ಕೆಂಪು ಪಟ್ಟಿಯಲ್ಲಿ ಸಿಲುಕಿರುವ ಕೆಂಪು ಚಂದನ

       
ಸರಕಾರ ತನ್ನ ನೀತಿಯನ್ನು ಹೇಗೆ ಗೋಜಲಾಗಿಸುತ್ತದೆ ಮತ್ತು ಅದರಿಂದ ಕೃಷಿಕರಿಗೆ ಆಗುವ ಸಂಕಟಗಳಿಗೆ ಒಂದು ತಾಜಾ ಉದಾಹರಣೆ ಕೆಂಪು ಚಂದನ ಬೆಳೆಸಿದ ಕೃಷಿಕರ ಬವಣೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ೧೯ ಹೆಕ್ಟೇರಿನಲ್ಲಿ ಕೆಂಪು ಚಂದನ (ರಕ್ತ ಚಂದನ) ನೆಟ್ಟು, ೨೦ ವರುಷ ಬೆಳೆಸಿರುವ ಆರ್.ಪಿ. ಗಣೇಶನ್ ಕೈತುಂಬ ಆದಾಯದ ಕನಸು ಕಂಡಿದ್ದರು. ಇದೀಗ ತಲೆಗೆ ಕೈಕೊಟ್ಟು ಚಿಂತಿಸುತ್ತ ಕುಳಿತಿದ್ದಾರೆ.

ಯಾಕೆಂದರೆ, ಕಳೆದ ಎರಡು ವರುಷಗಳಿಂದ ಅವರು ಕೆಂಪು ಚಂದನದ ಮರಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವನ್ನು ಖರೀದಿಸಲು ಯಾರೂ ತಯಾರಿಲ್ಲ! ಡಾಬರ್, ಪತಂಜಲಿ ಇತ್ಯಾದಿ ಕಂಪೆನಿಗಳನ್ನೂ ಅವರು ಸಂಪರ್ಕಿಸಿದ್ದಾರೆ; ಅವರೆಲ್ಲರೂ ಕೆಂಪು ಚಂದನ ಖರೀದಿಸಲು ನಿರಾಕರಿಸಿದ್ದಾರೆ. ಕಾರಣ: ಕೆಂಪು ಚಂದನ ಆಡಳಿತಷಾಯಿಯ ಕೆಂಪುಪಟ್ಟಿಯಲ್ಲಿ ಸಿಲುಕಿಕೊಂಡಿದೆ; ಹಾಗಾಗಿ ಮರಕಡಿಯುವ ಪರವಾನಗಿ ಪಡೆಯುವುದು ಸುಲಭವಲ್ಲ. “ಬೇರೆಬೇರೆ ರಾಜ್ಯಗಳಲ್ಲಿ ಬೇರೆಬೇರೆ ನಿಯಮಗಳಿವೆ. ಕೇರಳದ ಕಂಪೆನಿಯೊಂದು, ಕೆಂಪು ಚಂದನ ಖರೀದಿಸ ಬೇಕಾದರೆ ಸಿಐಟಿಇಎಸ್ (ಕನ್-ವೆನ್ಷನ್ ಆನ್ ಇಂಟರ್-ನ್ಯಾಷನಲ್ ಟ್ರೇಡ್ ಇನ್ ಎನ್-ಡೆಂಜರ್ಡ್ ಸ್ಪಿಷೀಸ್ ಆಫ್ ವೈಲ್ಡ್ ಫಾನಾ ಆಂಡ್ ಫ್ಲೋರಾ) ಸರ್ಟಿಫಿಕೇಟ್ ಕೇಳಿತು” ಎನ್ನುತ್ತಾರೆ ಗಣೇಶನ್.

