ಪನಾಮಾ ಸೊರಗು ರೋಗಕ್ಕೆ ಬಾಳೆ ಬೆಳೆ ಬಲಿ

ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕುನಿಯಾವೋನ್ ತಾಲೂಕಿನ ತಂಪಾದ ಮತ್ತು ತೇವಭರಿತ ಗಾಳಿ ಬಾಳೆ ಬೆಳೆಗೆ ಹೇಳಿ ಮಾಡಿಸಿದಂತಿದೆ. ಅಲ್ಲಿ ನೇಪಾಳದ ಗಡಿಯ ಪಕ್ಕದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಸುದರ್ಶನ್ ಮೌರ್ಯ ಅವರ ಐದು ಹೆಕ್ಟೇರ್ ಬಾಳೆ ತೋಟದಲ್ಲಿ ಬಾಳೆಗೊನೆಗಳು ಕೊಯ್ಲಿಗೆ ಸಿದ್ಧವಾಗಿವೆ. ಆದರೆ, ಮುಂದೇನಾಗುತ್ತದೋ ಎಂಬ ಭಯ ಅವರನ್ನು ಕಾಡುತ್ತಿದೆ. 

ಪ್ರತಿ ದಿನವೂ ತೋಟಕ್ಕೆ ಹೋಗುವ ಸುದರ್ಶನ್ ಮೌರ್ಯ, ಪ್ರತಿಯೊಂದು ಬಾಳೆಗಿಡ ಮತ್ತು ಅದರ ಎಲೆಗಳನ್ನು ಎಚ್ಚರದಿಂದ ಪರಿಶೀಲಿಸುತ್ತಾರೆ. ತೋಟದ ಅಂಚಿನಲ್ಲಿ, ಸಾಲುಸಾಲು ಬಾಳೆಗಿಡಗಳು ಒಣಗಿವೆ; ಅವುಗಳ ಎಲೆಗಳು ಬಣ್ಣಗೆಟ್ಟಿವೆ ಮತ್ತು ಅವುಗಳಲ್ಲಿ ಬಾಳೆಗೊನೆಗಳೇ ಇಲ್ಲ! ಅವರು ಭಾರವಾದ ಧ್ವನಿಯಲ್ಲಿ ಹೇಳುತ್ತಾರೆ, “ಕನಿಷ್ಠ ಇಂತಹ ೫,೦೦೦ ಬಾಳೆಗಿಡಗಳಿವೆ. ಕೋವಿಡ್-೧೯ ವೈರಸ್ ಧಾಳಿಯ ಇಂದಿನ ಕಠಿಣ ಪರಿಸ್ಥಿತಿಯಿಂದಾಗಿ ನಮಗೆ ನಷ್ಟವಾಗುತ್ತದೆಂದು ಗೊತ್ತಿತ್ತು. ಆದರೆ  ಸೊರಗುರೋಗದಿಂದ ಇಂತಹ ಅನಾಹುತ ನಾವು ನಿರೀಕ್ಷಿಸಿರಲಿಲ್ಲ. ಬಾಳೆಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಶುರುವಿಟ್ಟದ್ದು ಮೇ ತಿಂಗಳಿನಲ್ಲಿ. ನಂತರ ಜುಲಾಯಿ ತಿಂಗಳಿನಲ್ಲಿ ಬಾಳೆಗಿಡಗಳು ಸಾಯಲಿಕ್ಕೇ ಶುರುವಾದವು. ಎಲ್ಲ ಪೀಡೆನಾಶಕಗಳನ್ನೂ ರಾಸಾಯನಿಕಗಳನ್ನೂ ತಂದು ಬಾಳೆಗಿಡಗಳಿಗೆ ಸುರಿದಿದ್ದೇನೆ. ಕಳೆದ ಒಂದೂವರೆ ವರುಷದಲ್ಲಿ ಈ ತೋಟದ ನಿರ್ವಹಣೆಗಾಗಿ ೧೨ ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಈಗ ಇಲ್ಲಿನ ಬಾಳೆಗೊನೆ ಮಾರಿದರೆ, ನಾನು ಬಾಳೆ ತೋಟಕ್ಕೆ ಖರ್ಚು ಮಾಡಿದ ಹಣವೂ ನನಗೆ ಸಿಗಲಿಕ್ಕಿಲ್ಲ.” 

