ಪುಸ್ತಕ: ಎಂಬತ್ತರ ಕೊಯ್ಲಿನ ಕಾಳುಗಳು:
ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ
ನಿರೂಪಣೆ: ಅಡ್ಡೂರು ಕೃಷ್ಣ ರಾವ್
ಸಂಪಾದನೆ: ನಾ. ಕಾರಂತ ಪೆರಾಜೆ
ಪ್ರಕಾಶಕರು: ಮಿತ್ರ ಮಾಧ್ಯಮ
ಪ್ರಕಟಣೆಯ ವರುಷ: ೨೦೦೪, ಪುಟ: ೧೧೨, ಬೆಲೆ: ರೂ.೪೦
ತನ್ನ ತಂದೆಯವರ ಬದುಕನ್ನು ಮಗ ನಿರೂಪಣೆ ಮಾಡಿರುವ ಅಪೂರ್ವ ಪುಸ್ತಕ ಇದು. “ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ” ಎಂಬುದು ಪುಸ್ತಕದ ಉಪಶೀರ್ಷಿಕೆ. ತೊಂಬತ್ತೊಂದು ವರುಷಗಳ ತುಂಬು ಬದುಕು ಬಾಳಿದ ಶಿವಶಂಕರರಾಯರು ೧೯-೨-೨೦೧೩ರಂದು ನಮ್ಮನ್ನು ಅಗಲಿದರು.
ಅವರ ಬದುಕಿನ ನೋಟ-ಒಳನೋಟಗಳನ್ನು ಕಟ್ಟಿಕೊಡುವ ಈ ಪುಸ್ತಕದ ಬಗ್ಗೆ “ಅಡಿಕೆ ಪತ್ರಿಕೆ” ಕಾರ್ಯನಿರ್ವಾಹಕ ಸಂಪಾದಕ ಮತ್ತು “ಜಲಸಂರಕ್ಷಣೆ” ಆಂದೋಲನ ಹಾಗೂ “ಭವಿಷ್ಯದ ಬೆಳೆ ಹಲಸು” ಆಂದೋಲನಗಳ ನೇತಾರ ಶ್ರೀಪಡ್ರೆಯವರು ಮುನ್ನುಡಿಯಲ್ಲಿ ಬರೆದಿರುವ ಮಾತುಗಳ ಆಯ್ದ ಭಾಗ: “ನಾವಿಂದು ಯಾವುದನ್ನು “ಕೃಷಿಕಪರ ಕೃಷಿಸಂವಹನ” ಎಂದು ಗುರುತಿಸುತ್ತೇವೆಯೋ, ಅದನ್ನು ಬದುಕಿನುದ್ದಕ್ಕೂ ಮಾಡುತ್ತಲೇ ಬಂದವರು “ಅಡ್ಡೂರು”. ಈ ಕೆಲಸ ಮಾಡುವವರು ತುಂಬಾ ವಿರಳ. ಈ ಕಾರಣಕ್ಕಾಗಿ ಅಡ್ಡೂರರ ಈ ಮುಖ ನಮಗೆಲ್ಲ ಆತ್ಮೀಯ.
“ಅಡ್ಡೂರು” ಎಂದಷ್ಟೇ ಹೇಳಿದರೆ ಪರಿಚಯ ಸಿಗದ ದೂರದೂರಿನವರ ಅನುಕೂಲಕ್ಕಾಗಿ ಅವರ ಹೆಸರು ಅಡ್ಡೂರು ಶಿವಶಂಕರ ರಾವ್.
ಮೊನ್ನೆಮೊನ್ನೆ ಒಂದು ರಾತ್ರಿ ಅವರು ಮಲಗುವಾಗಲೇ ತುಂಬಾ ತಡ. ದಿನವಿಡೀ ಮಾತುಕತೆ, ನಡೆದಾಟ, ಪಯಣದ ಸುಸ್ತು. ಇನ್ನಾರೇ ಆಗಿದ್ದರೂ ಹೊದಿಕೆ ಎಳೆದು ಮಲಗಿದರೆ ಬೆಳಗಾಗದೆ ಮಿಸುಕಾಡಲಿಕ್ಕಿಲ್ಲ. ಹೊರಗಡೆ ಕೃಷಿಕರ ಚರ್ಚೆ. ಒಳಕೋಣೆಯಲ್ಲಿ ಮಲಗಿದ ಅಡ್ಡೂರರಿಗೆ ಏನೋ ಒಳ್ಳೆಯ ವಿಚಾರ ಕಳಕೊಳ್ಳುತ್ತಿರುವ ಸಂಶಯ. “ನೀವಿಲ್ಲಿ ಕೃಷಿ ಚರ್ಚೆಯಲ್ಲಿದ್ದರೆ ನಾನು ಹೇಗೆ ನಿದ್ರಿಸಲಿ?” ಎನ್ನುತ್ತಾ ಎದ್ದು ಬಂದರು. ಅವರಿಗೆ ಎಂಭತ್ತೊಂದು (ವಯಸ್ಸು) ಎಂದು ಹೇಳಿದವರು ಯಾರು?