ಇದೆಲ್ಲ ಏನು? ಎಂಬುದು ಅರ್ಥವಾಗ ಬೇಕಾದರೆ ಕೆಂಪು ಚಂದನದ ಬಗ್ಗೆ ಸರಕಾರದ ದ್ವಂದ್ವನೀತಿ ತಿಳಿಯಬೇಕು. ಕೃಷಿಕರು ಕೆಂಪು ಚಂದನ ಬೆಳೆಯಿರಿ ಎಂದು ಪ್ರೋತ್ಸಾಹಿಸುತ್ತದೆ ಸರಕಾರ. ಆದರೆ, ಅದನ್ನು ಕಡಿಯಲು ಮತ್ತು ಸಾಗಾಟ ಮಾಡಲು ಪರವಾನಗಿ ಅಗತ್ಯ. ಈ ಪರವಾನಗಿ ಪಡೆಯುವುದು ಬಹಳ ಕಷ್ಟ.

ಅದಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಂಪು ಚಂದನದ ಬೆಲೆಗೆ ಹೋಲಿಸಿದಾಗ, ಆಂತರಿಕ ಮಾರುಕಟ್ಟೆಯ ಬೆಲೆ ಅರ್ಧಕ್ಕಿಂತ ಕಡಿಮೆ! ಉತ್ತಮ ಆದಾಯಕ್ಕಾಗಿ ಕೃಷಿಕರು ತಾವು ಬೆಳೆಸಿದ ಕೆಂಪು ಚಂದನವನ್ನು ರಫ್ತು ಮಾಡಲು ಮುಂದಾದರೆ, ಅದೂ ಸಾಧ್ಯವಿಲ್ಲ. ಯಾಕೆಂದರೆ, ನಮ್ಮ ಸರಕಾರದ ವಿದೇಶ ಮಾರಾಟ ನೀತಿ ಇದನ್ನು ನಿಷೇಧಿಸುತ್ತದೆ! ವಿಚಿತ್ರ ಏನೆಂದರೆ, ಇನ್ನೊಂದೆಡೆ ಕೆಂಪು ಚಂದನ ರಫ್ತು ಮಾಡಲಿಕ್ಕಾಗಿ “ಕೋಟಾ” ನೀಡಬೇಕೆಂದು ಭಾರತ ಸರಕಾರವೇ ಸಿಐಟಿಇಎಸ್ ಅನ್ನು ವಿನಂತಿಸಿತ್ತು. ಯಾಕೆಂದರೆ, “ರಕ್ಷಿಸಬೇಕಾದ ಸ್ಪಿಷೀಸ್” ಎಂದು ಕೆಂಪು ಚಂದನದ ವರ್ಗೀಕರಣ ಮಾಡಲಾಗಿದೆ. ಆದ್ದರಿಂದ ಅದರ ರಫ್ತಿಗೆ ಕೋಟಾ ಅಗತ್ಯ. ಹಾಗಿದ್ದರೆ, ಸರಕಾರ ಈಗೇನು ಮಾಡುತ್ತಿದೆ? ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ ಕೆಂಪು ಚಂದನದ ತೊಲೆಗಳನ್ನು ಖಾಸಗಿ ಕಂಪೆನಿಗಳಿಗೆ ರಫ್ತಿಗಾಗಿ ಮಾರುತ್ತಿದೆ! ಅವರಿಗೆ ಅದಕ್ಕಾಗಿ ಪರವಾನಗಿಯನ್ನೂ ನೀಡುತ್ತಿದೆ.

