ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪಟ್ಟಣ ಕುಮಟಾದಿಂದ ಜೋಗ ಜಲಪಾತಕ್ಕೆ, ಪಶ್ಚಿಮಘಟ್ಟದ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಸಾಗುತ್ತದೆ. ಹೆದ್ದಾರಿಯಲ್ಲಿ ಹೋಗುತ್ತಿರುವಾಗ, ಮಲೆಮನೆ ಘಾಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಗಡಿಯ ಹತ್ತಿರ ಆ ಹೆದ್ದಾರಿ ಪಕ್ಕದಲ್ಲಿ ಒಂದೆಡೆ “ಕತ್ಲೆಕಾನ್” ಎಂಬ ಫಲಕವಿದೆ. ಅಲ್ಲಿ ಇಳಿದರೆ ಸುತ್ತಮುತ್ತ ಅಡಿಕೆ ತೋಟಗಳು. ಅವನ್ನು ದಾಟಿ ನಡೆದು, ಒಳಕ್ಕೆ ಸಾಗಿದರೆ, ಕಣಿವೆಯಲ್ಲಿ ಕಾಣಿಸುತ್ತದೆ ದಟ್ಟವಾದ ಪುರಾತನ ಅರಣ್ಯ – ಅದುವೇ ಕತ್ಲೆಕಾನ್. (ಉತ್ತರಕನ್ನಡದ ಆಡುಮಾತಿನಲ್ಲಿ ಕಾನ್ ಎಂದರೆ ಪವಿತ್ರವನ)
ಉತ್ತರಕನ್ನಡದ ಸಿದ್ಧಾಪುರ ತಾಲೂಕಿನಲ್ಲಿರುವ ಆ ದಟ್ಟ ಅರಣ್ಯದ ವಿಸ್ತೀರ್ಣ ೨೫ ಚದರ ಕಿಲೋಮೀಟರ್. ಹತ್ತಿರದಲ್ಲೇ ಹರಿಯುತ್ತಿದೆ ಶರಾವತಿ ನದಿ. ಅಲ್ಲಿನ ಸಸ್ಯವೈವಿಧ್ಯ ಕಳೆದ ಹತ್ತು ಲಕ್ಷ ವರುಷಗಳಲ್ಲಿ ಬದಲಾಗಿಯೇ ಇಲ್ಲ!
ಯಾಕೆಂದರೆ, ಈ ಅರಣ್ಯವನ್ನು ಶತಮಾನಗಳ ಕಾಲ ರಕ್ಷಿಸಿದ್ದಾರೆ ಮತ್ತು ಅರಣ್ಯದ ದೇವರನ್ನು ಆರಾಧಿಸಿದ್ದಾರ ಅಲ್ಲಿನ ಹಳ್ಳಿಗಳ ಜನರು. ಎಂ.ಡಿ. ಸುಭಾಷ್ ಚಂದ್ರನ್, ಪ್ರೊಫೆಸರ್, ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್, ಭಾರತೀಯ ವಿಜ್ನಾನ ಸಂಸ್ಥೆ, ಬೆಂಗಳೂರು – ಇವರು ಕಳೆದ ೩೦ ವರುಷಗಳಿಂದ ಕತ್ಲೆಕಾನ್ ಎಂಬ ಈ ನಿಗೂಢ ಅರಣ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರ ಪ್ರಕಾರ, ಅಮೂಲ್ಯ ಸಸ್ಯಸಂಪತ್ತಿನ ಇಂತಹ ಅರಣ್ಯ ಉಳಿದಿರುವುದೇ ವಿಸ್ಮಯ.