ಈ ಪರಿಸ್ಥಿತಿಗೆ ಕಾರಣ ಪನಾಮಾ ಸೊರಗುರೋಗ ಎಂಬ ಮಹಾಮಾರಿ. ಬೆಲ್ವ ಎಂಬ ಆ ಹಳ್ಳಿಯ ಇತರ ೨೦ ಬಾಳೆ ಬೆಳೆಗಾರರೂ ಪನಾಮಾ ಸೊರಗುರೋಗದ ಹೊಡೆತದಿಂದ ಕಂಗಾಲಾಗಿದ್ದಾರೆ. “ಕಳೆದ ನಾಲ್ಕೈದು ವರುಷಗಳಿಂದ ಈ ರೋಗದ ಸೋಂಕು ಬಾಧೆ ಇತ್ತು. ಆದರೆ, ಈ ವರುಷ ವಿಪರೀತ ಮಳೆಯಿಂದಾಗಿ ಅದು ವೇಗವಾಗಿ ಹರಡಿತು” ಎನ್ನುತ್ತಾರೆ ಒಂದು ಹೆಕ್ಟೇರಿನಲ್ಲಿ ಬಾಳೆ ಬೆಳೆದಿರುವ ಛೋಟು ಚೌಧರಿ.

ಸಿದ್ಧಾರ್ಥನಗರ ಜಿಲ್ಲೆಯನ್ನು ಭಾರತದಲ್ಲಿ ಪನಾಮಾ ಸೊರಗು ರೋಗ ವ್ಯಾಪಕವಾಗಿ ಹರಡಿರುವ ಜಿಲ್ಲೆ ಎಂದು ಗುರುತಿಸಲಾಗಿದೆ. ಈ ಮಹಾಮಾರಿ ಈಗ ಜಗತ್ತಿನ ಬಹುಪಾಲು ಜನಪ್ರಿಯ ಬಾಳೆತಳಿಗಳನ್ನು ನಿರ್ವಂಶದ ಅಂಚಿಗೆ ತಳ್ಳಿದೆ. ಫುಸೇರಿಯಮ್ ಒಕ್ಸಿಸ್ಪೊರಮ್ ಎಂಬ ಹಳೆಯ ಮಣ್ಣು-ಶಿಲೀಂಧ್ರದ ಹೊಸ "ತಳಿ" ಈ ಸೋಂಕಿಗೆ ಕಾರಣ. ಇದನ್ನು ಫುಸೇರಿಯಮ್ ಒಕ್ಸಿಸ್ಪೊರಮ್ ಕ್ಯುಬೆನ್ಸ್ ಟ್ರೋಪಿಕಲ್ ರೇಸ್-೪ ಅಥವಾ ಸರಳವಾಗಿ "ಟಿಆರ್೪" ಎಂದು ಸಸ್ಯ ವಿಜ್ನಾನಿಗಳು ಕರೆಯುತ್ತಾರೆ. ಜಗತ್ತಿನ ಸುಮಾರು ೧,೦೦೦ ಬಾಳೆತಳಿಗಳಲ್ಲಿ ೮೦೦ರಷ್ಟು ತಳಿಗಳಿಗೆ ಈ ಟಿಆರ್೪ ರೋಗಾಣು ಮರಣ ಶಾಸನ ಬರೆದಿದೆ. ಜಗತ್ತಿನಲ್ಲಿ ಬೆಳೆಯುವ ಬಾಳೆ ಬೆಳೆಯ ಶೇಕಡಾ ೫೦ರಷ್ಟು ಮತ್ತು ವಿವಿಧ ದೇಶಗಳಿಂದ ರಫ್ತಾಗುವ ಬಾಳೆಗೊನೆಗಳ ಶೇಕಡಾ ೯೯ರಷ್ಟು ಕ್ಯಾವೆಂಡಿಷ್ ತಳಿ ಆಗಿದ್ದು ಈ ರೋಗ ಅದನ್ನೂ ಬಿಟ್ಟಿಲ್ಲ. 

