ಒಂದು ದಿನ ವಾರಣಾಸಿಯ ರಾಜ ಬ್ರಹ್ಮದತ್ತ ಮತ್ತು ಆತನ ಯುವರಾಜ ರಾಜ್ಯದ ಆಗುಹೋಗು ಮತ್ತು ರಕ್ಷಣೆ ಬಗ್ಗೆ ಚರ್ಚಿಸುತ್ತಿದ್ದರು. ಹೆಚ್ಚು ಸೈನಿಕರನ್ನು ನೇಮಿಸಿಕೊಂಡು ತಮ್ಮ ಸೈನ್ಯ ಬಲಪಡಿಸಬೇಕೆಂದು ನಿರ್ಧರಿಸಿದರು.
ಅಷ್ಟರಲ್ಲಿ ತಿರಿತವಚಚ್ಚ (Tiritavachchha) ಎಂಬ ಸನ್ಯಾಸಿ ಅರಮನೆಯನ್ನು ಪ್ರವೇಶಿಸಿದ್ದು ಕಾಣಿಸಿತು. ಅವರನ್ನು ಸ್ವಾಗತಿಸಲಿಕ್ಕಾಗಿ ರಾಜ ಸಿಂಹಾಸನದಿಂದ ಏಳುತ್ತಿದ್ದಂತೆ ಯುವರಾಜ ಹೇಳಿದ, “ತಂದೆಯವರೇ, ಸನ್ಯಾಸಿಗಳನ್ನು ಸ್ವಾಗತಿಸಲು ನೀವು ಹೋಗಬೇಕಾಗಿಲ್ಲ. ಇತರ ಸನ್ಯಾಸಿಗಳಿಗೆ ಕೊಡುವಂತೆ ಅವರಿಗೂ ಭಿಕ್ಷೆ ಕೊಟ್ಟು ಕಳಿಸಲಾಗುವುದು.”
ಆದರೆ ರಾಜ ಧಾವಿಸಿ ಹೋಗಿ, ಸನ್ಯಾಸಿಗಳನ್ನು ಗೌರವದಿಂದ ಕರೆತಂದ. ಅವರನ್ನು ತನ್ನ ಸಿಂಹಾಸನದಲ್ಲಿಯೇ ಕುಳ್ಳಿರಿಸಿದ. ಇದೇನಿದು? ಎಂದು ಯುವರಾಜ ಅಚ್ಚರಿಪಟ್ಟ. ಆಗ ರಾಜಸೇವಕ ಬಂದು ಅತಿಥಿಗಳಿಗೆ ಭೋಜನ ತಯಾರಾಗಿದೆ ಎಂದು ತಿಳಿಸಿದ. ಮಾನ್ಯ ಸನ್ಯಾಸಿ ತನ್ನ ಜೊತೆಯೇ ತನ್ನ ಕೊಠಡಿಯಲ್ಲಿ ಭೋಜನ ಸ್ವೀಕರಿಸುವರೆಂದು ರಾಜ ಹೇಳಿದ.
ಭೋಜನವಾದ ನಂತರ ರಾಜ ತನ್ನ ಆಸ್ಥಾನದ ವಾಸ್ತುಶಿಲ್ಪಿಯನ್ನು ಕರೆಯಿಸಿದ. ಅರಮನೆಯ ಸಮೀಪದಲ್ಲಿಯೇ ಮಾನ್ಯ ಸನ್ಯಾಸಿಗಳ ವಾಸಕ್ಕಾಗಿ ಸೂಕ್ತ ಭವನವನ್ನು ಕಟ್ಟಬೇಕೆಂದು ರಾಜ ಆದೇಶಿಸಿದ. ಇದನ್ನೆಲ್ಲ ಗಮನಿಸಿದ ಆಸ್ಥಾನಿಕರು ಸನ್ಯಾಸಿಗೆ ನೀಡುತ್ತಿರುವ ವಿಶೇಷ ಉಪಚಾರದ ಬಗ್ಗೆ ಗುಸುಗುಸು ಮಾತನಾಡಲು ಶುರು ಮಾಡಿದರು.
ಇದು ಯುವರಾಜನ ಕಿವಿಗೂ ಬಿತ್ತು. ಆತ ರಾಜನ ಬಳಿ ಕೇಳಿದ, “ತಂದೆಯವರೇ, ಆ ಸನ್ಯಾಸಿಗೆ ಅಷ್ಟೊಂದು ಪ್ರಾಮುಖ್ಯತೆ ಯಾಕೆ ಕೊಡುತ್ತಿದ್ದೀರಿ? ಅವರು ಯಾವುದೇ ಕಲೆಯಲ್ಲಿ ಪರಿಣತರಲ್ಲ. ನಿಮ್ಮ ಗೆಳೆಯರೂ ಅಲ್ಲ, ಸಂಬಂಧಿಕರೂ ಅಲ್ಲ.”
