ಕಗ್ಗ ದರ್ಶನ – 41

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ
ದುಡಿ ಕೈಯಿನಾದನಿತು; ಪಡು ಬಂದ ಪಾಡು
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು
ಬಿಡುಗಡೆಗೆ ದಾರಿಯದು - ಮಂಕುತಿಮ್ಮ
ಬದುಕಿನಲ್ಲಿ ಎಡರುತೊಡರುಗಳು ಬಂದೇ ಬರುತ್ತವೆ. ಅಯ್ಯೋ, ಅಡ್ಡಿಆತಂಕಗಳು ಎದುರಾದವಲ್ಲಾ ಎನ್ನುವುದೇಕೆ? ನಿಮ್ಮ ಜಾಣ್ಮೆಯಿಂದ ಅವನ್ನು ಸಾಧ್ಯವಾದಷ್ಟು ಪರಿಹರಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ದುಡಿಯಿರಿ. ಬಂದದ್ದೆಲ್ಲಾ ಬರಲಿ ಎಂದು ಜೀವನದಲ್ಲಿ ಬಂದ ಪಾಡನ್ನು ಅನುಭವಿಸಿ. ನಿಮ್ಮ ಕೈಮೀರಿದ್ದನ್ನು ವಿಧಿಗೆ ಬಿಟ್ಟು ಬಿಡಿ. ಆದರೆ ಬದುಕಿನ ನೆಮ್ಮದಿ (ಉಪಶಾಂತಿ) ಕಳೆದುಕೊಳ್ಳಬೇಡಿ. ಇದುವೇ ನಿಮ್ಮ ಬಿಡುಗಡೆಯ ದಾರಿ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಬ್ರೈಲ್ ಲಿಪಿ, ಕಣ್ಣು ಕಾಣಿಸದವರು ಓದಲು ಮತ್ತು ಬರೆಯಲು ಬಳಸುವ ಲಿಪಿ. ಇದರ ಸಂಶೋಧಕ ಲೂಯಿಸ್ ಬ್ರೈಲಿ. ಫ್ರಾನ್ಸಿನ ರಾಜಧಾನಿ ಪ್ಯಾರಿಸ್ ಹತ್ತಿರದ ಊರಿನವನು. ಮೂರು ವರುಷದ ಮಗುವಾಗಿದ್ದಾಗ ಅವಘಡದಿಂದಾಗಿ ಕಣ್ಣಿನ ದೃಷ್ಠಿ ಕಳೆದುಕೊಂಡವನು. ಹತ್ತು ವರುಷ ವಯಸ್ಸಾದಾಗ, ಪ್ಯಾರಿಸಿನ ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್ನಲ್ಲಿ ಕಲಿಯಲು ಅವನಿಗೆ ವಿದ್ಯಾರ್ಥಿವೇತನ ಸಿಕ್ಕಿತು. ಅಲ್ಲಿ, ತಾಮ್ರದ ತಂತಿಗಳನ್ನು ಒತ್ತಿ ಕಾಗದದಲ್ಲಿ ಮೂಡಿಸಿದ ಅಕ್ಷರಗಳಿಂದ ಮಕ್ಕಳಿಗೆ ಕಲಿಸುತ್ತಿದ್ದರು. ಭಾರವಾದ ಆ ಪುಸ್ತಕಗಳನ್ನು ಓದುವುದು ಬಹಳ ಕಷ್ಟ.
