ಪರಿಚಯ24: ದಿನಚರಿಯ ಕಡೇ ಪುಟದಿಂದ (ಕತೆಗಳು)

ಲೇಖಕಿ: ಜಯಶ್ರೀ ಕಾಸರವಳ್ಳಿ
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪ್ರಕಟಣಾ ವರುಷ: 2014          ಪುಟ: 138           ಬೆಲೆ: ರೂ. 110/-

ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ವಿಶಿಷ್ಟ ಸಂವೇದನೆಯ ಕತೆಗಾರ್ತಿಯೆಂದು ಗುರುತಿಸಲ್ಪಟ್ಟಿರುವ ಜಯಶ್ರೀ, "ನನ್ನ ಮಾತಿ"ನಲ್ಲಿ ಬಾಲ್ಯದ ಘಟನೆಯೊಂದನ್ನು ಹಂಚಿಕೊಂಡು (ಮೂರು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೊಬ್ಬಳು, ಗಂಡು ಮಗುವಿಗಾಗಿ ಮನೆಯವರೆಲ್ಲರ ಒತ್ತಾಯಕ್ಕೆ ಮತ್ತೆ ಗರ್ಭಿಣಿಯಾಗಿ, ಪುನಃ ಹೆಣ್ಣು ಹೆತ್ತಾಗ ಮಾಡುವ ಬಿಡುಗಡೆಯ ಉದ್ಗಾರ) ಹೀಗೆ ಬರೆಯುತ್ತಾರೆ: “ಬರೆಯುವ ಪ್ರತಿ ಕ್ಷಣದಲ್ಲೂ ಬಾಲ್ಯದ ಈ ಘಟನೆ ನನಗೆ ನೆನಪಿಗೆ ಬರುತ್ತಿರುತ್ತದೆ. ಪ್ರಾಯಶಃ ಎಲ್ಲವೂ ಒಂದು ಬಿಡುಗಡೆಯ ಪ್ರಯತ್ನವೇ. ಹತ್ತು ಹಲವು ಗೋಜಲುಗಳಿದೊಡಗೂಡಿದ ಪ್ರಸ್ತುತ ಸ್ಥಿತಿಯಲ್ಲಿ - ಪ್ರತಿಯೊಂದು ವಿಚಾರವೂ ಅಸ್ಪಷ್ಟ, ಅಗೋಚರಗಳ ಮೂಟೆ ಕಟ್ಟಿಕೊಳ್ಳುತ್ತಾ ನಮ್ಮಲ್ಲೇ ಅಸಂಗತವಾಗುತ್ತಿರುವಾಗ ಬರೆಯುವ ಪ್ರತಿ ಕ್ಷಣ - ಎಳೆ ಕಡಿಯದ ಶ್ಯಾವಿಗೆಯ ಧಾರೆಯಂತೆ ಅಕ್ಷರಗಳು ಸ್ಫುಟವಾಗಿ ಮೂಡಿ, ಕಾಗದದಲ್ಲಿ ನಿಖರ ರೂಪ ತಾಳಿ ಅಚ್ಚೊತ್ತಿಸಿಕೊಳ್ಳುತ್ತಾ ಸ್ಪಷ್ಟವಾಗುವ ಪರಿಯೇ ಎಷ್ಟೋ ಸಲ ನನಗೆ ಸೋಜಿಗ ತಂದಿದೆ.
ಕತೆ ಹೇಗೆ ಹುಟ್ಟುತ್ತದೆ ಎನ್ನುವುದಕ್ಕೆ ಇವತ್ತಿಗೂ ನನ್ನಲ್ಲಿ ಸ್ಪಷ್ಟ ಉತ್ತರವಿಲ್ಲ. ಆದರೆ ಹುಟ್ಟಿದ ನಂತರ ಮನಸ್ಸು ನಿಚ್ಚಳವಾಗಿ, ನಿರಾಳವಾಗುತ್ತ ಖಾಲಿಯಾಗುವ ಆ ಒಂದು ಘಳಿಗೆ, ಬಹುಶಃ ಬಿಡುಗಡೆಯ, ಸಂತಸದ ಕ್ಷಣ!”

ಮೊದಲನೆಯ ಕತೆ "ಕೊಪ್ಪರಿಕೆ ಹೊತ್ತವರು”. ಕೊನೆಯ ವರೆಗೂ ಕುತೂಹಲವನ್ನು ಉಳಿಸಿಕೊಳ್ಳುವ ಈ ಕತೆ, ಕೊನೆಗೂ ಕೊಪ್ಪರಿಕೆ ಹೊತ್ತವರು ಯಾರು ಎಂಬ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಕಾಡಿನ ಅಂಚಿನ ಹಳ್ಳಿಯ ಮನೆಯೊಂದಕ್ಕೆ ಅಚಾನಕ್ಕಾಗಿ ಬಂದು, ಎಲ್ಲ ಕೆಲಸಗಳಿಗೂ ತಯಾರಾಗಿ ನಿಲ್ಲುವ ಸೀನೂಕಕ್ಕನ ಕಥನವನ್ನು ನಮ್ಮದೇ ಮನೆಯಲ್ಲಿ ನಡೆಯುವಂತೆ ಕಟ್ಟಿಕೊಟ್ಟಿದ್ದಾರೆ ಕತೆಗಾರ್ತಿ. ಪೊಲೀಸ್ ವ್ಯವಸ್ಥೆಯ ಕರಾಳತೆಯನ್ನು ಚಿತ್ರಿಸುವಲ್ಲಿಯೂ ಕತೆ ಗೆದ್ದಿದೆ.

