ಕೋಲಾರದಲ್ಲಿ ಟೊಮೆಟೊ ಮೌಲ್ಯವರ್ಧನೆ - ಲಾಕ್‌ಡೌನ್ ನಷ್ಟ ತಪ್ಪಿಸುವ ಜಾಣ್ಮೆ

ಕೋಲಾರದಲ್ಲಿ ೯,೦೦೦ ಎಕ್ರೆ ಪ್ರದೇಶದಲ್ಲಿ ರೈತರು ಪ್ರತಿ ವರುಷ ಟೊಮೆಟೊ ಬೆಳೆಯುತ್ತಾರೆ. ಇಷ್ಟು ವಿಸ್ತಾರ ಪ್ರದೇಶದ ಇಳುವರಿ ಸುಮಾರು ೪,೦೦೦ ಟನ್. 

ಕೊವಿಡ್ ವೈರಸಿನ ಧಾಳಿ ನಿಯಂತ್ರಣಕ್ಕಾಗಿ ೨೦೨೦ ಮತ್ತು ೨೦೨೧ರಲ್ಲಿ ಲಾಕ್-ಡೌನ್ ಹೇರಿದಾಗ, ಸಾಗಾಟದ ನಿರ್ಬಂಧಗಳಿಂದಾಗಿ ಟೊಮೆಟೊ ಬೆಳೆಗಾರರು ಕಂಗಾಲಾದರು. ಇಂತಹ ಆತಂಕದ ಸನ್ನಿವೇಶದಲ್ಲಿ "ಗ್ರಾಮ ವಿಕಾಸ” ಸಂಸ್ಥೆ ಅವರಿಗೆ ಸಹಾಯ ಮಾಡಲು ಮುಂದಾಯಿತು. ಟೊಮೆಟೊದ ಮೌಲ್ಯವರ್ಧನೆಗೆ ೪೯ ರೈತ ಕುಟುಂಬಗಳನ್ನು ಪ್ರೋತ್ಸಾಹಿಸಿತು. ಜೊತೆಯಲ್ಲೇ ೪೯ ಮಹಿಳೆಯರಿಗೆ ಟೊಮೆಟೊ ಮೌಲ್ಯವರ್ಧನೆಯಲ್ಲಿ ತರಬೇತಿ ನೀಡಿತು. 

ಮಾರ್ಚ್ - ಎಪ್ರಿಲ್ ಟೊಮೆಟೊ ಕೊಯ್ಲಿನ ಕಾಲ. ಈ ಅವಧಿಯಲ್ಲಿ ಕೋಲಾರದ ಮಾರುಕಟ್ಟೆಗಳಿಗೆ ಪ್ರತಿ ದಿನ ರೈತರು ತರುವ ಟೊಮೆಟೊದ ಪರಿಮಾಣ ಸುಮಾರು ೨,೬೦೦ ಕ್ವಿಂಟಾಲ್. ಪ್ರತಿಯೊಂದು ಕ್ವಿಂಟಾಲಿನ ಮಾರಾಟ ಬೆಲೆ ಸುಮಾರು ರೂ.೧,೧೩೦. ಮಾರ್ಚ್ ೨೪, ೨೦೨೦ರಂದು ಲಾಕ್-ಡೌನ್ ಜ್ಯಾರಿಯಾದಾಗ ಇದು ರೂ.೧೩೦ಕ್ಕೆ ಕುಸಿಯಿತು! ಇದರಿಂದಾಗಿ ಹಠಾತ್ತಾಗಿ ಬೆಳೆಗಾರರ ಪರಿಸ್ಥಿತಿ ಶೋಚನೀಯ. ಆಗ ಬೆಳೆಗಾರರ ನೆರವಿಗೆ ಬಂದ ಸಂಸ್ಥೆ "ಗ್ರಾಮ ವಿಕಾಸ.”

