ಜನಜಾಗೃತಿಯ ಸಾಧನ: ಮಾಹಿತಿ ಮಂಥನ

ಪುಸ್ತಕ: ಜನಜಾಗೃತಿಯ ಸಾಧನ: ಮಾಹಿತಿ ಮಂಥನ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಬಳಕೆದಾರರ ವೇದಿಕೆ, ಬಸ್ರೂರು
ಪ್ರಕಟಣೆಯ ವರುಷ: ೨೦೦೨,     ಪುಟ: ೯೬,      ಬೆಲೆ: ರೂ.೨೫
ಕನ್ನಡ ದಿನಪತ್ರಿಕೆ “ಉದಯವಾಣಿ”ಯಲ್ಲಿ ಪ್ರಕಟವಾದ “ಬಳಕೆದಾರ ಸಮಸ್ಯೆ – ಸಮಾಧಾನ” ಅಂಕಣ ಬರಹಗಳ ಸಂಕಲನ ಈ ಪುಸ್ತಕ. ಇದಲ್ಲಿರುವ ಕೆಲವು ಲೇಖನಗಳು: ಸಹಿ ಹಾಕುವ ಮುನ್ನ…, ಖೋಟಾ ನೋಟು ಪತ್ತೆ ಹೇಗೆ? ಮನೆ ಸೈಟ್: ಇರಲಿ ಫೋರ್ ಸೈಟ್, ಗುಟ್ಕಾದಿಂದ ಕ್ಯಾನ್ಸರ್, ಸೊಳ್ಳೆ ವಿಕರ್ಷಕಗಳಿಂದ ಆರೋಗ್ಯಕ್ಕೆ ಹಾನಿ, ಬಾಟಲಿ ನೀರು ಸುರಕ್ಷಿತವೇ?

“ಅಡ್ಡೂರು ಕೃಷ್ಣ ರಾವ್ ಹೇಳಿ ಕೇಳಿ ಬ್ಯಾಂಕ್ ಉದ್ಯೋಗಿ. ಸಮಾಜದ ಬಗೆಗಿನ ಗಾಢವಾದ ಕಾಳಜಿಯೇ ಅವರಿಂದ ಈ ಬಗೆಯ ಬ್ಯಾಂಕೇತರ ಕೆಲಸವನ್ನು ಮಾಡಿಸುತ್ತದೆ. ಆಡಂಬರರಹಿತ ಶೈಲಿಯಲ್ಲಿ ಸಾಕ್ಷಿ, ಆಧಾರಗಳೊಂದಿಗೆ ಸಮಸ್ಯೆಯ ವಿಸ್ತೃತ ರೂಪವನ್ನು ಕಣ್ಣೆದುರಿಗಿಡುತ್ತಾರೆ. ಅದಕ್ಕೆ ತಕ್ಕಮಟ್ಟಿಗೆ ಪರಿಹಾರವನ್ನೂ ಅವರು ಸೂಚಿಸುತ್ತಾರೆ……ಒಂದು ಎಚ್ಚರಿಕೆಯ ಗಂಟೆಯ ಮೊಳಗು ಎಂದು ಇದನ್ನು ಎಲ್ಲರೂ ಸ್ವೀಕರಿಸಬೇಕು” ಎಂದು ಡಾ.ನಾ.ದಾಮೋದರ ಶೆಟ್ಟಿ, ಸಾಹಿತಿ ಹಾಗೂ ನಾಟಕಕಾರ ಅವರು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ.

“ನನ್ನನ್ನು ತಿದ್ದಿ ತೀಡಿ ರೂಪಿಸಿದ, ಉದಾತ್ತ ಜೀವನ ಮೌಲ್ಯಗಳನ್ನು ಕಲಿಸಿದ, ಬದುಕು ಬಾಳುವ ಬಗೆ ಹೇಗೆಂದು ತಮ್ಮ ಆದರ್ಶ ಬದುಕಿನ ಮೂಲಕವೇ ಕಿರಿಯರಿಗೆ ತೋರಿಸಿಕೊಟ್ಟಿರುವ ನನ್ನ ಪೂಜ್ಯ ತಂದೆಯವರಾದ ಶ್ರೀ ಅಡ್ಡೂರು ಶಿವಶಂಕರ ರಾವ್ ಮತ್ತು ನನ್ನ ಪೂಜ್ಯ ತಾಯಿಯವರಾದ ಶ್ರೀಮತಿ ಬಿ. ಸುಶೀಲ ಅವರಿಗೆ” ಲೇಖಕರು ಈ ಕೃತಿಯನ್ನು ಸಮರ್ಪಿಸಿದ್ದಾರೆ.

“ಈ ಪುಸ್ತಕದ ಯಾವುದೇ ಲೇಖನದ ಹಕ್ಕು ಕಾದಿರಿಸಲಾಗಿಲ್ಲ” ಎಂಬುದು ಇದರ ಮತ್ತೊಂದು ವಿಶೇಷ. “.. ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಏಕಮಾತ್ರ ಉದ್ದೇಶದಿಂದ ಬರೆದ ಈ ಲೇಖನಗಳು ಸಾಕಷ್ಟು ನಾಗರಿಕರಿಗೆ ತಲುಪಿದಲ್ಲಿ ಅವುಗಳ ಉದ್ದೇಶ ಸಾರ್ಥಕ” ಎಂದು ಪುಟ ೪ರಲ್ಲಿ ಘೋಷಿಸಿದ್ದಾರೆ ಲೇಖಕ ಅಡ್ಡೂರು ಕೃಷ್ಣ ರಾವ್.