ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ – ಮಂಕುತಿಮ್ಮ
ಕೆಲವರದು ಬದುಕಿನಲ್ಲಿ ಭಾರೀ ಲೆಕ್ಕಾಚಾರ – ತಮ್ಮ ಕೈಗೆ ಬಾರದಿರುವುದರ ಬಗ್ಗೆ. ಈ ಲೆಕ್ಕಾಚಾರದಲ್ಲಿ ನಿನ್ನ ಕೈಗೆ ಬಂದಿರುವುದನ್ನು ಮರೆಯಬೇಡ ಎಂದು ಎಚ್ಚರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಒಂದು ಸಂಸ್ಥೆಯಲ್ಲಿ ಗುಮಾಸ್ತನಾದವನಿಗೆ ಅಧಿಕಾರಿಯಾಗಲಿಲ್ಲವೆಂಬ ಚಿಂತೆ. ಅಧಿಕಾರಿಯಾದವನಿಗೆ ಭಡ್ತಿ ಸಿಗಲಿಲ್ಲ; ಮೇಲಧಿಕಾರಿ ಆಗಲಿಲ್ಲ ಎಂಬ ವ್ಯಸನ. ಮೇಲಧಿಕಾರಿಯಾದವನಿಗೆ ಚೇರ್ಮನ್ ಆಗಲಿಲ್ಲ ಎಂಬ ಚಿಂತೆ! ಇವರೆಲ್ಲರೂ ತಮಗೊಂದು ಉದ್ಯೋಗವಿದೆ; ಪ್ರತಿ ತಿಂಗಳೂ ಸಂಬಳ ಸಿಗುತ್ತದೆ ಎಂಬುದನ್ನು ಮರೆತೇ ಬಿಡುತ್ತಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ಒಂದು ಪೆಟ್ರೋಲ್ ಬಂಕನ್ನು ಮುಚ್ಚಲಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರನ್ನು ಕೇಳಿದೆ, “ಮುಂದೇನು?” ಅವರ ಉತ್ತರ, “ಬೇರೆ ಕಡೆ ಕೆಲಸ ಹುಡುಕಬೇಕು.” ಮುಂಬೈಯ ಹತ್ತಾರು ಬಟ್ಟೆ ಗಿರಣಿಗಳು ಮುಚ್ಚಿದಾಗ, ಅಲ್ಲಿನ ಸಾವಿರಾರು ಕೆಲಸಗಾರರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರು. ಇವರ ಪಾಡೇನು?
ಹಾಗೆಯೇ, ಸಣ್ಣ ಕಾರಿನ ಮಾಲೀಕರಿಗೆ ದೊಡ್ಡ ಕಾರು ಖರೀದಿಸಲಾಗುತ್ತಿಲ್ಲ ಎಂಬ ಚಿಂತೆ! ಸಣ್ಣ ಕಾರನ್ನೂ ತಗೊಳ್ಳಲಾಗಲಿಲ್ಲ ಎಂಬ ವೇದನೆ ದ್ವಿಚಕ್ರ ವಾಹನಗಳ ಮಾಲೀಕರಿಗೆ. ಇವರೆಲ್ಲರೂ ತಮಗೊಂದು ವಾಹನ ಇದೆಯೆಂಬುದನ್ನೇ ಗಮನಿಸುವುದಿಲ್ಲ. ಅಂತೆಯೇ, ಸಣ್ಣ ಮನೆಯ ಮಾಲೀಕರಿಗೆ ದೊಡ್ಡ ಮನೆಯ ಒಡೆಯರಾಗದ ಚಿಂತೆ! ಈ ಜಗತ್ತಿನಲ್ಲಿ ಲಕ್ಷಲಕ್ಷ ಜನರಿಗೆ ಸ್ವಂತ ಮನೆಯೇ ಎಲ್ಲ ಎಂಬ ಸತ್ಯ ಅವರಿಗೆ ಕಾಣಿಸುವುದೇ ಇಲ್ಲ. ಒಂದು ಚಿನ್ನದ ಚೈನು, ಎರಡು ಚಿನ್ನದ ಬಳೆ ಇರುವವರಿಗೆ, ಮೈತುಂಬ ಬಂಗಾರದೊಡವೆ ಧರಿಸಲಾಗಲಿಲ್ಲವೆಂಬ ಚಿಂತೆ!