ಪಕ್ಕದ ಸಣ್ಣ ಕಾಡಿನಲ್ಲಿ ಆರಾಧನೆ ಮಾಡುವವರು ಗಣಪತಿ ನಾಯ್ಕ್. ಹಿಂದೊಮ್ಮೆ ಆ ಸಣ್ಣ ಕಾಡು ಕೂಡ ಕತ್ಲೆಕಾನಿನ ಭಾಗವಾಗಿತ್ತು. ಆದರೆ, ಈಗ ಇವೆರಡರ ನಡುವೆ ಅರ್ಧ ಕಿಮೀ ಅಂತರ; ಈ ಅಂತರದಲ್ಲಿ ಗದ್ದೆತೋಟಗಳು. ಹತ್ತಿರದ ಮಲೆಮನೆ ಗ್ರಾಮದ ನಾಯ್ಕರು, ಗೌಡರು ಮತ್ತು ಈಡಿಗನಾಯ್ಕರು ಆ ಸಣ್ಣ ಕಾಡಿನಲ್ಲಿ ಆರಾಧನೆ ಮಾಡುತ್ತಾರೆ: ಚೌಡಿ ಮತ್ತು ಭೂತಪ್ಪರ ಆರಾಧನೆ. ಅಲ್ಲೇ ಯಕ್ಷಿಬನ ಮತ್ತು ನಾಗಬನಗಳೂ ಇವೆ. ಹತ್ತಿರದ ಹೆಜಿನಿ ಮತ್ತು ಮೆನ್ಸಿ ಹಳ್ಳಿಗಳ ಭಕ್ತರು ಪ್ರತಿ ವರುಷ ಈ ಮೂರು ಹಬ್ಬಗಳ ದಿನ ಕಾಡಿಗೆ ಬಂದು ಪೂಜೆ ಸಲ್ಲಿಸುತ್ತಾರೆ: ಜನವರಿ ತಿಂಗಳ ಸಂಕ್ರಾಂತಿ, ಜೂನ್ ತಿಂಗಳ ಅದ್ರಿಮಲಿ ಮತ್ತು ಅಕ್ಟೋಬರ್-ನವಂಬರ್ ತಿಂಗಳ ದೀಪಾವಳಿ ಹಬ್ಬ.
ಸಾವಿರಾರು ವರುಷಗಳ ಹಿಂದೆ, ಪಶ್ಚಿಮಘಟ್ಟಗಳ ದಕ್ಷಿಣ ಭಾಗವೆಲ್ಲ ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತವಾಗಿತ್ತು; ಜೌಗುನೆಲದ ಕಾಡುಗಳೂ ಅಲ್ಲಿದ್ದವು. ಆದರೆ ಮನುಷ್ಯನ ದುರಾಸೆಗೆ ಕಾಡು ಬಲಿಯಾಯಿತು. ಸುಮಾರು ೩,೦೦೦ ವರುಷಗಳ ಹಿಂದೆ, ಕಾಡುಗಳ ಪುರಾತನ ಮರಗಳನ್ನು ಕೃಷಿಭೂಮಿ ಮಾಡಲಿಕ್ಕಾಗಿ ಕಡಿಯಲಾಯಿತು. ಇದರಿಂದಾಗಿ ಅಲ್ಲಿಯ ಪ್ರಾಕೃತಿಕ ಚಿತ್ರಣವೇ ಬದಲಾಯಿತು. ಈಗ ಕತ್ಲೆಕಾನ್ ಮಾತ್ರ ಉಳಿದಿದೆ. ಅನಾದಿ ಕಾಲದ ಸಸ್ಯಜಾತಿಗಳು ಈಗಲೂ ಅಲ್ಲಿ ಬೆಳೆಯುತ್ತಿವೆ ಎಂಬುದೇ ಸಮಾಧಾನದ ಸಂಗತಿ. ಇಂದಿಗೂ ಕತ್ಲೆಕಾನ್ ಉಳಿದಿರಲು ಮುಖ್ಯ ಕಾರಣ: ಸ್ಥಳೀಯ ಸಮುದಾಯದ ಜನರ ಗಾಢ ನಂಬಿಕೆ ಮತ್ತು ನೀರಿದ್ದರೆ ಮಾತ್ರ ನಮ್ಮ ಗದ್ದೆತೋಟಗಳ ಉಳಿವು ಎಂಬ ಅರಿವು.
ಕತ್ಲೆಕಾನಿನಲ್ಲಿ ಜಾಯಿಕಾಯಿ (ಮಿರಿಸ್ಟಿಕ) ಕುಟುಂಬದ ಮರಗಳ ಬೇರುಗಳ ಬುಡದಲ್ಲಿ ವರುಷವಿಡೀ ನೀರು ಹರಿಯುತ್ತದೆ. ನೆಲಮಟ್ಟದ ಮೇಲೆಯೂ ಬೆಳೆಯುವ ಈ ಮರಗಳ ಬೇರುಗಳಿಂದ, ಉಸಿರಾಟ, ಬಾಷ್ಪವಿಸರ್ಜನೆ ಮತ್ತು ವಿಷಾಂಶ ನಿವಾರಣೆಗೆ ಮರಗಳಿಗೆ ಸಹಾಯ. ಜೌಗುಪ್ರದೇಶದಲ್ಲಿ ಬೆಳೆಯುವ ಇವು ಭೂಮಿಯ ಅತ್ಯಂತ ಪುರಾತನ ಹೂಬಿಡುವ ಮರಗಳು.
