗೆಳತಿಯರೊಂದಿಗೆ ಹಂಚಿಕೊಳ್ಳೋದಿಲ್ಲ. ಕೊನೆಗೆ, ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದವಳು ಲತಾ. ಉದ್ಯೋಗಕ್ಕೆ ಸೇರಿದ ಆಕೆಗೆ ಮದುವೆಯಾಗಿ, ಮಗಳು ಹುಟ್ಟುತ್ತಾಳೆ. ಅನಂತರ ಆಕೆ ಕ್ಯಾನ್ಸರಿಗೆ ಬಲಿ. ಈಗ, ಲತಾಳ ಅಕ್ಕ ನಿರೂಪಕಿಯನ್ನು ಮನೆಗೆ ಕರೆದು, ಎರಡು ಟ್ರಂಕ್ ತುಂಬಿರುವ ನೋಟ್ಸನ್ನು ಕೊಡುತ್ತಾಳೆ.
"ನಮಸ್ತೆ ಭಾರತ್ ಗ್ಯಾಸ್” ಕತೆಯ ವೀರೇಶ, ಗ್ಯಾಸ್ ಡೀಲರನ ಆಫೀಸ್ ಸಹಾಯಕ. ಅವನದು ಬಡತನದ ಬಾಲ್ಯ. ಈಗ ಆಫೀಸಿನಲ್ಲಿ ಇಬ್ಬರು ಯುವತಿಯರು ಸಹೋದ್ಯೋಗಿಗಳು. ಅಂತಹ ಸನ್ನಿವೇಶದಲ್ಲಿ ಯುವಕನೊಬ್ಬನಲ್ಲಿ ಮೂಡುವ ಭಾವನೆಗಳ ಚಿತ್ರಣವೇ ಈ ಕತೆ. “ಬೆರಳಂಚಿನ ಬೆಳಕಿಂಡಿ" ನಿವೃತ್ತಿಯ ನಂತರ ಸ್ವಯಂಸೇವಾ ಸಂಸ್ಥೆಯಲ್ಲಿ ಅಕೌಂಟಿಂಗ್ ಉದ್ಯೋಗಕ್ಕೆ ಸೇರಿದ ಮೋಹನರಾಯರು ಜನಪರ ಎನಿಸುವ ಕೆಲವು ಕೆಲಸಗಳಿಗೆ ಕೈಹಾಕಿದ್ದರ ಕಥನ. ಅದಕ್ಕಾಗಿ, ತನ್ನ ಕಚೇರಿಯ ಲೆಟರ್ ಹೆಡ್ ಬಳಸಿದ್ದರಿಂದಾಗಿ, ಕೊನೆಗೆ ಆ ಕೆಲಸಕ್ಕೆ ರಾಜೀನಾಮೆ ಕೊಡಬೇಕಾದ ಅನಿವಾರ್ಯತೆ.
“ಎಂದೂ ಒಡೆಯದ ಬಳೆಗಳು” ಕತೆಯಲ್ಲಿ ನಿರೂಪಕಿ ಹಂಚಿಕೊಳ್ಳುವ ಎರಡು ಸನ್ನಿವೇಶಗಳು. ರಾಜಸ್ಥಾನಕ್ಕೆ ಹೋಗಿದ್ದಾಗ, ಅಲ್ಲಿ ಭೇಟಿಯಾದ ಅವಿವಾಹಿತೆ ರಾಜೋರಿಯ ಬಲಗೈ ತುಂಬ ಬಳೆಗಳು. ಆದರೆ ಅವಳ ಎಡಗೈಯಲ್ಲಿ ಬಳೆಗಳಿಲ್ಲ. ಅದು ಪೋಲಿಯೋದಿಂದಾಗಿ ಮೋಟು. ಆಫೀಸಿಗೆ ಮರಳಿದಾಗ, ಪ್ರತಿ ದಿನ ಟೀ ತಂದುಕೊಡುವ ಕಮಲಳ ಕೈ ಗಮನಿಸಿದಾಗ ಕಾಣಿಸಿದ್ದು ಎರಡೇ ಬಳೆಗಳು. ಈ ಸನ್ನಿವೇಶಗಳು ಚಿಮ್ಮಿಸುವ ಭಾವಗಳೇ ಕತೆಯ ಜೀವಾಳ.
“ಗೆಜ್ಜೆಹೆಜ್ಜೆಗಳ ಲಾಸ್ಯ" ಕಚೇರಿಯ ಪುರುಷ ಮತ್ತು ಮಹಿಳಾ ಸಹೋದ್ಯೋಗಿಯ ಅಂತರಂಗದ ಮಾತುಗಳ ಲಾಸ್ಯ. “ದಿನಾಂತದ ಗಳಿಗೆಯಲಿ” ನಯನಳ ವಿಲಕ್ಷಣ ಭೇಟಿಯ ಕಥನ: ಅವಳ ಸಹೋದ್ಯೋಗಿ ಧಿನೇಶ ಕೆಲಸ ತೊರೆದು ಹೋದಾಗ ಅವನನ್ನು ಹುಡುಕಿಕೊಂಡು ಬರುವ ಅವನಣ್ಣ (ಪ್ರಾಧ್ಯಾಪಕ)ನ ಜೊತೆಗೆ. ಈತನ ಬಗ್ಗೆ ಅವಳಲ್ಲಿ ಹಿರಿಯಣ್ಣ ಎಂಬ ಭಾವನೆ.