ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ
ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ
ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು; ಅವನ್ನು ನಾವು ಒಪ್ಪಿದರೂ (ಕೇಳ್ಕೆ) ಒಪ್ಪದಿದ್ದರೂ (ಮಾಣ್ಕೆ) ಅವು ಒಂದಿಷ್ಟೂ ಬದಲಾಗುವುದಿಲ್ಲ. ಅವೆಲ್ಲ ಅಡ್ಡಿಗಳನ್ನೂ ನೋವುಗಳನ್ನೂ ಅನುಭವಿಸಿಯೇ ತೀರಬೇಕು. “ಅಯ್ಯೋ, ಆ ಭಗವಂತ ಹೀಗೆ ಮಾಡಿದನಲ್ಲ; ನನಗೇ ಹೀಗೆ ಮಾಡಿದನಲ್ಲ” ಎಂದು ಗೋಳಾಡಿದರೆ ಪ್ರಯೋಜನವಿದೆಯೇ? ಜೀವನದಲ್ಲಿ ಎದುರಾಗುವ ತೊಡಕುಗಳೊಡನೆ, ಬೆಂಬಿಡದ ಸಂಕಟಗಳೊಡನೆ ಗುದ್ದಾಡಿದರೆ ಉಪಯೋಗವಿದೆಯೇ? ಇಲ್ಲವೆನ್ನುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು.
ಇತ್ತೀಚೆಗೆ ಕರ್ನಾಟಕದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಆತ್ಮಹತ್ಯಾ ಪ್ರಕರಣಗಳನ್ನು ಗಮನಿಸಿ. ಅವರಿಬ್ಬರೂ ಹಿರಿಯ ಹುದ್ದೆಯಲ್ಲಿದ್ದರು – ಅದೂ ಪೊಲೀಸ್ ಇಲಾಖೆಯಲ್ಲಿ. ಉತ್ತಮ ಶಿಕ್ಷಣ ಹಾಗೂ ತರಬೇತಿ ಪಡೆದಿದ್ದರು. ಸರಕಾರಿ ವೃತ್ತಿಯಲ್ಲಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಸಂಸಾರ ನಡೆಸಿದ್ದರು.
ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗರ ಮೇಲೆ ಬಂದ ಆಪಾದನೆ: ಕಿಡ್ನಾಪ್ ಆಗಿದ್ದ ಯುವಕನೊಬ್ಬನ ಬಿಡುಗಡೆಗಾಗಿ ಪವನ್ ಎಂಬಾತ ಪಾವತಿಸಿದ್ದ ರೂಪಾಯಿ ಹತ್ತು ಲಕ್ಷದ ಬಗ್ಗೆ. ಆ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಪತ್ನಿ ಮತ್ತು ಮಗುವಿನೊಂದಿಗೆ ಅವರು ಧಾವಿಸಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ ಮಾವನ ಮನೆಗೆ. ಮರುದಿನ ೭ ಜುಲಾಯಿ ೨೦೧೬ರಂದು ಬೆಳಗ್ಗೆ ಅಲ್ಲೇ ನೇಣು ಹಾಕಿಕೊಂಡು ಅವರ ಆತ್ಮಹತ್ಯೆ.
ಡಿವೈಎಸ್ಪಿಯಾಗಿ ಭಡ್ತಿ ಪಡೆದು ಬೆಂಗಳೂರಿನಿಂದ ಮಂಗಳೂರಿನ ಐಜಿ ಕಚೇರಿಗೆ ವರ್ಗವಾಗಿದ್ದ ಎಂ.ಕೆ. ಗಣಪತಿ (೫೧) ಅವರು ೭ ಜುಲಾಯಿ ೨೦೧೬ರಂದು ಮಡಿಕೇರಿಗೆ ಹೋಗಿ, ವಸತಿಗೃಹದಲ್ಲಿ ರೂಂ ಮಾಡಿದ್ದರು. ಅನಂತರ ಸ್ಥಳೀಯ ಸುದ್ದಿವಾಹಿನಿಗೆ ಹೋಗಿ, ೨೦ ನಿಮಿಷಗಳ ಸಂದರ್ಶನದಲ್ಲಿ ತನಗೆ ಕಿರುಕುಳ ನೀಡುತ್ತಿರುವ ಒಬ್ಬ ಸಚಿವರ ಮತ್ತು ಇಬ್ಬರು ಮೇಲಧಿಕಾರಿಗಳ ಹೆಸರು ಬಹಿರಂಗ ಪಡಿಸಿದ್ದರು. ಬಳಿಕ ವಸತಿಗೃಹಕ್ಕೆ ಹಿಂತಿರುಗಿ ನೇಣು ಬಿಗಿದು ಅವರ ಆತ್ಮಹತ್ಯೆ. ಬದುಕಿನಲ್ಲಿ ಬಿರುಗಾಳಿ ಎದ್ದಾಗ ಹತಾಶರಾಗದೆ, ಅವನ್ನು ಹಲ್ಲು ಕಿರಿದು ತಾಳಿಕೊಳ್ಳುವುದೇ ಸರಿಯಾದ ಪ್ರತಿಕ್ರಿಯೆ ಎಂಬುದು ಈ ಮುಕ್ತಕದ ಸಂದೇಶ.
ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ
ಸವೆಯಿಪುದು ಜಲವ ರವಿ ಎಲ್ಲವೆಲ್ಲರನು
ಸವೆಯಿಪುದು ತನುವ ಮನಸಿನ ಕೊರಗು ಕೆಣಕುಗಳು
ಜವನು ಜಗದುಜ್ಜಿಕೆಯೊ – ಮರುಳ ಮುನಿಯ
ಈ ಭೂಮಿಯಲ್ಲಿ ಯಾವುದನ್ನು ಯಾವುದು ಸವೆಯಿಸುತ್ತಿದೆ ಎಂಬುದನ್ನು ಇದರಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ಶಿಲೆಗಳನ್ನು ಗಾಳಿ ಉಜ್ಜಿ ಸವೆಸಿದರೆ, ನೆಲವನ್ನು ಜಲವೇ ಸವೆಯಿಸುತ್ತದೆ. ಆ ಜಲವನ್ನು ಸವೆಯಿಸುವ (ಆವಿಯಾಗಿಸುವ) ಸೂರ್ಯನು ತನ್ನ ಶಾಖದಿಂದ ಎಲ್ಲವನ್ನೂ ಎಲ್ಲರನ್ನೂ ದಣಿಸಿ ಸವೆಯಿಸುತ್ತಾನೆ. ಇದೇ ರೀತಿಯಲ್ಲಿ ಮನುಷ್ಯನ ದೇಹವನ್ನು ಸವೆಯಿಸುವುದು ಅವನ ಮನಸ್ಸಿನ ಕೊರಗು ಮತ್ತು ಕೆಣಕುಗಳು (ಪೀಡನೆಗಳು). ಅಂತೂ ಜವರಾಯನು ಈ ಭೂಮಿಯ ಜೀವಸಂಕುಲವನ್ನು ವಿಧವಿಧವಾಗಿ ಉಜ್ಜಿ ಹಾಕುವ ಉಜ್ಜುಗಲ್ಲು ಆಗಿದ್ದಾನೆ. ಅವನೀಯುವ ಬವಣೆಗಳಿಂದ (ಉಜ್ಜುವಿಕೆಯಿಂದ) ಯಾರಿಗೂ ವಿನಾಯ್ತಿಯಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳ ಇತ್ತೀಚೆಗಿನ ಆತ್ಮಹತ್ಯಾ ಪ್ರಯತ್ನದ ಪ್ರಕರಣಗಳನ್ನು ಗಮನಿಸಿ. ಒಬ್ಬರು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೂಪಾ ತಂಬದ (೨೯). ಅವರಿಂದ ೧೯ ಜುಲಾಯಿ ೨೦೧೬ರಂದು ಮಧ್ಯಾಹ್ನ ಠಾಣೆಯಲ್ಲೇ ೨೩ ನಿದ್ರಾ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ. ೨೦೦೯ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ರೂಪಾ ತಂಬದ ದಾವಣಗೆರೆ ಜಿಲ್ಲೆಯ ಗೋಪನಾಳ ಗ್ರಾಮದವರು. ಆ ದಿನ ಬೆಳಗ್ಗೆ, ಠಾಣೆಯ ಇನ್-ಸ್ಪೆಕ್ಟರ್ ಎರಡು ಪ್ರಕರಣಗಳ ತನಿಖೆಯನ್ನು ಸರಿಯಾಗಿ ನಡೆಸಿಲ್ಲವೆಂದು ನಿಂದಿಸಿದ್ದಕ್ಕೆ ಇದು ರೂಪಾ ಅವರ ಪ್ರತಿಕ್ರಿಯೆ. ಇನ್ನೊಬ್ಬರು ಹಾಸನದ ಹಿಮ್ಸ್ ಆಡಳಿತಾಧಿಕಾರಿ ಇ. ವಿಜಯಾ. ಇವರು ೨೧ ಜುಲಾಯಿ ೨೦೧೬ರಂದು ತಮ್ಮ ನಿವಾಸದಲ್ಲಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಮ್ಮ ಹುದ್ದೆಯಲ್ಲಿನ ಕಿರುಕುಳಕ್ಕೆ ಇದು ಅವರ ಪ್ರತಿಕ್ರಿಯೆ. ಯಾಕೆ ಹೀಗಾಗುತ್ತಿದೆ?
ಜವನು ಜಗದುಜ್ಜಿಕೆ ಅಂದರೆ ಜೀವನವೇ ಸಂಕಟಗಳ ಸರಣಿ. ಹುಟ್ಟಿನಿಂದ ಸಾವಿನ ತನಕ ಯಾವುದೇ ತೊಂದರೆ, ಸಮಸ್ಯೆ, ಸಂಕಟ, ಯಾತನೆ ಅನುಭವಿಸದವರು ಯಾರಿದ್ದಾರೆ? ಅವೆಲ್ಲವೂ ಅಗ್ನಿಪರೀಕ್ಷೆಗಳು. ಪ್ರತಿಯೊಂದಕ್ಕೂ ಎದೆಗೊಟ್ಟು, ಯಾತನೆಯ ಬೆಂಕಿಯಲ್ಲಿ ಬೆಂದಾಗಲೇ ಬಂಗಾರದಂತೆ ಪುಟವಾಗಲು ಸಾಧ್ಯ. ಗೆಲುವುಗಳ ಕುದುರೆ ಸವಾರಿ ಮಾಡಲು ಯಾವುದೇ ಮಾನಸಿಕ ಸಿದ್ದತೆ ಬೇಕಾಗಿಲ್ಲ. ಆದರೆ ಸೋಲುಗಳ ಸೋಪಾನ ಏರಲು ಆಳವಾದ ಮಾನಸಿಕ ತಯಾರಿ ಬೇಕು. ಹಾಗೆ ನಾವು ಸಜ್ಜಾದರೆ, ಯಾವುದೇ ಜವನುಜ್ಜಿಕೆಗೆ ಎದೆಗೊಡಲು ಸಾಧ್ಯ, ಅಲ್ಲವೇ?