ಚಾರ್ಲ್ಸ್ ಬಾರ್ಬಿಯರ್ ಎಂಬ ಮಾಜಿ ಸೈನಿಕ ಆ ಶಾಲೆಗೆ ೧೮೨೧ರಲ್ಲಿ ಬರುತ್ತಾರೆ. ಹನ್ನೆರಡು ಬಿಂದುಗಳನ್ನು ಆಧರಿಸಿದ “ರಾತ್ರಿ ಬರಹ” ಎಂಬ ತಮ್ಮ ಗುಪ್ತ ಸಂದೇಶ ರವಾನೆಯ ಅನುಶೋಧನೆಯನ್ನು ಮಕ್ಕಳಿಗೆ ಕಲಿಸುತ್ತಾರೆ. (ಇದನ್ನು ಬಳಸಿ ಸೈನಿಕರು ಮಾತುಕತೆಯಿಲ್ಲದೆ ಗುಪ್ತ ಸಂದೇಶಗಳನ್ನು ರವಾನಿಸುತ್ತಿದ್ದರು.) ಅದು ಜಟಿಲವಾಗಿದ್ದರೂ ಹನ್ನೆರಡು ವರುಷ ವಯಸ್ಸಿನ ಲೂಯಿಸ್ ಅದನ್ನು ಬೇಗನೇ ಕಲಿಯುತ್ತಾನೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಅದನ್ನು ೧೨ ಬಿಂದುಗಳ ಬದಲಾಗಿ ಆರು-ಬಿಂದುಗಳನ್ನು ಆಧರಿಸಿದ ಸಂದೇಶ ರವಾನೆ ವ್ಯವಸ್ಥೆಯಾಗಿ ಸರಳಗೊಳಿಸುತ್ತಾರೆ. ಅನಂತರ, ೧೮೨೯ರಲ್ಲಿ ಮೊತ್ತಮೊದಲ ಬ್ರೈಲ್ ಲಿಪಿಯ ಪುಸ್ತಕ ಪ್ರಕಟಿಸುತ್ತಾರೆ. ಪದವಿ ಶಿಕ್ಷಣದ ನಂತರ, ಲೂಯಿಸ್ ೧೮೨೮ರಲ್ಲಿ ಅದೇ ಸಂಸ್ಥೆಯಲ್ಲಿ ಅಧ್ಯಾಪಕರಾಗುತ್ತಾರೆ. ಕ್ರಮೇಣ ಬ್ರೈಲ್ ಲಿಪಿ ಜಗತ್ತಿನ ಉದ್ದಗಲಕ್ಕೆ ವ್ಯಾಪಿಸಿತು. ಕಣ್ಣಿನ ದೃಷ್ಟಿ ಕಳೆದುಕೊಂಡ ಲೂಯಿಸ್ ತನ್ನ ಬದುಕಿನಲ್ಲಿ ಕತ್ತಲು ತುಂಬಿತೆಂದು ದುಃಖಿಸುತ್ತ ಕೂರಲಿಲ್ಲ. ಅದನ್ನು ಎದುರಿಸಿ, ಕಣ್ಣು ಕಾಣದಿರುವ ಎಲ್ಲರಿಗೂ ಬೆಳಕಾಗುವಂತೆ ಬಾಳಿದರು. ಅವರನ್ನೆಲ್ಲ ಜ್ನಾನದಲೋಕಕ್ಕೆ ಮುನ್ನಡೆಸಿದರು.

ಕಾಲ ಬೇರಾಯ್ತೆಂದು ಗೋಳಾಡುವುದದೇಕೆ?
ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ
ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ
ಬಾಳುವುದೆ ಗೆಲವೆಲವೊ – ಮರುಳ ಮುನಿಯ
ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ. ಅವರು ನೀಡುವ ಸಂದೇಶ: ಈ ಜಗತ್ತು ಪರಮಾತ್ಮನ ಲೀಲೆ ಎನ್ನುವುದಾದರೆ, ಇಲ್ಲಿ ಪರಿ ಪರಿ ಪರೀಕ್ಷೆಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ನಮ್ಮ ಸಂಯಮದ ಸತ್ತ್ವದಿಂದ ತಾಳಿಕೊಂಡು ಬಾಳುವುದೇ ಗೆಲವು.