….ಹಿಂದಿಗಿಂತಲೂ ಇಂದು ಕೃಷಿಕರ ಸಂವಾದ ಕೂಟಗಳು, ಸಂಘಟನೆಗಳು ಅಗತ್ಯ ಎನ್ನುವ ಆಶಯ. ಹೌದು, ಸಾಹಿತ್ಯ ಗೋಷ್ಠಿ, ಕಾವ್ಯ ಗೋಷ್ಠಿಗಳಂತೆ ಕೃಷಿ ಮಾಧ್ಯಮಗೋಷ್ಠಿ, ಕೃಷಿ ಸಂಶೋಧನೆಯ ವಿಮರ್ಶಾ ಗೋಷ್ಠಿಗಳು ನಮ್ಮಲ್ಲಿ ಏಕೆ ಆರಂಭವಾಗಬಾರದು? ಅಡ್ಡೂರರು ಸ್ನೇಹಿತರೊಂದಿಗೆ ಆರಂಭಿಸಿ ನಡೆಸಿದ “ಕೃಷಿ ಅನುಭವ ಕೂಟ” ಇಂಥದೊಂದು ಸಂಘಟನೆ.
ಈ ದೇಶದ ಕೃಷಿ ಸಂಶೋಧನೆಯ ದಿಕ್ಕು ಮತ್ತು ರೈತರ ಸಂಶೋಧನೆಯ ಅವಶ್ಯಕತೆಗಳು ಒಂದೇ ಹಳಿಯ ಮೇಲೆ ಹೋಗುತ್ತಿಲ್ಲ. ರೈತರಿಗೆ ಬೇಕಾಗಿದ್ದೇ ಒಂದು. ಕೃಷಿ ವಿಜ್ನಾನಿಗಳು “ನಿಮಗಿದು ವರದಾನ” ಎಂದು ಹಾಡಿ ಹೊಗಳುವುದು ಇನ್ನೊಂದು. ಅಡ್ಡೂರರ ಭತ್ತದ ಬೆಳೆಯ ಅನುಭವಗಳು, ಎಂಡ್ರೆಕ್ಸ್-ಯುಕ್ತ ಬೈಹುಲ್ಲಿನಿಂದ ಸತ್ತ ದನದ ಪ್ರಕರಣಕ್ಕಿಂತ ಈ ಮಾತಿಗೆ ಬೇರೆ ನಿದರ್ಶನ ಬೇಡ.
ಕೃಷಿಯ ಪೂರ್ವಾನುಭವವಿಲ್ಲದ, ಕೃಷಿ ಸಂಶೋಧನೆಯ ಮೇಲೆ ತುಂಬು ಭರವಸೆಯಿದ್ದ ಶಿವಶಂಕರ ರಾಯರ ಕೃಷಿ ಬದುಕು ದೇಶದ ಕೃಷಿ ಸಂಶೋಧನಾ ರಂಗದ ಒಳಿತು ಕೆಡುಕುಗಳ ಒಂದು ಬ್ಯಾಲೆನ್ಸ್-ಷೀಟ್ ಕೂಡಾ ಹೌದು. ರೈತ ಅಡ್ಡೂರು ಗೆದ್ದಿದ್ದರೆ ನಮ್ಮ ಕೃಷಿ ಸಂಶೋಧನಾರಂಗಕ್ಕೂ ಅದರಲ್ಲೊಂದು ಪಾಲಿದೆ. ಸೋತಿದ್ದರೆ ಅದರಲ್ಲೂ.