"ಅಂಬುಜಾ ಕಂಡದ್ದೇನು?" ಎಂಬ ಎರಡನೆಯ ಕತೆಯ ನಾಯಕಿ ಅಂಬುಜಾ ಹಳ್ಳಿಯಲ್ಲೇ ಹುಟ್ಟಿ, ಬೆಳೆದು, ಮದುವೆಯಾಗಿ ಚೆನ್ನೈಗೆ ಬಂದವಳು. ಅಡ್ಡಾದಿಡ್ಡಿ ಬೆಳೆದಿದ್ದ ಅವಳು ಮೊದ್ದು ಅನಿಸಿಕೊಂಡವಳು. ಚೆನ್ನೈಗೆ ಬಂದ ನಂತರವೂ ಮನೆಯ ಹೊಸ್ತಿಲು ದಾಟದವಳು. ಕೊನೆಗೊಂದು ದಿನ ಅವಳು ಎಲ್ಲ ಹಿಂಜರಿಕೆ, ಭಯಗಳನ್ನು ಕಿತ್ತೊಗೆದು, ಮನೆಯಿಂದ ಹೊರಹೋಗಿ ಹಿಂತಿರುಗುತ್ತಾಳೆ. ಈ ಅವಧಿಯಲ್ಲಿ ಅವಳಲ್ಲಿ ಆಗುವ ಅಸಾಧಾರಣ ಪರಿವರ್ತನೆಯ ಕಥನ ಇದು.

“ಒಬ್ಬ ಕೊಲೆಗಾರನನ್ನು ನೋಡುವುದು ಹೇಗೆ?” ಎಂಬ ಕತೆ, ತನ್ನ ಮುಕ್ತಾಯದ ತಿರುವಿನಿಂದಾಗಿ ಬಹುಕಾಲ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಕತೆಯ ಉದ್ದಕ್ಕೂ ಕಣ್ಣನ್ ಎಂಬ ನೆರೆಮನೆಯ ಯುವಕನ ಒಳ್ಳೆಯತನವನ್ನು ಹಲವು ವಿವರಗಳೊಂದಿಗೆ ಚಿತ್ರಿಸುವ ಕತೆ ಕೊನೆಯಲ್ಲಿ, ಅನಿರೀಕ್ಷಿತವಾಗಿ ಆತನ ಇನ್ನೊಂದು ಮುಖವನ್ನು ತೆರೆದಿಡುತ್ತದೆ. ಇದನ್ನು ಓದಿದ ನಂತರ ಮನುಷ್ಯರನ್ನೂ ಅವರ ಉದ್ದೇಶಗಳನ್ನೂ ಮುಖವಾಡಗಳನ್ನೂ ತಿಳಿಯುವುದು ಹೇಗೆ? ಎಂಬ ಪ್ರಶ್ನೆ ಓದುಗನನ್ನು ಕಾಡುತ್ತದೆ.

“ಮನೆಯೊಳಗೊಬ್ಬ" ಕತೆ ಒಂದು ಮನೆಯನ್ನು ಇಂಚಿಂಚೂ ವರ್ಣಿಸುತ್ತಾ ಬೆಳೆಯುತ್ತದೆ. ಬದುಕು ಶಾಶ್ವತ ಎಂಬ ಭ್ರಮೆಯಲ್ಲಿ ಪ್ರತಿಯೊಬ್ಬರೂ ಬದುಕು ಕಟ್ಟಿಕೊಂಡು, ಅದರಲ್ಲೇ ಬಂಧಿಯಾಗುವ ವಿಪರ್ಯಾಸವನ್ನು ಸಾಕ್ಷಾತ್ಕರಿಸುತ್ತದೆ. ಮನುಷ್ಯ ನಿಜಕ್ಕೂ ಒಂಟಿಯೇ ಎಂಬ ಸತ್ಯವನ್ನೂ, ವೃದ್ಧಾಪ್ಯದ ಅವಸ್ಥೆಯನ್ನೂ ಸಮರ್ಥವಾಗಿ ತೆರೆದಿಡುತ್ತದೆ.

ಸಂಕಲನಕ್ಕೆ ಶೀರ್ಷಿಕೆ ಒದಗಿಸಿದ ಕತೆ “ದಿನಚರಿಯ ಕಡೇ ಪುಟದಿಂದ.” ತಾಯಿ ಸತ್ತಾಗ ಮಗಳಲ್ಲಿ ಮೂಡಿ ಬರುವ ನೆನಪುಗಳಲ್ಲಿ ಮತ್ತು ಭಾವನೆಗಳಲ್ಲಿ ಕತೆ ಬೆಳೆಯುತ್ತದೆ. ಮನೆ ಬಿಟ್ಟು ಬಂದು, ಪ್ರೀತಿಸಿದವನನ್ನು ಮದುವೆಯಾದ ಆ ತಾಯಿಯ  ಬದುಕಿನಲ್ಲಿ ಅನಂತರ ಆಕೆಗೆ ಪ್ರೀತಿ ಎಂಬುದು ಒಮ್ಮೆಯೂ ದಕ್ಕದೆ ಹೋದ ದಾರುಣತೆ ಅನಾವರಣವಾಗುತ್ತದೆ.