ನಮಗೆ ಎದುರಾಗುವ ಕೇಡುಗಳ ಬಗ್ಗೆಯೂ ಇಂತಹದೇ ಮನಸ್ಥಿತಿ. “ಬೇರೆಯವರೆಲ್ಲ ಸುಖಸಂತೋಷದಲ್ಲಿದ್ದಾರೆ; ನನಗೆ ಮಾತ್ರ ಬೆನ್ನುಬೆನ್ನಿಗೆ ಸಂಕಟ” ಎಂಬ ಚಿಂತೆ! ನಮಗೆ ಬಂದಿರುವ ಹತ್ತು ಕೆಡುಕುಗಳ ನಡುವೆ ಒಂದಾದರೂ ಒಳಿತಿಗೆ ಕಾರಣವಾಗಿದೆಯೇ? ಎಂದು ಪರಿಶೀಲಿಸಲು ತಯಾರಿಲ್ಲ. ಹಲವು ವಿಕಲಚೇತನರ ಹೆತ್ತವರು ಆ ಮಕ್ಕಳಿಂದಾಗಿ ತಾವು ತಾಳ್ಮೆ ಕಲಿತದ್ದನ್ನು ನೆನೆಯುತ್ತಾರೆ. ಇದುವೇ ಕೇಡುಗಳ ನಡುವಿನ ಒಳಿತು, ಅಲ್ಲವೇ? ಆದ್ದರಿಂದ, ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡಬೇಕು. ನಮ್ಮ ಬದುಕಿನಲ್ಲಿ ಹರುಷಕ್ಕೆ ಇದೇ ದಾರಿ.
ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ?
ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ?
ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು
ಸರಸತೆಯೆ ಸಿರಿತನವೊ – ಮರುಳ ಮುನಿಯ
ಖುಷಿಯಿಂದಿರುವುದಕ್ಕೆ ಸಂಪತ್ತು ಬೇಕೇ? ಎಂಬ ಪ್ರಶ್ನೆಯ ಮೂಲಕ ನಮ್ಮ ಚಿಂತನಾ ಲಹರಿಗೆ ಚುರುಕು ಮುಟ್ಟಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ಬೇಡವೇ ಬೇಡ. ಸೂರ್ಯನ ಹೊಂಗಿರಣಗಳಿಗೆ ಬಾಡಿಗೆ ಕೊಡಬೇಕೇ? ಭೂಮಿಯಲ್ಲಿ ದಿನದಿನವೂ ಕಾಣಿಸುವ ಬಣ್ಣಗಳಿಗೆ ಹಣ ತೆರಬೇಕೇ? ಸಾವಿರಾರು ಹೂಗಳ ಸಾವಿರಸಾವಿರ ಬಣ್ಣಗಳು, ಎಲೆಗಳ ಭಿನ್ನಭಿನ್ನ ಬಣ್ಣಗಳು, ಸೂರ್ಯ ಮೂಡುವಾಗ ಮತ್ತು ಮುಳುಗುವಾಗ ಆಕಾಶದಲ್ಲಿ ಎದ್ದು ಬರುವ ಚಿತ್ತಾರಗಳ ಬಣ್ಣಗಳು, ವಿವಿಧ ಹಕ್ಕಿಗಳ ಪುಕ್ಕಗಳ ವಿಸ್ಮಯ ಬಣ್ಣಗಳು – ಇವನ್ನೆಲ್ಲ ಕಾಣುತ್ತ ಸಂತೋಷ ಪಡಲು ಕಾಸು ಕೊಡಬೇಕಾಗಿಲ್ಲ.
ಯಾಕೆಂದರೆ, ಹರುಷವೆಂಬುದು ಅಂಗಡಿಯಲ್ಲಿ ಮಾರಾಟಕ್ಕಿರುವ ಸರಕಲ್ಲ. ಹರುಷವೆಂಬುದು ಹೃದಯದ ಒಳಗಿನ ಚಿಲುಮೆ. ನಾವು ಹೆಚ್ಚೆಚ್ಚು ನೀರು ನುಗ್ಗಿಸಿದರೆ, ಆ ಕಾರಂಜಿ ಹೆಚ್ಚೆಚ್ಚು ಎತ್ತರಕ್ಕೆ ಪುಟಿಯುತ್ತದೆ.