ಕತ್ಲೆಕಾನಿನ ಸಸ್ಯಸಂಪತ್ತು
ಕತ್ಲೆಕಾನಿನ ದಟ್ಟ ಸಸ್ಯರಾಶಿಯಲ್ಲಿವೆ ವಿಭಿನ್ನ ಸಸ್ಯ ಹಾಗೂ ಪ್ರಾಣಿಗಳ ಖಜಾನೆ. “೩೫ ಜಾತಿಯ ಕಪ್ಪೆ ಇತ್ಯಾದಿ ಉಭಯವಾಸಿಗಳು ಇಲ್ಲಿವೆ. ೧೮೫ ಜಾತಿಯ ಸಸ್ಯಗಳೂ ಇವೆ. ಇವುಗಳಲ್ಲಿ ೧೦೯ ಮರಗಳು, ೩೯ ಪೊದರುಗಳು, ೨ ಮೂಲಿಕೆಗಳು ಮತ್ತು ೨೫ ಬಳ್ಳಿಗಳು” ಎಂದು ಅಲ್ಲಿನ ಸಮೃದ್ಧ ಸಸ್ಯಸಂಪತ್ತಿನ ಮಾಹಿತಿ ನೀಡುತ್ತಾರೆ ಚಂದ್ರನ್.
ಅಲ್ಲಿನ ಕೆಲವು ಸಸ್ಯವರ್ಗಗಳು ಹೊಸತಾಗಿ ಗುರುತಿಸಲ್ಪಟ್ಟವು. ಉದಾಹರಣೆಗೆ, ಮಾವಿನ ಸಂಬಂಧಿ ಸಸ್ಯ ಸೆಮೆಕಾರ್ಪಸ್ ಕತ್ಲೆಕಾನೆನ್ಸಿಸ್. ಇದನ್ನು ೧೯೫೩ರಲ್ಲಿ ಸರಕಾರಿ ಅಧಿಕಾರಿಯೊಬ್ಬರು ಸೆಮೆಕಾರ್ಪಸ್ ಟ್ರಾವಂಕೊರಿಕ ಎಂದು ತಪ್ಪಾಗಿ ಗುರುತಿಸಿದ್ದರು. ೧೯೯೦ರಲ್ಲಿ ಚಂದ್ರನ್ ಅಲ್ಲಿಗೆ ಹೋಗಿದ್ದಾಗ ಇದನ್ನು ಗಮನಿಸಿ, ಮಾಹಿತಿ ದಾಖಲಿಸಿದರು. ಅನಂತರ ಸಸ್ಯಶಾಸ್ತ್ರಜ್ನರು ರೂಪವಿಜ್ನಾನದ ಸೂತ್ರಗಳ ಪ್ರಕಾರ ಇದು ಕತ್ಲೆಕಾನಿನಲ್ಲಿ ಮಾತ್ರ ಬೆಳೆಯುತ್ತಿರುವ ಪ್ರತ್ಯೇಕ ಸಸ್ಯ ಸ್ಪಿಷೀಸ್ ಎಂದು ಖಚಿತ ಪಡಿಸಿದರು – ಇದರ ವಿವರಗಳನ್ನು ಇಂಡಿಯನ್ ಫಾರೆಸ್ಟರ್ ನಿಯತಕಾಲಿಕದಲ್ಲಿ ಸಂಶೋಧನಾ ಲೇಖನವೊಂದರಲ್ಲಿ ೨,೦೦೦ದಲ್ಲಿ ಪ್ರಕಟಿಸಲಾಗಿದೆ. ಅದಾದ ನಂತರ, ಬೆಂಗಳೂರಿನ ಅಶೋಕ ಟ್ರಸ್ಟಿನ ಸಸ್ಯಶಾಸ್ತ್ರಜ್ನ ಗುಡಸಲಮಣಿ ರವಿಕಾಂತ್ ಈ ಸಂಶೋಧನೆಯನ್ನು ಅಣು-ವಿಶ್ಲೇಷಣೆ ಮೂಲಕ ಸಮರ್ಥಿಸಿದರು.