ಆಗ ರಾಜ ಬ್ರಹ್ಮದತ್ತ ಉತ್ತರಿಸಿದ: “ಯುವರಾಜಾ, ನಿನಗೆ ನೆನಪಿದೆಯಾ? ಎರಡು ತಿಂಗಳ ಹಿಂದೆ, ದೂರದ ಪ್ರಾಂತ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಾಗ ನಾನು ಸೈನ್ಯದೊಂದಿಗೆ ಅಲ್ಲಿಗೆ ಹೊರಟಿದ್ದೆ. ಆಗ ನನ್ನ ಆನೆ ಹುಚ್ಚೆದ್ದು, ಕಾಡಿನೊಳಗೆ ನುಗ್ಗಿತು. ನನಗೆ ಗಾಯವಾಯಿತು. ನಾನು ಬಾಯಾರಿಕೆಯಿಂದ ಬಸವಳಿದಿದ್ದೆ. ಪುಣ್ಯವಶಾತ್, ನನ್ನ ಆನೆ ಒಂದು ಆಶ್ರಮವನ್ನು ಪ್ರವೇಶಿಸಿತು. ಅಲ್ಲೊಂದು ಬಾವಿ ಕಂಡು ನನಗೆ ಜೀವ ಬಂದಂತಾಯಿತು. ಆ ಬಾವಿಯಿಂದ ನೀರೆತ್ತಲು ಅಲ್ಲಿ ರಾಟೆ ಮತ್ತು ಕೊಡ ಇರಲಿಲ್ಲ. ಹಾಗಾಗಿ ನಾನು ಆನೆಯ ಕಾಲಿಗೆ ಹಗ್ಗ ಬಿಗಿದು, ಅದರ ಆಧಾರದಿಂದ ಬಾವಿಗಿಳಿದು ನೀರು ಕುಡಿದೆ. ಆದರೆ ನನಗೆ ಬಾವಿಯಿಂದ ಮೇಲೆ ಹತ್ತಲು ಸಾಧ್ಯವಾಗಲಿಲ್ಲ. ನಾನು ಬಾವಿಯ ತಳದಲ್ಲೇ ಹತಾಶನಾಗಿ ನಿಂತಿದ್ದೆ.
ಆ ದಿನ ಸಂಜೆ ತಿರಿತವಚಚ್ಚ ಅವರು ತಮ್ಮ ಆಶ್ರಮಕ್ಕೆ ಮರಳಿದರು. ಬಾವಿಯ ಹತ್ತಿರ ನಿಂತಿದ್ದ ಆನೆಯನ್ನೂ ಅಂಬಾರಿಯನ್ನೂ ಕಂಡು ಅವರಿಗೆ ಅಚ್ಚರಿಯಾಯಿತು. ಅವರು ಬಾವಿಯೊಳಗೆ ಇಣುಕಿದಾಗ ನಾನು ಕಾಣಿಸಿದೆ. ಅವರು ನನ್ನನ್ನು ಬಾವಿಯಿಂದ ಮೇಲೆತ್ತಿದರು. ಅನಂತರ ನನ್ನನ್ನು ಆಶ್ರಮದೊಳಕ್ಕೆ ಕರೆದೊಯ್ದರು. ನನಗೆ ತಿನ್ನಲು ಹಣ್ಣುಗಳನ್ನು ಕೊಟ್ಟರು. ಎರಡು ದಿನ ಅವರು ನನ್ನ ಆರೈಕೆ ಮಾಡಿದರು. ನನ್ನ ಗಾಯಗಳಿಗೆ ಗಿಡಮೂಲಿಕೆಗಳ ಔಷಧಿ ಹಚ್ಚಿದರು. ಕಾಡಿನಿಂದ ಹಣ್ಣುಹಂಪಲು ತಂದಿತ್ತರು. ಶ್ರದ್ಧೆಯಿಂದ ನನ್ನ ಆರೈಕೆ ಮಾಡಿ ಅವರು ನನ್ನ ಜೀವ ಉಳಿಸಿದರು. ಅವರು ನನ್ನ ಸೇವೆ ಮಾಡಿರದಿದ್ದರೆ ನಾನು ಜೀವಂತವಾಗಿ ಅರಮನೆಗೆ ಹಿಂತಿರುಗಿ ಬರುತ್ತಿರಲಿಲ್ಲ. ವಾರಣಾಸಿಯ ನನ್ನ ಅರಮನೆಗೆ ಬರಲೇ ಬೇಕೆಂದು ಅವರಿಗೆ ಆಮಂತ್ರಣವಿತ್ತು ನಾನು ಮರಳಿ ಬಂದೆ.”
ಇದನ್ನೆಲ್ಲ ಕೇಳಿದ ಯುವರಾಜ ಉದ್ಗರಿಸಿದ, “ತಂದೆಯವರೇ, ಅವರು ನಿಮ್ಮ ಪ್ರಾಣ ಉಳಿಸಿದವರೆಂದು ನನಗೆ ಈಗ ಅರ್ಥವಾಯಿತು.” ಸನ್ಯಾಸಿಗಳು ಮಾಡಿದ ಉಪಕಾರಕ್ಕೆ ಬೆಲೆ ಕಟ್ಟಲಾಗದೆಂದು ರಾಜ ಬ್ರಹ್ಮದತ್ತ ಹೇಳುತ್ತಿದ್ದಂತೆ, ಅವರಿಗೆ ತಮ್ಮಿಂದಾದ ಎಲ್ಲ ಸೇವೆ ಸಲ್ಲಿಸಬೇಕೆಂದು ಯುವರಾಜನೂ ನಿರ್ಧರಿಸಿದ.
ಪ್ರೇರಣೆ: “ಟ್ರೂ ಫ್ರೆಂಡ್ಸ್” - ಉತ್ತಮ ನಡತೆಯ ಜಾತಕ ಕತೆಗಳು
ಫೋಟೋ ಕೃಪೆ: ಅದೇ ಪುಸ್ತಕ