ಕಗ್ಗ ದರ್ಶನ – 36

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ - ಮಂಕುತಿಮ್ಮ
ನಾವು ಹುಟ್ಟಿದ ಕ್ಷಣವೇ ನಿರ್ಧಾರವಾಗಿರುತ್ತದೆ ನಮ್ಮ ಗ್ರಹಗತಿ – ಆ ಕ್ಷಣದಲ್ಲಿ ಗುರು, ಶನಿ, ಶುಕ್ರ, ಬುಧ, ಮಂಗಳ ಇತ್ಯಾದಿ ಗ್ರಹಗಳ ಸ್ಥಾನ ಅವಲಂಬಿಸಿ. ಅದು ನಮ್ಮ ಜನ್ಮಕ್ಷಣದ ವಿಧಿನಿರ್ಣಯ. ಆ ಗ್ರಹಗತಿ ಅಂತಿಮ. ನಮ್ಮ ಜಾತಕ ತಿದ್ದಿ, ನಮ್ಮ ಗ್ರಹಗತಿ ಸರಿಪಡಿಸಲು ಯಾವ ಜ್ಯೋತಿಷಿಗೂ ಸಾಧ್ಯವಿಲ್ಲ. ನಮಗೆ ಯಾವ ದಶೆ (ಸ್ಥಿತಿ) ಬಂದರೂ ಅದನ್ನು ಸಹಿಸಿಸಹಿಸಿ ಮುಗಿಸಬೇಕು – ಶನಿದಸೆಯನ್ನೂ. ಬೇರೆ ದಾರಿಯೇ ಇಲ್ಲ. ಹಾಗೆ ಬದುಕಲಿಕ್ಕಾಗಿ ವಜ್ರದಂತಹ ಸಹನೆ ಬೆಳೆಸಿಕೊಳ್ಳಬೇಕು ಎಂದು ಈ ಮುಕ್ತಕದಲ್ಲಿ ಸರಳವಾಗಿ ತಿಳಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಸ್ವರ್ಗದಂತಹ ವೈಭವವಿದ್ದ ನೌಕೆ ಟೈಟಾನಿಕ್. ೧೯೧೨ರಲ್ಲಿ ಅದರಲ್ಲಿ ಸಾವಿರಾರು ಜನರು ಸಾಗರಯಾನ ಹೊರಟರು. ಸೌತಾಂಪ್ಟನಿನಿಂದ ಹೊರಟ ಆ ಮಹಾಹಡಗು ಕೆಲವೇ ಗಂಟೆಗಳಲ್ಲಿ ಮುಳುಗಿ, ೧,೫೦೦ಕ್ಕಿಂತ ಅಧಿಕ ಪ್ರಯಾಣಿಕರ ಬಲಿ ತೆಗೆದುಕೊಂಡಿತು. ಮಹಾಮಂಜುಗಡ್ಡೆಗೆ ಢಿಕ್ಕಿ ಹೊಡೆದದ್ದರಿಂದ ಟೈಟಾನಿಕ್ ನೌಕೆಯ ತಳಕ್ಕೆ ಘಾಸಿಯಾಗಿ ನೌಕೆ ಮುಳುಗಿತೆಂದು ಈ ವರೆಗೆ ನಂಬಲಾಗಿತ್ತು. ಆದರೆ, ೨ ಜನವರಿ ೨೦೧೭ರ ಪತ್ರಿಕಾವರದಿಯಲ್ಲಿದೆ ಬೇರೊಂದು ಸತ್ಯ. ಆ ನೌಕೆ ಬೆಲ್-ಫಾಸ್ಟಿನ ಷಿಪ್ ಯಾರ್ಡಿನಿಂದ ಹೊರಟಾಗಿನಿಂದ ಅದರ ಕಲ್ಲಿದ್ದಲು ಕೋಣೆಯಲ್ಲಿ ಅಕಸ್ಮಾತ್ ಹುಟ್ಟಿಕೊಂಡ ಬೆಂಕಿಯನ್ನು ನಂದಿಸಲು ಸಾಧ್ಯವಾಗಿರಲಿಲ್ಲ. ಆ ಬೆಂಕಿಯಿಂದಾಗಿ ನೌಕೆಯ ತಳ (ಹಲ್) ದುರ್ಬಲವಾಗಿತ್ತು. ಅದನ್ನು ಸರಿಪಡಿಸಿದ ನಂತರವೇ ನೌಕೆ ಯಾನ ಆರಂಭಿಸಬೇಕಿತ್ತು. ಆ ನೌಕೆ ನಿರ್ಮಿಸಿದ ಕಂಪೆನಿಯ ಅಧ್ಯಕ್ಷ ಜೆ. ಬ್ರೂಸ್ ಇಸ್ಮೇ ಅದೇ ನೌಕೆಯಲ್ಲಿದ್ದ; ಅದನ್ನು ಸರಿಪಡಿಸುವ ಹೊಣೆಗಾರಿಕೆ ಆತ ನಿರ್ವಹಿಸಲಿಲ್ಲ. ಅಂತೂ, ಬೆಂಕಿ, ಮಹಾಮಂಜುಗಡ್ಡೆ ಮತ್ತು ಕ್ರಿಮಿನಲ್ ಬೇಜವಾಬ್ದಾರಿತನದಿಂದಾಗಿ ಮಹಾಹಡಗು ನಾಶ ಹಾಗೂ ೧,೫೦೦ ಮಿಕ್ಕಿ ಯಾನಿಗಳ ಸಾವು.