ಕಳೆದ ೨೧ ವರುಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೩,೧೮,೦೦೦ ದಾಟಿದೆ. ೨೦೧೫ರಲ್ಲಿ, ಒಂದೇ ವರುಷದಲ್ಲಿ, ೮,೦೦೭ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಕೃಷಿರಂಗದ ಗರ್ಭದಲ್ಲಿರುವ ತಲ್ಲಣಗಳ ಸೂಚಕ. ಕಳೆದ ಮೂರು ದಶಕಗಳಲ್ಲಿ ಹೀಗೇಕಾಯಿತು? ಏಕೆಂದರೆ, “ಆರ್ಥಿಕ ಸುಧಾರಣೆ”ಯ ಕ್ರಮಗಳು ಜ್ಯಾರಿ ಆದಾಗಿನಿಂದ ಕೃಷಿರಂಗವು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ನಮ್ಮ ದೇಶಕ್ಕೆ ಜಾಗತಿಕ ಬ್ಯಾಂಕ್ ನೀಡಿದ್ದ ನಿರ್ದೇಶನ: ೨೦೧೫ರ ಹೊತ್ತಿಗೆ ೪೦೦ ದಶಲಕ್ಷ ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಬೇಕು. ಅದಕ್ಕಾಗಿ, ಎಲ್ಲ ಸರಕಾರಗಳು ಕೃಷಿ ಎಂಬುದು ನಷ್ಟದ ವ್ಯವಹಾರ ಆಗುವಂತೆ ಮಾಡಿವೆ.
ಆಹಾರದ ಹಣದುಬ್ಬರ ನಿಯಂತ್ರಿಸಲಿಕ್ಕಾಗಿ ರೈತರ ಫಸಲಿಗೆ ಕಡಿಮೆ ಬೆಲೆ ಪಾವತಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಅದು ಎಷ್ಟು ಕಡಿಮೆಯೆಂದರೆ, ಫಸಲಿನ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ. ಇದರಿಂದಾಗಿ, ವರುಷದಿಂದ ವರುಷಕ್ಕೆ ರೈತರ ಹತಾಶೆ ಹೆಚ್ಚುತ್ತಿದೆ. ಕೇಂದ್ರ ಸರಕಾರ ಪ್ರಕಟಿಸಿದ ೨೦೧೬ರ ಆರ್ಥಿಕ ಸಮೀಕ್ಷೆ ಪ್ರಕಾರ, ೧೭ ರಾಜ್ಯಗಳ ಕೃಷಿ ಕುಟುಂಬಗಳ ವಾರ್ಷಿಕ ಆದಾಯ ಕೇವಲ ರೂ.೨೦,೦೦೦. ಅಂದರೆ, ತಿಂಗಳಿಗೆ ರೂ.೧,೭೦೦ಕ್ಕಿಂತ ಕಡಿಮೆ. ಈ ಆದಾಯದಲ್ಲಿ ಒಂದು ಕುಟುಂಬ ಬಾಳಲು ಸಾಧ್ಯವೇ?
ಆದರೆ, ತಮ್ಮ ಕೈಮೀರಿದ ಕಾರಣಗಳಿಂದಾಗಿ ಬದುಕು ದಾರುಣವಾದಾಗ ಆತ್ಮಹತ್ಯೆ ಪರಿಹಾರವಲ್ಲ. ಕಡಿಮೆ ನೀರಿನಿಂದ ಬೆಳೆಸಬಹುದಾದ ಸಿರಿಧಾನ್ಯದ ಬೆಳೆಗಳ ಬೇಸಾಯದಿಂದ ಮನೆಮಂದಿಯ ಊಟಕ್ಕೆ ಬೇಕಾದ ಫಸಲು ಪಡೆಯಲು ಸಾಧ್ಯ. ಬಹುಬೆಳೆಗಳನ್ನು ಬೆಳೆಸಿದರೆ, ಒಂದಾದರೂ ಬೆಳೆ ಕೈಗೆ ಬಂದು, ಆದಾಯ ಸಿಗಲು ಸಾಧ್ಯ. ಫಸಲಿನ ಮೌಲ್ಯವರ್ಧನೆ ಮಾಡಿ (ಹಲಸಿನಿಂದ ಹಪ್ಪಳ, ಮಾವಿನಿಂದ ಮಾಂಬಳ) ಮಾರಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಈ ರೀತಿ ಬದಲಾದ ಪರಿಸ್ಥಿತಿಯನ್ನು ಎದುರಿಸಿ ಬಾಳಬೇಕು. ಇದುವೇ ಜೀವನದ ಗೆಲವು, ಅಲ್ಲವೇ?