"ನಮ್ಮ ಕಾರ್ಯಕ್ಷೇತ್ರ ಕೋಲಾರದ ಮುಳಬಾಗಿಲು ತಾಲೂಕು. ಅಲ್ಲಿರುವ ಹಳ್ಳಿಗಳ ಸಂಖ್ಯೆ ೩೪೦. ಪ್ರತಿಯೊಂದು ಹಳ್ಳಿಯಲ್ಲಿರುವ ಟೊಮೆಟೊ ಬೆಳೆಗಾರರ ಸರಾಸರಿ ಸಂಖ್ಯೆ ಐದು. ಅವರು ಬೆಳೆಸೋದು ಟನ್ನುಗಟ್ಟಲೆ ಟೊಮೆಟೊ. ಲಾಕ್-ಡೌನಿನ ಸಮಯದಲ್ಲಿ, ಸಾಗಾಟ ನಿರ್ಬಂಧಗಳಿಂದಾಗಿ, ರೈತರಿಗೆ ಮುಂಚಿನಂತೆ ಕೇರಳ, ತಮಿಳ್ನಾಡು ಅಥವಾ ಆಂಧ್ರಪ್ರದೇಶಗಳಿಗೆ ಟೊಮೆಟೊ ಸಾಗಿಸಲು ಸಾಧ್ಯವಾಗಲಿಲ್ಲ. ಅವರವರ ಹಳ್ಳಿಯಲ್ಲೇ ಅವರು ಎಷ್ಟು ಟೊಮೆಟೊ ಮಾರಲು ಸಾಧ್ಯ?” ಎಂದು ಪರಿಸ್ಥಿತಿಯನ್ನು ವಿವರಿಸುತ್ತಾರೆ, ಎಂ.ವಿ.ಎನ್. ರಾವ್, ಕಾರ್ಯನಿರ್ವಾಹಕ ನಿರ್ದೇಶಕ, ಗ್ರಾಮ ವಿಕಾಸ.

ಇಂತಹ ಪರಿಸ್ಥಿತಿಯಲ್ಲಿ, ರೈತರಿಂದ ಕಿಲೋಗ್ರಾಮಿಗೆ ಐದು ರೂಪಾಯಿ ದರದಲ್ಲಿ ಒಂದು ಟನ್ ಟೊಮೆಟೊವನ್ನು ಖರೀದಿಸಿತು "ಗ್ರಾಮ ವಿಕಾಸ.” ಮುಳಬಾಗಿಲು ತಾಲೂಕಿನ ೪೯ ಕುಟುಂಬಗಳ ತಲಾ ಒಬ್ಬ ಮಹಿಳೆಗೆ ಟೊಮೆಟೊ ಮೌಲ್ಯವರ್ಧನೆಯಲ್ಲಿ ತರಬೇತಿ ನೀಡಿತು. “ಟೊಮೆಟೊ ಬೆಲೆ ಕುಸಿತದಿಂದಾಗಿ ರೈತರು ಹತಾಶರಾಗಿದ್ದಾಗ, ಹೇರಳವಾಗಿ ಲಭ್ಯವಿದ್ದ ಸೂರ್ಯನ ಬಿಸಿಲು ಮತ್ತು ಸಮಯ - ಈ ಎರಡು ಸಂಪನ್ಮೂಲಗಳನ್ನು ಬಳಸಿ ಟೊಮೆಟೊದ ಮೌಲ್ಯವರ್ಧನೆ ಮಾಡಲು ನಿರ್ಧರಿಸಿದೆವು” ಎನ್ನುತ್ತಾರೆ ಎಂ.ಎಸ್. ಗಿರಿಜಾ, ಗ್ರಾಮವಿಕಾಸದ ಕಾರ್ಯಕರ್ತೆ. 

೨೦೨೦ರ ಟೊಮೆಟೊ ಕೊಯ್ಲಿನ ಹಂಗಾಮಿನಲ್ಲಿ "ಗ್ರಾಮ ವಿಕಾಸ” ಸಂಸ್ಥೆಯು ೨೦೦ ಕಿಲೋ ಟೊಮೆಟೊದಿಂದ ಉಪ್ಪಿನಕಾಯಿ ತಯಾರಿಸಿತು. ಉಳಿದ ಟೊಮೆಟೊವನ್ನು “ಒಣತುಂಡು”ಗಳಾಗಿ ಮೌಲ್ಯವರ್ಧನೆ ಮಾಡಲಾಯಿತು. 