ಇಂತಹ ಅಮೂಲ್ಯ ಸಸ್ಯಸಂಪತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದರೂ ನಾಶವಾಗದೆ ಉಳಿದಿರುವುದು ಅಚ್ಚರಿಯ ಸಂಗತಿ. ಕತ್ಲೆಕಾನಿನ ಮರಗಳು ತಮ್ಮ ಪರಿಸರದ ಬದಲಾವಣೆಗಳಿಗೆ ಹೊಂದಿಕೊಳ್ಳಲಿಕ್ಕಾಗಿ ತಮ್ಮಲ್ಲಿ ಕೆಲವು ಜೈವಿಕ ಬದಲಾವಣೆಗಳನ್ನು ಮಾಡಿಕೊಂಡಿರುವುದು ಗಮನಾರ್ಹ. ಉದಾಹರಣೆಗೆ, ಜಾಯಿಕಾಯಿ (ಮಿರಿಸ್ಟಿಕ) ಕುಟುಂಬದ ಮರಗಳ ತೊಗಟೆ ತೆಳು ಮತ್ತು ತೇವಾಂಶಭರಿತ; ಅವುಗಳ ಎಲೆಗಳು ದೊಡ್ಡವು. ಇದರಿಂದಾಗಿ, ಈ ಮರಗಳಿಗೆ ಅಧಿಕ ನೀರಿನಾಂಶ ಕಳೆದುಕೊಳ್ಳಲು ಅನುಕೂಲವಾಗಿದೆ. ಈ ಕಾರಣದಿಂದಾಗಿ ಈ ಸಸ್ಯಜಾತಿ ಸಾವಿರಾರು ವರುಷಗಳಿಂದ ಉಳಿದಿದೆ.
ಪರಿಸರದ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದ ಸಸ್ಯಜಾತಿಗಳು ಅಳಿದು ಹೋಗಿ, ಈಗ ಕತ್ಲೆಕಾನಿನ ಜೀವಜಾಲ ಅತ್ಯುತ್ತಮ ಮಟ್ಟದಲ್ಲಿದೆ ಎಂಬುದು ಚಂದ್ರನ್ ಅವರ ಅಭಿಪ್ರಾಯ. ಆದರೆ, ಕತ್ಲೆಕಾನ್ ಸೂಕ್ಷ್ಮವಲಯ. ಇಲ್ಲಿನ ಜೀವಜಾಲದಲ್ಲಿ ಯಾವುದೇ ದೊಡ್ಡ ಬದಲಾವಣೆ (ಮುಖ್ಯವಾಗಿ ನೀರಿನ ಹರಿವಿನಲ್ಲಿ) ಅನಾಹುತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸುತ್ತಾರೆ. ಈ ಅಪಾಯ ಈಗಲೇ ಕಾಣಿಸುತ್ತಿದೆ: ಕತ್ಲೆಕಾನಿನ ಮೇಲ್ಭಾಗದ ಪ್ರದೇಶದಲ್ಲಿ ಭತ್ತ ಮತ್ತು ಅಡಿಕೆ ಬೆಳೆಸುವ ಕೃಷಿಕರು ಹೆಚ್ಚೆಚ್ಚು ನೀರು ಬಳಸುತ್ತಿರುವ ಕಾರಣ. ಇಲ್ಲಿ ಜೌಗುನೆಲದಲ್ಲಿ ನೀರು ಇಲ್ಲವೆಂದಾದರೆ, ಕತ್ಲೆಕಾನಿನ ಜೀವಜಾಲ ನಿರ್ನಾಮವಾಗಲಿದೆ ಎಂಬ ಆತಂಕ ವ್ಯಕ್ತ ಪಡಿಸುತ್ತಾರೆ ಚಂದ್ರನ್.