ಈ ವಿಷಯ ಗಣೇಶನ ಅವರಿಗೆ ತಿಳಿದದ್ದು, ಅವರ “ಮಾಹಿತಿ ಹಕ್ಕಿನ ಅರ್ಜಿ”ಗೆ ಡಿಜಿಎಫ್ಟಿ (ಡೈರೆಕ್ಟೊರೇಟ್ ಜನರಲ್ ಆಫ್ ಫಾರಿನ್ ಟ್ರೇಡ್) ಅವರಿಂದ ಉತ್ತರ ಬಂದಾಗ. ಆ ಉತ್ತರಪತ್ರದಲ್ಲಿ ಹೀಗಿತ್ತು: “ಚಾಲ್ತಿ ರಫ್ತು ನೀತಿಯ ಅನುಸಾರ, ಕೆಂಪು ಚಂದನದ ಮೋಪನ್ನು, ಹಸಿಯಾಗಿ, ಸಂಸ್ಕರಿಸಿ ಅಥವಾ ಸಂಸ್ಕರಿಸದೆ – ಹೀಗೆ ಯಾವುದೇ ರೂಪದಲ್ಲಿ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ.” ಕೆಂಪು ಚಂದನದಿಂದ ತಯಾರಿಸಲಾದ ಬಣ್ಣಗಳು ಮತ್ತು ಸಂಗೀತ ಸಾಧನಗಳು – ಇಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾತ್ರ, ಕಾನೂನುಬದ್ಧ ಮೂಲದಿಂದ ಪಡೆದಿದ್ದರೆ, ಸೂಕ್ತ ಪರವಾನಗಿ ಇರುವಂಥ ನಿರ್ಬಂಧಿತ ವರ್ಗದಲ್ಲಿ ರಫ್ತು ಮಾಡಲು ಅನುಮತಿಯಿದೆ ಎಂಬುದನ್ನೂ ಆ ಉತ್ತರಪತ್ರದಲ್ಲಿ ತಿಳಿಸಲಾಗಿತ್ತು. ಈ ನಿಯಮಗಳಿಂದಾಗಿ, ಭಾರತದಲ್ಲಿ ಗಣೇಶನ್ ಅವರಂತಹ ೩,೦೦೦ಕ್ಕೂ ಮಿಕ್ಕಿದ ಕೃಷಿಕರು ತಾವು ಬೆಳೆಸಿದ ಕೆಂಪು ಚಂದನ ಮರಗಳನ್ನು ಮಾರಲಾಗದ ಸ್ಥಿತಿಯಲ್ಲಿದ್ದಾರೆ.

ಟೆರಿಕಾರ್ಪಸ್ ಸನ್-ಟಾಲಿನಸ್ ಎಂಬುದು ಕೆಂಪು ಚಂದನದ ಸಸ್ಯಶಾಸ್ತ್ರೀಯ ಹೆಸರು. ಅದರ ಗಾಢ ಕೆಂಪುಬಣ್ಣ ಮತ್ತು ಔಷಧೀಯ ಗುಣಗಳಿಂದಾಗಿ ಅದಕ್ಕೆ ಏಷ್ಯಾದಲ್ಲಿ (ಮುಖ್ಯವಾಗಿ ಚೀನಾ ಮತ್ತು ಜಪಾನಿನಲ್ಲಿ) ಭಾರಿ ಬೇಡಿಕೆ – ಸೌಂದರ್ಯ ಸಾಧನಗಳು, ಔಷಧಗಳು, ಸಂಗೀತ ಸಾಧನಗಳು ಮತ್ತು ಆಸನಗಳ ತಯಾರಿಗಾಗಿ ಅದರ ಬಳಕೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಂಪು ಚಂದನದ ಬೆಲೆ ಟನ್ನಿಗೆ ರೂ.೫೦ ಲಕ್ಷದಿಂದ ರೂಪಾಯಿ ಒಂದು ಕೋಟಿ ಎಂಬುದೇ ಅದರ ಜನಪ್ರಿಯತೆಗೆ ಪುರಾವೆ.