ಶಿವಶಂಕರ ರಾಯರಲ್ಲಿ ಕೃಷಿತಜ್ನರ “ಶಿಫಾರಸುಗಳಿಗೆ” ಕಿವಿಯಿದೆ. ಆದರೆ ಕೇಳಿದ್ದಕ್ಕೆಲ್ಲಾ “ಗೋಣು ಹಾಕುವ” ಭೋಳೆತನವಿಲ್ಲ. ಬದಲಿಗೆ ರೈತ ಸಮುದಾಯದ ಕಂಗಳಿಂದ ಅದನ್ನು ವಿಮರ್ಶೆಯ ಒರೆಗೆ ಹಚ್ಚುವ, ಹೊಲದಲ್ಲಿ ಪ್ರಯೋಗಿಸಿ ತಪ್ಪಿದರೆ ಕನ್ನಡಿ ಹಿಡಿಯುವ ಛಾತಿಯಿದೆ. ಗಟ್ಟಿತನವಿದೆ. ಯಾರಿಗಾಗಿ ಇಷ್ಟೊಂದು ಶ್ರಮ, ವೆಚ್ಚದಿಂದ ಸಂಶೋಧನೆ ಮಾಡಿದ್ದಾರೋ, ಆ ಜನರಿಗೆ ಅಂದರೆ ನಮಗೆ ಕೃಷಿಕರಿಗೆ, ಈ ಸಂಶೋಧನೆಗಳು ಹೇಗೆನಿಸಿವೆ ಎಂದು ಕೃಷಿ ವಿಜ್ನಾನಿಗಳಿಗೆ ತಿಳಿಸುವ ಮಹತ್ವದ ಕೆಲಸ ಈ ದೇಶದಲ್ಲಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಿವಶಂಕರ ರಾವ್ ತನ್ನ ಅನುಭವಜನ್ಯ ಪ್ರತಿಕ್ರಿಯಯನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ಪ್ರವೃತ್ತಿ ನಮ್ಮ ಕೃಷಿಕರಲ್ಲಿ ಹೆಚ್ಚಿದಷ್ಟು ನಮ್ಮ ಕೃಷಿ ಸಂಶೋಧನೆಯ ಮತ್ತು ರೈತ ಆಶೋತ್ತರಗಳ ನಡುವಣ ಕಂದಕ ಕಿರಿದಾದಿತೇನೋ.
ಪತ್ರಕರ್ತರು, ಅದರಲ್ಲೂ ಕೃಷಿರಂಗದವರು ಅಡ್ಡೂರರಿಂದ, ಈ ಪುಸ್ತಿಕೆಯಲ್ಲಿ ಪ್ರತಿಫಲಿಸಿದ ವ್ಯಕ್ತಿತ್ವದಿಂದ ಕಲಿಯಬಹುದಾದ ಪಾಠಗಳು ಹಲವು. ಮೊದಲನೆಯದು – ತನಗೆ ತಿಳಿದಿರುವ ಜ್ನಾನವನ್ನು ಪ್ರದರ್ಶಿಸುವ ಬದಲು ಇತರರಿಂದ ಇನ್ನಷ್ಟು ಅನುಭವಸಾರವನ್ನು ಹೊರಗೆಳೆಯಲು ಅದನ್ನು ಬಳಸುವುದು.
ಕೃಷಿಯಲ್ಲಿ ಹೊಸತೇನಾದರೂ ಇದೆಯೇ ಇಲ್ಲವೇ ಎಂಬುದನ್ನು ಹೊರಗಿನಿಂದಲೇ ನಿರ್ಧರಿಸುವ ಬದಲು ಕಣ್ಣಾರೆ ಕಂಡೇ ಅಭಿಪ್ರಾಯಕ್ಕೆ ಬರುವುದು ಎರಡನೆಯದು. ಸೋಗಿಲ್ಲದ, ಮನಸ್ಸು ತೆರೆದಿರುವ ಮಾತು, ಬರಹ, ಇತರರನ್ನು ನೋಯಿಸದ (ತನ್ನನ್ನೇ ಗೇಲಿ ಮಾಡಿಕೊಂಡರೂ ಅಡ್ಡಿಯಿಲ್ಲ) ತಿಳಿಹಾಸ್ಯ ಲೇಪನ ಓದುಗನಿಗೆ ಆತ್ಮೀಯವಾಗುತ್ತದೆ ಎನ್ನುವುದು ಮೂರನೆಯ ಸಂದೇಶ. ಅಹಂ ಹತ್ತಿರ ಸುಳಿಯದಂತೆ ನೋಡಿಕೊಂಡರೆ ಮನದಲ್ಲಿ ಎಷ್ಟೋ ವಿಚಾರ ದಾಖಲೆ ಮಾಡಲು ಜಾಗವಿರುತ್ತದೆ. ಹೊಸತನ್ನು ಎಲ್ಲಿ ಕಂಡರೂ ಗುರುತಿಸುವ, ಗ್ರಹಿಸುವ ಜಾಗ್ರತೆ ಉಳಿಯುತ್ತದೆ ಎನ್ನುವುದು ಮತ್ತೊಂದು ಗುಟ್ಟು.