ಪನಾಮಾ ಸೊರಗು ರೋಗ ಮೊದಲು ಕಾಣಿಸಿಕೊಂಡದ್ದು ತೈವಾನಿನಲ್ಲಿ - ೫೦ ವರುಷಗಳ ಮುಂಚೆ. ಅನಂತರ ಖಂಡದಿಂದ ಖಂಡಕ್ಕೆ ವ್ಯಾಪಿಸಿದ ಈ ಮಹಾಮಾರಿ ಈಗ ೧೮ ದೇಶಗಳಿಗೆ ಹರಡಿದೆ. ಈ ಅವಧಿಯಲ್ಲಿ ಅದು ಖಂಡಗಳನ್ನು ಆಕ್ರಮಿಸಿದ ವರುಷಗಳು ಹೀಗಿವೆ: ೧೯೭೦ರಲ್ಲಿ ಏಷ್ಯಾ, ೧೯೯೭ರಲ್ಲಿ ಆಸ್ಟ್ರೇಲಿಯಾ, ೨೦೧೩ರಲ್ಲಿ ಆಫ್ರಿಕಾ ಮತ್ತು ೨೦೧೯ರಲ್ಲಿ ಲ್ಯಾಟಿನ್ ಅಮೇರಿಕಾ. ಇದೀಗ ಈ ಮಹಾಮಾರಿಯಿಂದಾಗಿ ವಾರ್ಷಿಕ ೨೫ ಬಿಲಿಯನ್ ಡಾಲರ್ ಮೌಲ್ಯದ "ಬಾಳೆ ಕೈಗಾರಿಕೆ” ನಲುಗಿದೆ. 

ಇದಕ್ಕಿಂತಲೂ ಮುಖ್ಯವಾಗಿ, ಜಗತ್ತಿನ ೪೦೦ ದಶಲಕ್ಷ ಜನರಿಗೆ ಬಾಳೆ ಎಂಬುದು ಪೋಷಕಾಂಶ ತುಂಬಿದ ಅಗ್ಗದ ಆಹಾರ ಮತ್ತು ಬಾಳೆಕೃಷಿ ಜೀವನೋಪಾಯದ ದಾರಿಯಾಗಿದ್ದು, ಈಗ ಅವರೆಲ್ಲರೂ ಇದನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ - ಇದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಓ.) ತಿಳಿಸುವ ಸಂಗತಿ. ಆ ಸಂಸ್ಥೆ ೨೦೧೩ರಲ್ಲಿ ರೂಪಿಸಿದ “ಟಿಆರ್೪ ಕಾರ್ಯತಂಡ” ಈ ರೋಗಾಣು ಬಗ್ಗೆ ಹೀಗೆನ್ನುತ್ತದೆ: "ಕೃಷಿ ಚರಿತ್ರೆಯಲ್ಲೇ ಅತ್ಯಂತ ಬಿರುಸಿನಿಂದ ಹರಡುವ ಮತ್ತು ಹಾನಿಕಾರಕ ಫಂಗಸ್‌ಗಳಲ್ಲೊಂದು; ಜಗತ್ತಿನ ಬಾಳೆ ಉತ್ಪಾದನೆಗೆ ಅತಿ ದೊಡ್ಡ ಅಪಾಯ.” 