ಮೊದಲನೇ ಮತ್ತು ಎರಡನೇ ಮಹಾಯುದ್ಧ, ಜಪಾನಿನ ಮೇಲೆ ಮೊದಲ ಅಣುಬಾಂಬುಗಳ ಧಾಳಿ, ವಿಯೆಟ್ನಾಂ ಯುದ್ಧ, ಶ್ರೀಲಂಕಾದ ಅಂತರ್ ಯುದ್ಧ, ಆಫ್ರಿಕಾದ ಜನಾಂಗೀಯ ಕಲಹ, ಜಗತ್ತಿನ ವಿವಿಧೆಡೆಗಳಲ್ಲಿ ಭಯೋತ್ಪಾದಕರ ಧಾಳಿ – ಇವುಗಳಿಂದಾಗಿ ಸತ್ತವರ ಲೆಕ್ಕ ಉಂಟೇ? ಅವರೆಲ್ಲರ ಸಾವು ವಿಧಿಲಿಖಿತ ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹಾಗೆ ಸತ್ತವರ ಕುಟುಂಬದವರ, ಬಂಧುಬಾಂಧವರ ಸಂಕಟಕ್ಕೆ ಕೊನೆಯುಂಟೇ? ಅವರದನ್ನು ಸಹಿಸಲೇ ಬೇಕು, ಅಲ್ಲವೇ?  

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ
ಪೂರ್ವಕರ್ಮದ ಫಲಿತಶೇಷದಿಂದ ಕಹಿ
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ
ಆವೇಶವೇತಕೋ – ಮರುಳ ಮುನಿಯ
ದಿನದಿನದ ನಮ್ಮ ಊಟದಲ್ಲಿ ಬೇವಿನ ಉಂಡೆಯೂ ಇದೆ; ಬೆಲ್ಲದ ಉಂಡೆಯೂ ಇದೆ. ಪೂರ್ವಜನ್ಮಗಳ ಕರ್ಮದ ಫಲವೇ ನಮಗೆ ಈ ಜನ್ಮದಲ್ಲಿ ಸಿಗುವ ಕಹಿ. ದೇವರ ಕೃಪೆಯಿಂದಾಗಿ ಸಿಹಿಯೂ ಸಿಗುತ್ತದೆ. ಹೀಗೆ ಕಹಿ ಮತ್ತು ಸಿಹಿ, ಅಂದರೆ ನೋವು ಹಾಗೂ ನಲಿವನ್ನು ನಾವು ಜೀವನದಲ್ಲಿ ಅನುಭವಿಸಲೇ ಬೇಕು. ಹಾಗಿರುವಾಗ, ಈ ವಿಷಯದಲ್ಲಿ ಆವೇಶ ಏತಕ್ಕೆ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಡಿ.ವಿ.ಜಿ.
ಜನವರಿ ತಿಂಗಳಲ್ಲಿ ಎಲ್ಲೆಡೆ ಸಂಕ್ರಾತಿಯ ಸಂಭ್ರಮ. ಸಂಕ್ರಾತಿಯಂದು ಬೇವುಬೆಲ್ಲ ಸೇವಿಸುವ ಸಂಪ್ರದಾಯ. ಇದು ನಮ್ಮ ಬದುಕಿನುದ್ದಕ್ಕೂ ಸಾಗಿ ಬರುವ ಕಹಿ-ಸಿಹಿಗಳ ಸಂಕೇತ. ಬಾಳಿನಲ್ಲಿ ಸಿಹಿ ಸಿಕ್ಕಿದಾಗೆಲ್ಲ ನಲಿದಾಡುವ ನಾವು, ಕಹಿ ಸಿಕ್ಕಿದಾಗ ಸಂಕಟ ಪಡುತ್ತೇವೆ. ನಲಿವು ಬಂದಾಗ, ಇದ್ಯಾಕೆ? ಎಂದು ಕೇಳದ ನಾವು ನೋವು ಬಂದಾಗ ಇದ್ಯಾಕೆ? ಎಂದು ಕೇಳಿಯೇ ಕೇಳುತ್ತೇವೆ. ಈ ಎರಡೂ ಪ್ರಶ್ನೆಗಳಿಗೆ ನೇರ ಉತ್ತರ ಈ ಮುಕ್ತಕದಲ್ಲಿದೆ. ಈ ಹಿನ್ನೆಲೆಯಲ್ಲಿ, ಭಯೋತ್ಪಾದಕರ ಬಾಂಬ್ ಧಾಳಿಗಳಿಂದ ಪಾರಾದ ಕೆಲವರ ಕತೆ ತಿಳಿಯೋಣ.
