ಗುರುವಿನ ಬಳಿ ಬಂದ ಶಿಷ್ಯನೊಬ್ಬ ಆರ್ತನಾಗಿ ಬೇಡುತ್ತಾನೆ: “ಗುರುಗಳೇ, ನನಗೆ ಸಾಕಾಗಿ ಹೋಗಿದೆ. ನನ್ನ ಬದುಕು ಗೊಂದಲದ ಗೂಡಾಗಿದೆ. ನನಗೆ ನೆಮ್ಮದಿ ಬೇಕು, ದಾರಿ ತೋರಿಸಿ.” ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಗುರುಗಳು ಕೇಳುತ್ತಾರೆ, “ಯಾಕೆ ನಿನ್ನ ಬದುಕು ಗೊಂದಲದ ಗೂಡಾಗಿದೆ?”
ಆಗ ಶಿಷ್ಯ ತನ್ನ ಅವಸ್ಥೆಯನ್ನು ವಿವರಿಸುತ್ತಾನೆ: “ಗುರುಗಳೇ, ಮನೆತುಂಬ ಸಣ್ಣ ಮಕ್ಕಳು – ನಾಲ್ವರಿದ್ದಾರೆ. ಒಂದು ಕ್ಷಣವೂ ಸುಮ್ಮನಿರಲ್ಲ. ಏನನ್ನಾದರೂ ಬೀಳಿಸಿ ಸದ್ದು ಮಾಡ್ತಾರೆ; ಒಡೆದು ಹಾಕ್ತಾರೆ; ಅಳುತ್ತಲೇ ಇರ್ತಾರೆ. ಕೆಲವೊಮ್ಮೆ ಎಲ್ಲರೂ ಒಟ್ಟಾಗಿ ಕಿರಿಚುತ್ತಾರೆ. ಥೈಯ್ಯಥೈಯ್ಯ ಕುಣಿಯುತ್ತಾರೆ. ಹೆಂಡತಿಯಂತೂ ಮಕ್ಕಳಿಗೆ ಬಯ್ಯುತ್ತಲೇ ಇರ್ತಾಳೆ. ನನಗೆ ಪಿರಿಪಿರಿ ಮಾಡುತ್ತಲೇ ಇರ್ತಾಳೆ. ಅದಲ್ಲದೆ, ಎರಡು ನಾಯಿ ಮತ್ತು ನಾಲ್ಕು ಬೆಕ್ಕು ಸಾಕಿದ್ದೇವೆ. ಮಕ್ಕಳಿಗೆ ಅವು ಬೇಕೇ ಬೇಕಂತೆ. ಅವುಗಳ ರಂಪಾಟ ಹೇಳಿ ಮುಗಿಯದು. ಅವು ಸಾಲದೆಂದು, ಹತ್ತು ಕೋಳಿಗಳನ್ನೂ ಸಾಕಿದ್ದೇವೆ. ಅವು ಮನೆಯೊಳಗೂ ಬಂದು ಜಗಳಾಡುತ್ತವೆ. ಜೊತೆಗೆ ಹಾಲಿಗಾಗಿ ಎರಡು ಆಡು ಕೂಡ ಸಾಕಿದ್ದೇವೆ. ಇವು ಅಕ್ಕಪಕ್ಕದವರ ಅಡುಗೆ-ಮನೆಗೆ ಹೋಗಿ, ಅವರು ಬೇಯಿಸಿಟ್ಟ ಅನ್ನದ ಪಾತ್ರೆಗೆ ಬಾಯಿ ಹಾಕಿ ಜಗಳ ತಂದಿಡುತ್ತವೆ. ನನಗೆ ಜೀವನವೇ ಸಾಕಾಗಿ ಹೋಗಿದೆ. ನೆಮ್ಮದಿಯ ದಾರಿ ತೋರಿಸಿ.”
ಗುರುಗಳು ಗಂಭೀರ ಸ್ವರದಲ್ಲಿ ಆತನಿಗೆ ಹೇಳುತ್ತಾರೆ, “ನಿನಗೆ ನೆಮ್ಮದಿ ಬೇಕಾದರೆ ಸುಲಭದ ದಾರಿಯಿದೆ. ನೀನು ಇವತ್ತಿನಿಂದಲೇ ಆ ಎಲ್ಲ ಪ್ರಾಣಿಗಳನ್ನು ನಿನ್ನ ಮನೆಯೊಳಗೇ ಸಾಕಿಕೊಳ್ಳಬೇಕು. ಒಂದು ತಿಂಗಳ ನಂತರ ಬಂದು ನನ್ನನ್ನು ಕಾಣು.” ಆ ಶಿಷ್ಯ ಗುರುಗಳ ಮಾತನ್ನು ಭಕ್ತಿಯಿಂದ ಪಾಲಿಸುತ್ತಾನೆ.