ಬಿಹಾರ ಮತ್ತು ಉತ್ತರಪ್ರದೇಶದ ಕೆಲವು ರೈತರು ನಿಗೂಢ ರೋಗವೊಂದು ಬಾಳೆಯನ್ನು ಬಾಧಿಸುತ್ತಿದೆಯೆಂದು ೨೦೧೭ರಲ್ಲಿ ತಿಳಿಸಿದರು. ಆಗ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್) ಸರ್ವೆ ಶುರು ಮಾಡಿತು. ಅದರ ಅನುಸಾರ ಬಿಹಾರದಲ್ಲಿ ೩,೦೦೦ ಹೆಕ್ಟೇರಿಗಿಂತ ಅಧಿಕ ಪ್ರದೇಶದಲ್ಲಿ ಮತ್ತು ಉತ್ತರಪ್ರದೇಶದಲ್ಲಿ ೮,೪೭೪ ಹೆಕ್ಟೇರ್ ಪ್ರದೇಶದಲ್ಲಿ ಟಿಆರ್೪ ರೋಗ ಹರಡಿದೆ. ಭಾರತದಲ್ಲಿ ಇಸವಿ ೨೦೦೦ದ ಬಾಳೆ ಕೃಷಿ ಪ್ರದೇಶಕ್ಕೆ ಹೋಲಿಸಿದಾಗ, ೨೦೧೮ರಲ್ಲಿ ಅದು ಇಮ್ಮಡಿಯಾಗಿ ೪,೭೦,೦೦೦ ಹೆಕ್ಟೇರಿಗೆ ವ್ಯಾಪಿಸಿದೆ (ಫೆಬ್ರವರಿ ೨೦೨೦ರಲ್ಲಿ ಎಫ್‌ಎಓ ಪ್ರಕಟಿಸಿದ ಮಾರ್ಕೆಟ್ ಪರೀಕ್ಷಣೆ ಅನುಸಾರ) ಇದೇ ಹೊತ್ತಿನಲ್ಲಿ ಪನಾಮಾ ಸೊರಗುರೋಗ ಧಾಳಿ ಮಾಡಿದ್ದು ದುರದೃಷ್ಟ.

ಟಿಆರ್೪ ರೋಗಾಣು ಈ ವರೆಗೆ ಕ್ಯಾವೆಂಡಿಷ್ ಬಾಳೆಯ ಈ ತಳಿಗಳನ್ನು ಬಾಧಿಸಿದೆ ಎಂದು ಐಸಿಎಆರ್ ವಿಜ್ನಾನಿಗಳು ತಿಳಿಸುತ್ತಾರೆ: ಗ್ರಾಂಡ್ ನೈನೆ(ಜಿ೯), ರೊಬಸ್ಟಾ, ಭುಸಾವಲ್, ಬಸ್‌ರಾಯ್, ಶ್ರೀಮಂತ್. ಪಾರಂಪರಿಕ ಜನಪ್ರಿಯ ತಳಿಗಳಾದ ಮಾಲ್‌ಭೋಗ್ ಮತ್ತು ರಾಮ್‌ಭೋಗ್ ತಳಿಗಳನ್ನೂ ಈ ರೋಗಾಣು ಬಾಧಿಸಿದೆ. ಇವು ಸಣ್ಣರೈತರ ಪೋಷಕಾಂಶ ಮತ್ತು ಆದಾಯದ ಆಕರಗಳು.