ಭಾರತದ ಪೂರ್ವ-ಘಟ್ಟಗಳ ದಕ್ಷಿಣಭಾಗದಲ್ಲಿ ಕಂಡು ಬರುವ ಕೆಂಪು ಚಂದನ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡು ಹಾಗೂ ಕರ್ನಾಟಕದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಬೆಳೆಯುವ ಮರ. ಭಾರೀ ಸಂಖ್ಯೆಯ ಮರಗಳನ್ನು ಕಳ್ಳಸಾಗಣೆದಾರರು ಕಡಿದ ಕಾರಣ ಅದು ಅಳಿದು ಹೋಗುವ ಆತಂಕ ಎದುರಾಗಿತ್ತು. ಆದ್ದರಿಂದ, ಭಾರತ ಸರಕಾರವು ಸಿಐಟಿಇಎಸ್ನ ಅಪೆಂಡಿಕ್ಸ್-೨ರಲ್ಲಿ ಕೆಂಪು ಚಂದನವನ್ನು ಸೇರಿಸಬೇಕೆಂದು ೧೯೮೦ರ ದಶಕದಲ್ಲಿ ಶಿಫಾರಸ್ ಮಾಡಿತು. ಅಂತೂ ೧೯೯೫ರಲ್ಲಿ ಕೆಂಪು ಚಂದನವನ್ನು ಆ ಅಪೆಂಡಿಕ್ಸಿನಲ್ಲಿ ಪಟ್ಟಿ ಮಾಡಲಾಯಿತು. ಅದರ ಪರಿಣಾಮವಾಗಿ ೨೦೦೪ರಲ್ಲಿ ಭಾರತದಿಂದ ಕೆಂಪು ಚಂದನದ ರಫ್ತು ನಿಷೇಧ. ಅಪೆಂಡಿಕ್ಸ್-೨ಕ್ಕೆ ಒಂದು ಮರದ ಸ್ಪಿಷೀಶ್ ಸೇರಿಸಲ್ಪಟ್ಟಾಗ ಅದರ ಅರ್ಥವೇನೆಂದರೆ: “ಆ ಮರದ ಉಳಿವಿಗೆ ಆತಂಕಕಾರಿಯಾದ ಬಳಕೆಯನ್ನು ತಡೆಯಲಿಕ್ಕಾಗಿ, ಅದರ ವ್ಯಾಪಾರವನ್ನು ನಿಯಂತ್ರಿಸತಕ್ಕದ್ದು.”

ಭಾರತದಿಂದ ಪಡೆಯಲಾದ ಕೆಂಪು ಚಂದನದ ವ್ಯಾಪಾರವನ್ನೇ ನಿಷೇಧಿಸಲು ಸಿಐಟಿಇಎಸ್ ೨೦೧೦ರಲ್ಲಿ ಮುಂದಾಯಿತು. ಇದರಿಂದ ಬಚಾವ್ ಆಗಲಿಕ್ಕಾಗಿ ಭಾರತ ಸರಕಾರ ಅಧ್ಯಯನ ವರದಿಯೊಂದನ್ನು ಸಿಐಟಿಇಎಸ್ಗೆ ಸಲ್ಲಿಸಿತು; ತೋಟಗಳಲ್ಲಿ ಬೆಳೆಸಲಾದ ಕೆಂಪು ಚಂದನವನ್ನು ರಫ್ತು ಮಾಡಲು ಅವಕಾಶ ನೀಡಬೇಕೆಂದು ವಿನಂತಿಸಿತು. ಹಾಗಾಗಿ, ೨೦೧೨ರಲ್ಲಿ ಕೆಂಪು ಚಂದನ ರಫ್ತು ಮಾಡಲು ಭಾರತಕ್ಕೆ ಕೋಟಾ ಸಿಕ್ಕಿತು. ಅದರ ಅನುಸಾರ ಭಾರತವು ತೋಟಗಳಲ್ಲಿ (ಕಾಡಿನಲ್ಲಲ್ಲ) ಬೆಳೆಸಿದ ೩೧೦ ಟನ್ ಕೆಂಪು ಚಂದನ ಮತ್ತು ೧೧,೮೦೬ ಟನ್ ವಶಪಡಿಸಿಕೊಂಡ ಕೆಂಪು ಚಂದನ ರಫ್ತು ಮಾಡಬಹುದು.