ಇಲ್ಲಿನ ಜೌಗುನೆಲದ ಮರಗಳ ಉಳಿವಿಗೆ ಇಲ್ಲಿ ವರುಷವಿಡೀ ನೀರು ಹರಿಯುತ್ತಿರಲೇ ಬೇಕು. ಕತ್ಲೆಕಾನಿನ ಮೇಲ್ಭಾಗದಲ್ಲಿ ಸಣ್ಣ ಚೆಕ್-ಡ್ಯಾಮುಗಳ ಮೂಲಕ ತೊರೆಗಳ ನೀರಿನ ಹರಿವಿಗೆ ತಡೆ ಹಾಕಿ, ಆ ನೀರನ್ನು ಗದ್ದೆತೋಟಗಳಿಗೆ ತಿರುಗಿಸಿದರೆ, ಕತ್ಲೆಕಾನಿಗೆ ಬೇಕಾದಷ್ಟು ನೀರು ಸಿಗುವುದಿಲ್ಲ. ಅದರಿಂದಾಗಿ, ಕಡಿಮೆ-ಮಳೆಯ ವರುಷಗಳಲ್ಲಿ ಜೌಗುನೆಲದ ಸಸ್ಯಜಾತಿಗಳ ಪುನರ್-ಬೆಳವಣಿಗೆಗೆ ಧಕ್ಕೆಯಾಗುತ್ತದೆ. ಡಿಫ್ಟಿರೋಕಾರ್ಪಸ್ ಇಂಡಿಕಸ್ ಜಾತಿಯ ಮರಗಳು ಈಗಾಗಲೇ ಅಳಿದು ಹೋಗುತ್ತಿವೆ. ಕ್ಯಾನ್ಸರ್ ಔಷಧಿ ತಯಾರಿಸಲು ಬೇಕಾದ ಕಾಮ್ಪ್ಟೊಥೆಸಿನ್ನ ಮೂಲವಾದ ಈ ಮರಕ್ಕೆ ಹಲವು ಔಷಧಿ ಕಂಪೆನಿಗಳಿಂದ ಬೇಡಿಕೆಯಿದೆ ಎಂದು ಚಂದ್ರನ್ ವಿವರಿಸುತ್ತಾರೆ.
ಕತ್ಲೆಕಾನ್ - ಮುಂದೇನು?
ಕಾಡಿನಲ್ಲೇ ದೇವರ ಆರಾಧನೆ ಮಾಡುವ ಬದಲಾಗಿ ದೇವಸ್ಥಾನಗಳಲ್ಲಿ ಆ ದೇವರ ಆರಾಧನೆ ಶುರುಮಾಡಿದರೆ ಕತ್ಲೆಕಾನಿನಂತಹ ಪುರಾತನ ಅರಣ್ಯಗಳ ಸಂರಕ್ಷಣೆಗೆ ಧಕ್ಕೆ. ಸಿದ್ಧಾಪುರ ಪಟ್ಟಣದ ಹತ್ತಿರ ಇಂತಹ ಬೆಳವಣಿಗೆ ಕಾಣಬಹುದು. ಕಲ್ಯಾಣಪುರ ಮತ್ತು ಮತ್ತಿಗಾರ್ ಕಾನುಗಳಲ್ಲಿ ಪೂಜೆ ಸಲ್ಲುತ್ತಿರುವುದು ಚೌಡಮ್ಮ ಮತ್ತು ಜೆಟ್ಟಿಯಪ್ಪ ದೇವರುಗಳಿಗೆ (ಅಲ್ಲಿನ ಮೂರನೇ ದೇವರು ಅನುಕ್ರಮವಾಗಿ ಕೆರೆಯಮ್ಮ ಮತ್ತು ವೀರಪ್ಪ). ಈ ಕಾನುಗಳಲ್ಲಿ ದೇವರುಗಳ ಜಾಗದ ಗುರುತಿಗಾಗಿ ಕಲ್ಲುಗಳನ್ನು ಇಡಲಾಗಿದೆ. ಈಗ ಅಲ್ಲಿನ ಸಮುದಾಯವೊಂದು ಕಾನಿನೊಳಗೆ ಈ ದೇವರುಗಳಿಗೆ ದೇವಸ್ಥಾನ ಕಟ್ಟಿಸಲು ಮುಂದಾಗಿದೆ. ಇಂತಹ ಬೆಳವಣಿಗೆಗಳಿಂದಾಗಿ ಕಾನುಗಳ ಬಗೆಗಿನ ಗಾಢ ನಂಬಿಕೆ ಬದಲಾದರೆ, ಕಾನುಗಳ ಉಳಿವಿಗೆ ಕುತ್ತು.