ಗಡುಸಾದ ಕವಚದೊಳಗೆ ಇರುವ ಟಿಆರ್೪ ರೋಗಾಣುವಿನ ಸೂಕ್ಷ್ಮ ಸ್ಪೋರುಗಳು ಜಗತ್ತಿನ ಉದ್ದಗಲದಲ್ಲಿ ಹರಡಬಲ್ಲವು - ರೈತರ ಚಪ್ಪಲಿ ಮತ್ತು ಬೂಟ್ಸುಗಳಿಗೆ, ವಾಹನಗಳ ಟಯರುಗಳಿಗೆ ತಗಲಿಕೊಂಡು ಅಥವಾ ರೋಗಬಾಧಿತವಾದ ಮಣ್ಣು, ನೀರು ಹಾಗೂ ಬಾಳೆಸಸಿಗಳ ಮೂಲಕ. ಈ ಸ್ಪೋರುಗಳು ಮಣ್ಣಿನಲ್ಲಿ ೪೦ ವರುಷಗಳ ಅವಧಿ ಬದುಕಿ ಉಳಿಯಬಲ್ಲವು. ಒಂದು ಬಾಳೆಗಿಡವನ್ನು ಕೊಲ್ಲಲು ಒಂದೇ ಒಂದು ಸ್ಪೋರ್ ಸಾಕು. ಬಾಳೆಗಿಡದ ಸಂಪರ್ಕಕ್ಕೆ ಬಂದೊಡನೆ ಈ ಸ್ಪೋರ್ ನೂಲಿನಂತಹ ಎಳೆಗಳನ್ನು ಉತ್ಪಾದಿಸುತ್ತದೆ; ಇವು ಬೇರುಗಳಲ್ಲಿರುವ ಗಾಯಗಳು ಮತ್ತು ಸಹಜ ದ್ವಾರಗಳ ಮೂಲಕ ಬಾಳೆಗಿಡವನ್ನು ಪ್ರವೇಶಿಸುತ್ತವೆ. ನಂತರ, ಈ ಎಳೆಗಳು ಬಾಳೆಯ ಗೆಡ್ಡೆಗಳ ಮೂಲಕ ಬಾಳೆಗಿಡದ ನಾಳ ವ್ಯವಸ್ಥೆಯೊಳಗೆ ಬೆಳೆಯುತ್ತವೆ; ಈ ರೀತಿಯಲ್ಲಿ, ಬಾಳೆಗಿಡದೊಳಗೆ ನೀರು ಮತ್ತು ಪೋಷಕಾಂಶಗಳ ಚಲನೆಯನ್ನು ತಡೆಯುತ್ತವೆ. ಅಂತಿಮವಾಗಿ, ಬಾಳೆಗಿಡ ಸೊರಗಿ, ಸಾಯುತ್ತದೆ. 

ಸೊರಗು ರೋಗದಿಂದ ಬಾಳೆ ಉಳಿಸುವ ಪ್ರಯೋಗಗಳು
ಇಂತಹ ಒಂದು ಯಶಸ್ವಿ ಪ್ರಯೋಗ ಭಾರತದಲ್ಲೇ ನಡೆಯುತ್ತಿದೆ. ಕಳೆದ ಎರಡು ತಿಂಗಳುಗಳಿಂದ, ಬಿಹಾರದ ಸೀತಾಮಾರ್ಹಿ ಜಿಲ್ಲೆಯ ದುಮರಿಕಲಾ ಗ್ರಾಮದ ಬಿಪಿನ್ ಸಿಂಗ್ ಪ್ರತಿ ಭಾನುವಾರ ಒಂದು ದ್ರಾವಣವನ್ನು ತಯಾರಿಸುತ್ತಾರೆ. ಅದನ್ನು ತಯಾರಿಸುವ ವಿಧಾನ ತಿಳಿಸಿಕೊಟ್ಟವರು ಲಕ್ನೋದ ಕೇಂದ್ರ ಮಣ್ಣು ಲವಣತೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ನಾನಿ ಟಿ. ದಾಮೋದರನ್. ಆ ದ್ರಾವಣವನ್ನು ತನ್ನ ಅರ್ಧ ಹೆಕ್ಟೇರ್ ತೋಟದ ಬಾಳೆಗಿಡಗಳ ಬುಡಗಳ ಸುತ್ತಲೂ ಬಿಪಿನ್ ಸಿಂಗ್ ಸುರಿಯುತ್ತಾರೆ. “ಇದು ರೋಗ ನಿವಾರಣಾ ದ್ರಾವಣದಂತೆ ಕೆಲಸ ಮಾಡುತ್ತಿದೆ” ಎನ್ನುತ್ತಾರೆ ಕಳೆದ ಮೂರು ವರುಷಗಳಿಂದ ಬಾಳೆ ಬೆಳೆಯುತ್ತಿರುವ ಬಿಪಿನ್ ಸಿಂಗ್. “ಕಳೆದ ವರುಷ ಒಂದು ನೂರು ಬಾಳೆಗಿಡಗಳು ಪನಾಮಾ ಸೊರಗು ರೋಗಕ್ಕೆ ಬಲಿಯಾಗಿ, ನನಗೆ ೩೦,೦೦೦ ರೂಪಾಯಿ ನಷ್ಟವಾಯಿತು. ಆಗ ನಾನು ಆ ಸಂಶೋಧನಾ ಸಂಸ್ಥೆಯ ವಿಜ್ನಾನಿಗಳನ್ನು ಸಂಪರ್ಕಿಸಿದೆ. ಈಗ ನನ್ನ ತೋಟದ ಎಲ್ಲ ಬಾಳೆಗಿಡಗಳೂ ಹಸುರಾಗಿವೆ” ಎಂದು ಅವರು ವಿವರಿಸುತ್ತಾರೆ. 