ಟೊಮೆಟೊ ಉಪ್ಪಿನಕಾಯಿ ತಯಾರಿ ವಿಧಾನ:
-ಟೊಮೆಟೊಗಳನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ, ಅವಕ್ಕೆ ಉಪ್ಪು ಮತ್ತು ಅರಿಶಿನ ಹುಡಿ ಬೆರಸಿ. ಇದನ್ನು ಒಂದು ದಿನ ಹಾಗೆಯೇ ಇಡಬೇಕು.
-ಟೊಮೆಟೊ ತುಂಡುಗಳು ರಸ ಬಿಡುವಂತೆ ಮಾಡುತ್ತದೆ ಉಪ್ಪು. ಮರುದಿನ, ಮಿಶ್ರಣದಿಂದ ಟೊಮೆಟೊ ತುಂಡುಗಳನ್ನು ಬೇರ್ಪಡಿಸಿ. ಈಗ ಸಿಗುವ ಟೊಮೆಟೊ ರಸಕ್ಕೆ ಹುಳಿ ಬೆರಸಿ.
-ಟೊಮೆಟೊ ರಸ ಮತ್ತು ಟೊಮೆಟೊ ತುಂಡುಗಳು - ಇವೆರಡನ್ನೂ ಬಿಸಿಲಿನಲ್ಲಿ ಒಣಗಿಸಿ. 
-ಹುಳಿಯನ್ನು ಟೊಮೆಟೊ ರಸದಿಂದ ಬೇರ್ಪಡಿಸಿ, ಅದನ್ನು ನುಣ್ಣಗೆ ಅರೆಯಬೇಕು.
-ಟೊಮೆಟೊ ರಸಕ್ಕೆ ಕೆಂಪು-ಮೆಣಸಿನ ಹುಡಿ, ಹುಳಿಯ ಪೇಸ್ಟ್ ಮತ್ತು ಸ್ವಲ್ಪ ಮೆಂತೆ ಹುಡಿ ಬೆರಸಿ. ಈ ಮಿಶ್ರಣಕ್ಕೆ ಒಣಗಿದ ಟೊಮೆಟೊ ತುಂಡುಗಳನ್ನು ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ.
-ಒಂದು ಬಾಣಲೆಯಲ್ಲಿ ಸೂಕ್ತ ಪ್ರಮಾಣದ ಸಾಸಿವೆ, ಉದ್ದಿನ ಬೇಳೆ, ಬೆಳ್ಳುಳ್ಳಿ ಮತ್ತು ಕೆಂಪು-ಮೆಣಸಿನ ಹುಡಿ ಹಾಕಿ. ಇವುಗಳಿಗೆ ಸ್ವಲ್ಪ ಎಣ್ಣೆ ಹೊಯ್ದು, ಈ ಮಿಶ್ರಣವನ್ನು ಹದವಾಗಿ ಬಿಸಿ ಮಾಡಿ. ಅನಂತರ, ಈ ಮಿಶ್ರಣವನ್ನು ಮುಂಚೆ ತಯಾರಿಸಿದ ಟೊಮೆಟೊ ತುಂಡುಗಳ ಮಿಶ್ರಣಕ್ಕೆ ಬೆರಸಿ. ಇದು ತಣಿದಾಗ, ಕನ್-ಟೈನರುಗಳಲ್ಲಿ ಉಪ್ಪಿನಕಾಯಿ ತುಂಬಿಸಿಡಿ. 