“ಸಮುದಾಯಗಳ ಸದಸ್ಯರು ಈ ಪುರಾತನ ಕಾನುಗಳಿಂದ ಸೌದೆ, ಮೇವು ಮತ್ತಿತರ (ಮೋಪು ಅಲ್ಲದ) ಕಾಡಿನ ಉತ್ಪನ್ನಗಳನ್ನು ತೆಗೆಯುವುದಕ್ಕೆ ನಿರ್ಬಂಧ ಹಾಕಿದ್ದಾರೆ. ಈ ಸಂಪನ್ಮೂಲಗಳ ನಾಶ ತಡೆಯುವುದೇ ಇದರ ಉದ್ದೇಶ” ಎನ್ನುತ್ತಾರೆ ಜಗನ್ನಾಥ ರಾವ್. ಅವರು ಬೆಂಗಳೂರಿನ ಟಿಡಿಯು (ಇನ್ಸ್ಟಿಟ್ಯೂಟ್ ಆಫ್ ಟ್ರಾನ್ಸ್-ಡಿಸೆಪ್ಲಿನರಿ ಹೆಲ್ತ್ ಸೈನ್ಸಸ್ ಆಂಡ್ ಟೆಕ್ನಾಲಜಿ – ಎಫ್.ಆರ್.ಎಲ್.ಎಚ್.ಟಿ.)ನಲ್ಲಿ ಅಸೋಸಿಯೇಟ್ ಪ್ರೊಫೆಸರ್. ಈ ಸಂಸ್ಥೆಯು ಕರ್ನಾಟಕದ ಕಾಡುಗಳು ಒದಗಿಸುವ “ಇಕೋ-ಸೇವೆ”ಗಳ ಬೆಲೆ ನಿರ್ಧರಿಸಲು ಯೋಜನೆ ರೂಪಿಸಿದೆ. ಇದರಲ್ಲಿ ಕಾಡಿನಿಂದ ಸಿಗುವ ನಗದು-ಸಂಪನ್ಮೂಲ ಹಾಗೂ ನಗದೇತರ ಸಂಪನ್ಮೂಲಗಳನ್ನು (ಅಂದರೆ ನೀರಿನ ಭದ್ರತೆ, ಔಷಧೀಯ ಸಸ್ಯಗಳ ಲಭ್ಯತೆ ಮತ್ತು ಜೀವವೈವಿಧ್ಯ) ಪರಿಗಣಿಸಲಾಗುವುದು.
ಬ್ರಿಟಿಷರು ಭಾರತಕ್ಕೆ ಕಾಲಿಡುವ ಮುಂಚೆ ಕಾನುಗಳನ್ನು ಜನರು “ದೇವರ ವಾಸಸ್ಥಳ”ಗಳೆಂದು ಭಾವಿಸಿ ರಕ್ಷಿಸುತ್ತಿದ್ದರು. ಆದರೆ, ಬ್ರಿಟಿಷರ ಕಾಲದಲ್ಲಿ ಈ ಪುರಾತನ ಅರಣ್ಯಗಳ ಮೇಲೆ ಸಮುದಾಯಗಳು ನಿಯಂತ್ರಣ ಕಳೆದುಕೊಂಡವು; ಯಾಕೆಂದರ ಬ್ರಿಟಿಷರು ಎಲ್ಲ ಅರಣ್ಯ ಸರಕಾರದ ಸೊತ್ತು ಎಂದು ಕಾಯಿದೆ ಮಾಡಿದರು. ಈ ಕಾನುಗಳನ್ನು ರಕ್ಷಿತ ಅರಣ್ಯಗಳೊಂದಿಗೆ ಸೇರ್ಪಡೆಗೊಳಿಸಲಾಯಿತು. ಸ್ವಾತಂತ್ರ್ಯಾ ನಂತರವೂ ಇದೇ ಧೋರಣೆ ಮುಂದುವರಿದು, ಹಲವಾರು ಪುರಾತನ ಕಾನುಗಳನ್ನು ಅಭಿವೃದ್ಧಿ ಯೋಜನೆಗಳಿಗಾಗಿ ನಾಶ ಮಾಡಲಾಯಿತು.
ಹಾಗಿರುವಾಗ, “ಕಾನು ನಮ್ಮನ್ನು ಕಾಪಾಡುತ್ತದೆ” ಎಂಬ ಸ್ಥಳೀಯ ಸಮುದಾಯಗಳ ಗಾಢ ನಂಬಿಕೆಯಿಂದಾಗಿ, ಕತ್ಲೆಕಾನಿನಂತಹ ಪುರಾತನ ಅರಣ್ಯ ಇನ್ನೂ ಉಳಿದಿರುವುದು ನಮ್ಮ ಭಾಗ್ಯ. ಈ ಭಾಗ್ಯವನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರದು, ಅಲ್ಲವೇ?
(ಅಡಿಕೆ ಪತ್ರಿಕೆ, ಮಾರ್ಚ್ ೨೦೧೮)
(ಫೋಟೋ: ಕತ್ಲೆಕಾನ್ ಮಿರಿಸ್ಟಿಕ ಮರದ ವಿಶಿಷ್ಠ ಬೇರುಗಳು, ಕೃಪೆ: ಡೌನ್ ಟು ಅರ್ತ್ ಪಾಕ್ಷಿಕ)