ಪ್ರಧಾನ ವಿಜ್ನಾನಿ ದಾಮೋದರನ್, ಇದು "ಟ್ರೈಕೋಡರ್ಮಾ ಇಸಿ” ಎಂಬ ಇನ್ನೊಂದು ಶಿಲೀಂಧ್ರದ ದ್ರಾವಣ; ಅದು ಟಿಆರ್೪ರ ವಿರುದ್ಧ ಜೈವಿಕ ಶಿಲೀಂಧ್ರನಾಶಕವಾಗಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ನೀಡುತ್ತಾರೆ. ಈ ದ್ರಾವಣವು ಬಾಳೆಗಿಡದ ಬೇರುಗಳ ಸುತ್ತಲೂ ಆವರಣವೊಂದನ್ನು ರಚಿಸಿ, ಬಾಳೆಗಿಡದ ನಾಳ ವ್ಯವಸ್ಥೆಯೊಳಗೆ ಟಿಆರ್೪ ರೋಗಾಣುವಿನ ಪ್ರವೇಶವನ್ನು ತಡೆಯುತ್ತದೆ. ಅನಂತರ, ಇದು ಬಾಳೆಗಿಡದಲ್ಲಿ ರೋಗನಿರೋಧ ಪ್ರತಿಕ್ರಿಯೆಯನ್ನು ಶುರು ಮಾಡುತ್ತದೆ. ಇದರಿಂದಾಗಿ, ಶಿಲೀಂಧ್ರನಿರೋಧಕ ರಾಸಾಯನಿಕವೊಂದು ಬಾಳೆಗಿಡದಲ್ಲಿ ಬಿಡುಗಡೆಯಾಗಿ, ಗಿಡವನ್ನು ರಕ್ಷಿಸುತ್ತದೆ. ಈ ದ್ರಾವಣವನ್ನು "ಐಸಿಎಆರ್ - ಫ್ಯುಸಿಕೊಂಟ್” ಎಂದು ಹೆಸರಿಸಿರುವ ವಿಜ್ನಾನಿಗಳು, ಇದರ ಮೂಲಕ ಪನಾಮಾ ಸೊರಗು ರೋಗ ತೀವ್ರವಾಗಿ ಬಾಧಿಸಿದ್ದ ೧೧೦ ಹೆಕ್ಟೇರ್ ಪ್ರದೇಶದ ಬಾಳೆತೋಟಗಳನ್ನು ರಕ್ಷಿಸಿದ್ದೇವೆಂದು ಹೇಳಿಕೆ ನೀಡಿದ್ದಾರೆ. 