ಮೊಗ್ಗೊಂದು ಹೂವಾಗಿ ಅರಳುವುದನ್ನು, ಚಿಗುರೊಂದು ಎಲೆಗೊಂಚಲಾಗಿ ನಳನಳಿಸುವುದನ್ನು, ಹಸುರು ಎಲೆಗಳನ್ನು ಹೊದ್ದ ಮರದ ತುಂಬ ಧಿಗ್ಗನೆ ಹೂಗೊಂಚಲುಗಳು ತುಂಬುವುದನ್ನು, ಒದ್ದೆ ಮಣ್ಣಿನಲ್ಲಿ ಬಿದ್ದ ಬೀಜವೊಂದು ಚಿಗುರಿ ತಲೆಯೆತ್ತುವುದನ್ನು, ಹಕ್ಕಿಗೂಡಿನಲ್ಲಿರುವ ಮೊಟ್ಟೆಗಳಿಂದ ಪುಟ್ಟಪುಟ್ಟ ಮರಿಗಳು ಜೀವ ತಳೆದು ಚಿಂವ್-ಚಿಂವ್ ಸದ್ದು ಮಾಡುವುದನ್ನು, ಗಗನದಲ್ಲಿ ಮುಗಿಲುಗಳ ಚಿತ್ತಾರಗಳನ್ನು, ಹಕ್ಕಿಗಳ ಹಾರುಹಾದಿಯ ವಿನ್ಯಾಸಗಳನ್ನು, ಜೇನ್ನೊಣಗಳ ನರ್ತನವನ್ನು, ಚಿಟ್ಟೆಗಳ ನಾಟ್ಯವನ್ನು ತದೇಕ ಚಿತ್ತದಿಂದ ಕಂಡಿದ್ದೀರಾ? ಇವೆಲ್ಲದರ ಚೈತನ್ಯ ಕಾಣುತ್ತಾ ರೋಮಾಂಚನ ಅನುಭವಿಸಿದ್ದೀರಾ? ಅದುವೇ ಪ್ರಕೃತಿಯ ಸಂಭ್ರಮಗಳಿಗೆ ಸ್ಪಂದಿಸುವ ನಿಮ್ಮ ಹೃದಯದ ಒಳಚಿಲುಮೆ.
ಸಂತೋಷ ಪಡಲಿಕ್ಕಾಗಿ ನಾವು ಹಬ್ಬಗಳಿಗಾಗಿ, ಜಾತ್ರೆಗಳಿಗಾಗಿ ಕಾಯಬೇಕಾಗಿಲ್ಲ. ಸಣ್ಣಪುಟ್ಟ ಸಂಗತಿಗಳಲ್ಲೂ ಹರುಷದ ಸೆಲೆ ಕಾಣಲು ಕಲಿತರೆ, ನಮಗೆ ದಿನದಿನವೂ ಹಬ್ಬ. ಬಿಸಿಲಿಗೆ ನಡೆದು ಬಂದು ಬೆವರೊರೆಸುತ್ತ ಕುಡಿಯುವ ಬೆಲ್ಲ-ನೀರಿನಲ್ಲಿ, ಚಳಿಗಾಲದ ಮುಂಜಾನೆ ಮೈಗೆ ಸುರಿದುಕೊಳ್ಳುವ ಉಗುರು ಬೆಚ್ಚಗಿನ ನೀರಿನಲ್ಲಿ, ದೂರದೂರಿನಿಂದ ಹಸಿದು ಮನೆಗೆ ಬಂದಾಗ ಊಟದ ಬಟ್ಟಲಿನಲ್ಲಿ ಚಪ್ಪರಿಸುವ ಗಂಜಿ-ಚಟ್ನಿಯಲ್ಲಿ ಎಂತಹ ಸುಖವಿದೆ! ಇವನ್ನೆಲ್ಲ ಸವಿಯುವ ಸರಸತೆಯೇ ಸಿರಿತನ.