ಸರಿಯಾಗಿ ಒಂದು ತಿಂಗಳ ನಂತರ ಪುನಃ ಗುರುಗಳ ಬಳಿ ಬಂದ ಆ ಶಿಷ್ಯ, ಅವರಿಗೆ ಅಡ್ಡಬಿದ್ದು ಅಳುದನಿಯಿಂದ ಮೊರೆಯಿಡುತ್ತಾನೆ, “ಗುರುಗಳೇ, ಒಂದು ತಿಂಗಳಿನಿಂದ ನೀವು ಹೇಳಿದಂತೆಯೇ ಮಾಡಿದ್ದೇನೆ. ನನಗೀಗ ಹುಚ್ಚು ಹಿಡಿಯುವುದೊಂದು ಬಾಕಿ. ಯಾವಾಗಲೂ ಮನೆ ತುಂಬ ಗದ್ದಲ, ಗಲಾಟೆ. ನನ್ನನ್ನು ಹೇಗಾದರೂ ಈ ಸಂಕಟದಿಂದ ಪಾರು ಮಾಡಿ.” ಗುರುಗಳು ಮುಗುಳ್ನಕ್ಕು ಆದೇಶಿಸುತ್ತಾರೆ, “ನೀನೇನೂ ಚಿಂತೆ ಮಾಡಬೇಡ. ಈಗಲೇ ಮನೆಗೆ ಹೋಗಿ, ಆ ಪ್ರಾಣಿಗಳನ್ನೆಲ್ಲ ನಿನ್ನ ಮನೆಯಿಂದ ಹೊರಕ್ಕೆ ಹಾಕು. ಎರಡು ವಾರಗಳ ನಂತರ ಬಂದು ಏನಾಯಿತೆಂದು ಹೇಳು.” ಗುರುಗಳಿಗೆ ವಂದಿಸಿ ಮನೆಗೆ ಹೋದ ಶಿಷ್ಯ, ಆ ಪ್ರಾಣಿಗಳನ್ನು ಮನೆಯಿಂದ ಹೊರಕ್ಕೆ ಓಡಿಸಿ, ನಿಟ್ಟುಸಿರು ಬಿಡುತ್ತಾನೆ. ಎರಡು ವಾರಗಳ ನಂತರ, ಮತ್ತೊಮ್ಮೆ ಗುರುಗಳ ಬಳಿಗೆ ಬರುತ್ತಾನೆ. “ಈಗ ಹೇಗಿದೆ ಬದುಕು?” ಎಂಬ ಗುರುಗಳ ಪ್ರಶ್ನೆಗೆ ಅವನ ಉತ್ತರ: “ಗುರುಗಳೇ, ಈಗ ನನ್ನ ಮನೆಯಲ್ಲಿ ಶಾಂತಿ, ನೆಮ್ಮದಿ ತುಂಬಿದೆ.”
ಹೀಗೆ, ಬಹಳ ಜನರು ತಮ್ಮ ಬದುಕನ್ನು ತಾವೇ ಗೊಂದಲದ ಗೂಡಾಗಿ ಮಾಡಿಕೊಂಡಿದ್ದಾರೆ, ಅಲ್ಲವೇ? ಅದನ್ನು ನೆಮ್ಮದಿಯ ನಾಡಾಗಿ ಪರಿವರ್ತಿಸುವುದು ಅವರ ಕೈಯಲ್ಲೇ ಇದೆ.
ಅದಕ್ಕೆ ಮಾಡಬೇಕಾದದ್ದು ಇಷ್ಟೇ: ದಿನಕ್ಕೊಮ್ಮೆ, ಮೌನದ ಲೋಕಕ್ಕೆ ಹೋಗಬೇಕು. ಅದಕ್ಕೇನು ಮಾಡಬೇಕು? ಏನೂ ಮಾಡಬಾರದು ಅಂದರೆ ಸುಮ್ಮನೆ ಕೂರಬೇಕು. ಅದುವೇ ಧ್ಯಾನ. ಪ್ರತಿದಿನ ಹದಿನೈದು ನಿಮಿಷ ಧ್ಯಾನ ಮಾಡಿದರೆ ಸಾಕು. ಇದಕ್ಕೆ ಸಮಯವಿಲ್ಲ ಎನ್ನುವವರು ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ: ಹಾಗಾದರೆ ದಿನದ ೨೪ ಗಂಟೆಗಳಲ್ಲಿ ನಾನೇನು ಮಾಡುತ್ತಿದ್ದೇನೆ? ದಿನವಿಡೀ ಬೇರೆಯವರಿಗಾಗಿ ಹೆಣಗುತ್ತಿರುವಾಗ, ನನಗಾಗಿ ಹದಿನೈದು ನಿಮಿಷ ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ.