ಅಡ್ಡೂರರ ಆಸ್ತಿ ಅವರ ಬದುಕಿನ ಪ್ರಯೋಗಶಾಲೆ ಮುಳಿಪಡ್ಪು ಮಾತ್ರವಲ್ಲ. ಇನ್ನೂ ಮೂರು ಇವೆ. ಮೊದಲನೆಯದು ಅವರ ಅಪೂರ್ವ ಗ್ರಂಥಭಂಡಾರ. ಇದು ಕೆಲವರಿಗೆ ಗೊತ್ತು. ಎರಡನೆಯದನ್ನು ಕೆಲವೇ ಕೆಲವರು ಬಲ್ಲರು. ಅವರ ಟಿಪ್ಪಣಿ ಪುಸ್ತಕಗಳ ಸಂಗ್ರಹ. ಮೂರನೆಯದು ಹೊರಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅದು ಅವರ ಮನದ ಗಣಕಯಂತ್ರದಲ್ಲಿರುವುದು.
ಎಲ್ಲಿ, ಯಾವ ಸಂದರ್ಭದಲ್ಲಿ ಹೊಸತೊಂದು ಮಾಹಿತಿಯ ಎಳೆ ಸಿಕ್ಕರೂ ಅದನ್ನವರು ತನ್ನ ನೋಟ್ ಬುಕ್ಕಿಗೆ ಸೇರಿಸುತ್ತಾರೆ. ಅವರು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮತ್ತು ಟಿಪ್ಪಣಿ ಮಾಡುವ ಗತಿ ಗಮನಿಸಿದರೆ ಈ ವರೆಗಿನ ಮಾಹಿತಿಗಳು ನೂರಿನ್ನೂರು ನೋಟ್ ಬುಕ್-ಗಳಾದರೂ ತುಂಬಿರಬಹುದು. ನಾನು ಒಮ್ಮೊಮ್ಮೆ ಹೇಳಿಕೊಳ್ಳುವುದಿದೆ. “ನಮ್ಮ ಶಿವಶಂಕರ ರಾಯರು, ಡಾ.ಎಲ್.ಸಿ. ಸೋನ್ಸ್, ಆರ್.ಎಸ್. ಪಾಟೀಲ್, ಭರಮಗೌಡ್ರ ಮೊದಲಾದವರು ಕೃಷಿಯಲ್ಲಿ ಹೊಸದರ ಅನ್ವೇಷಣೆಗಾಗಿ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರು. ತಾವು ಕಂಡು ತಿಳಿದದ್ದನ್ನು ಬರೆಯುತ್ತಲೇ ಹೋದರೆ ಅದು ಗಟ್ಟಿಯಾದ ಕೃಷಿ ಸಾಹಿತ್ಯವಾದೀತು” ಅಂತ. ಏಕೆ ಗೊತ್ತೇ, ಇವರುಗಳು ಹೇಳಿದ ಮಾತನ್ನೆಲ್ಲಾ ಮುಖಬೆಲೆಗೆ ತೆಗೆದುಕೊಳ್ಳದವರು, ರೈತಹಿತದ ಚಿಂತನೆಯಿಂದ ಕಂಡು ಕೇಳಿದ್ದನ್ನು ತೂಗಿ ಬೆಲೆ ಕಟ್ಟುವವರು.
ಅಡ್ಡೂರರ ಬದುಕಿನ ಈ ಹಿನ್ನೋಟ ಓದುವಾಗಲೆಲ್ಲಾ, “ನೀವಿದನ್ನು ಬರೆಯಲೇ ಬೇಕು ಅಪ್ಪಾ” ಎಂದು ಒತ್ತಡ ತಂದ “ಕೃಷ್ಣ” ಮಾಡಿದ್ದು ಎಷ್ಟು ಒಳ್ಳೆಯ ಕೆಲಸ ಎಂದು ನನಗನ್ನಿಸುತ್ತದೆ. ನೋಟ್ ಬುಕ್ಕಿನೊಳಗೆ, ಮನದೊಳಗೆ ಇರುವ ಅನುಭವ-ಮಾಹಿತಿಗಳ ಸಾರದ ಮಿತಿ ಎಂದರೆ ಅದನ್ನು ಸಂಬಂಧಪಟ್ಟವರ ಸಹಕಾರ ಇಲ್ಲದೆ ಇತರರಿಗೆ ಹಂಚಲು ಬರುವುದಿಲ್ಲ. ಈ ಪುಸ್ತಿಕೆ ಈ ಕೆಲಸವನ್ನು ಸಮರ್ಥವಾಗಿ ಮಾಡಿದೆ…..”