ಟೊಮೆಟೊ ಕೆಟ್‌ಚಪ್ ತಯಾರಿ ವಿಧಾನ:
-ಟೊಮೆಟೊ ತೊಳೆದು, ತುಂಡು ಮಾಡಿಕೊಳ್ಳಿ. (ಪ್ರತಿಯೊಂದು ಟೊಮೆಟೊವನ್ನು ೪ - ೫ ತುಂಡು ಮಾಡಿ.)
-ಅವನ್ನು ಪ್ರೆಷರ್ ಕುಕ್ಕರಿನಲ್ಲಿ ಹಾಕಿ. ಟೊಮೆಟೊ ತುಂಡುಗಳು ಮುಳುಗುವಷ್ಟೇ ನೀರನ್ನು ಕುಕ್ಕರಿಗೆ ಸುರಿದ ನಂತರ, ಮುಚ್ಚಳ ಹಾಕಿ. ಕುಕ್ಕರಿಗೆ ವೇಯ್ಟ್ ಹಾಕಿ ಬೇಯಿಸಿ - ನಾಲ್ಕು ಸಿಳ್ಳೆ ಬರುವ ತನಕ.
-ಬೆಂದ ಟೊಮೆಟೊ ತುಂಡುಗಳು ತಣಿದ ನಂತರ, ಅವನ್ನು “ಹ್ಯಾಂಡ್ ಬ್ಲೆಂಡರ್” ಮೂಲಕ ಕುಕ್ಕರಿನಲ್ಲಿಯೇ ಬ್ಲೆಂಡ್ ಮಾಡಿ. ಅಥವಾ, ಬೆಂದ ಟೊಮೆಟೊ ತುಂಡುಗಳನ್ನು ಮಿಕ್ಸರಿಗೆ ಹಾಕಿ ಬ್ಲೆಂಡ್ ಮಾಡಿ.
-ಅನಂತರ, ಆ ಮಿಶ್ರಣವನ್ನು ಜಾಲರಿಗೆ ಹಾಕಿ ಸೋಸಿ. ಟೊಮೆಟೊ ಸಿಪ್ಪೆಯ ಸಣ್ಣ ಚೂರುಗಳು ಮತ್ತು ಬೀಜದ ಚೂರುಗಳು ಜಾಲರಿಯಲ್ಲಿ ಉಳಿಯುತ್ತವೆ (ಇವನ್ನು ಗೊಬ್ಬರವಾಗಿ ಬಳಸಿ.)
-ಸೋಸಿದ ಮಿಶ್ರಣಕ್ಕೆ ಸೂಕ್ತ ಪ್ರಮಾಣದಲ್ಲಿ ಇವನ್ನು ಹಾಕಿ, ಕಲಕಿ: 
(೧) ಸಕ್ಕರೆ (೨) ವೈಟ್ ವಿನೆಗರ್ (೩) ಕೆಂಪು ಮೆಣಸಿನ ಹುಡಿ (೪) ಉಪ್ಪು 
-ಈ ಮಿಶ್ರಣವನ್ನು ಹದವಾದ ಜ್ವಾಲೆಯಲ್ಲಿ ೧೫ ನಿಮಿಷ ಬೇಯಿಸಿ. ಇದು ತಣಿದಾಗ ಕನ್‌ಟೈನರಿನಲ್ಲಿ ತುಂಬಿಡಿ.
-ನಿಮ್ಮ ರುಚಿಯ ಅನುಸಾರ, ಬೇಯಿಸುವಾಗ ಇದಕ್ಕೆ ಕಡಿಮೆ ಸಕ್ಕರೆ ಹಾಕಬಹುದು; ಅಥವಾ ಜಾಸ್ತಿ ಖಾರ ಬೇಕೆಂದಾದರೆ, ಹೆಚ್ಚು ಕೆಂಪು ಮೆಣಸಿನ ಹುಡಿ ಹಾಕಬಹುದು. 
-ನಿಮ್ಮ ಕೆಟ್‌ಚಪ್ ಸರಿಯಾಗಿ ಬೆಂದಿದೆಯೇ? ಎಂದು ಪರೀಕ್ಷಿಸುವ ವಿಧಾನ: ಒಂದು ಪಿಂಗಾಣಿ ಸಾಸರಿಗೆ ಒಂದು ತೊಟ್ಟು ಕೆಟ್‌ಚಪ್ ಹಾಕಿ, ಸಾಸರನ್ನು ನೆಲಕ್ಕೆ ಲಂಬವಾಗಿ ಹಿಡಿಯಿರಿ. ಈಗ, ಆ ಒಂದು ತೊಟ್ಟು ಕೆಟ್‌ಚಪ್‌ನಿಂದ ನೀರಿನಂಶ ಕೆಳಕ್ಕೆ ಹರಿದು ಬಂದಿಲ್ಲ ಎಂದಾದರೆ, ನಿಮ್ಮ ಕೆಟ್‌ಚಪ್‌ನ ಹದ ಸರಿಯಾಗಿದೆ. ಇದು ಮೂರು ತಿಂಗಳು ಕೆಡುವುದಿಲ್ಲ. 

ಟೊಮೆಟೊದ ಬೆಲೆ ಕುಸಿದಾಗಲೂ ರೈತರು ಅದನ್ನು ಮಾರಾಟ ಮಾಡಲಾಗದೆ ಅಸಹಾಯಕರಾಗುತ್ತಾರೆ. ಆಗ, ಟೊಮೆಟೊವನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರೆ ಬೆಳೆಗಾರರಿಗೇ ನಷ್ಟ. ಅದರ ಬದಲಾಗಿ, ಟೊಮೆಟೊದಿಂದ ಉತ್ತಮ ಗುಣಮಟ್ಟದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರೆ, ನಿಧಾನವಾಗಿ ಮಾರಾಟ ಮಾಡಿ, ಲಾಭ ಮಾಡಿಕೊಳ್ಳಬಹುದು, ಅಲ್ಲವೇ?