ಕಗ್ಗ ದರ್ಶನ – 6

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ                                                          
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ
ತಿನ್ನುವುದಾತ್ಮವನೆ - ಮಂಕುತಿಮ್ಮ
ಹಸಿವು ಎಂಬುದು ಬೆಂಕಿ, ಅಲ್ಲವೇ? ಅದಕ್ಕಿಂತಲೂ ದಗದಗಿಸುವ ಬೆಂಕಿ ಯಾವುದೆಲ್ಲ ಎನ್ನುವುದನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ ಸಾದರ ಪಡಿಸಿದ್ದಾರೆ. ಹೊಟ್ಟೆಯೊಳಗೆ ಹಸಿವು ಕುದಿಯುತ್ತಿರುವಾಗ ಏನನ್ನಾದರೂ ತಿನ್ನಲೇ ಬೇಕು. ಅದುವೇ ಅನ್ನದಾತುರ. ಕೆಲವರಿಗಂತೂ ತಿಂದಷ್ಟೂ ಹಿಂಗದ ಹಸಿವು.
ಇದಕ್ಕಿಂತ ತೀಕ್ಷ್ಣವಾದದ್ದು ಚಿನ್ನದಾತುರ. ಬಂಗಾರ ಇತ್ಯಾದಿ ಸಂಪತ್ತು ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂಬ ದುರಾಸೆ. ಕಂಡಿದ್ದೀರಾ ಚಿನ್ನದಂಗಡಿಗಳಲ್ಲಿ – ಮೈಯೆಲ್ಲ ಚಿನ್ನದೊಡವೆ ಹೇರಿಕೊಂಡವರು ಮತ್ತೆಮತ್ತೆ ಚಿನ್ನ ಖರೀದಿಸುವುದನ್ನು? ಎರಡೂ ಕೈಗಳಲ್ಲಿ ತಲಾ ಹತ್ತು ಚಿನ್ನದ ಬಳೆ ಹಾಕಿಕೊಂಡವರು, “ನನ್ನ ಕೈಗಳು ಬೋಳುಬೋಳಾಗಿ ಕಾಣಿಸುತ್ತಿವೆ” ಎಂದು ಕೊರಗುವುದನ್ನು?
ಇದಕ್ಕಿಂತಲೂ ತೀವ್ರವಾದ ಆತುರ ಮತ್ತೊಂದಿದೆ – ಅದುವೇ ಹೆಣ್ಣುಗಂಡೊಲವು. ಆಹಾ, ಏನು ಸೆಳೆತ ಹೆಣ್ಣು-ಗಂಡಿನ ನಡುವೆ! ಗಂಟೆಗಟ್ಟಲೆ ಜೊತೆಗೆ ಕೂತಿದ್ದರೂ ಅವರಿಗೆ ಎದ್ದೇಳಲು ಮನಸ್ಸು ಬಾರದು. ಸಾವಿರಾರು ಮೈಲುಗಳ ದೂರದಲ್ಲಿದ್ದರೂ, ಕ್ಷಣಕ್ಷಣವೂ ಪರಸ್ಪರರ ನೆನಕೆ. ಇದರ ಬಗ್ಗೆ ಬರೆಯಲಾಗಿರುವ ಸಾಹಿತ್ಯವಂತೂ ಸಾವಿರಾರು ಪುಟಗಳು: ಮಹಾಭಾರತದ ಕತೆಗಳು, ರಾಜರಾಣಿಯರ ಕತೆಗಳು, ಜಾನಪದ ಕತೆಗಳು, ರೋಮಿಯೊ – ಜೂಲಿಯೆಟ್ನಂತಹ ನಾಟಕಗಳು, ಕಾದಂಬರಿಗಳು, ಕವನಗಳು.