ಪುಣೆಯ ಜರ್ಮನ್ ಬೇಕರಿಯಲ್ಲಿ ೨೦೧೦ರಲ್ಲಿ ಬಾಂಬ್ ಸಿಡಿದಾಗ ನಲುಗಿದವರು ಸುಮೀತ್ ಸಿಂಗ್ (೩೧). ಅವರು ೨೮ ದಿನ ಐಸಿಯುನಲ್ಲಿದ್ದು ಚೇತರಿಸಿಕೊಂಡರು. ಅವರ ಶರೀರದಲ್ಲಿರುವ ಸುಟ್ಟ ಗಾಯಗಳ ಬಗ್ಗೆ ಕೇಳಿದರೆ ಈಗ ಅವರ ಉತ್ತರ: “ಅವೆಲ್ಲ ದೀಪಾವಳಿಯಲ್ಲಿ ಸುಡುಮದ್ದು ಸಿಡಿದು ಆದ ಗಾಯಗಳು.” ಮುಂಬೈಯ ಲಿಯೋಪೊಲ್ಡ್ ಕೆಫೆಗೆ ೨೦೧೧ರಲ್ಲಿ ಭಯೋತ್ಪಾದಕರ ಧಾಳಿ. ಆಗ ಅಲ್ಲಿದ್ದ ಸೌರವ್ ಮಿಶ್ರಾ (೩೭) ಎದೆಗೆ ಬುಲೆಟ್ ತಗಲಿತ್ತು. ಅವರು ಬದುಕಿ ಉಳಿದದ್ದೇ ಪವಾಡ. “ಮುಂಚೆ ನಾನು ಹಣಕ್ಕಾಗಿ ದುಡಿಯುತ್ತಿದ್ದೆ, ಈಗ ಕೇವಲ ಸಂತೋಷಕ್ಕಾಗಿ” ಅಂತಾರೆ. ೨೦೦೫ರಲ್ಲಿ ದೀಪಾವಳಿಯ ಹೊತ್ತಿನಲ್ಲಿ ದೆಹಲಿಯ ಸರೋಜಿನಿ ನಗರದಲ್ಲಿ ಬಾಂಬ್ ಸ್ಫೋಟ, ೪೮ ಜನರ ಸಾವು. ಅಂದು ಮನಿಷಾ ಮೈಕೇಲ್ ಎಂಬ ೮ ವರುಷದ ಬಾಲಕಿ ತತ್ತರಿಸಿದಳು. ಅವಳ ಅಪ್ಪ ಮತ್ತು ಅಣ್ಣ ಮೃತರಾದರು. ತೀವ್ರ ಗಾಯಗಳಾಗಿದ್ದ ಅವಳ ಅಮ್ಮ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ನೀಡಿದರೂ ತೀರಿಕೊಂಡರು. ಅಜ್ಜ-ಅಜ್ಜಿ ಜೊತೆ ಇರುವ ಮನಿಷಾ “ಕಳೆದ ೧೧ ವರುಷ ಬದುಕು ನನಗೆ ಬಹಳಷ್ಟು ಕಲಿಸಿದೆ. ನಾನೀಗ ಹೊಸ ಜೀವನ ಆರಂಭಿಸುತ್ತಿದ್ದೇನೆ. ಜಗತ್ತನ್ನೇ ಗೆಲ್ಲಲು ಸಜ್ಜಾಗಿದ್ದೇನೆ” ಎನ್ನುತ್ತಾಳೆ. ಇವರ ಮಾತು ಕೇಳುತ್ತಾ, “ಆವೇಶವೇತಕೋ” ಎಂಬ ಮಾತಿನ ಧ್ವನಿ ಅರ್ಥವಾಗುತ್ತದೆ, ಅಲ್ಲವೇ?