ಬಾಳೆಸಸಿಗಳನ್ನು ಟಿಆರ್೪-ನಿರೋಧಿ ಮಾಡಲಿಕ್ಕಾಗಿ ಜೈವಿಕ-ರೋಗನಿರೋಧ ತಂತ್ರಜ್ನಾನ ಬಳಸುವ ಪ್ರಯೋಗವೂ ಅದೇ ವಿಜ್ನಾನಿಗಳ ತಂಡದಿಂದ ನಡೆಯುತ್ತಿದೆ. ಇದು ಮನುಷ್ಯರಿಗೆ ವ್ಯಾಕ್ಸಿನೇಷನ್ ಮಾಡುವುದಕ್ಕೆ ಸಮಾನ. ಉತ್ತರಪ್ರದೇಶದ ಸೋಹಾವಾಲ್ ಜಿಲ್ಲೆಯಲ್ಲಿ ಟಿಆರ್೪ ರೋಗಾಣುವಿನಿಂದ ಬಾಧಿಸಲ್ಪಟ್ಟ ತೋಟಗಳಲ್ಲಿ ಇಂತಹ ೩,೦೦೦ ಸಸಿಗಳನ್ನು ನೆಟ್ಟು, ಪರಿಶೀಲಿಸಲಾಗುತ್ತಿದೆ.

ಆಸ್ಟ್ರೇಲಿಯಾದ ಕ್ವೀನ್ಸ್-ಲ್ಯಾಂಡಿನ ರಾಜಧಾನಿ ಬ್ರಿಸ್ಬೇನಿನ ಕ್ವೀನ್ಸ್-ಲ್ಯಾಂಡ್ ತಂತ್ರಜ್ನಾನ ವಿಶ್ವವಿದ್ಯಾಲಯದಲ್ಲಿ ಮತ್ತು ಚೀನಾದ ಹಲವು ಸಂಶೋಧನಾ ಸಂಸ್ಥೆಗಳಲ್ಲಿ ಪನಾಮಾ ಸೊರಗುರೋಗಕಾರಕ ಟಿಆರ್೪ ನಿರೋಧ ಗುಣವುಳ್ಳ ಬಾಳೆತಳಿಗಳನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ ಪ್ರಯೋಗಗಳು ಜರಗುತ್ತಿವೆ. ಯಾಕೆಂದರೆ, ಈ ದೇಶಗಳ ಒಂದು ಪ್ರಧಾನ ಬೆಳೆ ಬಾಳೆ. ಹಾಗೆಯೇ, ಹಲವಾರು ಖಾಸಗಿ ಸಂಸ್ಥೆಗಳು ಅಂತಹ ತಳಿ ಅಭಿವೃದ್ಧಿಗಾಗಿ ಸಂಶೋಧನೆಗಳನ್ನು ನಡೆಸುತ್ತಿವೆ. ಯಾಕೆಂದರೆ ಇದು ಬಾಳೆ ಆಧಾರಿತ ಬೃಹತ್ ಉದ್ದಿಮೆಗಳ ಅಳಿವು-ಉಳಿವಿನ ಪ್ರಶ್ನೆ. 