ಆದರೆ ಇವೆಲ್ಲವನ್ನೂ ಮೀರಿಸುವ ದಾಹವೊಂದಿದೆ – ಅದುವೇ ಕೆಂಪುಕೆಂಪು ಜ್ವಾಲೆ ಎಬ್ಬಿಸುವ ಅಗ್ನಿಕುಂಡದಂತಹ ಮನ್ನಣೆಯ ದಾಹ. ಪ್ರತಿಯೊಬ್ಬರೂ ತನಗೆ ಮಣೆ ಹಾಕಬೇಕೆಂಬ ತಣಿಯದ ದಾಹ. ಮದುವೆಮುಂಜಿಯಂತಹ ಸಮಾರಂಭಗಳಲ್ಲಿ ಏನಾಗುತ್ತದೆ ಎಂಬುದನ್ನು ಗಮನಿಸಿದ್ದೀರಾ? ಮುಗುಳುನಗೆಯೊಂದಿಗೆ ಒಳ ಬರುವ ಕೆಲವರ ಮುಖದ ನಗು ಮಾಯವಾಗಿ, ಮುಖ ಬಿರುಸಾಗುತ್ತದೆ. ಯಾಕೆ? ದ್ವಾರದಲ್ಲಿ ಅವರನ್ನು ಯಾರೂ ಸ್ವಾಗತಿಸಲಿಲ್ಲ; ಒಳ ಬಂದಾಗ ಮಾತಾಡಿಸಲಿಲ್ಲ ಎಂಬ ಸಣ್ಣ ಕಾರಣ. ಈ ದಾಹದಿಂದಾಗಿ ಸಂಸ್ಥೆಗಳು ಸತ್ತಿವೆ; ಕುಟುಂಬಗಳು ಒಡೆದಿವೆ; ಕ್ರೀಡಾತಂಡಗಳು ಸೋತಿವೆ; ಸರಕಾರಗಳು ಉರುಳಿವೆ. ಈ ಮನ್ನಣೆಯ ದಾಹ ನಮ್ಮ ಆತ್ಮವನ್ನೇ ನಾಶ ಮಾಡುತ್ತದೆ.

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ
ಮೊದಲು ನಾನೆನ್ನವರು ಬಳಿಕ ಉಳಿದವರು
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ
ಅದುಮಿಕೊ ಅಹಮಿಕೆಯನು – ಮರುಳ ಮುನಿಯ
ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿಗಳಲ್ಲಿ ಮನುಷ್ಯರಲ್ಲಿ ಕಾಣಿಸುತ್ತದೆ ಎಂಬುದನ್ನು ಗಮನಿಸಿದ್ದೀರಾ? ಅಂಗಡಿಯಲ್ಲಿ, ಬಸ್ ನಿಲ್ದಾಣದಲ್ಲಿ, ರೈಲು ನಿಲ್ದಾಣದಲ್ಲಿ, ಸಿನೆಮಾ ಟಾಕೀಸಿನಲ್ಲಿ ಉದ್ದನೆಯ ಸರತಿಯ ಸಾಲು. ಆದರೆ ಕೆಲವರಿಗೆ ತನ್ನ ಕೆಲಸ ಮೊದಲು ಆಗಬೇಕೆಂಬ ದರ್ಪ; ಅಲ್ಲಿ ಕಾಯುತ್ತಿರುವ ಇತರರ ಬಗ್ಗೆ ಅಸಡ್ಡೆ. ತನ್ನ ಸಮಯ ಮಾತ್ರ ಅಮೂಲ್ಯ, ಇತರರ ಸಮಯಕ್ಕೆ ಬೆಲೆಯಿಲ್ಲ ಎಂಬ ವರ್ತನೆ. ಅವರ ವರ್ತನೆ ಪ್ರಶ್ನಿಸಿದವರ ಮೇಲೆ ರೇಗಾಡಿ ದಬ್ಬಾಳಿಕೆ.