ಇದರ ಪರಿಣಾಮವಾಗಿ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳ್ನಾಡು ರಾಜ್ಯಗಳು ತಾವು ವಶಪಡಿಸಿಕೊಂಡ ಕೆಂಪು ಚಂದನದ ಏಲಂ ಜರಗಿಸಿವೆ. ಇದರಿಂದಾಗಿ ಲಾಭ ಆಗಿರೋದು ಕಾನೂನುಬಾಹಿರ ವ್ಯಾಪಾರಿಗಳಿಗೆ ಮತ್ತು ಖಾಸಗಿ ಕಂಪೆನಿಗಳಿಗೆ! ಆದರೆ ಗಣೇಶನ್ ಅವರಂತಹ ಕೃಷಿಕರು ತಮ್ಮ ಕೆಂಪು ಚಂದನ ರಫ್ತು ಮಾಡುವಂತಿಲ್ಲ.

ಡಿಜಿಎಫ್ಟಿಯ ಸಹಾಯಕ ನಿರ್ದೇಶಕ ಜಯಕಿರಣ ಸಿಂಗ್ ನೀಡುವ ಮಾಹಿತಿ ಹೀಗಿದೆ: “ವಶಪಡಿಸಿಕೊಂಡ ಕೆಂಪು ಚಂದನದ ಮೋಪುಗಳನ್ನು ಮಾತ್ರ ರಫ್ತು ಮಾಡಲು ಒಪ್ಪಿಗೆ ನೀಡಲಾಗುತ್ತದೆ – ಅದೂ, ಇದಕ್ಕಾಗಿ ಸರಕಾರ ನೋಟಿಫಿಕೇಶನ್ ಪ್ರಕಟಿಸಿದಾಗ.” ಅಂದರೆ, ವಶಪಡಿಸಿಕೊಂಡ ಕೆಂಪು ಚಂದನದ ಮೋಪುಗಳನ್ನು ರಫ್ತು ಮಾಡಲು ಡಿಜಿಎಫ್ಟಿ ಅನುಕೂಲ ಮಾಡಿಕೊಡುತ್ತದೆ; ಆದರೆ ಕೃಷಿಕರು ಬೆಳೆಸಿದ ಕೆಂಪು ಚಂದನ ಮರಗಳ ಮೋಪುಗಳ ರಫ್ತಿಗೆ ನಿಷೇಧ ಮುಂದುವರಿದಿದೆ.

ಸರಕಾರದ ಈ ಇಬ್ಬಗೆಯ ನೀತಿಯಿಂದಾಗಿ ಕೆಂಪು ಚಂದನ ಬೆಳೆಸಿದ ಕೃಷಿಕರಿಗೆ ಸಂಕಟ – ಅವರು ಆಡಳಿತಷಾಹಿಯ “ಕೆಂಪು ಪಟ್ಟಿ”ಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಸರಕಾರದ ನೀತಿಯನ್ನು ನಂಬಿ ಶ್ರೀಗಂಧ, ಅಗರ್-ವುಡ್ ಇತ್ಯಾದಿ ವಿಶೇಷ ಮರಗಳನ್ನು ಬೆಳೆಸಿರುವ ಎಲ್ಲ ಕೃಷಿಕರಿಗೂ ಇದರಲ್ಲಿದೆ ದೊಡ್ಡ ಪಾಠ. ಸರಕಾರ ತನ್ನ ನೀತಿ ಬದಲಾಯಿಸಿದಾಗ, ಹಳೆಯ ನೀತಿ ನಂಬಿ ಹೂಡಿಕೆ ಮಾಡಿದ ಕೃಷಿಕರಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದೇ ಈ ಸಮಸ್ಯೆಗೆ ಪರಿಹಾರ, ಅಲ್ಲವೇ?