ಆರಾಮವಾಗಿ ಸುಮ್ಮನೆ ಕುಳಿತು, ಕಣ್ಣು ಮುಚ್ಚಿಕೊಂಡು ನಿಮ್ಮ ಉಸಿರಾಟವನ್ನು ಗಮನಿಸುತ್ತಾ ಹೋಗಿ. ಅದುವೇ ಧ್ಯಾನ. ಆ ಸ್ಥಿತಿಯಲ್ಲಿ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಹಿಂದಿನ ಚಿಂತೆಗಳನ್ನೂ, ಮುಂದಿನ ಆತಂಕಗಳನ್ನೂ ಬಿಟ್ಟು, ಈ ಕ್ಷಣದ ಬದುಕನ್ನು ಅನುಭವಿಸಿ. ನಿಮ್ಮ ಒಳಗೂ ಹೊರಗೂ ಎಲ್ಲವೂ ಚೆನ್ನಾಗಿದೆ ಎಂಬ ಭಾವನೆಯಿಂದ ಕುಳಿತುಕೊಳ್ಳಿ. ನಿಮ್ಮ ಹೊರಗಿನ “ಆಕಾಶ” ಅನಂತ. ಹಾಗೆಯೇ ಒಳಗಿನ “ಆಕಾಶ”ವೂ ಅನಂತ – ಆ ಎರಡೂ ಆಕಾಶಗಳಲ್ಲಿ ನಿಮ್ಮ ಮನಸ್ಸು-ಬುದ್ಧಿ-ಭಾವ ಲೀನವಾಗಲಿ. ಆಗ ಕ್ಷಣಕ್ಷಣವೂ ನಿರಾಳ-ಶಾಂತ-ಪ್ರಶಾಂತ.
ಇಂತಹ ಧ್ಯಾನ, ಅದೆಷ್ಟು ಸರಳವೆಂಬುದನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ:
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗಸೂತ್ರವಿದು – ಮಂಕುತಿಮ್ಮ
ಮನಸ್ಸಿನ ಆಲಯದಲ್ಲಿ ಎರಡು ಕೋಣೆಗಳನ್ನು ಮಾಡಿಕೊಳ್ಳಬೇಕು. (ಗಮನಿಸಿ: ಈ ಸಾಧನೆಯ ಮೊದಲ ಹೆಜ್ಜೆ ಮನಸ್ಸನ್ನು ದೇವಾಲಯದಂತೆ ಪವಿತ್ರವಾಗಿ ಇರಿಸುವುದು.) ಹೊರಕೋಣೆಯಲ್ಲಿ ಜನರೊಂದಿಗಿನ ಆಟ(ಒಡನಾಟ) ಆಡುತ್ತಾ, ಮೌನ ತುಂಬಿರುವ ಒಳಕೋಣೆಯ ಶಾಂತಿಯಲ್ಲಿ ಒಬ್ಬನೇ ವಿರಮಿಸುವುದು – ಇದುವೇ ಬದುಕಿನ ಅತ್ಯುನ್ನತ ಸಾಧನೆಗಳಿಗೆ ವರಯೋಗ ಸೂತ್ರ (ಇದಕ್ಕಿಂತ ಮಿಗಿಲಾದ ಸೂತ್ರವಿಲ್ಲ) ಎಂಬುದು ಇದರ ತಾತ್ಪರ್ಯ.
ಬಹಳ ಜನರು ಈ ಮೌನಸಾಧನೆಯ ಮೊದಲ ಹೆಜ್ಜೆಯಲ್ಲೇ ಎಡವಿ ಬೀಳುತ್ತಾರೆ. ಯಾಕೆಂದರೆ, ಕಣ್ಣು ಮುಚ್ಚಿದೊಡನೆ ನಮ್ಮೆಲ್ಲ ತಪ್ಪುಗಳು ಧುತ್ತೆಂದು ಎದುರಾಗುತ್ತವೆ. ಅವನ್ನೆಲ್ಲ ಒಪ್ಪಿಕೊಳ್ಳಬೇಕು, ತಿದ್ದಿಕೊಳ್ಳಬೇಕು. ಇದು ಸಾಧ್ಯವಾದರೆ ಮಾತ್ರ ಮೌನಸಾಧನೆಯ ಮುಂದಿನ ಮೆಟ್ಟಲೇರಲು ಸಾಧ್ಯ. ಆ ಮೆಟ್ಟಲಿನಲ್ಲಿ ನಮ್ಮೆಲ್ಲ ದುಃಖ, ಸಂಕಟ, ಆತಂಕ, ನಿರಾಶೆ, ಹತಾಶೆ, ಭಯ, ಕೋಪ, ದ್ವೇಷ, ಸೇಡು ಇತ್ಯಾದಿ ನುಗ್ಗಿ ಬರುತ್ತವೆ. ಇವನ್ನು ನಿವಾರಿಸಿಕೊಂಡರೆ ಮಾತ್ರ, ಮೌನಸಾಧನೆಯಲ್ಲಿ ಮುಂದೆ ಸಾಗಲು ಸಾಧ್ಯ. ಹೀಗೆ ಹಂತಹಂತವಾಗಿ ಮೌನಸಾಧನೆಯಲ್ಲಿ ಮೇಲೇರುತ್ತ, ನಮ್ಮ ತಾಕತ್ತುಗಳನ್ನು ಬಡಿದೆಬ್ಬಿಸುತ್ತ, ನಮ್ಮೊಳಗೆ ಚೈತನ್ಯ ತುಂಬಿಕೊಳ್ಳುತ್ತ, ಬದುಕಿನ ಗುರಿಸಾಧನೆಗೆ ಸನ್ನದ್ಧರಾಗೋಣ.
(ಅಕ್ಟೋಬರ್ 2018)