ಇಂತವರಿಗೆ ಸಮಾರಂಭಗಳಲ್ಲಿಯೂ “ಮೊದಲಿನ ಪೀಠ”ವೇ ಬೇಕು. ನನ್ನನ್ನು ವೇದಿಕೆಗೆ ಕರೆದು ಕೂರಿಸಲಿಲ್ಲ, ಮುಂದಿನ ಸಾಲಿನಲ್ಲಿ ಕೂರಿಸಲಿಲ್ಲ; ನನಗೆ ಮಾಲೆ ಹಾಕಲಿಲ್ಲ, ಶಾಲು ಹೊದೆಸಲಿಲ್ಲ ಎಂಬ ಕಾರಣಕ್ಕಾಗಿ ಅದೆಷ್ಟು ಸಮಾರಂಭಗಳು ನಿಂತು ಹೋಗಿವೆ! “ನನಗೆ ಸರಿಯಾಗಿ ಅತಿಥಿ ಸತ್ಕಾರ ಮಾಡಲಿಲ್ಲ. ಇನ್ನು ಮುಂದೆ ನಿಮ್ಮ ಮನೆಗೆ ಕಾಲಿಡುವುದಿಲ್ಲ” ಎಂಬ ಸೊಕ್ಕಿನಿಂದ ಮನೆಯಿಂದ ಹೊರ ನಡೆದವರೆಷ್ಟು!
ಇಂತಹ ಅಹಂಕಾರ ತುಂಬಿಕೊಂಡವರಿಂದಾಗಿ ಏನೆಲ್ಲ ಅನಾಹುತಗಳಾಗಿವೆ! ಮದುವೆಗಳು ಮುರಿದು ಬಿದ್ದಿವೆ; ಮನೆಗಳು ಒಡೆದಿವೆ; ಸಮುದಾಯಗಳು ನರಳಿವೆ; ಊರುಗಳು ನಾಶವಾಗಿವೆ; ದೇಶಗಳು ಧ್ವಂಸವಾಗಿವೆ.
ಮಹಾಭಾರತದ ಕತೆ ನೆನೆಯೋಣ. ಒಬ್ಬನ ಅಹಂನಿಂದಾಗಿ ಲಕ್ಷಗಟ್ಟಲೆ ಯೋಧರ ಸಾವು, ಸೊತ್ತು ನಾಶ, ದೇಶಕ್ಕೆ ವಿನಾಶ. ಇದಕ್ಕೆ ಕಾರಣ – ಪಾಂಡವರ ಅರಗಿನ ಮನೆಯಲ್ಲಿ ನೀರು-ನೆಲ ತಿಳಿಯದೆ ದುರ್ಯೋಧನ ಗೊಂದಲ ಪಟ್ಟಾಗ ದ್ರೌಪದಿ ನಕ್ಕಳು ಎಂಬುದು, ಅಷ್ಟೇ. ಎರಡನೇ ಮಹಾಯುದ್ಧದ ಕಾರಣವೇನು? ನಾನು ಮತ್ತು ನನ್ನವರು ಶ್ರೇಷ್ಠರು; ಉಳಿದವರೆಲ್ಲ ಹುಳಗಳಂತೆ ಸಾಯಬೇಕಾದವರು ಎಂದು ನಂಬಿದ ಹಿಟ್ಲರನ ಅಹಂ. ಅದೇ ಲಕ್ಷಗಟ್ಟಲೆ ಜನರ ಸಾವುನೋವಿನ ಮೂಲವಾಯಿತು.
ಹೀಗೆ, ಮನುಷ್ಯನ ಅಹಂಕಾರವೇ ಈ ಲೋಕದ ಎಲ್ಲ ಕಲಹಗಳಿಗೆ, ದುಃಖಗಳಿಗೆ ಮೂಲ ಕಾರಣವೆನ್ನುತ್ತಾರೆ ಮಾನ್ಯ ಡಿ.ವಿ.ಜಿ.ಯವರು. ಇದಕ್ಕೆ ಪರಿಹಾರವನ್ನೂ ಅವರು ಸೂಚಿಸುತ್ತಾರೆ – “ಅದುಮಿಕೋ ಅಹಂತೆಯನು”. ಇದಕ್ಕಾಗಿಯೇ ಎಲ್ಲ ಧರ್ಮಗಳೂ ಒಂದು ನಿಯಮ ರೂಪಿಸಿವೆ: “ಈ ವಿಶ್ವವನ್ನು ನಡೆಸುವ ಚೈತನ್ಯಕ್ಕೆ ದಿನಕ್ಕೊಮ್ಮೆ ಶರಣಾಗಿ, ನಮಿಸಿ.” ಇನ್ನಾದರೂ ಅದನ್ನು ಪಾಲಿಸೋಣ.