ಟಿಆರ್೪ ನಿರೋಧ ತಳಿ ಬಾಳೆ ಬೆಳೆಗಾರರಿಗೆ ಸಿಕ್ಕೀತೇ? 
ಇದನ್ನು ಈಗ ಉತ್ತರಿಸುವುದು ಕಷ್ಟ. ಯಾಕೆಂದರೆ ಜೈವಿಕವಾಗಿ ಮಾರ್ಪಡಿಸಿದ ತಳಿಗಳಿಗೆ ಜಗತ್ತಿನಲ್ಲಿ ತೀವ್ರ ವಿರೋಧವಿದೆ. ಅದಲ್ಲದೆ, ಟಿಆರ್೪ ನಿರೋಧ ತಳಿ ಅಭಿವೃದ್ಧಿ ಪ್ರಯೋಗಗಳ ತಂತ್ರಜ್ನಾನಗಳು ವಾಣಿಜ್ಯ ಬಾಳೆ ಕೃಷಿಯ ಮೂಲದಲ್ಲಿರುವ ದೋಷವನ್ನು ಪರಿಗಣಿಸುತ್ತಿಲ್ಲ. ಅದೇನೆಂದರೆ, ವಾಣಿಜ್ಯ ಬಾಳೆ ಕೃಷಿಯ (ಅಂಗಾಂಶ ಕಸಿ) ಗಿಡಗಳೆಲ್ಲವೂ ಜೈವಿಕವಾಗಿ ತದ್ರೂಪಿಗಳು. ಇದರಿಂದಾಗಿಯೇ ಅವು ಮತ್ತೆಮತ್ತೆ ನಿರ್ವಂಶವಾಗುವ ಅಪಾಯ ಎದುರಿಸುತ್ತಿವೆ. ಸೊರಗು ರೋಗನಿರೋಧ ಬಾಳೆ ತಳಿಯೊಂದನ್ನು ಬಿಡುಗಡೆ ಮಾಡಿದ ಕೆಲವೇ ವರುಷಗಳಲ್ಲಿ ಅದು ಪುನಃ ಸೊರಗು ರೋಗಕ್ಕೆ ಬಲಿಯಾದೀತು. ಯಾಕೆಂದರೆ ರೋಗಾಣುಗಳು ತಾವಾಗಿಯೇ ಪರಿವರ್ತನೆಯಾಗಿ, ಹೊಸ ರೋಗನಿರೋಧ ತಳಿಯನ್ನು ಬಲಿ ಹಾಕಲು ತಯಾರಾಗುತ್ತವೆ. 

ಆದ್ದರಿಂದ, ರೈತರು ಬಾಳೆ ಬೆಳೆ ಉಳಿಸಬೇಕಾದರೆ ಅನುಸರಿಸಬೇಕಾದ ಕಾರ್ಯತಂತ್ರಗಳು: ಸಹಜವಾಗಿ ಟಿಆರ್೪ ಸೊರಗು ರೋಗನಿರೋಧ ಗುಣ ಹೊಂದಿರುವ ಪಾರಂಪರಿಕ ಬಾಳೆತಳಿಗಳನ್ನು ಬೆಳೆಸುವುದು. ಉದಾಹರಣೆಗೆ ಕೆಂಪುಬಾಳೆ ಮತ್ತು ನೇಂದ್ರ. ಸಣ್ಣಪ್ರಮಾಣದಲ್ಲಿ ೩೨೦ ಪಾರಂಪರಿಕ ಬಾಳೆತಳಿಗಳನ್ನು ನಮ್ಮ ದೇಶದಲ್ಲಿ ಬೆಳೆಸಲಾಗುತ್ತಿದ್ದು, ಇನ್ನೂ ಕೆಲವು ತಳಿಗಳು ಈ ರೋಗನಿರೋಧ ಗುಣ ಹೊಂದಿರಬಹುದು. ಒಂದು ಬಾಳೆ ತೋಟದಲ್ಲಿ ನಾಲ್ಕೈದು ವಿವಿಧ ತಳಿಗಳನ್ನು ಬೆಳೆಸುವುದು ಈ ರೋಗದ ಧಾಳಿಯಿಂದ ಬಚಾವಾಗುವ ಇನ್ನೊಂದು ವಿಧಾನ. ಒಮ್ಮೆ ಬಾಳೆ ಬೆಳೆಸಿದ ನಂತರ, ಇನ್ನೊಮ್ಮೆ ಅದನ್ನೇ ಬೆಳೆಸುವ ಬದಲಾಗಿ, ಭತ್ತ, ಕಬ್ಬು, ಈರುಳ್ಳಿ ಅಥವಾ ಬೇರಾವುದೇ ಬೆಳೆ ಬೆಳೆಸುವುದು (ಬೆಳೆ ಪರಿವರ್ತನೆ) ಬಾಳೆ ಉಳಿಸುವ ಮತ್ತೊಂದು ವಿಧಾನ.

ಫೋಟೋ: ಟಿಆರ್೪ ಸೊರಗುರೋಗಕ್ಕೆ ಬಲಿಯಾದ ಬಾಳೆಗಿಡದ ಬುಡ